ಸೋಮವಾರ, ಮಾರ್ಚ್ 8, 2021
24 °C
ಮೈಸೂರು ವಿವಿಯಲ್ಲಿ ಅಖಿಲ ಭಾರತ ಅಂತರ ವಿ.ವಿ ಕುಸ್ತಿ ಚಾಂಪಿಯನ್‌ಷಿಪ್‌

ದಾವಣಗೆರೆಯ ಆನಂದ್‌ಗೆ ಬೆಳ್ಳಿ ಪದಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆಯ ಆನಂದ್‌ಗೆ ಬೆಳ್ಳಿ ಪದಕ

ಮೈಸೂರು: ದಾವಣಗೆರೆ ವಿಶ್ವವಿದ್ಯಾಲ ಯದ ಎಲ್‌. ಆನಂದ್‌ ಅವರು ಸೋಮವಾರ ಇಲ್ಲಿ ಆರಂಭವಾದ ಮೈಸೂರು ವಿ.ವಿ ಆಶ್ರಯದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದರು.ವಿ.ವಿ ಜಿಮ್ನಾಷಿಯಂ ಹಾಲ್‌ನಲ್ಲಿ ಸೇರಿದ್ದ ಕುಸ್ತಿ ಪ್ರಿಯರ ಬೆಂಬಲದೊಂದಿಗೆ ಕೌಶಲ ಮೆರೆದ ಕ್ರೀಡಾ ಹಾಸ್ಟೆಲ್‌ನ ಆನಂದ್‌ ಫೈನಲ್‌ನಲ್ಲಿ ಎಡವಿದರು. ಗ್ರೀಕೊ ರೋಮನ್‌ ವಿಭಾಗದ (75 ಕೆ.ಜಿ) ಫೈನಲ್‌ನಲ್ಲಿ ಅವರು 2–11 ಪಾಯಿಂಟ್‌ಗಳಿಂದ ಪಟಿಯಾಲದ ಪಂಜಾಬ್‌ ವಿ.ವಿಯ ವನೀತ್‌ ಕುಮಾರ್‌ ಎದುರು ಪರಾಭವಗೊಂಡರು.ಇದಕ್ಕೂ ಮೊದಲು ಅವರು ಸೆಮಿಫೈನಲ್‌ನಲ್ಲಿ 9–0 ಪಾಯಿಂಟ್‌ ಗಳಿಂದ ಅಮೃತಸರದ ಗುರುನಾನಕ್‌ ವಿ.ವಿಯ ಜಗದೀಶ್‌ ಕುಮಾರ್‌ ಅವರನ್ನು ಮಣಿಸಿದರು. ಕ್ವಾರ್ಟರ್‌ ಫೈನಲ್‌ನಲ್ಲಿ ವಾರಾಣಸಿಯ ಧನಂಜಯ್‌ ಯಾದವ್‌ ಎದುರು ಜಯ ಗಳಿಸಿದರು. ‘ಒಂದೇ ದಿನ ಐದು ಸುತ್ತುಗಳ ಪೈಪೋಟಿ ನಡೆಸಬೇಕಾಯಿತು. ಹಾಗಾಗಿ ತುಂಬಾ ಸುಸ್ತಾಯಿತು. ಫೈನಲ್‌ನಲ್ಲಿ ಗಮನ ಕೇಂದ್ರೀಕರಿಸಿ ಪೈಪೋಟಿ ನಡೆ ಸಲು ಸಾಧ್ಯವಾಗಲಿಲ್ಲ’ ಎಂದು ಶಿಕಾರಿಪುರದ ಹಿತ್ತಲ ಗಾಮದ ಆನಂದ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ದಾವಣಗೆರೆ ವಿ.ವಿಯ ಮತ್ತೊಬ್ಬ ಕುಸ್ತಿಪಟು ಕಾರ್ತಿಕ್‌ ಕಾಟಿ 74 ಕೆ.ಜಿ (ಫ್ರೀಸ್ಟೈಲ್‌) ವಿಭಾಗದಲ್ಲಿ ಕಂಚಿನ ಪದಕ ಜಯಿಸಿದರು. ಅವರು ಸೆಮಿಫೈನಲ್‌ನಲ್ಲಿ ಎಡವಿದರು.‘ಮೊದಲ ದಿನವೇ ದಾವಣಗೆರೆ ವಿ.ವಿಗೆ ಎರಡು ಪದಕಗಳು ಬಂದಿವೆ. ಇಬ್ಬರ ಪ್ರದರ್ಶನ ಖುಷಿ ನೀಡಿದೆ. ಆನಂದ್‌ ಅವರಿಗೆ ಫೈನಲ್‌ನಲ್ಲಿ ಕಠಿಣ ಪೈಪೋಟಿ ಎದುರಾಯಿತು. ಕಳೆದ ಬಾರಿ ಚಾಂಪಿಯನ್‌ಷಿಪ್‌ನಲ್ಲಿಯೂ ಕಾಟಿ ಮೂರನೇ ಸ್ಥಾನ ಗಳಿಸಿದ್ದರು’ ಎಂದು ಕೋಚ್‌ ಶಿವಾನಂದ ತಿಳಿಸಿದರು.74 ಕೆ.ಜಿ (ಫ್ರೀಸ್ಟೈಲ್‌) ವಿಭಾಗದಲ್ಲಿ ಚಿನ್ನದ ಪದಕ ಪಂಜಾಬ್‌ ವಿ.ವಿಯ ಸುರೇಂದರ್‌ ಪಾಲಾಯಿತು. ಅವರು ಫೈನಲ್‌ನಲ್ಲಿ ವಾರಾಣಸಿ ವಿ.ವಿಯ ಸಚಿನ್‌ ಗಿರಿ ಎದುರು ಗೆಲುವು ಸಾಧಿಸಿದರು.ಮಹಿಳೆಯರ 69 ಕೆ.ಜಿ (ಫ್ರೀಸ್ಟೈಲ್‌) ವಿಭಾಗದ ಫೈನಲ್‌ನಲ್ಲಿ ಅಂತರ ರಾಷ್ಟ್ರೀಯ ಕುಸ್ತಿಪಟು ಮೀರಟ್‌ನ ಚೌಧರಿ ಚರಣ್‌ ಸಿಂಗ್‌ ವಿ.ವಿಯ ದಿವ್ಯಾ ಕರಣ್‌ 10–7 ಪಾಯಿಂಟ್‌ಗಳಿಂದ ರೋಹ್ಟಕ್‌ನ ಕವಿತಾ ಎದುರು ಜಯ ಗಳಿಸಿದರು. ಮಂಗಳೂರು ವಿವಿಯ ಅನುಶ್ರೀ ಕ್ವಾರ್ಟರ್‌ ಫೈನಲ್‌ ನಲ್ಲಿ 1–4 ಪಾಯಿಂಟ್‌ಗಳಿಂದ ಪಂಜಾಬ್‌ನ ರೀನಾ ರಾಣಿ ಎದುರು ಸೋಲು ಕಂಡರು. ಐದು ದಿನ ನಡೆಯಲಿರುವ ಚಾಂಪಿಯನ್‌ ಷಿಪ್‌ನಲ್ಲಿ 115 ವಿ.ವಿಗಳ  1200 ಕುಸ್ತಿಪಟುಗಳು ಪಾಲ್ಗೊಂಡಿದ್ದಾರೆ.

****

ಫೈನಲ್‌ ಪೈಪೋಟಿ ತುಂಬಾ ಕಠಿಣವಾಗಿತ್ತು. ಈ ಬಾರಿ ಪದಕ ಜಯಿಸಿದ ರಾಜ್ಯದ ಮೊದಲ ಕುಸ್ತಿಪಟು ಎಂಬ ಖುಷಿ ಇದೆ. ಮತ್ತಷ್ಟು ಸಾಧನೆಗೆ ಈ ಪದಕ ಸ್ಫೂರ್ತಿ ನೀಡಿದೆ

-ಎಲ್‌. ಆನಂದ್‌, ಕುಸ್ತಿಪಟು, ದಾವಣಗೆರೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.