ದಾವೂದ್ ಕಳ್ಳಾಟದ ಸೂತ್ರದಾರ

7
ಸ್ಪಾಟ್ ಫಿಕ್ಸಿಂಗ್: ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ ದೆಹಲಿ ಪೊಲೀಸ್, ಶ್ರೀಶಾಂತ್ ಪ್ರಮುಖ ಆರೋಪಿ

ದಾವೂದ್ ಕಳ್ಳಾಟದ ಸೂತ್ರದಾರ

Published:
Updated:
ದಾವೂದ್ ಕಳ್ಳಾಟದ ಸೂತ್ರದಾರ

ನವದೆಹಲಿ (ಪಿಟಿಐ/ಐಎಎನ್‌ಎಸ್): ಕ್ರಿಕೆಟ್ ಜಗತ್ತನ್ನು ತಲ್ಲಣಗೊಳಿಸಿದ್ದ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮಂಗಳವಾರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಕ್ರಿಕೆಟಿಗರಾದ ಎಸ್. ಶ್ರೀಶಾಂತ್, ಅಂಕಿತ್ ಚವಾಣ್, ಅಜಿತ್ ಚಾಂಡಿಲಾ ಹಾಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಸಹಚರ ಚೋಟಾ ಶಕೀಲ್‌ನನ್ನು ಪ್ರಮುಖ ಆರೋಪಿಯನ್ನಾಗಿಸಿದ್ದಾರೆ.ಆರು ಸಾವಿರ ಪುಟಗಳ ದೋಷಾರೋಪ ಪಟ್ಟಿಯಲ್ಲಿ ಒಟ್ಟು 29 ಮಂದಿ ಆರೋಪಿಗಳನ್ನು ಹೆಸರಿಸಲಾಗಿದೆ. ವಂಚನೆ ಹಾಗೂ ಷಡ್ಯಂತ್ರ ರೂಪಿಸಿದ ಆರೋಪದ ಮೇಲೆ ಭಾರತೀಯ ದಂಡ ಸಂಹಿತೆ (ಐಪಿಸಿ) ಹಾಗೂ ಮೋಕಾ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದರಲ್ಲಿ ಬಾಬುರಾವ್ ಯಾದವ್ ಸೇರಿದಂತೆ ಕೆಲ ಮಾಜಿ ರಣಜಿ ಆಟಗಾರರು ಹಾಗೂ ಬುಕ್ಕಿಗಳ ಹೆಸರೂ ಇದೆ. ಶ್ರೀಶಾಂತ್ ಗೆಳೆಯ ಜಿಜು ಜನಾರ್ದನ್ ಇದರಲ್ಲಿ ಸೇರಿದ್ದಾರೆ. ಚಾಂಡಿಲ ಸೇರಿದಂತೆ ಎಂಟು ಮಂದಿ ನ್ಯಾಯಾಂಗ ಬಂಧನದಲ್ಲಿದ್ದರೆ, 21 ಮಂದಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಇನ್ನುಳಿದ 10 ಮಂದಿ ತಲೆಮರೆಸಿಕೊಂಡಿದ್ದಾರೆ.ಆರೋಪಪಟ್ಟಿಯನ್ನು ಅಡಿಷನಲ್ ಸೆಷನ್ಸ್ ನ್ಯಾಯಾಧೀಶ ವಿನಯ್ ಕುಮಾರ್ ಖನ್ನಾ ಅವರಿಗೆ ಸಲ್ಲಿಸಲಾಯಿತು. ವೇಗದ ಬೌಲರ್ ಕೇರಳದ ಶ್ರೀಶಾಂತ್ `ಆರೋಪಿ ನಂಬರ್ 10' ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ. ಆರೋಪಪಟ್ಟಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಂಬಂಧದ ವಿಚಾರವನ್ನು ನ್ಯಾಯಾಲಯವು ಬುಧವಾರಕ್ಕೆ ನಿಗದಿಪಡಿಸಿದೆ.ಆರೋಪಪಟ್ಟಿ ರಚಿಸುವ ಹಾದಿಯಲ್ಲಿ ಪೊಲೀಸರು 295 ದಾಖಲೆ ಪರಿಶೀಲಿಸಿದ್ದು, 168 ಜನರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. `ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ(ಸಿಎಫ್‌ಎಸ್‌ಎಲ್) ದೂರವಾಣಿ ಸಂಭಾಷಣೆಯ ಧ್ವನಿ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅದು ಪಾತಕಿ ದಾವೂದ್‌ನದ್ದು ಎಂಬುದು ನಮಗೆ ಗೊತ್ತಾಗಿದೆ. ಸಾಕ್ಷಿಯೊಬ್ಬರು ಪಾತಕಿಯ ಧ್ವನಿ ಹಾಗೂ ದೂರವಾಣಿ ಸಂಖ್ಯೆಯನ್ನು ಗುರುತಿಸಿದ್ದಾರೆ. ಕಳ್ಳಾಟ ಪ್ರಕರಣದ ಸೂತ್ರದಾರ ದಾವೂದ್' ಎಂದು ಆರೋಪಪಟ್ಟಿಯಲ್ಲಿ ಪೊಲೀಸರು ತಿಳಿಸಿದ್ದಾರೆ.ಸಿಎಫ್‌ಎಸ್‌ಎಲ್ ವರದಿಯು ಕ್ರಿಕೆಟಿಗರು ಹಾಗೂ ಬುಕ್ಕಿಗಳ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆ ಮತ್ತು ಭೂಗತ ಪಾತಕಿಗಳ ಸಂಪರ್ಕ ಸಾಧ್ಯತೆಯ ವಿವರವನ್ನು ಒಳಗೊಂಡಿದೆ. ದಾವೂದ್ ಸಹಚರ ಜಾವೇದ್ ಚುತಾನಿ ಹಾಗೂ ಸಲ್ಮಾನ್ ಜೊತೆ ದೂರವಾಣಿ ಸಂಭಾಷಣೆ ನಡೆಸಿರುವ ಆರೋಪವಿದೆ. ಅಷ್ಟು ಮಾತ್ರವಲ್ಲದೇ, ಸ್ಪಾಟ್ ಫಿಕ್ಸಿಂಗ್ ನಿಯಂತ್ರಿಸಲು ಬಿಸಿಸಿಐ ಸೂಕ್ತ ಕ್ರಮಕೈಗೊಂಡಿಲ್ಲ ಎಂದೂ ಆರೋಪಿಸಲಾಗಿದೆ. ದೆಹಲಿ ಪೊಲೀಸ್ ಕಮಿಷನರ್ ನೀರಜ್ ಕುಮಾರ್ ಈ ಆರೋಪಪಟ್ಟಿ ಸಲ್ಲಿಸಿದ್ದಾರೆ. ಅವರು ಇದೇ ತಿಂಗಳ 31ರಂದು ನಿವೃತ್ತರಾಗಲಿದ್ದಾರೆ.ಘಟನೆಯ ಹಿನ್ನೆಲೆ: ಐಪಿಎಲ್ ಆರನೇ ಆವೃತ್ತಿಯಲ್ಲಿ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ದೆಹಲಿ ಪೊಲೀಸರು ರಾಜಸ್ತಾನ ರಾಯಲ್ಸ್‌ನ ಆಟಗಾರರಾದ ಶ್ರೀಶಾಂತ್, ಚಾಂಡಿಲ ಹಾಗೂ ಚವಾಣ್ ಅವರನ್ನು ಮೇ 16ರಂದು ಮುಂಬೈನಲ್ಲಿ ಬಂಧಿಸಿದ್ದರು. ಈ ಪ್ರಕರಣ ಹಲವು ತಿರುವು ಪಡೆದಿತ್ತು. ಬೆಟ್ಟಿಂಗ್ ಆರೋಪದ ಮೇಲೆ ಬಾಲಿವುಡ್ ನಟ ವಿಂದು ದಾರಾಸಿಂಗ್ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು. ರಾಜಸ್ತಾನ ರಾಯಲ್ಸ್ ಸಹ ಮಾಲೀಕ ರಾಜ್ ಕುಂದ್ರಾ ಅವರನ್ನೂ ಪೊಲಿಸರು ವಿಚಾರಣೆಗೆ ಒಳಪಡಿಸಿದ್ದರು. ರಾಯಲ್ಸ್ ತಂಡದ ಮಾಜಿ ಆಟಗಾರ ಅಮಿತ್ ಸಿಂಗ್ ಹಾಗೂ ಕೆಲ ರಣಜಿ ಕ್ರಿಕೆಟ್ ಆಟಗಾರರನ್ನು ಬಂಧಿಸಲಾಗಿತ್ತು.ಅಷ್ಟು ಮಾತ್ರವಲ್ಲದೇ, ಚೆನ್ನೈ ಸೂಪರ್ ಕಿಂಗ್ಸ್‌ನ ಮಾಲೀಕ ಹಾಗೂ ಎನ್. ಶ್ರೀನಿವಾಸನ್ ಅವರ ಅಳಿಯ ಗುರುನಾಥ್ ಮೇಯಪ್ಪನ್ ಬೆಟ್ಟಿಂಗ್ ಹಾಗೂ ಕಳ್ಳಾಟದಲ್ಲಿ ತೊಡಗಿದ್ದಾರೆ ಎಂದು ಮುಂಬೈ ಪೊಲೀಸರು ಬಂಧಿಸಿದ್ದರು. ಹಾಗಾಗಿ ಶ್ರೀನಿವಾಸನ್ ಅವರ ಪದತ್ಯಾಗಕ್ಕೆ ಒತ್ತಡ ಹೆಚ್ಚಿತ್ತು. ಬಿಸಿಸಿಐ ಕಾರ್ಯದರ್ಶಿ ಸಂಜಯ್ ಜಗದಾಳೆ, ಖಜಾಂಚಿ ಅಜಯ್ ಶಿರ್ಕೆ ಹಾಗೂ ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ರಾಜೀನಾಮೆ ನೀಡಿದ್ದರು. ಆದರೆ ಶ್ರೀನಿವಾಸನ್ ಮಂಡಳಿಯ ಅಧ್ಯಕ್ಷ ಸ್ಥಾನದ ಕಾರ್ಯಚಟುವಟಿಕೆಗಳಿಂದ ಮಾತ್ರ ಹಿಂದೆ ಸರಿದಿದ್ದರು. ದಾಲ್ಮಿಯ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ          ನೇಮಿಸಲಾಗಿತ್ತು. ಈ ಬಗ್ಗೆ ಮಂಡಳಿಯು ಇಬ್ಬರು ಸದಸ್ಯರ ಆಂತರಿಕ ತನಿಖಾ ಆಯೋಗ ರಚಿಸಿತ್ತು. ಜೊತೆಗೆ ಮಂಡಳಿಯ ಭ್ರಷ್ಟಾಚಾರ ತಡೆ ಘಟಕದ ರವಿ ಸಾವನಿ ಕೂಡ ತನಿಖೆ ನಡೆಸುತ್ತಿದ್ದಾರೆ.ಮುಂಬೈ ಸರಣಿ ಬಾಂಬ್ ಸ್ಫೋಟದ ರೂವಾರಿ ದಾವೂದ್ ಹಾಗೂ ಈ ಚೋಟಾ ಶಕೀಲ್ ಅಣತಿಯ ಮೇರೆಗೆ ಕಳ್ಳಾಟದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಕ್ರಿಕೆಟಿಗರ ವಿರುದ್ಧ ಮೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಆದರೆ 27 ದಿನಗಳ ಕಾಲ ಸೆರೆಮನೆಯಲ್ಲಿದ್ದ ಶ್ರೀಶಾಂತ್ ಹಾಗೂ ಚವಾಣ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಮೇಯಪ್ಪನ್ ಹಾಗೂ ವಿಂದು ದಾರಾಸಿಂಗ್ ಕೂಡ ಜಾಮೀನು ಪಡೆದಿದ್ದಾರೆ. ಚಾಂಡಿಲ ಸದ್ಯ ಜೈಲಿನಲ್ಲಿಯೇ ಇದ್ದಾರೆ.

ಶ್ರೀಶಾಂತ್ ಜಾಮೀನು ರದ್ದತಿಗೆ ಅರ್ಜಿ

ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಆರೋಪಿಗಳಾದ ವೇಗದ ಬೌಲರ್ ಎಸ್.ಶ್ರೀಶಾಂತ್, ಸ್ಪಿನ್ನರ್ ಅಂಕಿತ್ ಚವಾಣ್ ಸೇರಿದಂತೆ 20 ಜನರ ಜಾಮೀನು ರದ್ದುಗೊಳಿಸುವಂತೆ ಕೋರಿ ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.ಈ ವಿಷಯವನ್ನು ದೆಹಲಿ ಪೊಲೀಸ್ ಕಮಿಷನರ್ (ವಿಶೇಷ ಘಟಕ) ಎಸ್.ಎನ್.ಶ್ರೀವಾಸ್ತವ ತಿಳಿಸಿದ್ದಾರೆ. ಜಾಮೀನು ರದ್ದತಿ ಅರ್ಜಿಯ ವಿಚಾರಣೆ ಬುಧವಾರ ನಡೆಯಲಿದೆ. ಪ್ರಕರಣದಲ್ಲಿ ಇದುವರೆಗೆ 29 ಜನರನ್ನು ಬಂಧಿಸಲಾಗಿದೆ. ಅವರಲ್ಲಿ 21 ಜನರಿಗೆ ಜಾಮೀನು ಲಭಿಸಿದೆ.

ದ್ರಾವಿಡ್ ಪ್ರಾಸಿಕ್ಯೂಷನ್ ಸಾಕ್ಷಿ

ರಾಜಸ್ತಾನ ರಾಯಲ್ಸ್ ತಂಡದ ನಾಯಕ ರಾಹುಲ್ ದ್ರಾವಿಡ್ ಅವರನ್ನು ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಸಾಕ್ಷಿಯನ್ನಾಗಿ ಮಾಡಲಾಗಿದೆ. ಈಗಾಗಲೇ ಅವರು ಪ್ರಕರಣದ ಸಂಬಂಧ ದೆಹಲಿ ಪೊಲೀಸರ ಎದುರು ಹೇಳಿಕೆ ನೀಡಿದ್ದಾರೆ. ಕಳ್ಳಾಟದ ಆರೋಪಕ್ಕೆ ಸಿಲುಕಿರುವ ಶ್ರೀಶಾಂತ್, ಅಂಕಿತ್ ಹಾಗೂ ಚಾಂಡಿಲ ರಾಯಲ್ಸ್ ತಂಡದವರು. ಹಾಗಾಗಿ ಆರೋಪಪಟ್ಟಿಯಲ್ಲಿ ದ್ರಾವಿಡ್ ಅವರನ್ನೂ ಹೆಸರಿಸಲಾಗಿದೆ. ಹರ್ಮಿತ್ ಸಿಂಗ್ ಅವರನ್ನು ಪ್ರಾಸಿಕ್ಯೂಷನ್ ಸಾಕ್ಷಿಯನ್ನಾಗಿ ಮಾಡಲಾಗಿದೆ.

ಸಂಕಷ್ಟದಲ್ಲಿ ಬಿಸಿಸಿಐ

ಆಂತರಿಕ ತನಿಖಾ ಆಯೋಗ ರಚನೆಯನ್ನು ಕಾನೂನು ಬಾಹಿರ ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿರುವುದರಿಂದ ಸಂಕಷ್ಟಕ್ಕೆ ಸಿಲುಕಿರುವ ಬಿಸಿಸಿಐನ ಪ್ರಮುಖ ಅಧಿಕಾರಿಗಳು ಮುಂದಿನ ನಡೆ ಬಗ್ಗೆ ಮಂಗಳವಾರ ಮಧ್ಯಾಹ್ನ ಸುದೀರ್ಘ ಸಮಾಲೋಚನೆಯಲ್ಲಿ ನಿರತರಾಗಿದ್ದರು. `ನ್ಯಾಯಾಲಯದ ತೀರ್ಪಿನ ಪ್ರತಿಗಾಗಿ ನಾವು ಕಾಯುತ್ತಿದ್ದೇವೆ. ಅದು ನಮ್ಮ ಕೈಸೇರಿದ ಮೇಲೆ ಮುಂದಿನ ಕ್ರಮದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ' ಎಂದು ಬಿಸಿಸಿಐ ಹಂಗಾಮಿ ಅಧ್ಯಕ್ಷ ಜಗಮೋಹನ್ ದಾಲ್ಮಿಯ ನುಡಿದರು.

ಈ ತೀರ್ಪಿನ ಪರಿಣಾಮಗಳ ಬಗ್ಗೆ ಸಮಾಲೋಚನೆ ಶುರುವಾಗಿದೆ. ಆಗಸ್ಟ್ 2ರಂದು ನವದೆಹಲಿಯಲ್ಲಿ ಈಗಾಗಲೇ ಮಂಡಳಿಯ ಕಾರ್ಯಕಾರಿ ಸಮಿತಿ ಸಭೆ ಹಾಗೂ ಐಪಿಎಲ್ ಆಡಳಿತ ಮಂಡಳಿ ಸಭೆ ಕರೆಯಲಾಗಿದೆ. ಬಾಂಬೆ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ.ಈಗ ಏನನ್ನೂ ಹೇಳುವುದಿಲ್ಲ: ಶ್ರೀನಿವಾಸನ್

ಬಾಂಬೆ ಹೈಕೋರ್ಟ್‌ನ ಈ ತೀರ್ಪು ಮತ್ತೆ ಬಿಸಿಸಿಐ ಚುಕ್ಕಾಣಿ ಹಿಡಿಯಲು ಪ್ರಯತ್ನಿಸುತ್ತಿರುವ ಎನ್.ಶ್ರೀನಿವಾಸನ್ ಅವರಿಗೂ ಹಿನ್ನಡೆಯಾಗಿ ಪರಿಣಮಿಸಿದೆ. ಆದರೆ ಈ ಸಂಬಂಧ ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. `ತೀರ್ಪಿನ ವಿಷಯ ನನಗೂ ಗೊತ್ತಾಗಿದೆ. ಆದರೆ ಈಗ ಈ ವಿಷಯದ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ' ಎಂದು ಅವರು ತಿಳಿಸಿದರು.ಆದರೆ ಆಗಸ್ಟ್ 2ರಂದು ನವದೆಹಲಿಯಲ್ಲಿ ನಡೆಯಲಿರುವ ಮಂಡಳಿಯ ಕಾರ್ಯಕಾರಿ ಸಮಿತಿ ಸಭೆಗೆ ಹಾಜರಾಗುವುದಾಗಿ ಶ್ರೀನಿವಾಸನ್ ಸ್ಪಷ್ಟಪಡಿಸಿದರು. `ಹೌದು, ಸಭೆಗೆ ನಾನು ಹಾಜರಾಗುತ್ತೇನೆ' ಎಂದು ಹೇಳಿದರು.ಯಾವ ಆಧಾರದ ಮೇಲೆ ಸಭೆಗೆ ಹಾಜರಾಗುತ್ತೀರಿ ಎಂಬುದಕ್ಕ ಪ್ರತಿಕ್ರಿಯಿಸಿದ ಅವರು, `ಆ ಸಭೆಗೆ ಬನ್ನಿ, ನಾನು ಯಾವ ಆಧಾರದ ಮೇಲೆ ಹಾಜರಾಗುತ್ತೇನೆ ಎಂಬುದು ನಿಮಗೆ ಗೊತ್ತಾಗಲಿದೆ' ಎಂದರು. ತಮಿಳುನಾಡು ಕ್ರಿಕೆಟ್ ಸಂಸ್ಥೆಯು ಬಿಸಿಸಿಐ ಕಾರ್ಯಕಾರಿ ಸಮಿತಿಯ ಶಾಶ್ವತ ಸದಸ್ಯ ಸಂಸ್ಥೆ. ಆ ಸಂಸ್ಥೆಯ ಅಧ್ಯಕ್ಷರಾಗಿರುವ ಶ್ರೀನಿವಾಸನ್ ಈ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.ರವೂಫ್ ವಿಚಾರಣೆ ಪ್ರಕ್ರಿಯೆಗೆ ಮುಂದಾದ ಪೊಲೀಸರು

ಮುಂಬೈ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಅಂಪೈರ್ ಅಸಾದ್ ರವೂಫ್ ಅವರನ್ನು ವಿಚಾರಣೆಗೆ ಒಳಪಡಿಸಲು ನಿರ್ಧರಿಸಿರುವ ಮುಂಬೈ ಪೊಲೀಸರು, ಪಾಕ್‌ನ ನ್ಯಾಯಾಲಯಕ್ಕೆ ಮನವಿ ಪತ್ರ ಕಳುಹಿಸುವ ಪ್ರಕ್ರಿಯೆಗೆ ಮುಂದಾಗಿದ್ದಾರೆ. `ಪ್ರಕರಣದ ತನಿಖೆಯ ವೇಳೆ ರವೂಫ್ ಬುಕ್ಕಿಗಳಿಂದ ಉಡುಗೊರೆ ಪಡೆದಿರುವುದು ನಮ್ಮ ಗಮನಕ್ಕೆ ಬಂದಿದೆ. ಅಷ್ಟು ಮಾತ್ರವಲ್ಲದೇ, ಬಾಲಿವುಡ್ ನಟ ವಿಂದು ದಾರಾಸಿಂಗ್ ವಿಚಾರಣೆ ವೇಳೆ ಕೆಲ ಮಾಹಿತಿಗಳು ನಮಗೆ ಲಭ್ಯವಾಗಿವೆ' ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry