ದಾವಣಗೆರೆ ವಿ.ವಿ ಅಭಿವೃದ್ಧಿಗೆ ಕ್ರಮ - ಸದಾನಂದಗೌಡ ಭರವಸೆ

7

ದಾವಣಗೆರೆ ವಿ.ವಿ ಅಭಿವೃದ್ಧಿಗೆ ಕ್ರಮ - ಸದಾನಂದಗೌಡ ಭರವಸೆ

Published:
Updated:
ದಾವಣಗೆರೆ ವಿ.ವಿ ಅಭಿವೃದ್ಧಿಗೆ ಕ್ರಮ - ಸದಾನಂದಗೌಡ ಭರವಸೆ

ದಾವಣಗೆರೆ: ಮೂಲಸೌಲಭ್ಯ ಕಲ್ಪಿಸುವುದು ಸೇರಿದಂತೆ ದಾವಣಗೆರೆ ವಿಶ್ವವಿದ್ಯಾಲಯದ ಸಮಗ್ರ ಅಭಿವೃದ್ಧಿಗೆ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದರು.

ಸಮೀಪದ ತೊಳಹುಣಸೆಯ `ಶಿವಗಂಗೋತ್ರಿ~ ಕ್ಯಾಂಪಸ್ ಆವರಣದಲ್ಲಿ ಗುರುವಾರ ದಾವಣಗೆರೆ ವಿಶ್ವವಿದ್ಯಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕಳೆದ ಎರಡು ವರ್ಷಗಳ ಅವಧಿಯಲ್ಲಿ ವಿವಿ ಅಭಿವೃದ್ಧಿಗೆ 16 ಕೋಟಿ ರೂ ಬಿಡುಗಡೆಯಾಗಿದ್ದು, ವಿವಿಧ ಕಾಮಗಾರಿಗಳನ್ನು ಪೂರೈಸಲಾಗಿದೆ. ಇನ್ನೂ ಹೆಚ್ಚಿನ ನೆರವು ನೀಡಲು ಸರ್ಕಾರ ಸಿದ್ಧವಿದೆ. ಹೆಚ್ಚುವರಿ ಭೂಮಿ ಪಡೆಯುವುದು, ಬೋಧಕ, ಬೋಧಕೇತರ ಸಿಬ್ಬಂದಿ ನೇಮಕ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ನೀಡಿದೆ. ಕಳೆದ ಬಜೆಟ್‌ನಲ್ಲಿ 12 ಸಾವಿರ ಕೋಟಿ ರೂಗಳನ್ನು ಶಿಕ್ಷಣಕ್ಕೇ ಮೀಸಲಿಟ್ಟಿದೆ. ಉನ್ನತ ಶಿಕ್ಷಣಕ್ಕೆ 2,356 ಕೋಟಿ ರೂಗಳನ್ನು ಒದಗಿಸಲಾಗಿದೆ. ಇಷ್ಟು ದೊಡ್ಡ ಮೊತ್ತವನ್ನು ಶಿಕ್ಷಣಕ್ಕೆ ದೇಶದಲ್ಲಿ ಎಲ್ಲೂ ನೀಡಿಲ್ಲ ಎಂದರು.ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್. ಆಚಾರ್ಯ ಮಾತನಾಡಿ, ವಿವಿಗೆ ಅಗತ್ಯವಿರುವ 120 ಬೋಧಕ, ಬೋಧಕೇತರ ಸಿಬ್ಬಂದಿ ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗುವುದು. ವಿವಿ ಸಮಗ್ರ ಬೆಳವಣಿಗೆಗೆ ಮುಂದಿನ ಬಜೆಟ್‌ನಲ್ಲಿ ಅನುದಾನ ಒದಗಿಸಲಾಗುವುದು ಎಂದರು.ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಡಿ.ವಿ. ಸದಾನಂದ ಗೌಡ ಅವರು ಮುಖ್ಯಮಂತ್ರಿ ಆದ ನಂತರ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ತಾವು ಪಾಲ್ಗೊಂಡಿದ್ದಾಗಿ ತಿಳಿಸಿದರು. ಸಚಿವರಾದ ಎಸ್.ಎ. ರವೀಂದ್ರನಾಥ್, ಎಂ.ಪಿ. ರೇಣುಕಾಚಾರ್ಯ, ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಕುಲಪತಿ ಪ್ರೊ.ಎಸ್. ಇಂದುಮತಿ ಇದ್ದರು.2 ವರ್ಷಗಳ ನಂತರ ಉದ್ಘಾಟನೆ

ದಾವಣಗೆರೆಯಲ್ಲಿ 2009ರಲ್ಲಿ ನಡೆದ ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ದಾವಣಗೆರೆ ವಿಶ್ವವಿದ್ಯಾಲಯ ಸ್ಥಾಪನೆಯ ಬಗ್ಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಣೆ ಮಾಡಿದ್ದರು. ಅದೇ ವರ್ಷ ಆ. 18ರಂದು ಈ ಕುರಿತು ಸರ್ಕಾರಿ ಆದೇಶ ಹೊರಡಿಸಲಾಗಿತ್ತು. 2 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರೂ ಅಧಿಕೃತ ಉದ್ಘಾಟನೆಗೆ ಮುಹೂರ್ತ ಕೂಡಿಬಂದಿರಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry