ದಾವಣಗೆರೆ; ಕಂಬಳಿ ಹುಳು ಬಾಧೆಗೆ ಕಲ್ಪವೃಕ್ಷ ಬಲಿ

7

ದಾವಣಗೆರೆ; ಕಂಬಳಿ ಹುಳು ಬಾಧೆಗೆ ಕಲ್ಪವೃಕ್ಷ ಬಲಿ

Published:
Updated:
ದಾವಣಗೆರೆ; ಕಂಬಳಿ ಹುಳು ಬಾಧೆಗೆ ಕಲ್ಪವೃಕ್ಷ ಬಲಿ

ದಾವಣಗೆರೆ: ಜಿಲ್ಲೆಯಲ್ಲಿ ತೆಂಗು ಬೆಳೆಗೆ ಕಪ್ಪು ತಲೆ ಕಂಬಳಿ ಹುಳು ಬಾಧೆ ಕಾಣಿಸಿಕೊಂಡಿದ್ದು ಸಾವಿರ ಎಕರೆಗಳಷ್ಟು ಮರಗಳ ಗರಿಗಳು ಒಣಗಿ ಸೊರಗಿಹೋಗಿವೆ.ತೆಂಗಿನ ಮರದ ಕೆಳಭಾಗದ ಗರಿಗಳು ಸಂಪೂರ್ಣ ಒಣಗಿ ಹೋಗಿ ಮರಗಳು ಸೊರಗುವುದು ಹುಳು ಬಾಧೆಯ ಪ್ರಮುಖ ಲಕ್ಷಣ. ರೋಸಿ ಹೋದ ರೈತರು ಕೆಲವೆಡೆ ಮರಗಳನ್ನು ಕಡಿದು ಗದ್ದೆಗಳನ್ನಾಗಿ ಪರಿವರ್ತಿಸಿದ್ದಾರೆ. ಇಳುವರಿ ಪ್ರಮಾಣವೂ ಸಾಕಷ್ಟು ಕಡಿಮೆಯಾಗಿದೆ. ಈ ರೋಗದ ಜತೆಗೆ ನುಸಿಪೀಡೆಯೂ ಸಾಥ್ ನೀಡಿದ್ದು ಮುರುಟುಕಾಯಿ, ಹೀಚುಕಾಯಿಗಳೇ ರೈತರ ಪಾಲಿಗೆ ಉಳಿದಿವೆ.ಜಿಲ್ಲೆಯ ಹರಿಹರ ತಾಲ್ಲೂಕಿನ ಮಲೇಬೆನ್ನೂರಿನ ಸುತ್ತಮುತ್ತ ಜಿಗಳಿ, ಬೇವಿನಹಳ್ಳಿ, ನಿಟ್ಟೂರು ಗ್ರಾಮಗಳು, ಹೊನ್ನಾಳಿ ಹಾಗೂ ಚನ್ನಗಿರಿ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ಪೀಡೆ ಹೆಚ್ಚಾಗಿ ಕಂಡು ಬಂದಿದೆ. ಸಂತೇಬೆನ್ನೂರಿನಿಂದ ದಾವಣಗೆರೆಗೆ ಹೋಗುವ ಮಾರ್ಗದ ಇಕ್ಕೆಲಗಳಲ್ಲಿ ಕಾಣುವ ತೋಟಗಳು ಈ ಹುಳು ಬಾಧೆಯಿಂದ ಸೊರಗಿ ಹೋಗಿವೆ.ಸೂಕ್ತ ಚಿಕಿತ್ಸೆಯ ಮಾಹಿತಿ ಕೊರತೆ ಹಾಗೂ ಪರಿಹಾರ ಮಾರ್ಗಗಳನ್ನು ನಿರಂತರವಾಗಿ ಪಾಲಿಸದೇ ಇರುವುದರಿಂದ ರೋಗ ವ್ಯಾಪಿಸಲು ಕಾರಣವಾಗಿದೆ. ಒಟ್ಟಿನಲ್ಲಿ ರೋಗ ನಿಯಂತ್ರಿಸಲು  ಅಸಹಾಯಕರಾಗಿದ್ದೇವೆ ಎಂದು ಮಲೇಬೆನ್ನೂರಿನ ರೈತರು ಬೇಸರ ವ್ಯಕ್ತಪಡಿಸಿದ್ದಾರೆ.ಒಂದೆಡೆ ಬರ, ಮಳೆಯ ಕೊರತೆ, ಸದ್ಯ ಭದ್ರಾ ಕಾಲುವೆ ಹರಿವು ಕೊರತೆಯ ಹಿನ್ನೆಲೆಯಲ್ಲಿ ಮರಗಳು ಸೊರಗಿದ್ದರೆ, ಇನ್ನೊಂದೆಡೆ ರೋಗ ಬಾಧೆಯು ಬೆಳೆಗಾರರನ್ನು ಮತ್ತಷ್ಟು ಕಂಗಾಲಾಗಿಸಿದೆ.ಜಿಲ್ಲೆಯಲ್ಲಿ ಸುಮಾರು 15 ಸಾವಿರ ಹೆಕ್ಟೇರ್‌ನಷ್ಟು ತೆಂಗು ಬೆಳೆಯಿದೆ. ಅದರಲ್ಲಿ ಸುಮಾರು 3 ಸಾವಿರ ಹೆಕ್ಟೇರ್ ಪ್ರದೇಶ ಕಪ್ಪು ತಲೆ ಕಂಬಳಿ ಹುಳುವಿನ ಬಾಧೆಗೆ ಒಳಗಾಗಿದೆ. ಇಳುವರಿಯ ಮೇಲೂ ವ್ಯಾಪಕ ದುಷ್ಪರಿಣಾಮ ಉಂಟಾಗಿದೆ ಎಂದು ಪ್ರಭಾರ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಚನ್ನವೀರ `ಪ್ರಜಾವಾಣಿ~ಗೆ ತಿಳಿಸಿದರು.ನಿಯಂತ್ರಣ ಕ್ರಮ: ಈ ಹುಳು ತೆಂಗಿನ ಗರಿಯ ಕೆಳಭಾಗದ ಪತ್ರಹರಿತ್ತನ್ನು (ಕ್ಲೋರೋಫಿಲ್ ಕಂಟೆಂಟ್)  ಕೆರೆದು ತಿನ್ನುತ್ತದೆ. ಇದರಿಂದ ಮರ ಹಂತಹಂತವಾಗಿ ಸೊರಗುತ್ತದೆ. ಮುಖ್ಯವಾಗಿ ಬೇಸಿಗೆಯಲ್ಲಿ ಈ ರೋಗ ಹೆಚ್ಚಾಗಿ ಕಂಡುಬರುತ್ತದೆ. ಅದಕ್ಕೆ ಗೋನಿಯೋಜಸ್ ಎಂಬ ಪರೋಪಜೀವಿಯನ್ನು ತೋಟಗಳಿಗೆ ಬಿಡುವ ಮೂಲಕ ಈ ಹುಳುವಿನ ವಂಶವೃದ್ಧಿ ನಿಯಂತ್ರಿಸಬಹುದು.10 ಮಿಲಿ ಲೀಟರ್‌ನಷ್ಟು ಮೋನೋಕ್ರೋಟೋಫಾಸ್ ದ್ರಾವಣವನ್ನು ಅಷ್ಟೇ ಪ್ರಮಾಣದ ನೀರಿನ ಜತೆ ಮರದ ತಾಮ್ರವರ್ಣದ ಬೇರುಗಳ ಮೂಲಕ ಪೂರೈಸಬೇಕು. ಎರಡರಲ್ಲಿ ಒಂದು ಚಿಕಿತ್ಸೆಯನ್ನು ಮಾತ್ರ ಅನುಸರಿಸಬೇಕು. ಗೊನಿಯೋಜಸ್ ಕೀಟವನ್ನು ಉಚಿತವಾಗಿ ತೋಟಗಾರಿಕಾ ಇಲಾಖೆಯಿಂದ ನೀಡಲಾಗುತ್ತದೆ.

 

ರೈತರಿಗೆ ಈ ಬಗ್ಗೆ  ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ. ನುಸಿ ಪೀಡೆಗೆ ನಿರ್ದಿಷ್ಟ ಔಷಧಿ ಇಲ್ಲ. ಆದರೆ, ರಸಗೊಬ್ಬರ, ಬೇವಿನಹಿಂಡಿ ಹಾಕುವ ಮೂಲಕ ಮರವನ್ನು ಸದೃಢಗೊಳಿಸಬೇಕು ಎಂದು ಚನ್ನವೀರ ಸಲಹೆ ನೀಡುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry