`ದಾಳಿ: ಕೈವಾಡ ಶೀಘ್ರ ಬಹಿರಂಗ'

7

`ದಾಳಿ: ಕೈವಾಡ ಶೀಘ್ರ ಬಹಿರಂಗ'

Published:
Updated:

ಬೆಂಗಳೂರು: `ಲೋಕಾಯುಕ್ತ ನ್ಯಾಯಾಲಯದಲ್ಲಿ ನನ್ನ ವಿರುದ್ಧ ಖಾಸಗಿ ದೂರು ದಾಖಲಾಗಿರುವುದರ ಹಿಂದೆ ಯಾರ ಕೈವಾಡ ಇದೆ ಎಂಬುದನ್ನು ಶೀಘ್ರದಲ್ಲೇ ಬಹಿರಂಗಪಡಿಸುತ್ತೇನೆ' ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮಂಗಳವಾರ ಇಲ್ಲಿ ಹೇಳಿದರು.`ನನಗೆ ಆಗಿರುವ ಅನ್ಯಾಯ ಬೇರೆ ರಾಜಕಾರಣಿಗಳಿಗೆ ಆಗಬಾರದು. ಆದ್ದರಿಂದ ಈ ವಿಷಯವನ್ನು ಇಷ್ಟಕ್ಕೆ ಬಿಡುವುದಿಲ್ಲ. ಇದು ಧಾರಾವಾಹಿ ಇದ್ದಂತೆ. ನಾನಂತೂ ಇದನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ಮುಂದಿನ ಕ್ರಮ ಏನು ಎಂಬುದನ್ನು ಸದ್ಯದಲ್ಲೇ ತಿಳಿಸುತ್ತೇನೆ' ಎಂದು ಸುದ್ದಿಗಾರರಿಗೆ ತಿಳಿಸಿದರು.ಸೋಮವಾರ ನನ್ನ ಜೀವನದಲ್ಲಿ ಅತ್ಯಂತ ಸಂತೋಷದ ದಿನ (ಅವರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿತ್ತು). ಲೋಕಾಯುಕ್ತ ಮುಂದೆ ಘೋಷಿಸಿಕೊಂಡಿದ್ದ ಚಿನ್ನ, ಬೆಳ್ಳಿಯ ಆಭರಣಗಳು ದಾಳಿ ಸಂದರ್ಭದಲ್ಲಿ ಪತ್ತೆಯಾಗಿವೆ. ಯಾವುದನ್ನೂ ಅಕ್ರಮವಾಗಿ ಇಟ್ಟುಕೊಂಡಿರಲಿಲ್ಲ' ಎಂದು ಹೇಳಿದರು.ಆಭರಣಗಳು ಬಿಟ್ಟರೆ ಯಾವ ದಾಖಲೆಗಳೂ ದೊರೆತಿಲ್ಲ. ಹೀಗಾಗಿ ಕಾರ್ಯಕರ್ತರು, ಹಿತೈಷಿಗಳಲ್ಲಿ ಇದ್ದ ಗೊಂದಲ ನಿವಾರಣೆಯಾಗಿದೆ ಎಂದರು.

`ಲೋಕಾಯುಕ್ತ ನ್ಯಾಯಾಲಯದಲ್ಲಿ ನನ್ನ ವಿರುದ್ಧ ದೂರು ದಾಖಲಾದಾಗ ಬೆಟ್ಟದಷ್ಟು ಪ್ರಚಾರ ಸಿಕ್ಕಿತು. ಆದರೆ, ದಾಳಿ ನಂತರ ಏನೂ ದೊರೆಯದೆ ಇರುವುದರಿಂದ ಬೆಟ್ಟ ಅಗೆದು ಇಲಿ ಹಿಡಿದಂತಾಗಿದೆ' ಎಂದು   ವಿಶ್ಲೇಷಿಸಿದರು.ದಾಳಿ ಸಂದರ್ಭದಲ್ಲಿ 1.9 ಕೆ.ಜಿ. ಚಿನ್ನ, 37 ಕೆ.ಜಿ ಬೆಳ್ಳಿ ದೊರೆತಿದೆ. ಬೆಳ್ಳಿಯ ಖಡ್ಗ, ಗದೆ ಉಡುಗೊರೆ ರೂಪದಲ್ಲಿ ಬಂದಿವೆ. ಯಾವ ಯಾವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳೇ ಸ್ಪಷ್ಟಪಡಿಸಿರುವುದರಿಂದ ಪಕ್ಷ ಹಾಗೂ ಸರ್ಕಾರದ ಗೌರವ ಉಳಿದಿದೆ ಎಂದರು.ಖಾಸಗಿ ದೂರು ದಾಖಲಾದ ಮಾತ್ರಕ್ಕೆ ಯಾಕೆ ರಾಜೀನಾಮೆ ನೀಡಬೇಕು ಎಂದು ಪ್ರಶ್ನಿಸಿದ ಅವರು, `ಲೋಕಾಯುಕ್ತ ಸಂಸ್ಥೆ ಬಗ್ಗೆ ಗೌರವವಿದೆ. ತನಿಖೆ ಬಳಿಕ ಆರೋಪದಲ್ಲಿ ಹುರುಳಿಲ್ಲ ಎಂಬುದು ಸಾಬೀತಾಗಲಿದೆ. ಸತ್ಯಾಸತ್ಯತೆ ಜನರಿಗೆ ಗೊತ್ತಾಗಲಿದೆ' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry