ಶುಕ್ರವಾರ, ಜನವರಿ 17, 2020
22 °C
ಕ್ರೀಡಾ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆ

ದಾವಣಗೆರೆಯಲ್ಲಿ ಯುವ ಸಬಲೀಕರಣ ಕೇಂದ್ರ

ಪ್ರಜಾವಾಣಿ ವಾರ್ತೆ/ಎಂ.ಮಹೇಶ Updated:

ಅಕ್ಷರ ಗಾತ್ರ : | |

ದಾವಣಗೆರೆ: ಯುವಜನರ ಆಶೋತ್ತರ, ಅಗತ್ಯ, ತವಕ ತಲ್ಲಣಗಳಿಗೆ ಸ್ಪಂದಿಸಿ ಮಾರ್ಗದರ್ಶನ ಮಾಡುವ ಮೂಲಕ ಸಬಲಗೊಳಿಸುವ ಉದ್ದೇಶದಿಂದ ನಗರದಲ್ಲಿ ಯುವ ಸಬಲೀಕರಣ ಕೇಂದ್ರ ಸ್ಥಾಪಿಸಲು ಕ್ರೀಡಾ ಇಲಾಖೆ ಯೋಜಿಸಿದೆ.ಈ ಸಂಬಂಧ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವತಿಯಿಂದ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕರ್ನಾಟಕ ಜ್ಞಾನ ಆಯೋಗದ ಶಿಫಾರಸಿನಂತೆ ರೂಪಿಸಲಾಗಿರುವ ಕರ್ನಾಟಕ ಯುವ ನೀತಿಯ ಅಡಿ ಇಂತಹ ಕೇಂದ್ರಗಳನ್ನು ರಾಜ್ಯಾದ್ಯಂತ ಸ್ಥಾಪಿಸಲು ಉದ್ದೇಶಿಸಲಾಗಿದೆ. ಅತಿಹೆಚ್ಚಿನ ಸಂಖ್ಯೆಯಲ್ಲಿರುವ ಯುವಜನರನ್ನು ಸರಿಯಾದ ಮಾರ್ಗದಲ್ಲಿ ನಡೆಯುವಂತೆ ಪ್ರೋತ್ಸಾಹಿಸುವುದು ಯೋಜನೆಯ ಉದ್ದೇಶ.ಕೇಂದ್ರಕ್ಕಾಗಿ, ಹೊಸದಾಗಿ ಕಟ್ಟಡ ನಿರ್ಮಿಸಿದರೆ ಇದಕ್ಕೆ ಸರ್ಕಾರದಿಂದ ₨ 4 ಕೋಟಿ ಹಾಗೂ ಬಾಡಿಗೆ ಕಟ್ಟಡವಾದರೆ ಮೂಲಸೌಕರ್ಯಕ್ಕೆಂದು ₨ 5 ಲಕ್ಷ ದೊರೆಯಲಿದೆ. ಕಂಪ್ಯೂಟರ್‌ ಕೇಂದ್ರ, ಗ್ರಂಥಾಲಯ ಮೊದಲಾದವುಗಳನ್ನು ಕೇಂದ್ರ ಒಳಗೊಂಡಿರುತ್ತದೆ. ಸರ್ಕಾರದಿಂದ ಅನುಮೋದನೆ ದೊರೆತ ಕೂಡಲೇ ಕೇಂದ್ರ ಆರಂಭಿಸುವ ಪ್ರಕ್ರಿಯೆಗಳು ಆರಂಭವಾಗಲಿವೆ ಎಂದು ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.ಕೇಂದ್ರದ ಕಾರ್ಯಕ್ರಮಗಳೇನು?: ಯುವಜನರು ತಮ್ಮ ಸಾಮರ್ಥ್ಯ ಗುರುತಿಸಿಕೊಳ್ಳಲು, ಇನ್ನಿತರ ಯುವಜನರೊಂದಿಗೆ ಸಂಪರ್ಕ ಸಾಧಿಸಲು, ಕಲಿಕೆ ಬೆಂಬಲಿಸಲು ಈ ಕೇಂದ್ರ ‘ಸಂಪರ್ಕಸೇತು’ವಾಗಿ ಸಹಾಯ ಮಾಡುತ್ತದೆ. ಜೀವನ ಕೌಶಲ, ಉದ್ಯಮಶೀಲತೆ ವೃತ್ತಿಪರ ಕೌಶಲಗಳು ಮೊದಲಾದ ಎಲ್ಲ ರೀತಿಯ ಕೌಶಲ ಆಧಾರಿತ ಕಾರ್ಯಕ್ರಮಗಳನ್ನು ಸಂಘಟಿಸಲಾಗುವುದು. ಯುವ ಜನರ ದತ್ತಾಂಶ ಕೋಶ ಸಿದ್ಧಪಡಿಸುವ ಕೆಲಸ ಕೇಂದ್ರದಲ್ಲಿ ನಡೆಯಲಿದೆ.ಈ ಯುವ ಸಬಲೀಕರಣ ಕೇಂದ್ರ ಕಾರ್ಯಕ್ರಮಗಳ ಅನುಷ್ಠಾನವನ್ನು ವಿಕೇಂದ್ರೀಕರಣಗೊಳಿಸುತ್ತದೆ ಹಾಗೂ ಎಲ್ಲ ಸ್ಥರಗಳಲ್ಲಿ ಯುವ ಚಟುವಟಿಕೆಗಳ ಕೇಂದ್ರ ಸ್ಥಾನವಾಗಿರುತ್ತದೆ. ಯುವಜನರ ಬಹುಮುಖಿ ಬೌದ್ಧಿಕ ಸಾಮರ್ಥ್ಯವನ್ನು ವಿಶಾಲ ತಳಹದಿಯ ಮನರಂಜನಾ ಚಟುವಟಿಕೆಗಳು, ತರಬೇತಿ ಹಾಗೂ ಸ್ಪರ್ಧೆಗಳ ಮೂಲಕ ಚಾಲ್ತಿಯಲ್ಲಿಡುವುದು. ಇದು ಯುವ ನೀತಿಯು ಶಿಫಾರಸು ಮಾಡಿದ ಕಾರ್ಯಕ್ರಮ ಆಯೋಜಿಸಲು ನೆರವಾಗುತ್ತದೆ. ಈ ಕೇಂದ್ರ, ಜಿಲ್ಲಾ ಮಟ್ಟ, ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯ್ತಿ ಮಟ್ಟ ಹಾಗೂ ಪ್ರತಿ ವಾರ್ಡ್‌ನಲ್ಲಿ ಯುವಜನರು ನಿರಂತರವಾಗಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ನೆರವು ಕಲ್ಪಿಸುವುದು.ಕ್ರಿಯಾಯೋಜನೆ: ಯುವ ಸಂಬಂಧಿ ವಿಷಯಗಳ ಅಧ್ಯಯನ ಹಾಗೂ ಸಮೀಕ್ಷೆಗಾಗಿ ದತ್ತಾಂಶಗಳ ಸಂಗ್ರಹಣೆ. ಯುವಜನರ ನಿರೀಕ್ಷೆಗಳು, ಆಕಾಂಕ್ಷೆಗಳು, ಸಮಸ್ಯೆ ಹಾಗೂ ಸವಾಲುಗಳನ್ನು ಅರ್ಥೈಸಿಕೊಳ್ಳುವುದು. ವಿಶಾಲ ತಳಹದಿಯ ಮನರಂಜನಾ ಚಟುವಟಿಕೆಗಳು, ತರಬೇತಿ ಹಾಗೂ ಸ್ಪರ್ಧೆ ನಡೆಸುವುದು. ಉದ್ಯೋಗಾಧಾರಿತ ಸಂಪರ್ಕ ಒದಗಿಸುವುದು, ಅಸ್ತಿತ್ವದಲ್ಲಿರುವ ವಿವಿಧ ಉದ್ಯೋಗ ಸಂಬಂಧಿ ಯೋಜನೆಗಳ ಬಗ್ಗೆ ತಿಳಿವಳಿಕೆ ನೀಡುವುದು.ಕೃಷಿ ಆಧಾರಿತ ಚಟುವಟಿಕೆಗಳ ಸಬ್ಸಿಡಿ, ಉದ್ಯೋಗ– ಕೌಶಲ ತರಬೇತಿ ಹಾಗೂ ಜೀವವಿಮೆ ಮೊದಲಾದವುಗಳನ್ನು ತಿಳಿಸಿ ಕೊಡುವುದು.

ಯುವಜನ ಸಹಕಾರ ಸಂಘ, ಸ್ವ–ಉದ್ಯೋಗ ಮಾಡುವ ಹಾಗೂ ಉದ್ಯಮಶೀಲರಾದ ಯುವಜನರು ಯುವಜನ ಸಹಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅರ್ಹರಾಗಿರುತ್ತಾರೆ. ಓದುವ ಶಿಬಿರಗಳು, ಸಂಗೀತ ಹಾಗೂ ನೃತ್ಯ ತರಗತಿಗಳು, ಧ್ಯಾನ ಹಾಗೂ ಯೋಗ ತರಗತಿಗಳನ್ನು ನಡೆಸಲಾಗುವುದು. ಮನೋವೈಜ್ಞಾನಿಕ ಸಲಹೆ ಹಾಗೂ ಉದ್ಯೋಗಗಳ ಅವಕಾಶಕ್ಕಾಗಿ ಯುವ ಸಲಹಾ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ಗ್ರಾಮೀಣ ಯುವಜನರಿಗಾಗಿ ಪ್ರಾಥಮಿಕ ಕಂಪ್ಯೂಟರ್‌ ತರಬೇತಿ ನೀಡಲಾಗುವುದು. ಕ್ರೀಡಾ ಚಟುವಟಿಕೆ, ರ್‍ಯಾಪ್ಟಿಂಗ್‌ ಹಾಗೂ ಚಾರಣ ಮೊದಲಾದ ಸಾಹಸ ಕ್ರೀಡೆಗಳನ್ನು ಉತ್ತೇಜಿಸುವುದು ಕೇಂದ್ರದ ಉದ್ದೇಶವಾಗಿದೆ ಎಂದು ಪ್ರಸ್ತಾವದಲ್ಲಿ ತಿಳಿಸಲಾಗಿದೆ.ಯುವಜನರಿಗೆ ಮಾರ್ಗದರ್ಶನ

ಯುವ ಸಬಲೀಕರಣ ಕೇಂದ್ರ ಸ್ಥಾಪನೆ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಯುವಜನರಿಗೆ ಮಾರ್ಗದರ್ಶನ ಮಾಡುವ ಮೂಲಕ ಅವರ ಭವಿಷ್ಯಕ್ಕೆ ನೆರವಾಗುವುದು ಕೇಂದ್ರದ ಉದ್ದೇಶ.

– ಸುಚೇತಾ ನೆಲವಗಿ, ಸಹಾಯಕ ನಿರ್ದೇಶಕಿ, ಕ್ರೀಡಾ ಇಲಾಖೆ.

ಪ್ರತಿಕ್ರಿಯಿಸಿ (+)