ಶುಕ್ರವಾರ, ನವೆಂಬರ್ 15, 2019
21 °C

ದಾರಿ ವಿವಾದ: ಮೂವರ ಕೊಲೆ

Published:
Updated:

ಶಿವಮೊಗ್ಗ: ಜಮೀನಿನ ಒಳಗೆ ಓಡಾಡುವ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ಮೂವರು ಸಹೋದರರನ್ನು ಮಾರಕಾಸ್ತ್ರಗಳಿಂದ ಕಡಿದು ಕೊಲೆ ಮಾಡಿರುವ ಘಟನೆ ಭದ್ರಾವತಿ ತಾಲ್ಲೂಕಿನ ಭದ್ರಾಪುರ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.ಚಂದ್ರು (38), ಪ್ರಕಾಶ್ (35) ಮತ್ತು ರಮೇಶ (35) ಕೊಲೆಯಾದವರು ಎಂದು ಗುರುತಿಸಲಾಗಿದೆ. ಗ್ರಾಮದ ವಿವಾದಿತ ಜಮೀನಿನಲ್ಲಿ ಐದಾರು ಜನರಿದ್ದ ಗುಂಪು ಮಾರಕಾಸ್ತ್ರಗಳಿಂದ ಕೊಲೆ ಮಾಡಿ ಪರಾರಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆ ಹಿನ್ನೆಲೆ: ಕೊಲೆಯಾದ ಸಹೋದರರ ಗದ್ದೆ ಗ್ರಾಮದಲ್ಲಿ ಇದ್ದು, ಇವರ ಗದ್ದೆಗೆ ಓಡಾಡಲು ಪ್ರತ್ಯೇಕ ರಸ್ತೆ ಇರದ ಕಾರಣ ಮತ್ತೊಂದು ಕುಟುಂಬಕ್ಕೆ ಸೇರಿದ ತೋಟದ ಮೂಲಕ ಓಡಾಡಬೇಕಾಗಿತ್ತು. ಇದಕ್ಕೆ ಆ ತೋಟದವರು ಅವಕಾಶ ನೀಡದ ಕಾರಣ ಕೆಲವು ವರ್ಷಗಳಿಂದ ಎರಡೂ ಕುಟುಂಬಗಳ ನಡುವೆ ಆಗಾಗ ಗಲಾಟೆಯಾಗಿದ್ದು, ಪೊಲೀಸ್ ಠಾಣೆ ಹಾಗೂ ಸ್ಥಳೀಯ ನ್ಯಾಯಾಲಯಗಳಲ್ಲಿ ಪ್ರಕರಣ ಕೂಡ ದಾಖಲಾಗಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.ಸೋಮವಾರ ಬೆಳಿಗ್ಗೆ ಇದೇ ವಿಷಯಕ್ಕೆ ಗಲಾಟೆಯಾಗಿದ್ದು, ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಅವಳಿ-ಜವಳಿ ತಮ್ಮಂದಿರಿಗೆ ಊಟ ತರುತ್ತಿದ್ದ ಚಂದ್ರು ಅವರನ್ನು ಮೊದಲು ಕೊಲೆ ಮಾಡಿದ ದುಷ್ಕರ್ಮಿಗಳು, ತದನಂತರ ಕೃತ್ಯ ನೋಡಿ ಓಡಿ ಬಂದ ಇಬ್ಬರು ಅವಳಿ ಸಹೋದರರನ್ನೂ ಕೊಲೆ ಮಾಡಿದ್ದಾರೆ. ಅಡಿಕೆ ತೋಟದಲ್ಲಿ ದಿಕ್ಕಿಗೊಂದು ದೇಹಗಳು ಬಿದ್ದಿದ್ದು ಕೃತ್ಯದ ಭೀಕರತೆ ಸಾರುತ್ತಿತ್ತು.  ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.ಶರಣಾದ ಆರೋಪಿಗಳು: ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಮೇಶ್, ಹನುಮಂತ, ಗೋಪಿ ಮತ್ತು ಹರೀಶ್ ಎಂಬ ನಾಲ್ವರು ಆರೋಪಿಗಳು ರಾತ್ರಿಯೇ ಪೊಲೀಸರಿಗೆ ಶರಣಾಗಿದ್ದಾರೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ. ಈ ನಾಲ್ವರೂ ಕೊಲೆ ನಡೆದ ಭದ್ರಾಪುರ ಗ್ರಾಮದವರಾಗಿದ್ದು, 30 ರಿಂದ 35ರ ವಯೋಮಾನದವರು.

ಪ್ರತಿಕ್ರಿಯಿಸಿ (+)