ದಿಕ್ಕು ತಪ್ಪಿದ್ದ ಜನಾರ್ದನ ರೆಡ್ಡಿ ಹೆಲಿಕಾಪ್ಟರ್

ಮಂಗಳವಾರ, ಜೂಲೈ 23, 2019
20 °C

ದಿಕ್ಕು ತಪ್ಪಿದ್ದ ಜನಾರ್ದನ ರೆಡ್ಡಿ ಹೆಲಿಕಾಪ್ಟರ್

Published:
Updated:

ಬಳ್ಳಾರಿ: `ನಿಮ್ಮಂದಿಗೆ ನಾವು~ ಕಾರ್ಯಕ್ರಮದಲ್ಲಿ ಭಾಗವಹಿಸಲು ಗುರುವಾರ ಬೆಳಿಗ್ಗೆ ಬಳ್ಳಾರಿಯಿಂದ ಹೂವಿನ ಹಡಗಲಿಗೆ ಹೊರಟಿದ್ದ ಪ್ರವಾಸೋದ್ಯಮ ಸಚಿವ ಜಿ.ಜನಾರ್ದನರೆಡ್ಡಿ ಇದ್ದ ಹೆಲಿಕಾಪ್ಟರ್, ಹವಾಮಾನ ವೈಪರೀತ್ಯದಿಂದಾಗಿ ಎಲ್ಲೆಲ್ಲೋ ಹಾರಾಡಿ, ಒಂದು ಗಂಟೆ ತಡವಾಗಿ ನಿಗದಿತ ಸ್ಥಳದಲ್ಲೇ ಇಳಿದಿದೆ.ಮೋಡ ಕವಿದ ವಾತಾವರಣದಲ್ಲಿ ಸಾಮಾನ್ಯಕ್ಕಿಂತ ಅತಿಯಾಗಿದ್ದ ಗಾಳಿಯ ವೇಗ, ಹೆಲಿಕಾಪ್ಟರ್ ಹಾರಾಟಕ್ಕೆ ಸೂಕ್ತವಲ್ಲದಿದ್ದರೂ ಸಚಿವರ ಅಪೇಕ್ಷೆಯ ಮೇರೆಗೆ ಹಾರಾಟ ಆರಂಭಿಸಿದ ಪೈಲಟ್, ಹೂವಿನ ಹಡಗಲಿಗೆ ತೆರಳುವ ಮಾರ್ಗದಲ್ಲಿ ಬೀಸಿದ ರಭಸದ ಗಾಳಿಯಿಂದಾಗಿ ದಿಕ್ಕು ತಪ್ಪಿತ್ತು.ಕೊಪ್ಪಳ, ಗದಗ ತಲುಪಿದ್ದ ಹೆಲಿಕಾಪ್ಟರ್ ನಂತರ ಅಲ್ಲಿಂದ ಮಾರ್ಗ ಬದಲಿಸಿ, ಹಂಪಿಗೆ ಬಂದು, ಹಂಪಿಯಿಂದ ರಸ್ತೆ ಮಾರ್ಗವನ್ನೇ ಅನುಸರಿಸುತ್ತ ಹಗರಿಬೊಮ್ಮನಹಳ್ಳಿ ಮಾರ್ಗವಾಗಿ ಹೂವಿನ ಹಡಗಲಿಯಲ್ಲಿ ಮಧ್ಯಾಹ್ನ 12.35ಕ್ಕೆ ಸುರಕ್ಷಿತವಾಗಿ ಇಳಿಯಿತು.ಸುಮಾರು 45 ನಿಮಿಷಗಳ ಕಾಲ ಸಚಿವರ ಹೆಲಿಕಾಪ್ಟರ್ ನಾಪತ್ತೆಯಾಗಿದೆ ಎಂಬ ಸುದ್ದಿ ಎಲ್ಲೆಡೆ ಹರಡಿ, ಸಚಿವರ ಅಭಿಮಾನಿಗಳಲ್ಲಿ ತೀವ್ರ ಆತಂಕ ಉಂಟಾಗಿತ್ತು.ಜನಾರ್ದನರೆಡ್ಡಿ ಅವರ ಜತೆ ಸಂಸದೆ ಜೆ.ಶಾಂತಾ, ವಿಧಾನ ಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ, ಕೇರಳ ಮೂಲದ ಮುಖ್ಯ ಪೈಲಟ್ ಹಾಗೂ ಸಹ ಪೈಲಟ್ ಇದ್ದರು.ಆದರೆ, ಹೂವಿನ ಹಡಗಲಿಯಲ್ಲಿ ಹೆಲಿಕಾಪ್ಟರ್ ಇಳಿದ ತಕ್ಷಣ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜನಾರ್ದನರೆಡ್ಡಿ, `ಪೈಲಟ್ ಹೊಸಬರಾಗಿದ್ದು, ಅವರಿಗೆ ಈ ಭಾಗದ ಪರಿಚಯವಿಲ್ಲ. ಈ ಹಿನ್ನೆಲೆಯಲ್ಲಿ ಹಡಗಲಿ ದಾಟಿ ಗದಗ ತಲುಪಿದ್ದರು. ಆಗ ಗಮನಿಸಿ, ಮರಳಿ ಹೋಗುವಂತೆ ಹೇಳಿದೆ. ಅಲ್ಲಿಂದ ಹಗರಿ ಬೊಮ್ಮನಹಳ್ಳಿ ಮೇಲಿಂದ ಹೂವಿನ ಹಡಗಲಿಗೆ ಸುರಕ್ಷಿತವಾಗಿ ಬಂದಿದ್ದೇವೆ~ ಎಂದರು.`ಹೆಲಿಕಾಪ್ಟರ್ ಹಾರಾಟ ಆರಂಭವಾದ ಕೂಡಲೇ ನಾನು ದಿನಪತ್ರಿಕೆ ಓದುತ್ತಿದ್ದೆ. ಹಾಗಾಗಿ ಹೂವಿನ ಹಡಗಲಿ ದಾಟಿದ್ದೂ ಗೊತ್ತಾಗಲಿಲ್ಲ~ ಎಂದು ಅವರು ತಿಳಿಸಿದರು.`ವಾಸ್ತವವಾಗಿ ಗಂಟೆಗೆ 45 ಕಿಮೀ ವೇಗದಲ್ಲಿ ಬೀಸುತ್ತಿದ್ದ ಗಾಳಿಯು, ಹೆಲಿಕಾಪ್ಟರ್‌ನ  ಸುರಕ್ಷಿತ ಹಾರಾಟಕ್ಕೆ ಅನುವು ಮಾಡಿಕೊಡದೆ, ಪೈಲಟ್ ಕೆಲ ಕಾಲ ನಿಗದಿತ ಸಂಚಾರದ ದಿಕ್ಕಿನಲ್ಲಿ ಲಯ ಕಳೆದುಕೊಳ್ಳಲು ಕಾರಣವಾಯಿತು. 15 ವರ್ಷಗಳ ಅನುಭವವಿರುವ ಈ ಪೈಲಟ್ ಅನೇಕ ಬಾರಿ ಸಚಿವರ ಇದೇ ಹೆಲಿಕಾಪ್ಟರ್ ಚಾಲನೆ ಮಾಡುತ್ತ ಸುರಕ್ಷಿತವಾಗಿ ನಿಗದಿತ ಸ್ಥಳಗಳಿಗೆ ತಲುಪಿಸಿದ್ದಾರೆ~ ಎಂದು ಮೂಲಗಳು ತಿಳಿಸಿವೆ.ಸಚಿವ ಜಿ.ಜನಾರ್ದನರೆಡ್ಡಿ ಅವರು ಕಳೆದ ಅಕ್ಟೋಬರ್‌ನಲ್ಲಿ ಆರಂಭಿಸಿರುವ `ನಿಮ್ಮಂದಿಗೆ ನಾವು~ ಕಾರ್ಯಕ್ರಮ ಗುರುವಾರದಿಂದ ಪುನಾರಂಭವಾಗಿದೆ. ಹೆಲಿಕಾಪ್ಟರ್ ಹಾರಾಟದ ಗೊಂದಲದಿಂದಾಗಿ ಎರಡು ಗಂಟೆ ತಡವಾಗಿ ಕಾರ್ಯಕ್ರಮ ಆರಂಭವಾಯಿತಲ್ಲದೆ, ಮಧ್ಯಾಹ್ನದ ನಂತರ ಹಗರಿ ಬೊಮ್ಮನಹಳ್ಳಿಯಲ್ಲಿ ನಡೆಯಲಿದ್ದ ಇದೇ ಕಾರ್ಯಕ್ರಮವನ್ನು ರದ್ದು ಮಾಡಲಾಯಿತು.ಹೆಲಿಕಾಪ್ಟರ್ ಇಳಿದ ಕೂಡಲೇ ಸಚಿವರ ಮುಖದಲ್ಲಿ ಗಾಬರಿ, ಭಯ ಇದ್ದುದು ಕಂಡುಬಂತಲ್ಲದೆ, ಹಾರಾಟದ ಮಧ್ಯೆ ನಡೆದ ಬೆಳವಣಿಗೆಯ ಬಗ್ಗೆ ವಿವರ ನೀಡಲು ವಿಧಾನ ಪರಿಷತ್ ಸದಸ್ಯ ಜಿನಗಾ ನಿರಾಕರಿಸಿದರು.ಗಾಳಿಯ ವೇಗ ಗುರುವಾರ ಬೆಳಿಗ್ಗೆ 7.20ಕ್ಕೆ ಸಾಮಾನ್ಯಕ್ಕಿಂತ ದುಪ್ಪಟ್ಟಾಗಿತ್ತು. ಭೂಮಿಯ ಮಟ್ಟದಲ್ಲೇ ಗಂಟೆಗೆ ಸರಾಸರಿ 14 ಕಿ.ಮೀನಷ್ಟಿದ್ದ ಗಾಳಿಯ ವೇಗ, ಬೆಳಿಗ್ಗೆ 10ರಿಂದ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ವೇಗ 18 ಕಿ.ಮೀನಷ್ಟಿತ್ತು ಎಂದು ಶ್ರೀಧರಗಡ್ಡೆ ಗ್ರಾಮದ ಬಳಿ ಕೇಂದ್ರೀಯ ಮಣ್ಣು, ನೀರು ಪರೀಕ್ಷೆ, ಸಂಶೋಧನೆ  ಮತ್ತು ತರಬೇತಿ ಕೇಂದ್ರದ ಹವಾಮಾನ ವಿಭಾಗದ ಶೇಷಾದ್ರಿ `ಪ್ರಜಾವಾಣಿ~ಗೆ ತಿಳಿಸಿದರು.ಹವಾಮಾನ ವೈಪರೀತ್ಯದಿಂದಾಗಿ ಆತಂಕ ಎದುರಿಸಿ ಹೂವಿನ ಹಡಗಲಿಗೆ ತಲುಪಿರುವ ಹೆಲಿಕಾಪ್ಟರ್, ಗುರುವಾರ ಅಲ್ಲೇ ಇದ್ದು, ಶುಕ್ರವಾರ ವಾತಾವರಣ ಶುಭ್ರಗೊಂಡಲ್ಲಿ ಬಳ್ಳಾರಿಗೆ ಬರಲಿದೆ.

ಇತ್ತೀಚೆಗಷ್ಟೇ ಹೈದರಾಬಾದ್ ಮೂಲಕ ನವದೆಹಲಿಗೆ ಹೊರಟಿದ್ದ ರೆಡ್ಡಿ ಅವರಿದ್ದ ವಿಮಾನದ ಟೈರ್ ಸ್ಫೋಟಗೊಂಡು ಅಪಾಯದಿಂದ ಪಾರಾಗಿದ್ದರು.ಕಳೆದ ವರ್ಷ ಹೊಸಪೇಟೆ ಶಾಸಕ ಆನಂದ್‌ಸಿಂಗ್ ಅವರನ್ನು ಹೊತ್ತು ಮುಸ್ಸಂಜೆ ವೇಳೆ ಹೊರಟಿದ್ದ ಹೆಲಿಕಾಪ್ಟರ್, ಭಾರಿ ಗಾಳಿಯಿಂದಾಗಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನಲ್ಲಿ ಹೊಲವೊಂದರಲ್ಲಿ ಸುರಕ್ಷಿತವಾಗಿ ಇಳಿದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry