ದಿಕ್ಕು ಬದಲಿಸಿದ ಆಟ

7
ನನ್ನ ಕಥೆ–ಕೃತಿಕಾ

ದಿಕ್ಕು ಬದಲಿಸಿದ ಆಟ

Published:
Updated:
ದಿಕ್ಕು ಬದಲಿಸಿದ ಆಟ

ಗುವುದೆಲ್ಲಾ ಒಳ್ಳೆಯದಕ್ಕೆ ಎನ್ನುವ ಮಾತಿದೆ. ಇದು ಯಾರ ವಿಷಯದಲ್ಲಿ ಹೇಗೋ ಏನೊ ಗೊತ್ತಿಲ್ಲ. ನನ್ನ ವಿಷಯದಲ್ಲಂತೂ ಸತ್ಯವಾಗಿದೆ. ನನ್ನ ಬದುಕಿನ ಕಥೆಯನ್ನು ನಿಮ್ಮ ಮುಂದೆ ತೆರೆದಿಡುವ ಮುನ್ನ ಒಂದು ಘಟನೆಯನ್ನು ಹೇಳಬೇಕು. ಆಗಿನ್ನೂ ಮೈಸೂರಿನಲ್ಲಿ ಏಳನೇ ತರಗತಿ ಓದುತ್ತಿದ್ದೆ.

ಫಿಟ್‌ನೆಸ್‌ ಕಾಪಾಡಿಕೊಳ್ಳಬೇಕು, ಜೊತೆಗೆ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಯಾವುದಾದರೂ ಕ್ರೀಡೆಯಲ್ಲಿ ತೊಡಗಿಕೊಳ್ಳಬೇಕೆಂದು ನಿರ್ಧರಿಸಿದೆ. ಆಗ ನನ್ನ ಮನದಲ್ಲಿ ಹೊಳೆದಿದ್ದು ವಾಲಿಬಾಲ್‌ ಆಡುವ ಯೋಚನೆ. ಹೇಗಿದ್ದರೂ ಕೊಂಚ ಎತ್ತರವಾಗಿದ್ದೆನಲ್ಲಾ, ಆದ್ದರಿಂದ ವಾಲಿಬಾಲ್‌ ನನಗೆ ಸೂಕ್ತ ಎಂದು ತೀರ್ಮಾನಿಸಿಕೊಂಡೆ. ಅಪ್ಪ ಲಕ್ಷ್ಮಣ್‌, ಅಮ್ಮ ಶೋಭಾ ಕೂಡಾ ನನ್ನ ನಿರ್ಧಾರಕ್ಕೆ ಸಮ್ಮತಿ ಸೂಚಿಸಿದರು.

ಜೊತೆಗೆ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪಾಲ್ ರಾಜ್‌ ನನಗೆ ಬೆಂಬಲವಾಗಿ ನಿಂತರು. ಶಾಲಾ ಮಟ್ಟದಲ್ಲಿ ವಾಲಿಬಾಲ್‌ ಆಡಿದ್ದ ಕಾರಣ ರಾಜ್ಯ ತಂಡದಲ್ಲಿಯೂ ಆಡುವ ಕನಸು ಚಿಗುರೊಡೆದಿತ್ತು. ಇದೇ ಕನಸು ಹೊತ್ತು ಮೈಸೂರಿನ ಚಾಮುಂಡಿ ವಿಹಾರದ ಕ್ರೀಡಾಂಗಣದಲ್ಲಿ ತರಬೇತಿಗೆಂದು ಹೋದೆ. ಆದರೆ, ಅಲ್ಲಿ ಬ್ಯಾಸ್ಕೆಟ್‌ ಬಾಲ್‌ ತರಬೇತಿ ನಡೆಯುತ್ತಿತ್ತು. ‘ವಾಲಿಬಾಲ್‌ ತರಬೇತಿ ಮುಗಿದು ಹೋಗಿದೆ. ಮುಂದಿನ ವರ್ಷ ಬನ್ನಿ’ ಎನ್ನುವ ಮಾತು ಕೇಳಿ ಬಂತು.

ನಾನು ನಿರಾಸೆಗೊಂಡಿದ್ದೆ. ಆದರೆ, ಎತ್ತರವಾಗಿದ್ದು ನನಗೆ ವರದಾನವಾಯಿತು. ಆಗ ನನ್ನ ಶಿಕ್ಷಕರು ಬ್ಯಾಸ್ಕೆಟ್‌ ಬಾಲ್‌ ಆಡು. ಹೇಗಿದ್ದರೂ ಎತ್ತರವಾಗಿದ್ದೀಯಲ್ಲಾ, ಮುಂದಿನ ವರ್ಷ ವಾಲಿಬಾಲ್‌ ತರಬೇತಿಗೆ ಸೇರಿಕೊಳ್ಳಬಹುದು ಎಂದು ಸಲಹೆ ನೀಡಿದರು. ಅವರ ಸಲಹೆಯನ್ನು ಒಪ್ಪಿಕೊಂಡೆ.ನಿಜ ಹೇಳಬೇಕೆಂದರೆ ಅದೇ ಮೊದಲ ಸಲ ಬ್ಯಾಸ್ಕೆಟ್‌ ಬಾಲ್‌ ಮುಟ್ಟಿದ್ದು. ಆಟದ ನಿಯಮಗಳೇನು, ಆಡುವುದು ಹೇಗೆ ಎನ್ನುವುದೂ ಗೊತ್ತಿರಲಿಲ್ಲ. ಆದರೂ, ಇದೇ ಕ್ರೀಡೆಯಲ್ಲಿ ಮುಂದುವರಿಯಬೇಕಾದ ಅನಿವಾರ್ಯತೆ ಎದುರಾಗಿತ್ತು. ಆದರೆ, ಯಾವುದೇ ಆಟವಾಗಲಿ ಶ್ರದ್ಧೆಯಿಂದ ಆಡಬೇಕೆನ್ನುವುದಷ್ಟೇ ನನಗೆ ಬಾಲ್ಯದಿಂದಲೂ ಜೊತೆಗೆ ಬೆಳೆದು ಬಂದ ಶಿಸ್ತು. ಇದೇ ಶಿಸ್ತು ಬದುಕಿಗೆ ಹೊಸ ದಿಕ್ಕು ನೀಡಿತು.

ಅನಿರೀಕ್ಷಿತವಾಗಿ ಬ್ಯಾಸ್ಕೆಟ್‌ಬಾಲ್‌ ಅಂಕಣದಲ್ಲಿ ಕಾಲಿಟ್ಟಿದ್ದೆ. ಆರಂಭದಲ್ಲಿ ಸಾಕಷ್ಟು ಸಮಯವನ್ನು ಅಭ್ಯಾಸ ಮಾಡಲು ಮೀಸಲಿಟ್ಟೆ.ಜೊತೆಗೆ ಗುರುವಿನ ಬೆಂಬಲವಂತೂ ನೆರಳಂತೆ ಸದಾ ನನ್ನೊಂದಿಗೆ ಇತ್ತು. ಕೆಲ ರಾಜ್ಯ ಟೂರ್ನಿಗಳಲ್ಲಿ ಆಡಿದೆ. ಅಚ್ಚರಿಯೆಂದರೆ, ಬ್ಯಾಸ್ಕೆಟ್‌ಬಾಲ್‌ ಆಡಲು ಶುರು ಮಾಡಿದ ಆರೇ ತಿಂಗಳಲ್ಲಿ ರಾಷ್ಟ್ರೀಯ ಟೂರ್ನಿಯಲ್ಲಿ ಆಡುವ ಅವಕಾಶ ಸಿಕ್ಕಿತು. ರಾಷ್ಟ್ರೀಯ ಟೂರ್ನಿಯಲ್ಲಿ ತೋರಿದ ಪ್ರದರ್ಶನ ನನ್ನ ಬದುಕಿಗೆ ಲಭಿಸಿದ ಮೊದಲ ತಿರುವು. 2006ರಲ್ಲೇ 21ವರ್ಷದೊಳಗಿನವರ ಭಾರತ ತಂಡದ ಶಿಬಿರಕ್ಕೆ ಆಯ್ಕೆಯಾಗಿದ್ದೆ. ಆಗ ನನಗೆ 17 ವರ್ಷ! ಶಿಬಿರದಲ್ಲಿಯೂ ಉತ್ತಮ ಪ್ರದರ್ಶನ ತೋರಿದ್ದರಿಂದ, ಅಂತಿಮ ತಂಡದಲ್ಲಿಯೂ ಸ್ಥಾನ ಲಭಿಸಿತು.ದೇಶವನ್ನು ಪ್ರತಿನಿಧಿಸುವ ಅವಕಾಶ ಲಭಿಸಿದಾಗ ತುಂಬಾ ಖುಷಿಪಟ್ಟಿದ್ದೆ. ಹೆಚ್ಚಾಗಿ ನನ್ನ ಸಾಮರ್ಥ್ಯದ ಬಗ್ಗೆ ವಿಶ್ವಾಸ ಇಮ್ಮಡಿಕೊಂಡಿತ್ತು. ವಾಲಿಬಾಲ್‌ ಆಡಬೇಕೆನ್ನುವ ಕನಸು ಹೊತ್ತವಳ ಕೈ ಹಿಡಿದಿದ್ದು ಬ್ಯಾಸ್ಕೆಟ್‌ಬಾಲ್‌. ರಾಷ್ಟ್ರೀಯ ತಂಡದಲ್ಲಿ ಆಡಿದ ನಂತರ ಮೊದಲು ಆಸೆ ಪಟ್ಟಿದ್ದ ವಾಲಿಬಾಲ್‌ನತ್ತ ತಿರುಗಿಯೂ ನೋಡಲಿಲ್ಲ. ಏಕೆಂದರೆ, ಬ್ಯಾಸ್ಕೆಟ್‌ಬಾಲ್‌ ಮೇಲಿನ ಪ್ರೀತಿ ನನ್ನನ್ನು ಬಹುದೂರದವರೆಗೆ ಕರೆದೊಯ್ದಿತ್ತು.ಹೈಸ್ಕೂಲಿನಲ್ಲಿದ್ದಾಗಲೇ ರಾಷ್ಟ್ರೀಯ ತಂಡದಲ್ಲಿ ಆಡಿದ ಕಾರಣ ನನ್ನ ಬದುಕಿನ ಸಾಧನೆಯೇನಿದ್ದರೂ ಬ್ಯಾಸ್ಕೆಟ್‌ಬಾಲ್‌ ಕ್ರೀಡೆಯಲ್ಲೇ ಎಂದು ನಿರ್ಧರಿಸಿದೆ. 2009ರಲ್ಲಿ ಸೀನಿಯರ್‌ ಮಹಿಳಾ ತಂಡದಲ್ಲೂ ಆಡಿದೆ. 18 ವರ್ಷದೊಳಗಿನವರ ಟೂರ್ನಿ ಆಡಲು ಬ್ಯಾಂಕಾಕ್‌ಗೆ ಹೋಗಿಬಂದೆ. ಎರಡು ವರ್ಷಗಳ ಹಿಂದೆ ಚೈನೀಸ್‌ ತೈಪೆಯಲ್ಲಿ ಆಡಿಬಂದೆ.ಕೆಲ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿದ ಕಾರಣ ಅನುಭವವೂ ಪಕ್ವಗೊಂಡಿತ್ತು. ಮೈಸೂರಿನಲ್ಲಿಯೇ ಉಳಿದರೆ, ಹೆಚ್ಚು ಅವಕಾಶ ಲಭಿಸುವುದಿಲ್ಲ ಎನ್ನುವ ಕಾರಣಕ್ಕೆ ಬೆಂಗಳೂರಿಗೆ ಬಂದೆ. ಖ್ಯಾತನಾಮ ಆಟಗಾರರ ಶೈಲಿಯನ್ನು ವಿಡಿಯೊ ನೋಡಿ ಕಲಿತುಕೊಂಡೆ.

ಬೆಂಗಳೂರಿಗೆ ಬಂದ ಮೇಲೆ ಆಟದ ಮೇಲಿನ ಪ್ರೀತಿ ಹೆಚ್ಚಾಯಿತು. ಅವಕಾಶವೂ ಸಾಕಷ್ಟಿದ್ದವು. ಜೊತೆಗೆ ಅಷ್ಟೇ ಪೈಪೋಟಿಯೂ ಇತ್ತು.ಆದ್ದರಿಂದ ನಿತ್ಯ ಕಠಿಣ ಅಭ್ಯಾಸ ಅನಿವಾರ್ಯವಾಗಿತ್ತು. ರಾಷ್ಟ್ರೀಯ ತಂಡದಲ್ಲಿ ಸದಾ ಆಡುತ್ತಲೇ ಇರಬೇಕು ಎನ್ನುವ ಒಂದೇ ಒಂದು ಕನಸು ಹಾಗೂ ಗುರಿ ನನ್ನನ್ನು ಸಾಕಷ್ಟು ಹೈರಾಣ ಮಾಡಿತು. ಹಗಲಿರುಳು ಎನ್ನದೇ ಬ್ಯಾಸ್ಕೆಟ್‌ಬಾಲ್‌ ಕೋರ್ಟ್‌ನಲ್ಲಿ ಹೆಚ್ಚು ಸಮಯ ಕಳೆದೆ. ಕೊನೆಗೂ ಕಂಡ ಕನಸುಗಳೆಲ್ಲಾ ನನಸಾದ ಸಂತೃಪ್ತಿ ನನ್ನದಾಯಿತು.ಹೀಗೆ ಬ್ಯಾಸ್ಕೆಟ್‌ಬಾಲ್‌ ಆಡುತ್ತಾ ಸಾಗಿದ ಹಾದಿಯಲ್ಲಿ ಸಣ್ಣ ಪುಟ್ಟ ನಿರಾಸೆಗಳೂ ಕಾಡಿವೆ. ಗಾಯಗೊಂಡಿದ್ದ ಕಾರಣ 2008ರಲ್ಲಿ ಒಂದು ವರ್ಷ ವಿಶ್ರಾಂತಿ ಪಡೆದೆ. ಚಿಕ್ಕ ಚಿಕ್ಕ ಗಾಯವೇ ದೊಡ್ಡದಾಗಿ ಬೆಳೆದು ಬದುಕಿಗೆ ಮುಳ್ಳಾಗದಿರಲಿ ಎನ್ನುವ ಕಾರಣಕ್ಕೆ ವಿಶ್ರಾಂತಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದೆ. ಗಾಯ ಪ್ರತಿ ಕ್ರೀಡಾಪಟುವಿನ ಬದುಕಿನಲ್ಲಿ ಸಹಜ ಬಿಡಿ. 2012ರಲ್ಲಿ ಏಕಲವ್ಯ ಪ್ರಶಸ್ತಿ ಲಭಿಸಿತು.ಇದು ಬದುಕಿನಲ್ಲಿ ಎಂದಿಗೂ ಮರೆಯಲಾಗದ ಮಧುರ ಕ್ಷಣ. ಏಕೆಂದರೆ, ಬ್ಯಾಸ್ಕೆಟ್‌ಬಾಲ್‌ನಲ್ಲಿನ ಸಾಧನೆಗೆ ಲಭಿಸುವ ದೊಡ್ಡ ಪ್ರಶಸ್ತಿ ಇದು. ಇನ್ನಷ್ಟು ಸಾಧನೆ ಮಾಡಲು ಈ ಪ್ರಶಸ್ತಿ ಪ್ರೇರಣೆಯಾಯಿತು. ಪೋಷಕರ ಎದುರು ಪ್ರಶಸ್ತಿ ಸ್ವೀಕರಿಸಿದ ಆ ಕ್ಷಣವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.ಅದೇನೇ ಇರಲಿ, ಆಕಸ್ಮಿಕವಾಗಿ ಬ್ಯಾಸ್ಕೆಟ್‌ಬಾಲ್‌ ಅಂಕಣಕ್ಕೆ ಬಂದಿದ್ದು, ಅದು ಬದುಕಿನ ತಿರುವಿಗೆ ಕಾರಣವಾಗಿದ್ದು ಸಾಕಷ್ಟು ಖುಷಿ ನೀಡಿದೆ. ನಾನು ಅಂದುಕೊಂಡಿದ್ದೇ ಒಂದು. ಆಗಿದ್ದು ಇನ್ನೊಂದು. ಇದರ ಬಗ್ಗೆ ಬೇಸರವೇನಿಲ್ಲ. ಸಿಕ್ಕ ಅವಕಾಶದಲ್ಲಿ ಸಾಧಿಸಿದ ಸಂತೃಪ್ತಿಯಿದೆ. ಈ ಘಟನೆ ಹಲವು ತಿರುವುಗಳಿಗೂ ಕಾರಣವಾಗಿದೆ. ಬದುಕು ಹಸನಾಗಲೂ ವೇದಿಕೆಯಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry