ಮಂಗಳವಾರ, ನವೆಂಬರ್ 19, 2019
29 °C
ಕುಟುಂಬದ ಜತೆಯಾದ ಮುನಿಯಪ್ಪ

ದಿಕ್ಕಿಲ್ಲದ ವೃದ್ಧನಿಗೆ ಸ್ನೇಹಾಲಯ `ಆಸರೆ'

Published:
Updated:

ಉಳ್ಳಾಲ: ಆತನಿಗೆ ಆಕಾಶ ಮಹಡಿಯಾದರೆ, ರಸ್ತೆ ಬದಿ ಚಾಪೆಯಾಗಿತ್ತು. ಕಳಚಿದ ಬಟ್ಟೆ, ಹರಿದ ಲುಂಗಿ ಜತೆ ಇದ್ದ ಗಡ್ಡಧಾರಿ ಮಧ್ಯವಯಸ್ಕ ವ್ಯಕ್ತಿಗೆ ಆಶ್ರಯ ನೀಡಿದ ತೂಮಿನಾಡಿನ ಸ್ನೇಹಾಲಯ ಟ್ರಸ್ಟ್ ಇದೀಗ ಆತನನ್ನು ಸಂಪೂರ್ಣ ಗುಣಮುಖನಾಗಿಸಿದೆ. ಮೂರು ವರ್ಷಗಳಿಂದ ಮನೆ ಮಂದಿಯಿಂದ ದೂರವಾಗಿದ್ದವರನ್ನು ಒಂದಾಗಿಸುವಂತೆ ಮಾಡಿದೆ.ಹಂಪನಕಟ್ಟೆ ಹಳೆ ಬಸ್ ನಿಲ್ದಾಣದ ಸಮೀಪ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಕರಂಗೂರು ನಿವಾಸಿ ಮುನಿಯಪ್ಪ ಜೀವನ್ಮರಣ ಸ್ಥಿತಿಯಲ್ಲಿ ಕಂಡುಬಂದಿದ್ದರು. ಸಾರ್ವಜನಿಕರಿಂದ ಈ ಬಗ್ಗೆ ಮಾಹಿತಿ ಪಡೆದ ಸ್ನೇಹಾಲಯ ಟ್ರಸ್ಟ್‌ನ ಜೋಸೆಫ್ ಮತ್ತು ತಂಡ ತೂಮಿನಾಡು ಟ್ರಸ್ಟ್‌ಗೆ ಕರೆದೊಯ್ದು, ಪ್ರಾಥಮಿಕ ಶುಶ್ರೂಷೆ  ನೀಡಿದ್ದರು. ನಂತರ ದೇರಳಕಟ್ಟೆಯ ಯೇನೆಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ  ಕೊಡಿಸಿದ್ದರು. 9 ತಿಂಗಳಿನಿಂದ ಆಸ್ಪತ್ರೆ ಸಿಬ್ಬಂದಿಯ ಶುಶ್ರೂಷೆಯಿಂದ ಗುಣಮುಖರಾದ ಮುನಿಯಪ್ಪ ಮನೆಯ ವಿಳಾಸವನ್ನು ಹೇಳಲು ಸಮರ್ಥ ರಾಗಿದ್ದರು. ಅವರ ಮನೆ ಮಂದಿಯನ್ನು ಸಂಪರ್ಕಿಸಿ ಮುನಿಯಪ್ಪ ಅವರನ್ನು ಕುಟುಂಬದ ಜತೆ ಒಂದಾಗುವಂತೆ ಮಾಡಿದೆ.ಅವರ ಪತ್ನಿ ಪಾಪತಿ ಎಂಬವರು ಪತಿ ನಾಪತ್ತೆಯಾದ ಬಳಿಕ ಮಕ್ಕಳೊಂದಿಗೆ ಸೇರಿ ವರ್ಷಗಳ ಕಾಲ ಹುಡುಕಾಡಿದರೂ ಪ್ರಯೋಜನವಾಗಿರಲ್ಲಿಲ್ಲ. ಪತಿ ನಾಪತ್ತೆಯಾದ ಕೊರಗಿನಿಂದ ಹಾಸಿಗೆ ಸೇರಿದ ಪಾಪತಿ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿದ್ದರು.ಇತ್ತೀಚೆಗಷ್ಟೇ ಶಸ್ತ್ರಚಿಕಿತ್ಸೆ ಮುಗಿಸಿ ನಡೆದಾಡುವ ಹಂತಕ್ಕೆ ತಲು ಪಿದ್ದರು. ಇದೀಗ ಪತಿ ಮುನಿಯಪ್ಪ ಅವರನ್ನು ಕಂಡಾಗ ಪತ್ನಿ ಪಾಪತಿಗೆ ಆಕಾಶವೇ ಧರೆಗಿಳಿದಂತಾಗಿದೆ. ಅವರು ನಿಸ್ವಾರ್ಥ ಸೇವೆ ನಡೆಸಿದ ಸ್ನೇಹಾಲಯದ ಕಾರ್ಯವನ್ನು ಶ್ಲಾಘಿಸಿದರು.

ಪ್ರತಿಕ್ರಿಯಿಸಿ (+)