ದಾಳಿಂಬೆ ಬೆಳೆಗಾರರ ಸಾಲಮನ್ನಾಕ್ಕೆ ಕ್ರಮ

7

ದಾಳಿಂಬೆ ಬೆಳೆಗಾರರ ಸಾಲಮನ್ನಾಕ್ಕೆ ಕ್ರಮ

Published:
Updated:

ಚಿತ್ರದುರ್ಗ: ದಾಳಿಂಬೆ ಬೆಳೆಗಾರರ ಬಡ್ಡಿಮನ್ನಾ ಮಾಡುವ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ತೋಟಗಾರಿಕೆ ಸಚಿವ ಎಸ್.ಎ. ರವೀಂದ್ರನಾಥ್ ತಿಳಿಸಿದರು.ನಗರದಲ್ಲಿ ಶುಕ್ರವಾರ ಜಿಲ್ಲಾ ತೋಟಗಾರಿಕೆ ಸಂಘ ಮತ್ತು ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿರುವ 21ನೇ ಫಲ-ಪುಷ್ಪ ಪ್ರದರ್ಶನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.ಬಡ್ಡಿ ಮನ್ನಾ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅಗತ್ಯಬಿದ್ದರೆ ಕೇಂದ್ರ ಸರ್ಕಾರದ ಬಳಿ ನಿಯೋಗ ಕೊಂಡೊಯ್ಯಲಾಗುವುದು. ಹಿರಿಯೂರು ತೋಟಗಾರಿಕೆ ಕಾಲೇಜಿಗೆ ಡಿಪ್ಲೊಮಾ ಕೋರ್ಸ್ ಆರಂಭಿಸಲು ಅನುಮೋದನೆ ನೀಡಲಾಗುವುದು ಎಂದು ಪ್ರಕಟಿಸಿದರು.ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ರೈತರು  ಆರ್ಥಿಕ ಲಾಭ ನೀಡುವ ಹೂ ಬೆಳೆಯಬೇಕು. ಹನಿ ನೀರಾವರಿಗೆ ಸಬ್ಸಿಡಿ ಸೇರಿದಂತೆ ತೋಟಗಾರಿಕೆಗೆ ಹಲವು ಸೌಲಭ್ಯ ನೀಡುತ್ತಿದ್ದು, ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಸಂಸತ್ ಸದಸ್ಯ ಜನಾರ್ದನಸ್ವಾಮಿ ಮಾತನಾಡಿ, ತೋಟಗಾರಿಕೆ, ಕೃಷಿಯ ತಾಂತ್ರಿಕತೆಯಲ್ಲಿ ಭಾರತ ವಿದೇಶಗಳಿಗೆ ಹೋಲಿಸಿದರೆ 150 ವರ್ಷದಷ್ಟು ಹಿಂದೆ ಉಳಿದಿದ್ದೇವೆ ಎಂದು ಅಚ್ಚರಿ ವ್ಯಕ್ತಪಡಿಸಿದರು.ವಿಧಾನ ಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿ, ಜಿಲ್ಲೆಯ ದಾಳಿಂಬೆ ಬೆಳೆ ವಿದೇಶಗಳಲ್ಲೂ ಹೆಸರು ಮಾಡಿದ್ದು ತೋಟಗಾರಿಕೆ ಬೆಳೆಗಾರರಲ್ಲಿ ಹೊಸ ಚೈತನ್ಯ ಮೂಡಿದೆ. ಅಳತೆ ಮತ್ತು ತೂಕ  ವ್ಯತ್ಯಾಸದಿಂದಾಗಿ ಹೂ ಬೆಳೆಗಾರರು  ನಷ್ಟ ಅನುಭವಿಸುವಂತಾಗಿದೆ. ಹೀಗಾಗಿ ಚಿತ್ರದುರ್ಗ ಹೂ ಮಾರುಕಟ್ಟೆಯನ್ನು ಎಪಿಎಂಸಿ ಮಾರುಕಟ್ಟೆಗೆ ಸ್ಥಳಾಂತರಿಸಲು ಸಚಿವರು ಸಹಕರಿಸಬೇಕು ಎಂದರು.ಡಾ.ಶಿವಮೂರ್ತಿ ಮುರುಘಾ ಶರಣರು ನೇತೃತ್ವ ವಹಿಸಿದ್ದರು. ಜಿಪಂ ಅಧ್ಯಕ್ಷ ಟಿ. ರವಿಕುಮಾರ್, ನಗರಸಭೆ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್, ಜಿ.ಪಂ. ಸದಸ್ಯರಾದ ಅನಿತಾ ಬಸವರಾಜ್, ರಮೇಶ್, ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್. ಜಯರಾಂ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry