ದಾರಿ ತಪ್ಪಿದ ಡೂಪ್ಲಿಕೇಟ್! (ಚಿತ್ರ: ಮಿ. ಡೂಪ್ಲಿಕೇಟ್...?)

7

ದಾರಿ ತಪ್ಪಿದ ಡೂಪ್ಲಿಕೇಟ್! (ಚಿತ್ರ: ಮಿ. ಡೂಪ್ಲಿಕೇಟ್...?)

Published:
Updated:
ದಾರಿ ತಪ್ಪಿದ ಡೂಪ್ಲಿಕೇಟ್! (ಚಿತ್ರ: ಮಿ. ಡೂಪ್ಲಿಕೇಟ್...?)

ಒಬ್ಬರ ಸ್ಥಾನದಲ್ಲಿ ಬೇರೊಬ್ಬ ವ್ಯಕ್ತಿ ಸೇರಿಕೊಂಡು ಗೊಂದಲ ರೂಪು ಗೊಳ್ಳುವ ಕಥೆಗಳು ಜನಪದದಲ್ಲಿ ಸಾಕಷ್ಟಿವೆ. ಈ ಅದಲುಬದಲಿನ ಕಥೆಯನ್ನೊಳಗೊಂಡ ಹಲವು ಸಿನಿಮಾಗಳೂ ಬಂದಿವೆ. ಇಂಥ ಕಣ್ಣಾ ಮುಚ್ಚಾಲೆಯ ಇನ್ನೊಂದು ಕಥೆ `ಮಿ.ಡೂಪ್ಲಿಕೇಟ್...?~.ತನ್ನನ್ನು ನೋಡಲು ಬರಬೇಕಿದ್ದ ವರನೆಂದು ಭಾವಿಸಿ ಬೇರೊಬ್ಬ ಹುಡುಗನನ್ನು ಹುಡುಗಿಯೊಬ್ಬಳು ಮನೆಗೆ ಕರೆದುಕೊಂಡು ಬರುತ್ತಾಳೆ. ಹುಡುಗಿಯ ಮೇಲಿನ ಆಸೆಯಿಂದ ಹುಡುಗ ಕೂಡ ತನ್ನ ಗುರುತು ಹೇಳಿಕೊಳ್ಳದೆ ನಟಿಸುತ್ತಾನೆ. ಆನಂತರ ನಿಜವಾದ ವರ ಮನೆಗೆ ಬರುತ್ತಾನೆ. ಇಬ್ಬರಲ್ಲಿ ಹುಡುಗಿ ಯಾರಿಗೆ ದಕ್ಕುತ್ತಾಳೆ ಎನ್ನುವುದು ಸಿನಿಮಾದ ಮುಖ್ಯ ಕಥೆ. ಈ ಪ್ರೇಮಕಥನಕ್ಕೆ ಗೆಳೆಯರಿಬ್ಬರ ನಡುವಣ ಸ್ಪರ್ಧೆಯ ಉಪಕಥೆಯನ್ನು ತಳುಕು ಹಾಕಲಾಗಿದೆ.ಕೋಡ್ಲು ರಾಮಕೃಷ್ಣ ನಿರ್ದೇಶನದ ಈ ಚಿತ್ರದಲ್ಲಿ ಕೆಲವು ಸಹನೀಯ ಅಂಶಗಳಿವೆ. ಮನೋಮೂರ್ತಿ ಅವರ ಸಂಗೀತದಲ್ಲಿ ಕೆಲವು ಹಾಡುಗಳು ಕೇಳುವಂತಿವೆ. ನವೀನ್ ಸುವರ್ಣರ ಛಾಯಾಗ್ರಹಣ ಸಹನೀಯವಾಗಿದೆ. ಕಲಾವಿದರ ಪೈಕಿ ದಿಗಂತ್ ತಮ್ಮ ಸೌಂದರ್ಯದ ಹೊಳಪಿನಿಂದ ಹಾಗೂ ಪ್ರಜ್ವಲ್ ಮೈಕಟ್ಟಿನ ಬಿಗಿಯಿಂದ ಗಮನ ಸೆಳೆಯುತ್ತಾರೆ.ಚಿತ್ರದ ಪ್ರಥಮಾರ್ಧದಲ್ಲಿ ಅದೃಷ್ಟದ ಕುರ್ಚಿಯನ್ನು ಎಡವಿಬಿದ್ದ ಮುಖ್ಯಮಂತ್ರಿಯಂತೆ ಸದಾ ನಗು ತುಳುಕಿಸುವ; ಉಳಿದರ್ಧ ಭಾಗದಲ್ಲಿ ಬೇಸ್ತುಬಿದ್ದ ಭಿನ್ನಮತೀಯರಂತೆ ಜೋಲುಮುಖ ಹಾಕಿ ಕೊಂಡಿರುವ ನಾಯಕಿ ಡಿಂಪಲ್ ಸಾಕಿದ ಗಿಣಿಯಂತೆ ಮುದ್ದುಮುದ್ದಾಗಿ ಕಾಣಿಸುತ್ತಾರೆ.

ಕೋಡ್ಲು ಚಿತ್ರದ ಪ್ರಮುಖ ದೌರ್ಬಲ್ಯ ಇರುವುದು ಚಿತ್ರದ ಕಥೆ ಪ್ರೇಕ್ಷಕರ ನಿರೀಕ್ಷೆಯನ್ನು ಮೀರಿ ಆಚೀಚೆ ಚಲಿಸದೆ ಇರುವುದರಲ್ಲಿ. ಈ ಕಥೆ ಪ್ರತಿಪಾದಿಸುವ ನಿಲುವುಗಳೂ ಪ್ರಶ್ನಾರ್ಹವಾಗಿವೆ. ಇಲ್ಲಿನ ನಾಯಕಿ ಅತ್ಯಂತ ದುರ್ಬಲ ವ್ಯಕ್ತಿತ್ವದ ಹೆಣ್ಣು. ಹುಡುಗನ ಫೋಟೊ ಕೂಡ ನೋಡದೆ, ಸಾಫ್ಟ್‌ವೇರ್ ಪ್ರಭಾವಳಿಯ ಕಥೆಗಳನ್ನು ಕೇಳಿಯೇ ಅವನ ಬಗ್ಗೆ ಅನುರಾಗ ಬೆಳೆಸಿಕೊಳ್ಳುತ್ತಾಳೆ. ಇದೇ ಹುಡುಗಿ, ತನ್ನ ಬದುಕಿನೊಂದಿಗೆ ಹುಡುಗಾಟವಾಡುವ ನಿರುದ್ಯೋಗಿ ಹುಡುಗನ ಬಗ್ಗೆಯೂ ಮೆದು ಭಾವ ತೋರುತ್ತಾಳೆ.

ಇಬ್ಬರಲ್ಲಿ ಯಾರನ್ನು ಆರಿಸಿಕೊಳ್ಳಬೇಕು ಎನ್ನುವ ಗೊಂದಲಕ್ಕೆ ಹುಡುಗಿ ಒಳಗಾಗುವುದು ತಮಾಷೆಯಾಗಿದೆ. ಅವಳಿಗೆ ತನ್ನ ಪ್ರೇಮದ ಸಾಕ್ಷಾತ್ಕಾರವಾಗಲು ಸ್ನೇಹಿತೆಯ ನೆರವು ಬೇಕಾಗುತ್ತದೆ. ತಮಾಷೆಯೆಂದರೆ ಈ ದಿವ್ಯಪ್ರೇಮ ರೂಪುಗೊಳ್ಳಲು ತಕ್ಕ ಸಮರ್ಥನೆಗಳೇ ಚಿತ್ರದಲ್ಲಿಲ್ಲ. (ಮದುವೆಗೆ ಹುಡುಗನ ಒಪ್ಪಿಗೆಯೇ ಮುಖ್ಯ ಎನ್ನುವ ಇಂಗಿತವೂ ಸಿನಿಮಾದಲ್ಲಿದೆ).ಈ ಚಿತ್ರದಲ್ಲಿ ಪ್ರಜ್ವಲ್ ತಂದೆಯಾಗಿ ಅವರ ನಿಜ ಜೀವನದ ತಂದೆ ದೇವರಾಜ್ ಅವರೇ ಅಭಿನಯಿಸಿದ್ದಾರೆ. ಆದರೆ, ಅವರ ಪಾತ್ರ ಪೋಷಣೆ ಪೇಲವವಾಗಿದೆ. ಬೇರೊಬ್ಬನ ಸ್ಥಾನದಲ್ಲಿ ಸೇರಿಕೊಳ್ಳುವ ಮಗನಿಗೆ ಸಿನಿಮಾ ಅಪ್ಪ ಧೈರ್ಯ ತುಂಬುತ್ತಾನೆ. ಮಗ ಮೈಗಳ್ಳನಾಗಿ ಮನೆಯಲ್ಲಿಯೇ ಉಳಿಯುವುದನ್ನು ಅಪ್ಪ ಸಹಿಸಿಕೊಳ್ಳುವುದು ಸರಿ ಎನ್ನಬಹುದೇನೊ? ಆದರೆ, ಮೈಗಳ್ಳ ಮಗ ಬೇರೊಬ್ಬರ ಮನೆಯ ಹೆಣ್ಣುಮಕ್ಕಳೊಂದಿಗೆ ನಟಿಸುವುದಕ್ಕೆ, ದಾರಿ ತಪ್ಪಲಿಕ್ಕೆ ಉತ್ತೇಜನ ನೀಡುವುದಕ್ಕೆ ಏನನ್ನುವುದು? ನೋಡುಗರ ಕಣ್ಣಿಗಂತೂ ಅಪ್ಪ ಹಾಗೂ ಸ್ನೇಹಿತೆಯ ಪಾತ್ರಗಳು ಮಧ್ಯವರ್ತಿಗಳಂತೆ ಕಾಣಿಸುತ್ತವೆ.ನಿರ್ದೇಶಕ ಕೋಡ್ಲು ರಾಮಕೃಷ್ಣ ಕಾದಂಬರಿಗಳನ್ನು, ಹಾಸ್ಯಕಥೆಗಳನ್ನು ಸಿನಿಮಾ ಮಾಡಿದವರು. ಆದರೆ, `ಮಿ.ಡೂಪ್ಲಿಕೇಟ್...?~ ಕಥೆ ಅವರ ಹಿಡಿತಕ್ಕೆ ಸಿಕ್ಕಿದಂತಿಲ್ಲ (ಕಥೆ - ಸಂಭಾಷಣೆ: ರಾಘವ). ಅವರ ಹಳೆಯ ಚಿತ್ರಗಳಿಗೆ ಹೋಲಿಸಿದರೆ ಇದು ಡೂಪ್ಲಿಕೇಟೇ ಸರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry