ಶುಕ್ರವಾರ, ಮೇ 20, 2022
26 °C

ದಾಸವರೇಣ್ಯರನ್ನು ದರ್ಶನ ಮಾಡಿಸಿದ ನಾಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸವಣೂರ: ಜಗನ್ನಾಥದಾಸರು, ಗೋಪಾಲದಾಸರು, ವಿಜಯದಾಸರು ಸೇರಿದಂತೆ ಹಲವಾರು ಹರಿದಾಸರು ನಲಿದಾಡಿದ ಶ್ರೀಹರಿಯ ಸ್ತುತಿಯನ್ನು ಕೈಗೊಂಡ ಸವಣೂರಿನ ಶ್ರೀಸತ್ಯಬೋಧ ಸ್ವಾಮಿಗಳ ಮೂಲವೃಂದಾವನ ಸನ್ನಿಧಿಯಲ್ಲಿ, ಈಚೆಗೆ ಇತಿಹಾಸ ಮರುಕಳಿಸಿತ್ತು. ಶ್ರೀ ಸತ್ಯಬೋಧತೀರ್ಥರ ಆರಾಧನಾ ಮಹೋತ್ಸವದ ಅಂಗವಾಗಿ ರಾಯಚೂರಿನ ಹರಿದಾಸ ಹವ್ಯಾಸ ಕಲಾವಿದರ ಸಂಘದ ಸದಸ್ಯರು ಪ್ರದರ್ಶಿಸಿದ “ದಾಸೋಹಂ ತವ ದಾಸೋಹಂ” ಎಂಬ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಧಾರ್ಮಿಕ ನಾಟಕ, ತನ್ನೆಲ್ಲ ಪರಿಪೂರ್ಣತೆಯೊಂದಿಗೆ  ಪ್ರದರ್ಶನ ಕಂಡಿತು.ದಾಸವರೇಣ್ಯರಾದ ಜಗನ್ನಾಥ ದಾಸರ ಚರಿತ್ರೆಯನ್ನು ಸಾರಿದ ಈ ನಾಟಕ, ಅವರ ಸಮಕಾಲೀನರಾದ ಹಲವು ದಾಸಶ್ರೇಷ್ಠರ ಮಹಿಮೆ ಗಳನ್ನೂ ಸಂಕ್ಷಿಪ್ತವಾಗಿ ವಿವರಿಸಿತು. ಎರಡು ಶತಮಾನಗಳ ಹಿಂದಿನ ಸಾಮಾಜಿಕ, ಧಾರ್ಮಿಕ ವಾತಾವರಣ, ಜನಜೀವನ, ಗುರುಪರಂಪರೆ ಮೊದಲಾದ ಹಲವಾರು ವಿಷಯಗಳ ಮೇಲೆ ಬೆಳಕು ಚೆಲ್ಲಿದ ನಾಟಕ ಪ್ರದರ್ಶನ, ದಾಸರ ವೈರಾಗ್ಯ, ದೈವ ಭಕ್ತಿಯನ್ನೂ ಸಾಕ್ಷಾತ್ಕರಿಸಿತು.ಉತ್ತರಾದಿಮಠದ ಪರಂಪರೆ ಯಲ್ಲಿಯೇ ಸುವರ್ಣ ಯುಗವನ್ನು ನಿರ್ಮಿಸಿದ ಶ್ರೀ ಸತ್ಯಬೋಧ ತೀರ್ಥರ ಅವಧಿಯಲ್ಲಿಯೇ, ದಾಸ ಸಾಹಿತ್ಯ ಪರಂಪರೆಯನ್ನು ಶ್ರೀಮಂತಗೊಳಿಸಿದ ಜಗನ್ನಾಥದಾಸರು, ಗೋಪಾಲ ದಾಸರು, ವಿಜಯದಾಸರು, ಮೋಹನ ದಾಸರು, ಶ್ರೀಧರ ವಿಠ್ಠಲದಾಸರು, ಪ್ರಾಣೇಶದಾಸರು, ಈ ಆರಾಧನಾ ಮಹೋತ್ಸವದಲ್ಲಿ ಕಲಾವಿದರಲ್ಲಿ ಅಂತರ್ಗತರಾಗಿ ನಲಿದಾಡಿದರು.“ದಾಸೋಹಂ ತವ ದಾಸೋಹಂ” ಎಂಬ ನಾಟಕವನ್ನು ರಚಿಸಿ, ನಿರ್ದೇಶಿಸಿದ ರಾಯಚೂರಿನ ಅರುಣ ವಿ. ಕಾಂತನವರ, ಶ್ರೀ ಜಗನ್ನಾಥ ದಾಸರ ಪಾತ್ರಧಾರಿಗಳಾಗುವ ಮೂಲಕ ತಮ್ಮ ಕಲಾ ಪ್ರೌಢಿಮೆ ಯನ್ನು ತೋರಿದರು. ವಿಜಯದಾಸರ ಪಾತ್ರದಲ್ಲಿ ಕೇಶವಮೂರ್ತಿ ಕುಲಕರ್ಣಿ, ಗೋಪಾಲದಾಸರ ಪಾತ್ರದಲ್ಲಿ ಕೆ. ಶ್ರೀನಾಥಾಚಾರ್ಯ, ಪ್ರಾಣೇಶದಾಸರಾಗಿ ಡಿ.ಎಚ್. ಕುಲಕರ್ಣಿ, ಗುರು ಶ್ರೀ ವಿಠ್ಠಲ ದಾಸರಾಗಿ ನರಸಿಂಹರಾವ್ ಕುಲಕರ್ಣಿ, ಶ್ರೀ ಸತ್ಯಬೋಧತೀರ್ಥರು ಹಾಗೂ ಮೋಹನದಾಸರ ದ್ವಿಪಾತ್ರದಲ್ಲಿ ಮಧುಸೂಧನಾಚಾರ್ಯ ಒಳ್ಳಕ್ಕಿ, ತಾಮರಸಮ್ಮ ಹಾಗೂ ಗುಂಡಮ್ಮನ ಪಾತ್ರದಲ್ಲಿ ಮಧು ಪಾಂಡೆ, ಸಹನಟರಾಗಿ ಸಂದೀಪ ರಾಜಪುರೋಹಿತ  ಪ್ರಬುದ್ಧ ಅಭಿನಯ ನೀಡಿದರು.ಪ್ರಭಾಕರ ಕುಸನೂರ ಕೊಳಲು ಹಾಗೂ ಹಾರ್ಮೋನಿಯಂ, ಕೃಷ್ಣಾ ಸೊರಟೂರ ತಬಲಾಸಾಥ್, ವೆಂಕಟೇಶ ನವಲಿ ಅವರ ಹಿನ್ನಲೆ ಗಾಯನ ನಾಟಕದ ಪರಿಪೂರ್ಣತೆಗೆ ಅಮೂಲ್ಯ ಕಾಣಿಕೆಯಾಯಿತು.  ಕಳೆದ 8ವರ್ಷಗಳಿಂದ ರಾಜ್ಯ, ಪರರಾಜ್ಯಗಳಲ್ಲಿ, ಸುಕ್ಷೇತ್ರಗಳಲ್ಲಿ 50ಕ್ಕೂ ಹೆಚ್ಚು ನಾಟಕ ಪ್ರದರ್ಶನ ನೀಡಿರುವ ರಾಯಚೂರಿನ ಈ ಕಲಾ ತಂಡ, ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರು ಸೇರಿದಂತೆ ಹಲವಾರು ಯತಿಗಳ ಸಮ್ಮುಖದಲ್ಲಿಯೂ ತಮ್ಮ ಕಲಾ ಪ್ರದರ್ಶನ ನೀಡಿದ್ದಾರೆ.ಜಗನ್ನಾಥದಾಸರು ಸೇರಿದಂತೆ 9 ವಿವಿಧ ದಾಸರ ಚರಿತ್ರೆಗಳನ್ನು ವಿವರಿಸುವ ಪ್ರತ್ಯೇಕ ನಾಟಕಗಳನ್ನು ಈ ಹವ್ಯಾಸಿ ಕಲಾ ತಂಡ ಪ್ರದರ್ಶನ ನೀಡುತ್ತಿದೆ. ಹರಿದಾಸರ ಜೀವನ ಚರಿತ್ರೆಗಳನ್ನು, ಅವರ ಕೃತಿಗಳು ಹಾಗೂ ಕೊಡುಗೆಗಳನ್ನು ಕಲಾಮಾಧ್ಯಮದ ಮೂಲಕ ಪ್ರಚಾರ ಪಡಿಸುತ್ತಿರುವ ಈ ಕಲಾ ತಂಡದ ಸದಸ್ಯರು, ಲೌಕಿಕವಾದ ಅನ್ಯ ವೃತ್ತಿಯ ಒತ್ತಡಗಳ ನಡುವೆಯೂ ತಮ್ಮ ಹರಿಸೇವೆ ಕೈಗೊಂಡಿದ್ದಾರೆ. ಆಸಕ್ತರು ಸಂಘಟನೆಯವರು ದಾಸರ ಚರಿತ್ರೆ ತಿಳಿಸಲು ನಾಟಕ ಪ್ರದರ್ಶನಕ್ಕಾಗಿ ಅರುಣ ವಿ. ಕಾಂತನವರ್, 7/5/165. ಜವಾಹರ ನಗರ. ರಾಯಚೂರ (ದೂ: 08532-241251/ 9480487946 ಹಾಗೂ 9242231158) ಇವರನ್ನು ಸಂಪರ್ಕಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.