ಗುರುವಾರ , ಮೇ 13, 2021
18 °C
150ಕ್ಕೇರಿದ ಸಾವಿನ ಸಂಖ್ಯೆ, ಭಕ್ತರಿಗೆ ಕೇದಾರನಾಥ ಒಂದು ವರ್ಷ ಬಂದ್?

ದಾರಿಕಾಣದ ನಿರಾಶ್ರಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡೆಹ್ರಾಡೂನ್/ನವದೆಹಲಿ (ಪಿಟಿಐ): ಉತ್ತರಾಖಂಡ, ಹಿಮಾಚಲ ಪ್ರದೇಶಸೇರಿದಂತೆ ಉತ್ತರ ಭಾರತದ ಅನೇಕ ಕಡೆ ನೂರಾರು ಜನರನ್ನು ಬಲಿ ತೆಗೆದುಕೊಂಡ ಮಹಾಮಳೆ ಅಬ್ಬರ ಕಡಿಮೆಯಾಗಿದ್ದರೂ ಪ್ರವಾಹ ಸ್ಥಿತಿ ಗಂಭೀರವಾಗಿದೆ. ರಸ್ತೆ ಸಂಪರ್ಕ, ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಯಾತ್ರಿಗಳು, ಪ್ರವಾಸಿಗಳು ಸೇರಿದಂತೆ ಲಕ್ಷಾಂತರ ಜನರು ಆಹಾರ, ಔಷಧಕ್ಕೆ ಪರದಾಡುತ್ತಿದ್ದಾರೆ.ಅನೇಕ ಪ್ರದೇಶಗಳು ಇನ್ನೂ ಜಲಾವೃತ ಆಗಿರುವುದರಿಂದ ಹಾನಿ ಮತ್ತು ಸಾವಿನ ಸಂಖ್ಯೆ ಅಂದಾಜು ಸಿಗುತ್ತಿಲ್ಲ. ಸದ್ಯದ ಮಾಹಿತಿಯಂತೆ ಸತ್ತವರ ಸಂಖ್ಯೆ 150ಕ್ಕೆ ಏರಿದೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ.ಯಮುನಾ ನದಿ ಮೇಲ್ಭಾಗದಲ್ಲಿರುವ ಪಂಜಾಬ್, ಹರಿಯಾಣಗಳಲ್ಲಿ ಪ್ರವಾಹ ಕೊಂಚ ತಗ್ಗಿದ್ದರೂ, ಕೆಳಭಾಗದಲ್ಲಿರುವ ಉತ್ತರ ಪ್ರದೇಶ, ದೆಹಲಿಯಲ್ಲಿ ಜೋರಾಗಿದೆ.50 ಸಾವು?: ಕೆಸರಿನಲ್ಲಿ ಭಾಗಶಃ ಮುಳುಗಿದ್ದ ಉತ್ತರಾಖಂಡದ ಪ್ರಸಿದ್ಧ ಚಾರ್‌ಧಾಮ್ ಯಾತ್ರಾಸ್ಥಳ ಕೇದಾರನಾಥದಲ್ಲಿ ಭೂ ಕುಸಿತದಿಂದ 50 ಜನ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಕೇದಾರನಾಥ ಮಂದಿರಕ್ಕೆ ಯಾವುದೇ ಹಾನಿಯಾಗಿಲ್ಲ. ಆದರೆ ಸುತ್ತಲಿನ ಕಟ್ಟಡಗಳು ಸಂಪೂರ್ಣ ನೆಲಸಮವಾಗಿವೆ. ಇಲ್ಲೆಲ್ಲ ಕೆಸರು ತುಂಬಿಕೊಂಡಿದೆ. ಈ ಪವಿತ್ರ ಸ್ಥಳ ಮತ್ತು ಅದನ್ನು ತಲುಪುವ ಮಾರ್ಗಗಳ ದುರಸ್ತಿಗೆ ಕನಿಷ್ಠ 1 ವರ್ಷ ಬೇಕಾಗಬಹುದು. ಅಲ್ಲಿಯವರೆಗೆ ದೇವರ ದರ್ಶನ ನಿಲ್ಲಿಸಬೇಕಾಗಬಹುದು ಎಂದು ಮುಖ್ಯಮಂತ್ರಿ ವಿಜಯ್ ಬಹುಗುಣ ಹೇಳಿದ್ದಾರೆ.ರುದ್ರಪ್ರಯಾಗದಲ್ಲಿ 1200, ಹೇಮಕುಂಡ ಸಾಹೀಬ್ ಬಳಿ 1500 ಯಾತ್ರಿಗಳನ್ನು ರಕ್ಷಿಸಲಾಗಿದೆ. ಆದರೆ, ಬದರಿನಾಥದಲ್ಲಿ ಸಿಲುಕಿರುವ ಸುಮಾರು 12 ಸಾವಿರ ಯಾತ್ರಿಗಳು ಇನ್ನೂ ಅಲ್ಲೇ ಇದ್ದಾರೆ. ಗೌರಿಕುಂಡದಲ್ಲೂ ಐದು ಸಾವಿರ ಯಾತ್ರಿಗಳು ಸಿಕ್ಕಿ ಬಿದ್ದಿದ್ದಾರೆ.2 ಲಕ್ಷ ಜನಸಂಖ್ಯೆಯಿರುವ ಅಗಸ್ತ್ಯ ಮುನಿಯಲ್ಲಿ ಸ್ಥಿತಿ ಬಿಗಡಾಯಿಸುತ್ತಿದೆ. ಇನ್ನು ಎರಡು ದಿವಸಗಳಲ್ಲಿ ಇವರನ್ನು ಸ್ಥಳಾಂತರಿಸದಿದ್ದರೆ ಆಹಾರ ಕೊರತೆ ಉಂಟಾಗಲಿದೆ ಎಂದು ರುದ್ರಪ್ರಯಾಗದ ಉಪವಿಭಾಗಾಧಿಕಾರಿ ಎಲ್.ಎನ್. ಮಿಶ್ರಾ ತಿಳಿಸಿದ್ದಾರೆ.ಕೆಸರಿನಲ್ಲಿ ಇನ್ನೂ ಅನೇಕ ಶವಗಳು ಹೂತುಹೋಗಿವೆ. ಇವು ಕೊಳೆಯುತ್ತಿರುವುದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಆದರೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ವೈದ್ಯರ ತಂಡವು ನೆರೆ ಪೀಡಿತ ಪ್ರದೇಶಗಳಲ್ಲಿ ಬೀಡು ಬಿಟ್ಟಿರುವುದರಿಂದ ಆತಂಕ ಇಲ್ಲ ಎಂದು ರಾಜ್ಯದ ಅಧಿಕಾರಿಗಳು ತಿಳಿಸಿದ್ದಾರೆ.ಅರೆಸೇನಾ ಪಡೆ ಅಕಾಡೆಮಿಗೆ ಹಾನಿ: ಗಢವಾಲ್‌ನಲ್ಲಿರುವ ಸಶಸ್ತ್ರ ಸೀಮಾ ಬಲ್ (ಎಸ್‌ಎಸ್‌ಬಿ) ತರಬೇತಿ ಅಕಾಡೆಮಿ ಸಮುಚ್ಚಯಕ್ಕೆ ಮಳೆ ಮತ್ತು ನೆರೆಯಿಂದ ಹಾನಿಯಾಗಿದ್ದು, ಆರು ಅಡಿಯಷ್ಟು ಕೆಸರು ಇಲ್ಲಿ ನಿಂತಿದೆ. ಮೊದಲ ಅಂದಾಜಿನ ಪ್ರಕಾರ ್ಙ90 ಕೋಟಿ ಪ್ರಮಾಣದಷ್ಟು ನಷ್ಟವಾಗಿದೆ ಎನ್ನಲಾಗಿದೆ.ಹಿಮಾಚಲದಲ್ಲಿ ಭೂಕುಸಿತ: ಹಿಮಾಚಲ ಪ್ರದೇಶದಲ್ಲಿ ರಕ್ಷಣಾ ಕಾರ್ಯಗಳು ಭರದಿಂದ ಸಾಗಿವೆ. ವಾಯುಪಡೆಯ ಎರಡು ಮತ್ತು ರಾಜ್ಯ ಸರ್ಕಾರದ ಒಂದು ಹೆಲಿಕಾಪ್ಟರ್‌ಗಳು ಸಂಕಷ್ಟಕ್ಕೆ ಸಿಲುಕಿದವರ ರಕ್ಷಣೆಗೆ ಧಾವಿಸಿವೆ. ಭಾರತ-ಟಿಬೆಟ್ ರಾಷ್ಟ್ರೀಯ ಹೆದ್ದಾರಿ ಸುತ್ತಮುತ್ತಲಿನ ಹಲವೆಡೆ ಭೂಕುಸಿತವಾಗಿದ್ದು ಮತ್ತು ರಸ್ತೆಗಳು ಕೊಚ್ಚಿ ಹೋಗಿವೆ. ಇಲ್ಲಿ ಹೆಲಿಕಾಪ್ಟರ್‌ಗಳು ರಕ್ಷಣಾ ಕಾರ್ಯಾಚರಣೆ ಕೈಗೊಂಡಿವೆ.ಸಾಂಗ್ಲಾ ಕಣಿವೆಯಲ್ಲಿ 140 ಜನರನ್ನು ರಕ್ಷಿಸಲಾಗಿದ್ದು, ಇವರನ್ನು ರಾಂಪುರ್‌ಗೆ ಸ್ಥಳಾಂತರಿಸಲಾಗಿದೆ. ರಾಜ್ಯದ ವಿವಿಧೆಡೆ ಸಂಕಷ್ಟಕ್ಕೆ ಸಿಲುಕಿರುವವರ ಸಂಖ್ಯೆ ನಿಖರವಾಗಿ ತಿಳಿದುಬಂದಿಲ್ಲ. ಪ್ರವಾಸಿಗರು ಮತ್ತು ವೃದ್ಧರ ರಕ್ಷಣೆಗೆ ನಾವು ಆದ್ಯತೆ ನೀಡಿದ್ದೇವೆ' ಎಂದು ಹಿಮಾಚಲದ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ತರುಣ್ ಶ್ರೀಧರ್ ಹೇಳಿದ್ದಾರೆ. 

ನಾವು ಬದರಿನಾಥದ ಧರ್ಮಶಾಲೆಯೊಂದರಲ್ಲಿ ಇಳ್ಕೊಂಡಿದ್ದೀವಿ. ನಮ್ಮ ಹಾಗೆ ಬಹಳ ಮಂದಿ ಇಲ್ಲೇ ಉಳಿದಿದ್ದಾರೆ. ಆಶ್ರಮ ಭರ್ತಿಯಾಗುತ್ತಿದೆ. ನಮ್ಮನ್ನೆಲ್ಲ ಹೊರಗೆ ಹೋಗಿ ಅಂತ ಒತ್ತಡ ಹಾಕ್ತಿದ್ದಾರೆ. ಎಲ್ಲಿ ಹೋಗೋದು, ಏನ್ ಮಾಡೋದು ಒಂದೂ ತಿಳೀತಿಲ್ಲ. ಜೊತೆಗೆ ಬಂದವರಲ್ಲಿ ಕೆಲವರು ಹೃದ್ರೋಗಿಗಳು, ಮಧುಮೇಹಿಗಳು. ಅವರ ಬಳಿಯಿದ್ದ ಔಷಧಗಳು ಖಾಲಿಯಾಗಿವೆ. ನಮ್ಮನ್ನು ಇಲ್ಲಿಂದ ದೆಹಲಿಗೆ ತಲುಪಿಸಿದರೆ ಸಾಕು'.

  -ಭರಮಸಾಗರ ನಿವಾಸಿ ಸುಧಾ

ಯಮುನೆ ಆರ್ಭಟ: ರಾಜಧಾನಿ ನವದೆಹಲಿಯಲ್ಲಿ ಯಮುನಾ ನದಿ ಭೋರ್ಗರೆಯುತ್ತಿದ್ದು, ಅಪಾಯ ಮಟ್ಟ ಮೀರಿ ಎರಡು ಮೀಟರ್ ಎತ್ತರದಲ್ಲಿ ಹರಿಯುತ್ತಿದೆ. 35 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ದಾಖಲೆ ಮಟ್ಟಕ್ಕೆ ತಲುಪಿದೆ. ಬುಧವಾರ ನೀರಿನ ಮಟ್ಟ 207.12 ಮೀಟರ್‌ನಷ್ಟಿದ್ದು, ಇದು ಹೆಚ್ಚಳವಾಗುವ ಸಾಧ್ಯತೆ ಇದೆ. 1978ರಲ್ಲಿ 207.48 ಮೀಟರ್‌ನಷ್ಟು ಎತ್ತರಕ್ಕೆ ನೀರು ಹರಿದ ದಾಖಲೆ ಇತ್ತು.ದೆಹಲಿಯ ಪೂರ್ವ ಭಾಗದಲ್ಲಿರುವ 145 ವರ್ಷಗಳಷ್ಟು ಹಳೆಯ ರೈಲ್ವೆ ಸೇತುವೆಯು ಮುಳುಗಡೆಯಾಗುವ ಭೀತಿ ಎದುರಾಗಿದೆ. 50ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ಉತ್ತರ ರೈಲ್ವೆ ರದ್ದು ಮಾಡಿದೆ. ನದಿ ಸುತ್ತಮುತ್ತ ವಾಸವಿರುವ ಎರಡು ಸಾವಿರಕ್ಕೂ ಹೆಚ್ಚು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಪರಿಸ್ಥಿತಿ ಹತೋಟಿಯಲ್ಲಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಹೇಳಿದ್ದಾರೆ.ನೀರಿನಲ್ಲಿ ಕೊಚ್ಚಿಹೋದ ವ್ಯಕ್ತಿ: ದೆಹಲಿಯಲ್ಲಿ ಯಮುನಾ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವ್ಯಕ್ತಿಯೊಬ್ಬ ಕೊಚ್ಚಿಕೊಂಡು ಹೋಗಿದ್ದಾನೆ ಎಂದು ವರದಿಯಾಗಿದೆ.>ವಿದ್ಯುತ್ ಪೂರೈಕೆ ಕಡಿತ: ರಾಜಧಾನಿಯಲ್ಲಿ ನದಿ ಸುತ್ತಮುತ್ತಲಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಭೀತಿ ಎದುರಾಗಿರುವ ಕಾರಣ ರಿಲಾಯನ್ಸ್ ಉದ್ದಿಮೆಯ ಒಡೆತನದ ಬಿಆರ್‌ಪಿಎಲ್ ಮತ್ತು ಬಿಐಪಿಎಲ್ ವಿದ್ಯುತ್ ಸರಬರಾಜು ಕಂಪೆನಿಗಳು ವಿದ್ಯುತ್ ಪೂರೈಕೆ ಕಡಿತ ಮಾಡಿವೆ.

ಪಂಜಾಬ್, ಹರಿಯಾಣ ಮತ್ತು ಛತ್ತೀಸಗಡದಲ್ಲಿ ಕಳೆದ 24 ಗಂಟೆಯಿಂದ ಮಳೆಯಾಗಿಲ್ಲ. ಯಮುನಾ ನಗರ್ ಸಮೀಪದ ಹಥ್ನಿಕುಂಡ ಅಣೆಕಟ್ಟೆಯಲ್ಲಿ ಬುಧವಾರ ಮಧ್ಯಾಹ್ನದ ಹೊತ್ತಿಗೆ ಒಳಹರಿವಿನ ಪ್ರಮಾಣ 87,137 ಕ್ಯೂಸೆಕ್ ಇತ್ತು. ಮಂಗಳವಾರ ಇದರ ಪ್ರಮಾಣ 1.73 ಲಕ್ಷ ಕ್ಯೂಸೆಕ್‌ನಷ್ಟಿತ್ತು. ಯಮುನಾ ನದಿ ಮೇಲ್ಭಾಗದಲ್ಲಿ ಮಳೆ ತಗ್ಗಿರುವುದರಿಂದ ಹೊರಹರಿವನ್ನು ಕ್ರಮೇಣ ತಗ್ಗಿಸಲಾಗುವುದು ಎಂದು ಅಣೆಕಟ್ಟೆ ಮೂಲಗಳು ಹೇಳಿವೆ.ಹರಿಯಾಣ- ಉತ್ತರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಕೈರನಾ ಬಳಿ ಯಮುನಾ ನದಿಯ ಸೇತುವೆಯೊಂದು ಪ್ರವಾಹಕ್ಕೆ ಕುಸಿದಿದೆ. ಇದರಿಂದ ರಸ್ತೆ ಸಂಪರ್ಕ ಕಡಿದಿದೆ. 35 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಲ್ಲಿ ಸೇತುವೆಯನ್ನೂ ಮೀರಿ ನೀರು ಹರಿದಿದೆ.ಸಮನ್ವಯ ಸಮಿತಿ ರಚನೆ: ಉತ್ತರ ಪ್ರದೇಶದ ಮುಜಫರ್‌ನಗರ್, ಶಾಮಲಿ ಜಿಲ್ಲೆಗಳಲ್ಲಿ ಯಮುನಾ ಮತ್ತು ಗಂಗಾ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ಕಾರಣ ನದಿ ಪಾತ್ರದ ಗ್ರಾಮಗಳ ಜನರಿಗೆ ಎಚ್ಚರಿಕೆ ನೀಡಲಾಗಿದೆ. ತುರ್ತು ಪರಿಸ್ಥಿತಿಯ ನಿರ್ವಹಣೆಗಾಗಿ ಸಮನ್ವಯ ಸಮಿತಿಯನ್ನು ಉತ್ತರ ಪ್ರದೇಶ ಸರ್ಕಾರ ರಚಿಸಿದೆ.ಪಲಿಯಾ ಕಲಾಂನಲ್ಲಿ ಶಾರದಾ ನದಿ ಇನ್ನೂ ಅಪಾಯ ಮಟ್ಟ ಮೀರಿಯೇ ಹರಿಯುತ್ತಿರುವ ಕಾರಣ ಬಹರಾಯಿಚ್ ಪ್ರದೇಶದ ಮಹಸಿ ಬಳಿಯ 44 ಹಳ್ಳಿಯ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸುವಂತೆ ಸರ್ಕಾರ ಸೂಚನೆ ನೀಡಿದೆ. ರಾಪ್ತಿ, ಘಾಘ್ರಾ, ಬುರಹಿ ರಾಪ್ತಿ, ರೋಹಿನ್, ಕೌನೊ ಹೊಳೆಗಳು ತುಂಬಿ ಹರಿಯುತ್ತಿವೆ ಎಂದು ಕೇಂದ್ರ ಜಲ ಆಯೋಗ ಹೇಳಿದೆ.ಬದರಿಯಲ್ಲಿ ನೆರವು ಕೇಂದ್ರ: ಬದರಿನಾಥದಲ್ಲಿ ನೆರವಿನ ಕೇಂದ್ರ ತೆರೆಯಲಾಗಿದೆ ಎಂದು ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ತಿಳಿಸಿದ್ದಾರೆ.

540 ಸಿಬ್ಬಂದಿಯನ್ನು ಒಳಗೊಂಡ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) 14 ತಂಡಗಳನ್ನು ಉತ್ತರಾಖಂಡದಲ್ಲಿ ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಇಲ್ಲಿ 62,790 ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆಂದು ಶಂಕಿಸಲಾಗಿದ್ದು, ಐದು ಸಾವಿರ ಮಂದಿಯನ್ನು ಸೇನಾ ಯೋಧರು ರಕ್ಷಿಸಿದ್ದಾರೆ ಎಂದು ಶಿಂಧೆ ಮಾಹಿತಿ ನೀಡಿದ್ದಾರೆ.ಉತ್ತರಾಖಂಡಕ್ಕೆ 22 ಹೆಲಿಕಾಪ್ಟರ್‌ಗಳನ್ನು ರವಾನಿಸಲಾಗಿದೆ. ಹೆಚ್ಚುವರಿಯಾಗಿ ಆಹಾರ ಧಾನ್ಯಗಳನ್ನು ಕಳುಹಿಸಲಾಗುವುದು ಎಂದು ಗೃಹ ಖಾತೆ ರಾಜ್ಯ ಸಚಿವ ಆರ್‌ಪಿಎನ್ ಸಿಂಗ್ ಅವರು ಎಐಸಿಸಿ ವಿಶೇಷ ಸಮಾವೇಶದ ಸಂದರ್ಭದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.`ಭಾರಿ ನಷ್ಟ: ಅಗತ್ಯ ನೆರವು'

`ನೆರೆ ಹಾವಳಿ ತಂದಿರುವ ವಿಪತ್ತನ್ನು ನಾವು ಕಣ್ಣಾರೆ ಕಂಡೆವು. ಅಪಾರ ನಷ್ಟವಾಗಿದೆ. ಉತ್ತರಾಖಂಡ ಒಂದರಲ್ಲೇ ನೂರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ. ಸಾವಿನ ಸಂಖ್ಯೆ ಏರಿಕೆ ಆಗುವ ಸಾಧ್ಯತೆಯೂ ಇದೆ. ಈವರೆಗೂ ಹತ್ತು ಸಾವಿರ ಜನರನ್ನು ರಕ್ಷಿಸಲಾಗಿದೆ. ಈ ರಾಜ್ಯಕ್ಕೆ ಅಗತ್ಯ ನೆರವನ್ನು ನೀಡಲಾಗುವುದು' ಎಂದು ಪ್ರಧಾನಿ ಮನಮೋಹನ್ ಸಿಂಗ್ ನವದೆಹಲಿಯಲ್ಲಿ ಹೇಳಿದರು.

ಸತ್ತವರ ಸಮೀಪ ಬಂಧುಗಳಿಗೆ ರೂ 2 ಲಕ್ಷ ಮತ್ತು ಗಾಯಾಳುಗಳಿಗೆ ರೂ 50 ಸಾವಿರ ನೆರವು ನೀಡುವುದಾಗಿ ಘೋಷಿಸಿದರು. ಮನೆ ಸಂಪೂರ್ಣವಾಗಿ ಹಾನಿಗೊಂಡಿದ್ದರೆ ರೂ 1 ಲಕ್ಷ, ಭಾಗಶಃ ಹಾನಿಗೊಂಡಿದ್ದರೆ ರೂ 50 ಸಾವಿರ ಪರಿಹಾರ ನೀಡುವುದಾಗಿಯೂ ತಿಳಿಸಿದರು.`ಹಿಮಾಲಯದ ಸುನಾಮಿ!'

ಮಹಾಮಳೆ ಮತ್ತು ನೆರೆಯಿಂದಾಗಿ ಉಂಟಾದ ಹಾನಿಯನ್ನು `ಹಿಮಾಲಯದ ಸುನಾಮಿ' ಎಂದೇ ಬಣ್ಣಿಸಲಾಗಿದೆ. ಕೇದಾರನಾಥವನ್ನು ಸಂಪರ್ಕಿಸುವ ಕಾಲು ಹಾದಿ ಸಂಪೂರ್ಣ ಹಾನಿಗೊಂಡಿದ್ದು, ಇದನ್ನು ಸರಿಪಡಿಸಲು ಕನಿಷ್ಠ ಒಂದು ವರ್ಷವಾದರೂ ಬೇಕು ಎಂದು ಮೂಲಗಳು ಹೇಳಿವೆ.

ರೂ 1000 ಕೋಟಿ ನೆರವು

ಪ್ರಧಾನಿ ಮನಮೋಹನ್ ಸಿಂಗ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜೊತೆ ಉತ್ತರಾಖಂಡದಲ್ಲಿ ಬುಧವಾರ ವೈಮಾನಿಕ ಸಮೀಕ್ಷೆ ನಡೆಸಿ, ಪರಿಹಾರ ಕಾರ್ಯ ಕೈಗೊಳ್ಳಲು ಆ ರಾಜ್ಯಕ್ಕೆ ರೂ1,000 ಕೋಟಿ ನೆರವು ಘೋಷಿಸಿದರು. ತಕ್ಷಣದಲ್ಲೇ ರೂ145 ಕೋಟಿ ಬಿಡುಗಡೆ ಮಾಡುವುದಾಗಿಯೂ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.