ಶುಕ್ರವಾರ, ಡಿಸೆಂಬರ್ 6, 2019
19 °C

ದಾಳಿಂಬೆ: ಡಜನ್‌ಗೆ ರೂ 1,500

Published:
Updated:
ದಾಳಿಂಬೆ: ಡಜನ್‌ಗೆ ರೂ 1,500

ದಾವಣಗೆರೆ: ಮಾರುಕಟ್ಟೆಯಲ್ಲಿ ದಾಳಿಂಬೆಗೆ ಬಂಪರ್ ಬೆಲೆ ಬಂದಿದೆ. ಡಜನ್ ದಾಳಿಂಬೆ ಈಗ, ರೂ1,500ರಿಂದ ರೂ2,000ದವರೆಗೆ ಮಾರಾಟವಾಗುತ್ತಿದೆ. ಇದರಿಂದ ದಾಳಿಂಬೆ ಬೆಳೆಗಾರರು ಖುಷಿಯಾಗಿದ್ದರೆ, ದಾಳಿಂಬೆ ಹಣ್ಣಿನ `ರುಚಿ~ ಸವಿಯಬೇಕು ಎಂದು ಬಯಸುವ ಗ್ರಾಹಕರಿಗೆ ಬೆಲೆ ದುಬಾರಿಯಾಗುತ್ತಿದೆ.ಸ್ಪೇನ್ ಮತ್ತು ಯುರೋಪ್ ದೇಶಗಳಲ್ಲಿ ಉತ್ತಮ ರುಚಿಯುಳ್ಳ ಭಾರತದ ದಾಳಿಂಬೆಗೆ ಹೆಚ್ಚಿನ ಬೇಡಿಕೆ ಇದೆ. ಇದರಿಂದ ರಫ್ತು ಚಟುವಟಿಕೆ ಗರಿಗೆದರಿದೆ. ಮಾರುಕಟ್ಟೆಯಲ್ಲಿ ಡಜನ್ ದಾಳಿಂಬೆಗೆ ರೂ 1,500ರಿಂದ ರೂ2,000 ಬೆಲೆ ಇದೆ. ನಮ್ಮ ಹಾಪ್‌ಕಾಮ್ಸಗಳಲ್ಲಿ ಹಾಗೂ ಇತೆರೆಡೆಗಳಲ್ಲಿ ಬೆಲೆಯಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಕೆ.ಜಿ.ಗೆ ರೂ250ರಿಂದ ರೂ300 ಆಗಿದೆ. ಒಂದು ದಾಳಿಂಬೆಗೆ ಹೆಚ್ಚು ಕಡಿಮೆ ರೂ100 ಇದೆ. ಇದರಿಂದ ದಾಳಿಂಬೆ ಬೆಳೆಗಾರರಿಗೆ ಉತ್ತಮ ಲಾಭ ದೊರೆಯುತ್ತಿದೆ. ಆರಂಭದಲ್ಲಿ ಎಚ್ಚರಿಕೆಯಿಂದ ಔಷಧಿ ಸಿಂಪಡಿಸಿ, ಬೆಳೆ ಪೋಷಣೆ ಮಾಡಿದ ರೈತರು ದಾಳಿಂಬೆಯಿಂದ ಹೆಚ್ಚಿನ ಗಳಿಕೆ ಪಡೆಯುತ್ತಿದ್ದಾರೆ. ಎಲ್ಲೆಡೆ ಬೇಡಿಕೆ ಹೆಚ್ಚುತ್ತಿರುವ ಪರಿಣಾಮ ಉತ್ತಮ ಬೆಲೆ ದೊರೆಯುತ್ತಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕದಿರೇಗೌಡ ತಿಳಿಸಿದರು.ರಾಜ್ಯದಲ್ಲಿ ಪ್ರಸ್ತುತ ಸುಮಾರು 15,000 ಹೆಕ್ಟೇರ್ ಪ್ರದೇಶದಲ್ಲಿ ದಾಳಿಂಬೆ ಬೆಳೆಯಲಾಗುತ್ತಿದೆ. 2011-12ನೇ ಸಾಲಿನಲ್ಲಿ `ಅಂಗಮಾರಿ ದುಂಡಾಣು ರೋಗ~ (ಬ್ಯಾಕ್ಟೀರಿಯಲ್ ಬೈಟ್) ಕಾಣಿಸಿಕೊಂಡಿದ್ದರಿಂದ ಉತ್ಪಾದನೆಯಲ್ಲಿ ಕುಸಿತ ಉಂಟಾಗಿದೆ. ಹಲವು ಔಷಧೀಯ ಗುಣಗಳನ್ನು ಹೊಂದಿರುವ ದಾಳಿಂಬೆ ಸವಿಯಲು ಗ್ರಾಹಕರಿಂದ ಬೇಡಿಕೆ ಹೆಚ್ಚಿದ ಪರಿಣಾಮ ಬೆಲೆ ಹೆಚ್ಚಾಗುತ್ತಿದೆ ಎನ್ನುತ್ತಾರೆ ಅವರು.ಜಿಲ್ಲೆಯಲ್ಲಿ 200 ಹೆಕ್ಟೇರ್ ಪ್ರದೇಶದಲ್ಲಿ ದಾಳಿಂಬೆ ಬೆಳೆಯಲಾಗುತ್ತಿದೆ. ಈ ವರ್ಷ 50 ಹೆಕ್ಟೇರ್ ಹೆಚ್ಚಾಗಿದೆ. ದಾವಣಗೆರೆ, ಜಗಳೂರು ಹಾಗೂ ಹರಪನಹಳ್ಳಿ ತಾಲ್ಲೂಕುಗಳಲ್ಲಿ ಹೆಚ್ಚಿನ ದಾಳಿಂಬೆ ಬೆಳೆಯುವುದು ಕಂಡುಬರುತ್ತಿದೆ. ಅದರಲ್ಲಿ, ಜಗಳೂರಿನಲ್ಲಿ ಹೆಚ್ಚು ಅಂದರೆ 80 ಹೆಕ್ಟೇರ್ ಬೆಳೆಯಲಾಗುತ್ತಿದೆ. `ಭಗವಾ~ ತಳಿಯೇ ಹೆಚ್ಚು. ರೂ80 ಸಾವಿರದಿಂದ ರೂ1 ಲಕ್ಷ ವೆಚ್ಚ ಮಾಡುತ್ತಿರುವ ರೈತರು, ರೂ 4ರಿಂದ ರೂ5 ಲಕ್ಷ ಆದಾಯ ಗಳಿಸುತ್ತಿದ್ದಾರೆ. ಹೀಗಾಗಿ, ಈ ವರ್ಷ ಸುಮಾರು 30 ಹೆಕ್ಟೇರ್ ಪ್ರದೇಶ ವಿಸ್ತರಣೆಯ ಉದ್ದೇಶ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.ಪ್ರಸ್ತುತ ಜಿಲ್ಲೆಯಿಂದ ಪುಣೆ, ಬಾಂಬೆ, ಕೋಲ್ಕತ್ತಾ, ದೆಹಲಿಗೆ ದಾಳಿಂಬೆ ಹಣ್ಣುಗಳನ್ನು ರಫ್ತು ಮಾಡಲಾಗುತ್ತಿದೆ. ಸುಮಾರು 1,000 ಮೆಟ್ರಿಕ್ ಟನ್‌ನಷ್ಟು ದಾಳಿಂಬೆ ರಫ್ತಾಗುತ್ತಿದೆ. ಇದರಿಂದಾಗಿ, ರಫ್ತು ಮಾಡುತ್ತಿರುವ ರೈತರಿಗೆ ಹೆಚ್ಚಿನ ಲಾಭವಾಗುತ್ತಿದೆ. ರೈತರನ್ನು ಪ್ರೋತ್ಸಾಹಿಸಲು ಇಲಾಖೆಯಿಂದಲೂ ವಿವಿಧ ಯೋಜನೆ ರೂಪಿಸಲಾಗಿದೆ ಮತ್ತು ಸಹಾಯಧನ ನೀಡಲಾಗುತ್ತಿದೆ. ರೋಗ ನಿಯಂತ್ರಣಕ್ಕೆ ಎಕರೆಗೆ ತಲಾ ರೂ ಒಂದು ಸಾವಿರದಂತೆ ನಾಲ್ಕು ಎಕರೆಗೆ ರೂ4 ಸಾವಿರ ಕೊಡುತ್ತಿದ್ದೇವೆ. ಕನಿಷ್ಠ 5 ಎಕರೆ ಹೊಂದಿ, ಅದರಲ್ಲಿ ಎರಡೂವರೆ ಎಕರೆಯಲ್ಲಿ ಬಹುವಾರ್ಷಿಕ ಬೆಳೆ ಬೆಳೆದಿರುವ ರೈತರಿಗೆ `ಪ್ಯಾಕ್ ಹೌಸ್~ ನಿರ್ಮಾಣಕ್ಕೆಂದು ರೂ1.5 ಲಕ್ಷ ಸಹಾಯಧನ ಕಲ್ಪಿಸಲಾಗುವುದು ಎಂದು ವಿವರಿಸಿದರು.

 

ಪ್ರತಿಕ್ರಿಯಿಸಿ (+)