ಶುಕ್ರವಾರ, ನವೆಂಬರ್ 15, 2019
20 °C
ಸೈಕಲ್ ಯಾತ್ರೆ ಮುಗಿಸಿ ಬಂದ ವಿನಯ, ವೈಶಾಖ್

`ದಾರಿಯುದ್ದಕ್ಕೂ ಸಜ್ಜನರ ಕಂಡೆವು'

Published:
Updated:

ಹುಬ್ಬಳ್ಳಿ: `ಕೆಲವೇ ಮಂದಿ ಕೆಟ್ಟ ಜನರ ಮಧ್ಯೆ ಒಳ್ಳೆಯವರು ಬಹಳ ಮಂದಿ ಇದ್ದಾರೆ ಎಂಬ ವಿಶ್ವಾಸವಿತ್ತು. ಐದು ದಿನದ ಪ್ರವಾಸದಲ್ಲಿ ಭೇಟಿಯಾದ ಜನರು ಈ ವಿಶ್ವಾಸವನ್ನು ನಿಜ ಮಾಡಿದರು. ಕಡ್ಡಾಯವಾಗಿ ಮತದಾನ ಮಾಡುವಂತೆ `ಜಾಗೃತಿ'ಯ ಮಾತುಗಳನ್ನು ಹೇಳಿದಾಗ ಎಲ್ಲರೂ ಪೂರಕವಾಗಿಯೇ ಸ್ಪಂದಿಸಿದರು...'ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಧಾರವಾಡದಿಂದ ಬೆಂಗಳೂರಿನ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿವರೆಗೆ ಸೈಕಲ್ ಯಾತ್ರೆ ಮಾಡಿ ಮರಳಿದ ಧಾರವಾಡದ ಬಾಲಕರಾದ ವೈಶಾಖ ಮೆಹಂದಳೆ ಹಾಗೂ ವಿನಯ ಕುಮಾರ ಪಾಟೀಲ ಆಡಿದ ಮಾತು ಇದು.ವೈಶಾಖ ಹಾಗೂ ವಿನಯ ಅವರಿಗೆ ಈಗ ಹದಿನಾರರ ಹರೆಯ. ಹೀಗಾಗಿ ಅವರಿಗೆ ಇನ್ನೂ ಮತದಾನದ ಹಕ್ಕು ಸಿಕ್ಕಿಲ್ಲ. ಆದರೂ ಕಡ್ಡಾಯ ಮತದಾನ ಮಾಡುವಂತೆ ಜನರನ್ನು ಪ್ರೇರೇಪಿಸಲು ಅವರು ಸೈಕಲ್‌ನಲ್ಲಿ ಸುಮಾರು 435 ಕಿಲೋಮೀಟರ್ ಯಾತ್ರೆ ನಡೆಸಿದ್ದರು.  ವೈಶಾಖ ಮೆಹಂದಳೆ, `ಪ್ರಜಾವಾಣಿ'ಯ ಬೇಲೂರು ಮುದ್ರಣ ವಿಭಾಗದ ನೌಕರ ಗುರುಮೂರ್ತಿ ಮೆಹಂದಳೆ ಅವರ ಪುತ್ರ. ತಾಯಿ ಅಂಜಲಿ ಗೃಹಿಣಿ. ವಿನಯ ಕುಮಾರ, ಛಾಯಾಗ್ರಾಹಕ ಮಹಾದೇವ ಪಾಟೀಲ ಹಾಗೂ ಶಿಕ್ಷಕಿ ಲೀಲಾ ಅವರ ಪುತ್ರ. ಏಪ್ರಿಲ್ 13ರಂದು ಮುಂಜಾನೆ 6 ಗಂಟೆಗೆ ಧಾರವಾಡದಿಂದ ಹೊರಟ ಈ ಇಬ್ಬರು ಬಾಲಕರು 17ರಂದು ಮಧ್ಯಾಹ್ನ ಚುನಾವಣಾ ಆಯುಕ್ತರ ಕಚೇರಿಗೆ ತಲುಪಿದ್ದರು. ದಾರಿ ಮಧ್ಯೆ ಪ್ರವಾಸಿ ಮಂದಿರಗಳಲ್ಲಿ ತಂಗುತ್ತಿದ್ದ ಇವರು ಮುಂಜಾನೆ 5 ಗಂಟೆಯಿಂದ ಮಧ್ಯಾಹ್ನ 11 ಗಂಟೆಯವರೆಗೆ ಸೈಕಲ್ ತುಳಿಯುತ್ತಿದ್ದರು. ಸ್ವಲ್ಪ ಹೊತ್ತು ವಿಶ್ರಾಂತಿಯ ನಂತರ ಸಂಜೆ 4 ಗಂಟೆಯಿಂದ ರಾತ್ರಿ 7 ಗಂಟೆಯ ವರೆಗೆ ಯಾತ್ರೆ ಮುಂದುವರಿಸುತ್ತಿದ್ದರು.`ಈಚೆಗೆ ಮತದಾನ ಕಡಿಮೆಯಾಗುತ್ತಿದೆ ಎಂದು ತಿಳಿದುಕೊಂಡ ನಾವು ತಕ್ಷಣ ಜಾಗೃತಿ ಯಾತ್ರೆಗೆ ಮುಂದಾದೆವು. ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿಯಿಂದ ಉತ್ತಮ ಬೆಂಬಲ ಸಿಕ್ಕಿತು. ದಾರಿ ಮಧ್ಯೆ ಅಪರಿಚಿತರಿಂದ ನಿರೀಕ್ಷೆಗೂ ಮೀರಿದ ಪ್ರೋತ್ಸಾಹ ಲಭಿಸಿತು. ಇದು ನಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸಿತು. ಯುವಜನರು ತೋರಿದ ಕಾಳಜಿ ನಿಜಕ್ಕೂ ಹೆಮ್ಮೆ ಮೂಡಿಸಿತು' ಎಂದು ವೈಶಾಖ ಅಭಿಮಾನದಿಂದ ಹೇಳಿದರು.`ಮತದಾನ ಎಂಬುದು ಪ್ರತಿಯೊಬ್ಬರ ಹಕ್ಕು ಮಾತ್ರವಲ್ಲ, ಅದೊಂದು ವಿಶೇಷ ಶಕ್ತಿಯೂ ಆಗಿದೆ. ಒಂದೇ ಒಂದು ಮತ ರಾಜ್ಯ, ದೇಶದ ರಾಜಕೀಯ ಸ್ಥಿತಿಯನ್ನೇ ಬದಲಿಸಬಲ್ಲುದು. ಹೀಗಿರುವಾಗ ಮತವನ್ನು ಕಡ್ಡಾಯವಾಗಿ ಚಲಾಯಿಸಬೇಕು ಎಂದು ಹೇಳುವುದೇ ನಮ್ಮ ಯಾತ್ರೆಯ ಉದ್ದೇಶವಾಗಿತ್ತು. ಯಾತ್ರೆಯಲ್ಲಿ ನಮ್ಮಂದಿಗೆ ಮಾತನಾಡಿದ ಒಂದೊಂದು ಗುಂಪಿನಲ್ಲಿ ಒಬ್ಬರು ಬದಲಾದರೂ ಸಾಕು. ಆದರೂ ಅನೇಕ ಮಂದಿಯ ಮೇಲೆ ಯಾತ್ರೆ ಪ್ರಭಾವ ಬೀರಲಿದೆ ಎಂಬ ವಿಶ್ವಾಸವಿದೆ' ಎಂದರು ಅವರು.`ರಾಷ್ಟ್ರೀಯ ಹೆದ್ದಾರಿ ಬದಿಯ ಕೆಲವು ಹಳ್ಳಿಗಳಿಗೆ ತೆರಳಿ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿದೆವು. ಕೆಲವರು ಕುಹಕದ ಮಾತನಾಡಿದರು. ಉಳಿದವರೆಲ್ಲರೂ ನಮ್ಮ ಮಾತು ಆಲಿಸಿದರು. ರಾಜಕಾರಣಿಗಳು ಭ್ರಷ್ಟರು ಎಂಬ ಅಭಿಪ್ರಾಯ ಎಲ್ಲ ಕಡೆ ಕೇಳಿ ಬಂತು. ಚುನಾವಣೆ ಸಂದರ್ಭದಲ್ಲಿ ಸೀರೆ, ಹಣ, ಹೆಂಡ ಹಂಚಿ ಮತದಾರರನ್ನು ಕೂಡ ಭ್ರಷ್ಟರನ್ನಾಗಿಸಲು ಪ್ರಯತ್ನಿಸುವ ರಾಜಕಾರಣಿಗಳ ಬಗ್ಗೆ ಅನೇಕ ಕಡೆಗಳಲ್ಲಿ ಜನರು ಕೋಪದಿಂದ ಮಾತನಾಡಿದರು. ಈ ಮಾತುಗಳ ಹಿಂದಿರುವ ಕಳಕಳಿ ಮತದಾನದಲ್ಲಿ ವ್ಯಕ್ತವಾಗಬೇಕು' ಎಂಬುದು ಈ ಬಾಲಕರ ಆಶಯ.`ದಾರಿಗುಂಟ ಸಜ್ಜನರು ಸಿಕ್ಕಿದ್ದರಿಂದ ತೊಂದರೆಯೇನೂ ಆಗಲಿಲ್ಲ. ಹೊಸ ಸೈಕಲ್ ಖರೀದಿಗೆ ಸ್ವಲ್ಪ ಹಣ ಬೇಕಾಯಿತು. ಊಟ, ವಸತಿ ಇತ್ಯಾದಿಗೆ ಸ್ವೀಪ್ ಸಮಿತಿ ವ್ಯವಸ್ಥೆ ಮಾಡಿತ್ತು. ನೆಲಮಂಗಲ ಬಳಿ ಸೈಕಲ್ ಪಂಕ್ಚರ್ ಆಯಿತು. ಪಂಕ್ಚರ್ ಅಂಗಡಿಯವರು ಉಚಿತ ಸೇವೆ ನೀಡಿದರು. ಅವರಿಗೂ ಮತದಾನದ ಮಹತ್ವವನ್ನು ತಿಳಿಸಿದೆವು' ಎಂದರು ಈ ಪೋರರು.

ಪ್ರತಿಕ್ರಿಯಿಸಿ (+)