ದಾಸ್ಯ ಸಾಕು:ಮಹಿಳೆಯರಿಗೆ ಕಿವಿಮಾತು

7

ದಾಸ್ಯ ಸಾಕು:ಮಹಿಳೆಯರಿಗೆ ಕಿವಿಮಾತು

Published:
Updated:
ದಾಸ್ಯ ಸಾಕು:ಮಹಿಳೆಯರಿಗೆ ಕಿವಿಮಾತು

ಬೆಂಗಳೂರು: ಮಹಿಳೆಯರ ಸಬಲೀಕರಣಕ್ಕೆ ಗುಣಾತ್ಮಕ ಶಿಕ್ಷಣ ನೀಡುವುದು ಇಂದಿನ ಅಗತ್ಯ ಎಂದು ಕೇಂದ್ರ ಲೋಕ ಸೇವಾ ಆಯೋಗದ ಮಾಜಿ ಅಧ್ಯಕ್ಷೆ ಡಾ.ಆರ್.ಎಂ.ಬ್ಯಾಥ್ಯೂ ಪ್ರತಿಪಾದಿಸಿದರು.`ಸಾಮಾಜಿಕ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ' ಕುರಿತು ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.ಬಹಳಷ್ಟು ಮಹಿಳೆಯರು ಇಂದಿಗೂ ನಾನಾ ರೀತಿಯ ಶೋಷಣೆಗಳಿಗೆ ಗುರಿಯಾಗಿದ್ದಾರೆ. ಕುಟುಂಬ ಮತ್ತು ದೇಶದ ವ್ಯವಹಾರಗಳ ನಿರ್ವಹಣೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸಿದರೂ, ದಾಸ್ಯಕ್ಕೆ ಒಳಪಟ್ಟಿದ್ದಾರೆ. ಮಹಿಳೆಯರು ಇದರಿಂದ ಹೊರಬಂದು ತಮ್ಮ ಸ್ವಂತ ಪ್ರಯತ್ನದಿಂದಲೇ ಉತ್ತಮ ಸಾಮಾಜಿಕ ಬದುಕನ್ನು ಕಟ್ಟಿಕೊಳ್ಳಲು ಪಣ ತೊಡಬೇಕು ಎಂದು ಸಲಹೆ ನೀಡಿದರು.`ಭಾರತದಲ್ಲಿ ಮಹಿಳೆಯರ ಸಾಕ್ಷರತೆ ಪ್ರಮಾಣ' ವಿಷಯದ ಕುರಿತು ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಎಂ.ಇಂದಿರಾ ಮಾತನಾಡಿ, ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಪುರುಷರಿಗಿಂತ ಮಹಿಳೆಯರ ಸಾಕ್ಷರತೆ ಪ್ರಮಾಣ ಕಡಿಮೆ ಇದೆ. ಇದು ನಗರ ಪ್ರದೇಶಗಳಿಗಿಂತಲೂ ಗ್ರಾಮೀಣ ಭಾಗದಲ್ಲಿ ಹೆಚ್ಚಿದೆ. ಕರ್ನಾಟಕದಲ್ಲಿ 2011ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಪುರುಷರ ಸಾಕ್ಷರತೆ ಪ್ರಮಾಣ ಶೇಕಡ 82.14 ಇದ್ದರೆ, ಮಹಿಳೆಯರ ಸಾಕ್ಷರತೆ ಪ್ರಮಾಣ ಶೇಕಡ 65.46 ಇದೆ. ಶೇಕಡ 16.68 ವ್ಯತ್ಯಾಸ ಇದೆ ಎಂದು ತಿಳಿಸಿದರು.ಬಾಗಲಕೋಟೆ, ರಾಯಚೂರು, ಬಳ್ಳಾರಿ ಜಿಲ್ಲೆಗಳಲ್ಲಿ ಮಹಿಳೆಯರ ಸಾಕ್ಷರತೆ ಪ್ರಮಾಣ ಪುರುಷರಿಗಿಂತಲೂ ತೀರಾ ಕಡಿಮೆ ಇದೆ. ಸಾಕ್ಷರತೆ ಪ್ರಮಾಣ ಹೆಚ್ಚಿಸಲು, ಸರ್ಕಾರ ಹಲವು ಯೋಜನೆಗಳನ್ನು ಜಾರಿ ಮಾಡಿದರೂ, ಇದೇ ಪರಿಸ್ಥಿತಿ ಮುಂದುವರಿದಿರಲು ಕಾರಣ ಏನು ಎಂಬುದರ ಬಗ್ಗೆ ಯೋಚಿಸಬೇಕು ಎಂದು  ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry