ಗುರುವಾರ , ಮಾರ್ಚ್ 4, 2021
30 °C

ದಾನ ಕೊಟ್ಟರೂ ಬಾರದ ಸರ್ಕಾರಿ ಶಾಲೆ ಸಿಬ್ಬಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾನ ಕೊಟ್ಟರೂ ಬಾರದ ಸರ್ಕಾರಿ ಶಾಲೆ ಸಿಬ್ಬಂದಿ

ಬಳ್ಳಾರಿ: ಫ್ಲೋರೈಡ್ ಅಂಶವುಳ್ಳ ಕೊಳವೆ ಬಾವಿ ನೀರಿನಿಂದ ಎದುರಾಗುವ ದೈಹಿಕ ನ್ಯೂನತೆಗಳಿಂದ ವಿದ್ಯಾರ್ಥಿಗಳನ್ನು ರಕ್ಷಿಸಬೇಕು ಎಂಬ ಸದುದ್ದೇಶ ಹೊಂದಿದ ಖಾಸಗಿ ಸಂಸ್ಥೆ ಯೊಂದು, ಜಲ ಶುದ್ಧೀಕರಣ ಯಂತ್ರ ದಾನ ನೀಡಲು ಮುಂದಾದರೂ ಸರ್ಕಾರಿ ಶಾಲೆಗಳ ಸಿಬ್ಬಂದಿ ಅದನ್ನು ನಿರ್ಲಕ್ಷಿಸಿದ್ದಾರೆ.ಅಕ್ವಾ ಎಕ್ಸೆಲ್ ಜಲ ಶುದ್ಧೀಕರಣ ಯಂತ್ರದ ಅಧಿಕೃತ ಡೀಲರ್‌ಗಳಾಗಿರುವ ಬಳ್ಳಾರಿಯ ಶಿವಸಾಯಿ ಎಂಟರ್‌ಪ್ರೈಸಸ್ ಸಂಸ್ಥೆಯವರು, `ವಿದ್ಯಾರ್ಥಿಗಳು ಶುದ್ಧ ನೀರು ಕುಡಿಯಲಿ~ ಎಂಬ ಉದ್ದೇಶದಿಂದ ತಾಲ್ಲೂಕಿನ ಕೆಲವು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ, ರೂ 15ರಿಂದ 20 ಸಾವಿರ ಮೌಲ್ಯದ ಯಂತ್ರ ದಾನ ನೀಡುವುದಾಗಿ ತಿಳಿಸಿದರೂ ಶಾಲೆಗಳ ಮುಖ್ಯಸ್ಥರು ಯಂತ್ರ ವಿತರಣೆ ಸಮಾರಂಭಕ್ಕೆ ಹಾಜರಾಗದೆ ದಾನವನ್ನೇ ನಿರಾಕರಿಸಿದ್ದಾರೆ.ನಗರದ ಪ್ರಧಾನ ಅಂಚೆ ಕಚೇರಿ ಬಳಿಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ರೇಡಿಯೋ ಪಾರ್ಕ್‌ನಲ್ಲಿರುವ ಸರ್ಕಾರಿ ಪ್ರೌಢಶಾಲೆ, ತಾಲ್ಲೂಕಿನ ಮೋಕಾ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆ, ಗೆಣಿಕೆಹಾಳ್ ಗ್ರಾಮದ ಸರ್ಕಾರಿ ಪ್ರೌಢಶಾಲೆಗಳ ಮುಖ್ಯಸ್ಥರನ್ನು ಭೇಟಿ ಮಾಡಿ, ಜಲ ಶುದ್ಧೀಕರಣ ಯಂತ್ರ ನೀಡುವುದಾಗಿ ವಿವರಿಸಿ, ಆಹ್ವಾನ ಪತ್ರಿಕೆ ನೀಡಿ ಬಂದರೂ ಭಾನುವಾರ ನಗರದ ಕಪ್ಪಗಲ್ ರಸ್ತೆಯಲ್ಲಿರುವ ಸಂಸ್ಥೆಯ ಕಚೇರಿಯಲ್ಲಿ ನಡೆದ ಸಮಾರಂಭಕ್ಕೆ ಈ ಶಾಲೆಯವರ‌್ಯಾರೂ ಆಗಮಿಸದೇ ನಿರ್ಲಕ್ಷಿಸಿದ್ದಾರೆ.ಜುಲೈ ಆರಂಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಚೇರಿಗೆ ತೆರಳಿ ಉಪ ನಿರ್ದೇಶಕರೆದುರು ಯಂತ್ರ ದಾನ ನೀಡುವ ಆಶಯವನ್ನು ವ್ಯಕ್ತಪಡಿಸಲಾಗಿದೆ.`ಶಾಲೆಗಾಗಿ ನಾವು- ನೀವು~ ಕಾರ್ಯಕ್ರಮದ ಪೂರ್ವಭಾವಿ ಯಾಗಿ ನಡೆದಿದ್ದ ಸಭೆಗೆ ಆಗಮಿಸಿದ್ದ ವಿವಿಧ ಶಾಲೆಗಳ ಮುಖ್ಯಾಧ್ಯಾಪಕರಿಗೂ ಈ ಕುರಿತು ತಿಳಿವಳಿಕೆ ನೀಡಿದ್ದಲ್ಲದೆ, ಆಯಾ ಶಾಲೆಗಳಿಗೆ ಭೇಟಿ ನೀಡಿ, ದಾನ ನೀಡುವುದರ ಹಿಂದಿನ ಉದ್ದೇಶ ವಿವರಿಸಲಾಗಿತ್ತು. ಆದರೆ, ಕಾರ್ಯಕ್ರಮಕ್ಕೆ ಶಾಲೆಯ ಸಿಬ್ಬಂದಿಯೇ ಆಗಮಿಸಲಿಲ್ಲ ಎಂದು ಸಂಸ್ಥೆಯ ಮುಖ್ಯಸ್ಥ ಮಂಜುನಾಥ ರೆಡ್ಡಿ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮಂಜುನಾಥ ನಾಯಕ್ ಅವರನ್ನು ಭೇಟಿ ಮಾಡಿ, ದಾನ ನೀಡುವ ಕುರಿತು ತಿಳಿಸಿ ಯಂತ್ರ ವಿತರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವಂತೆ ಕೇಳಿಕೊಳ್ಳಲಾಗಿತ್ತು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರನ್ನೂ ಆಹ್ವಾನಿಸಲಾಗಿತ್ತು. ಆದರೆ, ಅವರಿಬ್ಬರೂ ಬರಲಿಲ್ಲ ಎಂದು ಅವರು ಹೇಳಿದ್ದಾರೆ.ಕುರುಗೋಡಿನ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನವರು ಮಾತ್ರ ಆಗಮಿಸಿ, ಯಂತ್ರ ಪಡೆದಿದ್ದಾರೆ. ಸರ್ಕಾರಿ ಶಾಲೆಗಳವರು ನಿರಾಕರಿಸಿದ್ದರಿಂದ ಕೆಲವು ಖಾಸಗಿ ಶಾಲೆಗಳನ್ನೇ ಆಯ್ಕೆ ಮಾಡುವಂತಾಗಿದೆ. ಕೆಲವು ಅನುದಾನಿತ ಶಾಲೆಗಳವರೂ ಕಾರ್ಯಕ್ರಮಕ್ಕೆ ಆಗಮಿಸಿ ಯಂತ್ರಗಳನ್ನು ಪಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.ಜಿಲ್ಲೆಯ ಅನೇಕ ಕಡೆ ಶುದ್ಧ ಕುಡಿಯುವ ನೀರು ದೊರೆಯದೆ ವಿದ್ಯಾರ್ಥಿಗಳು ದಂತ ಫ್ಲೋರೋಸಿಸ್, ಮೂಳೆ ಫ್ಲೋರೋ ಸಿಸ್ ಕಾಯಿಲೆಗೆ ಒಳಗಾಗಿದ್ದಾರೆ. ಅವರೆಲ್ಲರಿಗೂ ಶುದ್ಧವಾದ ಕುಡಿಯುವ ನೀರು ದೊರೆಯುವಂತಾಗಬೇಕು ಎಂಬ ಉದ್ದೇಶದಿಂದ ಸಂಸ್ಥೆಯು ಸಾಮಾಜಿಕ ಕಳಕಳಿಯ ಹಿನ್ನೆಲೆಯಲ್ಲಿ ಯಂತ್ರ ದಾನ ನೀಡುವುದಲ್ಲದೆ, ಶಾಲೆಗಳಿಗೆ ತೆರಳಿ ಅವುಗಳನ್ನು ಅಳವಡಿಸಿ, ನಿರ್ವಹನೆಯ ಜವಾಬ್ದಾರಿಯನ್ನೂ ವಹಿಸಿಕೊಳ್ಳ ಲಿದೆ.ಆದರೂ ಕೆಲವು ಸರ್ಕಾರಿ ಶಾಲೆಗಳ ಮುಖ್ಯಸ್ಥರು ಸೌಜನ್ಯಕ್ಕೂ ಯಂತ್ರಗಳನ್ನು ಪಡೆಯಲು ಆಗಮಿಸಲಿಲ್ಲ. ಇದೀಗ ಆಯಾ ಶಾಲೆಗಳಿಗೆ ಖುದ್ದಾಗಿ ತೆರಳಿ ಯಂತ್ರ ಅಳವಡಿಸಬೇಕು ಎಂದುಕೊಂಡರೂ, ಮುಖ್ಯಾಧ್ಯಾ ಪಕರ ನಿರಾಸಕ್ತಿಯಿಂದ ಹಿಂಜರಿತ ಉಂಟಾಗುತ್ತಿದೆ ಎಂದು ಅವರು ನೋವು ತೋಡಿ ಕೊಂಡಿದ್ದಾರೆ.ಈ ಯಂತ್ರಗಳನ್ನು ಅಳವಡಿಸುವುದರ ಹಿಂದೆ ಯಾವುದೇ ದುರುದ್ದೇಶ ಇಲ್ಲ. ವ್ಯಾಪಾರದಲ್ಲಿ ಆಗಿರುವ ಲಾಭದಲ್ಲಿನ ಅಲ್ಪ ಪ್ರಮಾಣವನ್ನೇ ಸದುದ್ದೇಶಕ್ಕೆ ಬಳಸಬೇಕೆಂಬುದು ಸಂಸ್ಥೆಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.

ಸರ್ಕಾರಿ ಶಾಲಾ ಮುಖ್ಯಾಧ್ಯಾಪಕರು ಈ ರೀತಿ ದೇಣಿಗೆ ನಿರಾಕರಿಸಬಾರದು. ಸಮಾಜದ ಸಹಭಾಗಿತ್ವದಲ್ಲೇ ಶಾಲೆಗಳಿಗೆ ಅಗತ್ಯವಾಗಿರುವ ಸೌಲಭ್ಯ ಪಡೆಯುವುದರಲ್ಲಿ ತಪ್ಪಿಲ್ಲ. ಈ ಕುರಿತು ಆಯಾ ಶಾಲಾ ಮುಖ್ಯಸ್ಥರಿಗೆ ಆದೇಶ ನೀಡಿ, ಜಲ ಶುದ್ಧೀಕರಣ ಘಟಕ ಪಡೆಯುವಂತೆ ಸೂಚಿಸಲಾಗುವುದು. ವಿವಿಧ ಕಾರ್ಯಕ್ರಮಗಳ ಒತ್ತಡದಿಂದಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಸಾಧ್ಯವಾಗಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಾರಾಯಣಗೌಡ ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.