ದಾರಿ ಬಿಡಪ್ಪ... ಸೈಡು ಬಿಡಪ್ಪ...

7

ದಾರಿ ಬಿಡಪ್ಪ... ಸೈಡು ಬಿಡಪ್ಪ...

Published:
Updated:

ಇದೊಂದು ಹಿತಾನುಭ ಎಂದರು ಮಧು ಬಂಗಾರಪ್ಪ. ಮೈಸೂರಿನಲ್ಲಿ ನಡೆಯುತ್ತಿದ್ದ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ಬಣ್ಣಿಸುತ್ತಿದ್ದುದು- ‘ದೇವಿ’ ಚಿತ್ರದ ಶೂಟಿಂಗ್ ರಸಾನುಭವವನ್ನು. ಹಾಂ, ಮಧು ಅವರಿಗಾದ ಹಿತಾನುಭವದಲ್ಲಿ ಗಾಯಗಳೂ ಸೇರಿವೆ!ಮಧು ಅವರಿಗೆ ಸಿನಿಮಾ ಹೊಸತೇನೂ ಅಲ್ಲ. ಈವರೆಗೆ ತೆರೆಯ ಹಿಂದಷ್ಟೇ ಕಾಣಿಸುತ್ತಿದ್ದ ಅವರು ಇದೀಗ ತೆರೆಯ ಮೇಲೆ ನಾಯಕನಾಗಿ ಕಾಣಿಸುತ್ತಿದ್ದಾರೆ, ಅಷ್ಟೇ. ನಿರ್ಮಾಣದೊಂದಿಗೆ ನಟನೆಯೂ ಜೊತೆಯಾಗಿರುವುದರಿಂದ ಅವರ ಜವಾಬ್ದಾರಿ ಹೆಚ್ಚಿದೆ. ಹೆಚ್ಚುವರಿ ನಟನೆಯನ್ನು ಅವರು ಖುಷಿಯಿಂದ ಅನುಭವಿಸುತ್ತಿರುವುದು ಮಾತುಗಳಿಂದಲೇ ವ್ಯಕ್ತವಾಗುತ್ತಿತ್ತು.ನೃತ್ಯ ಮತ್ತು ಹಾಡುಗಳ ಚಿತ್ರೀಕರಣ ಮಧು ಅವರಿಗೆ ಪುಳಕ ತಂದಿದೆ. ರವಿ ಕಾಳೆ ಅವರೊಂದಿಗೆ ಸಾಹಸದೃಶ್ಯವೊಂದರಲ್ಲಿ ಪಾಲ್ಗೊಂಡಿದ್ದಾಗ ಅವರ ಪಕ್ಕೆಲುಬು ಘಾಸಿಗೊಂಡಿದ್ದೂ ಆಗಿದೆ. ಇವೆಲ್ಲವನ್ನೂ ಕಲಿಕೆಯ ಭಾಗವಾಗಿಯೇ ಸ್ವೀಕರಿಸಿರುವ ಮಧು ಅವರಿಗೆ, ಸಿನಿಮಾ ರೂಪುಗೊಳ್ಳುತ್ತಿರುವ ಪ್ರಕ್ರಿಯೆ ಬಗ್ಗೆ ಸಮಾಧಾನವಿದೆ. ‘ಕಠಿಣ ಶ್ರಮ ಮತ್ತು ಒಳ್ಳೆಯ ಧೋರಣೆ ಇದ್ದರೆ ತಕ್ಕ ಪ್ರತಿಫಲ ದೊರೆಯುವುದರಲ್ಲಿ ಅನುಮಾನವಿಲ್ಲ ಎನ್ನುವುದು ನನ್ನ ಸಿನಿಮಾ ಅನುಭವ. ಅಂಥ ಪ್ರತಿಫಲವನ್ನು ಈಗ ನಿರೀಕ್ಷಿಸುತ್ತಿದ್ದೇನೆ. ಸಿನಿಮಾ ಗೆಲ್ಲುವ ಬಗ್ಗೆ ತಮಗೆ ಸಂಪೂರ್ಣ ವಿಶ್ವಾಸವಿದೆ’ ಎಂದರು.ಉಪೇಂದ್ರ ಅವರು ‘ದೇವಿ’ ಚಿತ್ರಕ್ಕಾಗಿ ಗೀತೆಯೊಂದನ್ನು ರಚಿಸಿದ್ದಾರೆ. ‘ದಾರಿ ಬಿಡಪ್ಪ... ಸೈಡು ಬಿಡಪ್ಪ...’ ಎಂದು ನಾಯಕನನ್ನು ಪರಿಚಯಿಸುವ ಈ ಗೀತೆಯನ್ನು ಮಧು ಗುನುಗುನಿಸಿದರು. ಅಂದಹಾಗೆ, ಸಿನಿಮಾದಲ್ಲಿ ಸಂದೇಶ ಕೂಡ ಇದೆಯಂತೆ. ಅದು ಸಮಾಜದಲ್ಲಿನ ಅಂಧರಿಗೆ ಸಂಬಂಧಿಸಿದ್ದು.ಈ ನಡುವೆ ‘ದೇವಿ’ ಚಿತ್ರಕ್ಕೆ ಹೊಸ ಪ್ರತಿಭೆಗಳ ಸೇರ್ಪಡೆಯಾಗಿದೆ. ಅವರಲ್ಲಿ ಮುಖ್ಯವಾದವರು ತೆಲುಗು ಚಿತ್ರರಂಗದಲ್ಲಿ ವರ್ಚಸ್ಸುಳ್ಳ ಕನ್ನಡದವರೇ ಆದ ಚರಣ್‌ರಾಜ್. ಮತ್ತೊಬ್ಬರು ಅವಂತಿ ಪ್ರಸಾದ್. ತೆಲುಗಿನವರಾದರೂ ಅವಂತಿ ಪ್ರಸಾದ್ ಕೂಡ ಕನ್ನಡ ಮಾತನಾಡಬಲ್ಲರು.ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಚರಣ್‌ರಾಜ್, ಮಧು ಅವರ ಶ್ರಮ-ಪ್ರತಿಭೆಯನ್ನು ಕೊಂಡಾಡಿದರು. ‘ದೇವಿ’ಯ ಚಿತ್ರಕಥೆ ಅವರಿಗೆ ಹೇಳಿಮಾಡಿಸಿದಂತಿದೆ. ಅಂಬರೀಷ್, ಶಿವರಾಜ್‌ಕುಮಾರ್ ಅವರಂತೆ ಮಧು ಕೂಡ ತಣ್ಣನೆಯ ಒಳ್ಳೆಯ ವ್ಯಕ್ತಿ ಎಂದು ಹೊಗಳಿದರು.

ನಿರ್ದೇಶಕ ಈಶ್ವರ್ ಅವರಿಗೆ ‘ದೇವಿ’ ಚಿತ್ರ ಅದ್ದೂರಿಯಾಗಿ ಮೂಡಿಬರುತ್ತಿರುವ ಬಗ್ಗೆ ತೃಪ್ತಿಯಿದೆ. ಆಕಾಶ್ ಆಡಿಯೊದಂಥ ಪ್ರತಿಷ್ಠಿತ ಸಂಸ್ಥೆಗೆ ಸಿನಿಮಾ ನಿರ್ದೇಶಿಸುತ್ತಿರುವ ಹೆಮ್ಮೆ ಅವರದ್ದು. ಈಗಾಗಲೇ ಶೇ.80ರಷ್ಟು ಚಿತ್ರೀಕರಣ ಮುಗಿದಿದೆ. ಹಾಡುಗಳ ಚಿತ್ರೀಕರಣ ಹಾಗೂ ಟಾಕಿ ಭಾಗಕ್ಕಾಗಿ ಹದಿನೆಂಟು ದಿನಗಳನ್ನು ಮೀಸಲಿರಿಸಿದ್ದೇವೆ ಎಂದು ಈಶ್ವರ್ ಹೇಳಿದರು.ಮಂದಾರದ ಘಮ!

‘ಒಲವೇ ಮಂದಾರ’ ಚಿತ್ರದ ನಾಯಕಿ ಆಕಾಂಕ್ಷಾ ‘ದೇವಿ’ ಬಳಗವನ್ನು ಸೇರಿಕೊಂಡಿರುವ ಮತ್ತೊಂದು ಪ್ರತಿಭೆ. ಚೊಚ್ಚಿಲ ಚಿತ್ರದ ಮೂಲಕ ಸಹೃದಯರ ಗಮನಸೆಳೆದಿರುವ ಈ ಚೆಲುವೆಗೆ ಕನ್ನಡದಲ್ಲೇ ನೆಲೆಕಂಡುಕೊಳ್ಳುವ ವಿಶ್ವಾಸ.

‘ದೇವಿ’ ಚಿತ್ರದಲ್ಲಿ ನನಗೆ ಒಳ್ಳೆಯ ಪಾತ್ರವಿದೆ. ಸುಂದರ ಹಾಗೂ ಪ್ರತಿಭಾವಂತನಾದ ನಾಯಕನನ್ನು ಆರಾಧಿಸುವ ಪಾತ್ರ ನನ್ನದು ಎಂದು ಆಕಾಂಕ್ಷಾ ಹೇಳಿದರು.ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯದಿಂದ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದಿರುವ ಆಕಾಂಕ್ಷಾ 2008ರಲ್ಲಿ ‘ಮಿಸ್ ಫೆಮಿನಾ ಬ್ಯೂಟಿಫುಲ್ ಐಸ್’ ಪ್ರಶಸ್ತಿ ಪಡೆದ ಜಾಣೆ. ಹಲವು ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಒಲವೇ ಮಂದಾರ’ ಚಿತ್ರದಲ್ಲಿ ಆಕೆಯನ್ನು ನೋಡಿದ ನಿರ್ದೇಶಕ ಈಶ್ವರ್, ‘ದೇವಿ’ ಬಳಗಕ್ಕೆ ಆಕೆಯನ್ನು ಸೇರಿಸಿಕೊಳ್ಳಲು ತಕ್ಷಣವೇ ನಿರ್ಧರಿಸಿದರಂತೆ. ‘ದೇವಿ’ ಚಿತ್ರ ಒಪ್ಪಿಕೊಳ್ಳುವ ಮುನ್ನ ಆಕಾಂಕ್ಷಾ ಅವರು ಹಾಕಿದ್ದು ಒಂದೇ ಕಂಡೀಷನ್- ‘ಬಿಕಿನಿ ಹಾಕುವುದಿಲ್ಲ, ತುಟಿಗೆ ತುಟಿ ಬೆಸೆಯುವುದಿಲ್ಲ’.ನಾನು ಬಾಲಿವುಡ್‌ಗೆ ಸಲ್ಲುವ ಹುಡುಗಿ ಅಲ್ಲ. ದಕ್ಷಿಣ ಭಾರತದ ಚಿತ್ರಗಳೇ ನನಗೆ ಸಾಕು ಎನ್ನುವುದು ಆಕಾಂಕ್ಷಾ ಅವರ ಸ್ಪಷ್ಟ ನುಡಿ.ನಿರ್ಮಾಪಕ ಸೂರಪ್ಪ ಬಾಬು ಕೂಡ ತಮ್ಮ ಮುಂದಿನ ಚಿತ್ರಕ್ಕೆ ಆಕಾಂಕ್ಷಾ ಅವರನ್ನು ಸಂಪರ್ಕಿಸಿದ್ದಾರೆ. ಮಾತುಕತೆ ಪಕ್ಕಾ ಆದರೆ, ರವಿ ಶ್ರೀವತ್ಸ ನಿರ್ದೇಶನದ- ಶಿವರಾಜ್‌ಕುಮಾರ್ ನಾಯಕರಾಗಿರುವ ಸೂರಪ್ಪ ಬಾಬು ಚಿತ್ರದಲ್ಲಿ ಆಕೆ ನಾಯಕಿಯಾಗಿ ನಟಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry