ದಾಳಿ ತಡೆ: ವಿಶ್ವಸಂಸ್ಥೆಗೆ ಮನವಿ

7
ಸೇನಾ ಕಾರ್ಯಾಚರಣೆಯಿಂದ ಭಯೋತ್ಪಾದನೆಗೆ ಪ್ರೋತ್ಸಾಹ: ಸಿರಿಯಾ

ದಾಳಿ ತಡೆ: ವಿಶ್ವಸಂಸ್ಥೆಗೆ ಮನವಿ

Published:
Updated:

ಕೈರೊ (ಪಿಟಿಐ): ತನ್ನ ವಿರುದ್ಧ ನಡೆಯಬಹುದಾದ ದಾಳಿಯನ್ನು ತಡೆಯಲು ಯತ್ನಿಸುವಂತೆ ಸಿರಿಯಾವು ವಿಶ್ವಸಂಸ್ಥೆಗೆ ಮನವಿ ಮಾಡಿದೆ. ಒಂದು ವೇಳೆ ಅಮೆರಿಕ ದಾಳಿ ನಡೆಸಿದರೆ ಭಯೋತ್ಪಾದಕರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದೂ ಎಚ್ಚರಿಸಿದೆ.`ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವಂತೆ ಮತ್ತು  ತನ್ನ ಮೇಲೆ ನಡೆಯಬಹುದಾದ ದಾಳಿಯನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ವಿಶ್ವಸಂಸ್ಥೆ ಮಹಾ ಪ್ರಧಾನ  ಕಾರ್ಯದರ್ಶಿ ಬಾನ್ ಕಿ ಮೂನ್ ಅವರಿಗೆ ಸಿರಿಯಾ ಸರ್ಕಾರ ಮನವಿ ಮಾಡಿದೆ' ಎಂದು ವಿಶ್ವಸಂಸ್ಥೆಯಲ್ಲಿ ಸಿರಿಯಾ ಪ್ರತಿನಿಧಿಯಾಗಿರುವ ಬಷರ್ ಅಲ್-ಜಾ ಫರಿ ಅವರು ಬರೆದಿರುವ ಪತ್ರದಲ್ಲಿರುವ ಅಂಶಗಳನ್ನು ಉಲ್ಲೇಖಿಸಿ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ `ಎಸ್‌ಎಎನ್‌ಎ' ವರದಿ ಮಾಡಿದೆ.ದೇಶದಲ್ಲಿ ಉದ್ಭವಿಸಿರುವ ಸದ್ಯದ ಬಿಕ್ಕಟ್ಟನ್ನು ಶಾಂತಿ ಮಾತುಕತೆ ಮೂಲಕ ಪರಿಹರಿಸಲು ಯತ್ನಿಸುವಂತೆಯೂ ಸಿರಿಯಾ ಮನವಿ ಮಾಡಿದೆ.ಈ ಮಧ್ಯೆ, ಸಿರಿಯಾ ಮೇಲೆ ಅಮೆರಿಕ ಸೇನಾ ಕಾರ್ಯಾಚರಣೆ ನಡೆಸಿದರೆ, ಅದು ಅಲ್-ಖೈದಾ ಮತ್ತು ಅದರ ಇತರ ಸಂಘಟನೆಗಳಿಗೆ ಬೆಂಬಲ ನೀಡಿದಂತಾಗುತ್ತದೆ ಎಂದು ಹಿರಿಯ ಸಚಿವರೊಬ್ಬರು ಎಚ್ಚರಿಸಿದ್ದಾರೆ.`ಸಿರಿಯಾದ ಮೇಲೆ ನಡೆಯುವ ಯಾವುದೇ ದಾಳಿಯು ಅಲ್-ಖೈದಾ ಮತ್ತು ಅದರ ಅಂಗ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡಿದಂತೆ ಆಗಬಹುದು' ಎಂದು ಸಿರಿಯಾದ ವಿದೇಶಾಂಗ ಇಲಾಖೆ ಸಹಾಯಕ ಸಚಿವ ಫೈಸಲ್ ಮುಕ್‌ದದ್ ಹೇಳಿದ್ದಾರೆ.ಬಷರ್ ಅಲ್-ಅಸಾದ್ ನೇತೃತ್ವದ ಸರ್ಕಾರದಲ್ಲಿ ಮುಕ್‌ದದ್ ಅವರು ಅತ್ಯಂತ ಪ್ರಭಾವಶಾಲಿ ವ್ಯಕ್ತಿ ಎಂದೇ ಬಿಂಬಿತರಾಗಿದ್ದಾರೆ.

ಅಮೆರಿಕವು ಸಿರಿಯಾ ಮೇಲೆ ದಾಳಿ ನಡೆಸಿದರೆ, ಅದರಿಂದಾಗಿ ಅಮೆರಿಕ ಪ್ರಜೆಗಳ ಮೇಲೆ ರಾಷ್ಟ್ರದ ಜನತೆಗಿರುವ ಹಗೆತನ ಮತ್ತಷ್ಟು ಹೆಚ್ಚಲಿದೆ ಎಂದೂ ಅವರು ಎಚ್ಚರಿಸಿದ್ದಾರೆ.ರಾಸಾಯನಿಕ ಅಸ್ತ್ರ ಬಳಕೆಗೆ ಇರಾನ್ ಖಂಡನೆ (ಟೆಹರಾನ್ ವರದಿ): ಯಾವುದೇ ರಾಷ್ಟ್ರ ರಾಸಾಯನಿಕ ಅಸ್ತ್ರಗಳನ್ನು ಬಳಸುವುದನ್ನು  ನಾವು ಖಂಡಿಸುತ್ತೇವೆ ಎಂದು ಇರಾನಿನ ವಿದೇಶಾಂಗ ಸಚಿವ ಮೊಹಮ್ಮದ್ ಜಾವೇದ್ ಜರೀಫ್ ಹೇಳಿದ್ದಾರೆ.ವೆನೆಜುವೆಲಾದ ವಿದೇಶಾಂಗ ಸಚಿವ ಎಲಿಯಾಸ್ ಜವುವಾ ಮಿಲಾನೊ ಅವರೊಂದಿಗೆ ನಡೆಸಿರುವ ದೂರವಾಣಿ ಮಾತುಕತೆಯಲ್ಲಿ ಜರೀಫ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಐಆರ್‌ಎನ್‌ಎ ಸುದ್ದಿಸಂಸ್ಥೆ ವರದಿ ಮಾಡಿದೆ.

 

ಪ್ರಯೋಗಾಲಯಗಳಿಗೆ ಸಾಕ್ಷ್ಯಗಳ ಹಸ್ತಾಂತರ

ವಿಶ್ವಸಂಸ್ಥೆ (ಪಿಟಿಐ): ಸಿರಿಯಾದಲ್ಲಿ ನಡೆದಿದೆ ಎನ್ನಲಾದ ರಾಸಾಯನಿಕ ದಾಳಿಯ ತನಿಖೆ ನಡೆಸಿರುವ ವಿಶ್ವಸಂಸ್ಥೆಯ ತಂಡವು ಕಲೆಹಾಕಿರುವ ಮಾದರಿಗಳು ಹಾಗೂ ಸಾಕ್ಷ್ಯಗಳನ್ನು  ಪ್ರಯೋಗಾಲಯಗಳಿಗೆ ಹಸ್ತಾಂತರಿಸುವ ಕಾರ್ಯಕ್ಕೆ ಸೋಮವಾರ ಚಾಲನೆ ನೀಡಲಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry