ದಿಕ್ಕು ಬದಲಿಸಿದ ಹೆಜ್ಜೆಯ ಗುಟ್ಟು...

7

ದಿಕ್ಕು ಬದಲಿಸಿದ ಹೆಜ್ಜೆಯ ಗುಟ್ಟು...

Published:
Updated:

ತಂಡ ಸೋಲಬಹುದು ಅಥವಾ ಗೆಲ್ಲಬಹುದು. ಉಳಿದ ಬ್ಯಾಟ್ಸ್ ಮನ್‌ಗಳು ಒಂದೂ ರನ್ ಗಳಿಸದೇ ಪೆವಿಲಿಯನ್ ಸೇರಬಹುದು. ಬೌಲರ್‌ಗಳು ವಿಕೆಟ್ ಪಡೆಯಲು ಪರದಾಡಬಹುದು. ಆದರೆ ರಾಬಿನ್ ಉತ್ತಪ್ಪ ಅವರ ಬ್ಯಾಟಿಂಗ್ ಶಕ್ತಿಯ ದಿಟ್ಟತನ ಹಾಗೂ ಅಬ್ಬರದ ಆಟ ಮಾತ್ರ ಬದಲಾಗುವುದೇ ಇಲ್ಲವೇನೋ?ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹಾಗೂ ಹಿಂದಿನ ರಣಜಿ ಟೂರ್ನಿಯ ಪಂದ್ಯಗಳನ್ನು ನೋಡಿದವರ ಮನದಲ್ಲಿ ಈ ಅಭಿಪ್ರಾಯ ಮೂಡದೆ ಇರದು. ಉತ್ತಪ್ಪ ಕ್ರೀಸ್‌ನಲ್ಲಿ ಇದ್ದರೆ ಸಾಕು ತಂಡಕ್ಕೆ ಭದ್ರತೆಯ ಭಾವ. ಎಂತಹ ಕಷ್ಟದ ಸಂದರ್ಭದಲ್ಲಿದ್ದರೂ ತಂಡವನ್ನು ಅಪಾಯದಿಂದ ಪಾರು ಮಾಡಬಲ್ಲ ಸಾಮರ್ಥ್ಯ, ಬ್ಯಾಟಿಂಗ್ ಶೈಲಿ ಈ ಆಟಗಾರನ ಪ್ರಮುಖ ಶಕ್ತಿ.ಬದಲಾದ ಬ್ಯಾಟಿಂಗ್: ಉತ್ತಪ್ಪ ಎಂದರೆ ಸ್ಫೋಟಕ ಬ್ಯಾಟಿಂಗ್ ಕಣ್ಣ ಮುಂದೆ ಸುಳಿದಾಡುತ್ತದೆ. ಚೆಂಡು ಮೇಲಿಂದ ಮೇಲೆ ಬೌಂಡರಿ ಗೆರೆ ಮುಟ್ಟುವ ದೃಶ್ಯ ಕಣ್ಣ ಮುಂದೆ ಹಾದು ಹೋಗುತ್ತದೆ. ಅಬ್ಬರದ ಹಾಗೂ ಶಿಸ್ತುಬದ್ಧ ಆಟ ನೆನಪಿಗೆ ಬರುತ್ತದೆ.ಅಂತರರಾಷ್ಟ್ರೀಯ ಹಾಕಿ ರೆಫರಿ ವೇಣು ಅವರ ಪುತ್ರ ಉತ್ತಪ್ಪ 2002-03ರಲ್ಲಿ ಹರಿಯಾಣ ವಿರುದ್ಧದ ಪಂದ್ಯವನ್ನಾಡುವ ಮೂಲಕ ರಣಜಿಗೆ ಪದಾರ್ಪಣೆ ಮಾಡಿದ್ದರು. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್, ಪುಣೆ ವಾರಿಯರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡಿದ್ದಾರೆ. ಎರಡು ವರ್ಷ ರಾಷ್ಟ್ರೀಯ ಏಕದಿನ ತಂಡವನ್ನೂ ಪ್ರತಿನಿಧಿಸಿ 38 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು.ಈ ರಣಜಿ ಋತುವಿನಲ್ಲಿ ರಾಬಿನ್ ಬ್ಯಾಟಿಂಗ್ ಮಾಡುತ್ತಿರುವ ರೀತಿ ನೋಡಿದರೆ ಅವರ ನೈಜ ಆಟ ಮರೆಯಾಗುತ್ತಿದೆಯೇ ಎನ್ನುವ ಆತಂಕ ಕಾಡುತ್ತದೆ. ಆರಂಭಿಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ವೇಗವಾಗಿ ರನ್ ಗಳಿಸಲು ಯತ್ನಿಸಿದರೆ, ಇನ್ನೊಬ್ಬ ಆಟಗಾರ ನಿಧಾನವಾಗಿ ರನ್ ಕಲೆ ಹಾಕುತ್ತಾ ವಿಕೆಟ್ ಕಾಪಾಡುವ ಕೆಲಸಕ್ಕೆ ಮುಂದಾಗುವುದು ಸಾಮಾನ್ಯ. ಆದರೆ, ಈ ಋತುವಿನ ಮೊದಲ ನಾಲ್ಕು ಪಂದ್ಯಗಳಲ್ಲಿ ಆಟದ ರೀತಿಯನ್ನು ನೋಡಿದಾಗ ಉತ್ತಪ್ಪ ನೈಜ ಆಟ ಪರದೆಯ ಹಿಂದೆ ಮರೆಯಾಗುತ್ತಿದೆ ಎಂದು ಅನ್ನಿಸದೇ ಇರದು.ರಣಜಿಯಲ್ಲಿ ಅವರು ನೀಡಿರುವ ಪ್ರದರ್ಶನ ಅಮೋಘ. ಈ ಬಗ್ಗೆ ಯಾರೂ ಪ್ರಶ್ನಿಸುವಂತಿಲ್ಲ. ಆದರೆ, ಈ ಸಲದ ಬರೋಡ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಒಡಿಶಾ ವಿರುದ್ದದ ಪಂದ್ಯಗಳಲ್ಲಿ ಅವರ ಆಟದ ರೀತಿ ಅಭಿಮಾನಿಗಳ ಬೇಸರಕ್ಕೆ ಕಾರಣವಾಗುತ್ತಿದೆ.  ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಣಜಿ ಪಂದ್ಯವನ್ನು ನೋಡಲು ಸೇರುವ ಕೆಲವೆ ಜನರ ಉದ್ದೇಶವೇ ಉತ್ತಪ್ಪ ಬ್ಯಾಟಿಂಗ್ ನೋಡುವುದು. ಆದರೆ, ಅವರು ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗುತ್ತಿದ್ದಾರೆ. ಹೆಚ್ಚು ಹೊತ್ತು ಕ್ರೀಸ್‌ಗೆ ಅಂಟಿಕೊಂಡು ನಿಲ್ಲುವ ಕಸರತ್ತು ಮಾಡುತ್ತಿದ್ದಾರೆ. ಆದರೆ, ಮೊದಲಿನಂತೆ ರನ್ ಮಾತ್ರ ಹರಿದು ಬರುತ್ತಿಲ್ಲ.ರನ್ ಗಳಿಕೆ ಕಡಿಮೆಯಾದರೂ ತುಂಬಾ ಹೊತ್ತು ಕ್ರೀಸ್‌ನಲ್ಲಿ ನಿಲ್ಲುವ ಗುಟ್ಟೇನು ಎಂದು ಪ್ರಶ್ನಿಸಿದರೆ, `ರಾಷ್ಟ್ರೀಯ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವುದು' ಎಂದು ಚುಟುಕಾಗಿ ಉತ್ತರಿಸುತ್ತಾರೆ ಉತ್ತಪ್ಪ. ಅವರ ಬದಲಾದ ಬ್ಯಾಟಿಂಗ್ ಶೈಲಿಯ ಬಗ್ಗೆ ಖುದ್ದು ಕರ್ನಾಟಕ ತಂಡದ ಬ್ಯಾಟಿಂಗ್ ತರಬೇತುದಾರ ಜೆ. ಅರುಣ್ ಕುಮಾರ್‌ಗೆ ಬೇಸರವಿದೆ. `ಉತ್ತಪ್ಪ ಅತ್ಯುತ್ತಮ  ಬ್ಯಾಟ್ಸ್‌ಮನ್. ಅವರು ಎಂದಿನಂತೆಯೇ ತಮ್ಮ ನೈಜ ಬ್ಯಾಟಿಂಗ್‌ನತ್ತ ಗಮನ ಹರಿಸಬೇಕು. ಆಗ ಅವರ ಪ್ರದರ್ಶನ ಮಟ್ಟದಲ್ಲಿ ಸುಧಾರಣೆ ಸಾಧ್ಯವಾಗುತ್ತದೆ' ಎನ್ನುತ್ತಾರೆ ಅರುಣ್. ಈ ಮಾತಿಗೆ ಧ್ವನಿಗೂಡಿಸಿದ್ದು ಕರ್ನಾಟಕ ತಂಡದ ಮಾಜಿ ಆಟಗಾರ ಆನಂದ್ ಕಟ್ಟಿ.`ಅಬ್ಬರದ ಆಟದ ಮೂಲಕವೇ ಚಿಕ್ಕ ವಯಸ್ಸಿನಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದವರು. ಆದರೆ, ಅವರು ಮೊದಲಿನಂತೆ ಈಗ ಬ್ಯಾಟಿಂಗ್ ಮಾಡುತ್ತಿಲ್ಲ. ಆದ್ದರಿಂದ ತಮ್ಮ ಸಹಜ ಆಟವಾಡಬೇಕು. ಆರಂಭದ ವಿಕೆಟ್‌ನ ಜೊತೆಯಾಟದಲ್ಲಿ ಹೆಚ್ಚು ರನ್ ಕಲೆಹಾಕುವ ಕೆಲಸ ಅನುಭವಿ ಉತ್ತಪ್ಪ ಅವರಿಂದ ಆಗಬೇಕು' ಎನ್ನುತ್ತಾರೆ ಆನಂದ್.`ಉತ್ತಪ್ಪ ಬ್ಯಾಟಿಂಗ್ ಶೈಲಿಯನ್ನು ಐದಾರು ವರ್ಷಗಳಿಂದ ನೋಡುತ್ತಾ ಬಂದಿದ್ದೇನೆ. ಆದರೆ, ಇದ್ದಕ್ಕಿದ್ದಂತೆ ಬ್ಯಾಟಿಂಗ್‌ನಲ್ಲಿ ಮಾಡಿಕೊಂಡ ಬದಲಾವಣೆ ಬಗ್ಗೆ ಅಚ್ಚರಿ ಉಂಟಾಗುತ್ತಿದೆ. ಅವರು ಯಾಕೆ ಹೀಗೆ ಮಾಡಿದರು ಎನ್ನುವುದು ಗೊತ್ತಾಗುತ್ತಿಲ್ಲ. ರಾಷ್ಟ್ರೀಯ ತಂಡದಲ್ಲಿ ಆಡಿದ ಅನುಭವ ಹೊಂದಿದವರು ಹೆಚ್ಚು ಜವಾಬ್ದಾರಿಯಿಂದ ಆಡಬೇಕು' ಎನ್ನುತ್ತಾರೆ ಕರ್ನಾಟಕ ತಂಡದ ಸದಸ್ಯರೊಬ್ಬರು.ಹಳೆಯ ನೆನಪು ಮಧುರ ಎನ್ನುವಂತೆ ಅವರ ಮೊದಲಿನ ಬ್ಯಾಟಿಂಗ್ ಶೈಲಿ ಅಭಿಮಾನಿಗಳಿಗೆ ಇಂದಿಗೂ ಅಚ್ಚುಮೆಚ್ಚು. ಬಹುತೇಕ ಹಿರಿಯ ಆಟಗಾರರ ಅಭಿಪ್ರಾಯವೂ ಇದೆ. ಆದರೆ, ಬ್ಯಾಟಿಂಗ್ ಶೈಲಿ ಬದಲಿಸಿಕೊಳ್ಳುವತ್ತ ಉತ್ತಪ್ಪ ಹರಿಸುವರೇ ಚಿತ್ತ? 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry