ದಾಳಿ: 16 ಸಾವು

7

ದಾಳಿ: 16 ಸಾವು

Published:
Updated:

ಇಸ್ಲಾಮಾಬಾದ್ (ಪಿಟಿಐ):  ವಾಯವ್ಯ ಪಾಕಿಸ್ತಾನದ ದಾರಾ ಅಡಂ ಖೇಲ್ ಪ್ರದೇಶದಲ್ಲಿರುವ ಸೇನಾ ಪಡೆಯ ಕಚೇರಿಯ ಮುಂಭಾಗ ಸ್ಫೋಟಕಗಳು ತುಂಬಿದ ವಾಹನ ಮೇಲೆ ಉಗ್ರರು ಶನಿವಾರ ನಡೆಸಿದ ಆತ್ಮಾಹುತಿ ದಾಳಿಯಲ್ಲಿ 16 ಮಂದಿ ಮೃತಪಟ್ಟು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.ದಾರಾ ಅಡಂ ಖೇಲ್‌ನ ಕೇಂದ್ರ ಮಾರುಕಟ್ಟೆಯ ಸಮೀಪದ ಸೇನಾ ಪಡೆಯ ಕಚೇರಿಯ ಬಳಿ  ಪ್ರಬಲವಾದ ಆತ್ಮಾಹುತಿ ದಾಳಿ ನಡೆದಿದೆ ಎಂದು ಅಧಿಕೃತ ಮೂಲಗಳು ದೃಢಪಡಿಸಿವೆ. ಸೇನೆಯ ಯೋಧರು ತಾಲಿಬಾನ್ ಉಗ್ರರ ವಿರುದ್ಧ ಕಾರ್ಯಾಚರಣೆ ಮಾಡುತ್ತಿದ್ದ ಸಂದರ್ಭದಲ್ಲಿ ಈ ದಾಳಿ ನಡೆಸಲಾಗಿದೆ. ದಾಳಿಯಲ್ಲಿ 20ಕ್ಕೂ ಹೆಚ್ಚು ಅಂಗಡಿಗಳು, ಎಂಟು ಕಾರುಗಳು ಭಾಗಶಃ ಹಾನಿಗೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.ತೀವ್ರವಾಗಿ ಗಾಯಗೊಂಡಿರುವರರನ್ನು ಖೈಬರ್ ಪುಖ್ತಾನ್ವಾ ಪ್ರಾಂತ್ಯದ ರಾಜಧಾನಿ ಪೆಶಾವರದ ಲೇಡಿ ರೀಡಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರು ಮೃತದೇಹಗಳನ್ನು ಮತ್ತು 22 ಮಂದಿ ಗಾಯಾಳುಗಳನ್ನು ದಾಖಲು ಮಾಡಲಾಗಿದ್ದು, ಅವರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ  ಮೂಲಗಳು ತಿಳಿಸಿವೆ. ಈ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆಗಳು ಹೊತ್ತುಕೊಂಡಿಲ್ಲ. ಆದರೆ ನಿಷೇಧಿತ ತೆಹ್ರಿಕ್ -ಎ -ತಾಲಿಬಾನ್ ಕೈವಾಡವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪಾಕಿಸ್ತಾನ ಸೇನೆಯು 2009ರಿಂದ ತಾಲಿಬಾನ್ ಉಗ್ರರ ಪ್ರಬಲ ತಾಣವಾದ ದಾರಾ ಅಡಂ ಖೇಲ್ ಪ್ರದೇಶದಲ್ಲಿ  ಕಾರ್ಯಾಚರಣೆ ನಡೆಸುತ್ತಿದೆ.   ಈ ಪ್ರದೇಶದಲ್ಲಿ  ಉಗ್ರರ ವಿರುದ್ಧದ ಸೇನಾ ಕಾರ್ಯಾಚರಣೆಯನ್ನು ಪುನಃ ಆರಂಭಿಸುವ ಬಗ್ಗೆ ಅಧ್ಯಕ್ಷರು ಹಾಗೂ ಸೇನಾ ಮುಖ್ಯಸ್ಥರು ಚರ್ಚೆ ನಡೆಸಿದ ನಂತರ ಈ ಘಟನೆ ಸಂಭವಿಸಿರುವುದು ಮತ್ತೆ ಸೇನೆಯು ಕಾರ್ಯಾಚರಣೆಯನ್ನು ಆರಂಭಿಸದಂತೆ ಒತ್ತಡ ಹಾಕುವ ಉದ್ದೇಶ ಹೊಂದಿದೆ ಎಂದು ಖೈಬರ್-ಪುಖ್ತಾನ್ವಾದ ಮಾಹಿತಿ ಸಚಿವ ಹುಸೇನ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry