ಭಾನುವಾರ, ಆಗಸ್ಟ್ 25, 2019
24 °C

ದಿಗಂತಕ್ಕೆ ಕೈಚಾಚಿ

Published:
Updated:
ದಿಗಂತಕ್ಕೆ ಕೈಚಾಚಿ

ಹೇಗಿದೆ ಸಿನಿಮಾ ಯಾನ?

ತುಂಬಾ ಚೆನ್ನಾಗಿ ನಡೆಯುತ್ತಿದೆ. `ಬರ್ಫಿ' ಸಿದ್ಧವಾಗಿದೆ. ತೆಲುಗಿನ ನಿರ್ದೇಶಕ ಕೋಡಿ ರಾಮಕೃಷ್ಣ ಅವರ ಹಾರರ್ ಚಿತ್ರವೂ ಪೂರ್ಣಗೊಂಡಿದೆ. ನನ್ನ ವೃತ್ತಿಯಲ್ಲಿ ಅತಿ ದೊಡ್ಡ ಬಜೆಟ್‌ನ ಚಿತ್ರವದು. ನವೆಂಬರ್‌ಗೆ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ. ಆದರೆ ಕೋಡಿ ಅನಾರೋಗ್ಯಕ್ಕೆ ತುತ್ತಾಗಿರುವುದರಿಂದ ಸಿನಿಮಾ ಪರಿಸ್ಥಿತಿ ಏನಾಗಿದೆ ಎನ್ನುವುದು ತಿಳಿಯುತ್ತಿಲ್ಲ. ಅಲ್ಲದೆ ಚಿತ್ರೀಕರಣದ ವೇಳೆ ಹಲವು ಅವಘಡಗಳೂ ಸಂಭವಿಸಿದ್ದವು. ಅದರ ಹೊರತಾಗಿ ಸಿನಿಮಾ ಅದ್ಭುತ ಅನುಭವ ನೀಡಿದೆ.ಕೃತಿ ಕರಬಂಧ ಜೊತೆ ನಟಿಸಿರುವ `ಮಿಂಚಾಗಿ ನೀನು ಬರಲು' ಸಹ ಸಿದ್ಧಗೊಂಡಿದೆ. ಈ ವರ್ಷ ಮೂರು ಒಳ್ಳೆಯ ಚಿತ್ರಗಳು ಬಿಡುಗಡೆಯಾಗಲಿವೆ. ದಿನಕರ್ ತೂಗುದೀಪ ನಿರ್ದೇಶನದ `ಒಂದೂರಲ್ಲಿ ಒಬ್ಬ ರಾಜ' ಚಿತ್ರ ಶುರುವಾಗುತ್ತಿದೆ. `ಸಾರಥಿ'ಯ ಬಳಿಕ ದಿನಕರ್ ಕೈಗೆತ್ತಿಕೊಂಡಿರುವ ಚಿತ್ರವಾಗಿರುವುದರಿಂದ ಅವರ ಬಗ್ಗೆಯೂ ತುಂಬಾ ನಿರೀಕ್ಷೆಯಿದೆ.

`ಬರ್ಫಿ'ಯಲ್ಲಿ ಏನಿದೆ ವಿಶೇಷ?

`ಬರ್ಫಿ'ಯಲ್ಲಿ ಪಂಜಾಬಿ ಮತ್ತು ನಮ್ಮ ಸಂಸ್ಕೃತಿಯನ್ನು ಮಜವಾಗಿ ತೋರಿಸಿದ್ದೇವೆ. ಎರಡು ವಿಭಿನ್ನ ಸಂಸ್ಕೃತಿಯನ್ನು ಸಿನಿಮಾ ಕಥೆಗೆ ಹೊಂದಿಸುವುದು ಸುಲಭವಲ್ಲ. ರೊಮ್ಯಾಂಟಿಕ್ ಕಾಮಿಡಿಗೆ ಸಮಾನಾಂತರವಾಗಿ ಸಸ್ಪೆನ್ಸ್ ಕೂಡ ಇದೆ. ಅದನ್ನು ಈಗ ಹೇಳಲಾಗುವುದಿಲ್ಲ.

ಪ್ರಚಾರಕ್ಕೆ ಬಾರದೆ ಕೈ ಕೊಡುತ್ತಿದ್ದೀರಿ ಎಂದು ನಿರ್ದೇಶಕ ಶೇಖರ್ ದೂರಿದ್ದರಲ್ಲ?

ಪ್ರಚಾರ ಶುರೂನೇ ಮಾಡಿಲ್ಲವಲ್ಲ (ನಗು). ನನ್ನ ಹಿಂದಿ ಚಿತ್ರ ಶುರುವಾಗಬೇಕಿತ್ತು. ಅದಕ್ಕಾಗಿ ಬಾಂಬೆಯಲ್ಲಿ ಓಡಾಟದಲ್ಲಿ ಬಿಜಿಯಾಗಿದ್ದೆ. ಅಂಥ ಸಮಯದಲ್ಲಿ ಏನೂ ಮಾಡೋಕೆ ಆಗೊಲ್ಲ.      ಹಿಂದಿ ಚಿತ್ರರಂಗದ ಪ್ರವೇಶದ ಸುದ್ದಿ...?

ಸಮಯದ ಸಂಘರ್ಷ ದೊಡ್ಡ ತಲೆನೋವಾಗಿದೆ. ದಿನಕರ್ ಸಿನಿಮಾ ಅಥವಾ ಹಿಂದಿ ಸಿನಿಮಾಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಅನಿವಾರ್ಯ ಪರಿಸ್ಥಿತಿ. ದಿನಕರ್ ಸಿನಿಮಾವನ್ನು ಬಿಡಲು ಇಷ್ಟವಿಲ್ಲ. ಏಕೆಂದರೆ ನನ್ನ ವೃತ್ತಿಜೀವನದಲ್ಲಿ ಅದು ದೊಡ್ಡ ಪ್ರಾಜೆಕ್ಟ್ ಆಗಲಿದೆ. ಹಿಂದಿಯಲ್ಲಿ ವಿಕ್ರಮ್ ಭಟ್ ಅವರ 1920 ಹಾರರ್ ಸಿನಿಮಾದ ಮೂರನೇ ಭಾಗ. ಜನ ಕನ್ನಡದಲ್ಲಿ ನನ್ನನ್ನು ಇಷ್ಟಪಟ್ಟಿರುವುದು ರೊಮ್ಯಾಂಟಿಕ್ ಕಾಮಿಡಿ ಚಿತ್ರಗಳಲ್ಲಿ. ಹಾರರ್ ಸಿನಿಮಾ ಮಾಡಿದರೆ ಒಳ್ಳೆಯದು ಆಗುತ್ತೋ ಇಲ್ಲವೋ ಎಂಬ ಗೊಂದಲದಲ್ಲಿದ್ದೇನೆ. ಹೀಗಾಗಿ `ಒಂದೂರಲ್ಲಿ ಒಬ್ಬ ರಾಜ' ಚಿತ್ರಕ್ಕಾಗಿ ಹಿಂದಿ ಚಿತ್ರ ಬಿಡಲು ಸಿದ್ಧ.

1920 ಲಂಡನ್' ಕುರಿತು?

`1920' ಸರಣಿಯ ಮೂರನೇ ಚಿತ್ರವಿದು. ರಾಜಸ್ತಾನದಲ್ಲಿ ಶುರುವಾಗುವ ಕಥನ. ಇದರಲ್ಲಿ ನನ್ನದು ಬಡಕುಟುಂಬದ ಹುಡುಗನ ಪಾತ್ರ. ಶ್ರೀಮಂತ ಮನೆತನದ ಯುವತಿಯೊಂದಿಗೆ ಪ್ರೀತಿ ಮೂಡುತ್ತದೆ. ಅಲ್ಲೆಲ್ಲೋ ಒಂದು ಕಡೆ ಸಂಬಂಧ ಮುರಿದು, ಆಕೆಗೆ ಬೇರೆ ಮದುವೆಯಾಗುತ್ತದೆ. ಆದರೆ ಹುಡುಗಿ ಗಂಡನ ಮೇಲೆ ದೆವ್ವದ ಕಾಟ ಶುರುವಾಗುತ್ತದೆ. ಅದನ್ನು ನಾನು ಅದನ್ನು ಬಿಡಿಸಿ ಆಕೆಯನ್ನು ರಕ್ಷಿಸುತ್ತೇನೆ. ತುಂಬಾ ಚೆನ್ನಾಗಿತ್ತು. ಲಂಡನ್‌ನಲ್ಲಿ ಚಿತ್ರೀಕರಣವಿತ್ತು....

ಬಾಲಿವುಡ್ ಪ್ರವೇಶಕ್ಕೆ ಒಳ್ಳೆಯ ತಳಹದಿ ಆಗುತ್ತಿತ್ತಲ್ಲವೇ?

ನಿಜ. ಆದರೆ ರೊಮ್ಯಾಂಟಿಕ್ ಕಾಮಿಡಿ ರೀತಿಯ ಸಿನಿಮಾ ಬಂದರೆ ನನಗೆ ಹೆಚ್ಚು ಕಂಫರ್ಟ್ ಆಗುತ್ತದೆ. ಅದು ನನಗೆ ಸುಲಭ. ಹಿಂದಿಯಲ್ಲಿ ಆ ಬಗೆಯ ಅವಕಾಶ ಬಂದರೆ ಒಪ್ಪಿಕೊಳ್ಳುತ್ತೇನೆ. ಕೋಡಿ ರಾಮಕೃಷ್ಣ ಅವರ ಸಿನಿಮಾ ಥ್ರಿಲ್ಲರ್ ಆದರೂ ನನ್ನ ಪಾತ್ರ ಹಾಗೆ ಇಲ್ಲ. ಅದರಲ್ಲಿ ನಾನು ರಾಕ್‌ಸ್ಟಾರ್. ದೇವರು, ಪ್ರೇತಾತ್ಮ ನನ್ನ ಮೇಲೆ ಬರುವುದಿಲ್ಲ. ಕೋಡಿ ಅವರ ಅವರ ಹೆಸರಿನ ಬಲದ ಕಾರಣಕ್ಕೆ ನಾನು ಒಪ್ಪಿಕೊಂಡೆ.`1920' ಚಿತ್ರದಲ್ಲಿ ಮಾಡಿದವರಾರೂ ಯಶ ಗಳಿಸಲಿಲ್ಲ. `1920'ಯಲ್ಲಿ ನಟಿಸಿದ ರಜನೀಶ್ ದುಗ್ಗಲ್, ನಾನು ಮಾಡೆಲಿಂಗ್ ಕ್ಷೇತ್ರದಲ್ಲಿದ್ದಾಗಿನಿಂದಲೂ ನನ್ನ ಸ್ನೇಹಿತ. ಅದರ ಬಳಿಕ ಆತನಿಗೆ ಸಿನಿಮಾಗಳೇ ಸಿಗಲಿಲ್ಲ. `1920 ರಿಟರ್ನ್ಸ್'ನಲ್ಲಿ ಮಾಡಿದ ಅಫ್ತಾಬ್ ಕೂಡ ಹೆಸರು ಪಡೆಯಲಿಲ್ಲ. ಇದು ಕೂಡ ನನ್ನ ಮನಸ್ಸನ್ನು ಹಲವು ಬಾರಿ ಕಾಡಿತ್ತು.

ಬಾಲಿವುಡ್‌ನಲ್ಲಿ ಬೇರೆ ಸಿನಿಮಾಗಳಲ್ಲಿ ಅವಕಾಶ ಸಿಗಲಿಲ್ಲವೇ?

ತುಂಬಾ ಸಿನಿಮಾಗಳಿಗೆ ಶಾರ್ಟ್‌ಲಿಸ್ಟ್ ಆದೆ. ಇತ್ತೀಚೆಗೆ ಅನಿಲ್ ಕಪೂರ್ ಬ್ಯಾನರ್‌ನಲ್ಲಿ ಸೋನಮ್ ಕಪೂರ್ ನಾಯಕಿಯಾಗಿರುವ ಚಿತ್ರಕ್ಕೆ ಶಾರ್ಟ್‌ಲಿಸ್ಟ್ ಆಗಿದ್ದೆ. ಆದರೆ ಇಲ್ಲಿ ಸಮಸ್ಯೆಯಾಗಿರುವುದು ಹಿಂದಿ ಭಾಷೆ. ಭಾಷೆ ಬಲ್ಲವನಾದರೂ ದಕ್ಷಿಣ ಭಾರತದ ಉಚ್ಚಾರಣೆ ಶೈಲಿಯಿದೆ. ಅಲ್ಲದೆ ಅಲ್ಲಿ ಈಗ ಡಬ್ಬಿಂಗ್ ಮಾಡುತ್ತಿಲ್ಲ. ಬದಲಾಗಿ ವಾಯ್ಸ ಸಿಂಕ್ ಮಾಡುತ್ತಾರೆ. ಅನಿಲ್ ಕಪೂರ್ ಸಹ ವೈಯಕ್ತಿಕವಾಗಿ ಭೇಟಿ ಮಾಡಿ, ನಿಮ್ಮ ಹಿಂದಿಯಲ್ಲಿ ಸ್ವಲ್ಪ ಸಮಸ್ಯೆಯಿದೆ ಎಂದರು. ಸುಧಾರಣೆ ಮಾಡಿಕೊಂಡರೆ ಬಹುಶಃ ಉತ್ತಮ ಸಿನಿಮಾಗಳು ಬರಬಹುದು.

ದಕ್ಷಿಣ ಭಾರತೀಯರು ಹಿಂದಿ ಚಿತ್ರರಂಗದಲ್ಲಿ ಗೆಲ್ಲುತ್ತಿದ್ದಾರಲ್ಲ...?

ಹೌದು. ಇಲ್ಲಿಂದ ಹೋದ ತುಂಬಾ ಜನ ಅಲ್ಲಿ ಗೆದ್ದಿದ್ದಾರೆ. ದಿನಕರ್ ಚಿತ್ರ ಬಿಟ್ಟು ಬೇರೆ ಚಿತ್ರಗಳನ್ನು ಮಾಡಬಹುದಾಗಿತ್ತು. ಆದರೆ ನನಗೆ ಇದೇ ತುಂಬಾ ಮುಖ್ಯವಾದ ಪ್ರಾಜೆಕ್ಟ್. ಅವರ ಸಿನಿಮಾದಲ್ಲಿ ನಟಿಸಲು ಹಲವು ವರ್ಷಗಳಿಂದ ಕಾದಿದ್ದೆ. ಆ್ಯಕ್ಷನ್ ಸಬ್ಜೆಕ್ಟ್ ಇದು. ಇದಕ್ಕೊಸ್ಕರ ನಾನು ಚೈನಾದಲ್ಲಿ ಮೂರು ವರ್ಷ ಮಾರ್ಷಲ್ ಆರ್ಟ್ಸ್ ಕಲಿತು ಬಂದ ಸ್ನೇಹಿತನ ಬಳಿ ತರಬೇತಿ ಪಡೆದಿದ್ದೇನೆ.

ರೊಮ್ಯಾಂಟಿಕ್ ಕಾಮಿಡಿ ಪಾತ್ರಗಳನ್ನು ಬಿಟ್ಟು ವಿಭಿನ್ನ ಪಾತ್ರಗಳತ್ತ ಹೋಗಲು ಆಗುತ್ತಿಲ್ಲವೇ?

ಆಗುತ್ತಿಲ್ಲ ಎಂದಲ್ಲ. ಈಗ ದಿನಕರ್ ಸಿನಿಮಾ ಮಾಡುತ್ತಿರುವುದು ವಿಭಿನ್ನವಾಗಿದೆ. ಆ್ಯಕ್ಷನ್ ಕೂಡ ಇದೆ. ಜನ ನನ್ನನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವುದರ ಮೇಲೆ ಎಲ್ಲವೂ ನಿರ್ಧಾರವಾಗುತ್ತದೆ. ರೊಮ್ಯಾಂಟಿಕ್ ಪಾತ್ರಗಳನ್ನು ಜನ ಇಷ್ಟಪಡುತ್ತಾರೆ. ಅಲ್ಲದೆ ನನ್ನ ಯಶಸ್ವಿ ಚಿತ್ರಗಳು ಎಲ್ಲವೂ ರೊಮ್ಯಾಂಟಿಕ್ ಕಾಮಿಡಿ ಚಿತ್ರಗಳೇ. ಎಲ್ಲವನ್ನೂ ಪ್ರಯತ್ನಿಸಿಯಾಗಿದೆ. ಇದನ್ನೂ ಪ್ರಯತ್ನಿಸೋಣ ಅಂತ...

ಯೋಗರಾಜ್ ಭಟ್ಟರ ಚಿತ್ರಗಳನ್ನು ಬಿಟ್ಟು ನಿಮ್ಮ ಸಿನಿಮಾಗಳು ಗೆಲ್ಲುವುದಿಲ್ಲ ಎಂಬ ಮಾತಿದೆ...

ಹಾಗೇನೂ ಇಲ್ಲ. `ಪಾರಿಜಾತ' ಆದ ಬಳಿಕ `ದೇವ್ ಸನ್ ಆಫ್ ಮುದ್ದೇಗೌಡ' ಚಿತ್ರ ಮಾತ್ರ ಓಡಲಿಲ್ಲ. `ಪಾರಿಜಾತ' ದೊಡ್ಡ ಗೆಲುವು ಅಲ್ಲದಿದ್ದರೂ ಗಳಿಕೆಯಲ್ಲಿ ನಿರಾಸೆ ಉಂಟು ಮಾಡಲಿಲ್ಲ. `ದೇವ್...' ಮಾತ್ರ ಸೋತಿರುವುದು. ಅದಾದ ಬಳಿಕವೇ `ಬರ್ಫಿ' ಬರುತ್ತಿರುವುದು. ಅದು ಆ ಮಾತನ್ನು ಸುಳ್ಳುಮಾಡುತ್ತದೆ.

ದಿಗಂತ್ ಕೈಗೇ ಸಿಗೊಲ್ಲ ಎಂದು ಆರೋಪವಿದೆ? ಭಟ್ಟರ ಸಿನಿಮಾದಲ್ಲಿ ತೋರಿಸಿರುವಂತೆ ನಿಜ ಜೀವನದಲ್ಲಿಯೂ ದಿಗಂತ್ ಸೋಮಾರಿ ಎನ್ನುತಾರಲ್ಲ?

(ನಗು) ಕೆಲವು ಸಲ ಓಡಾಟ ಜಾಸ್ತಿಯಾಯಿತು. ಇಲ್ಲಿಯೂ ತುಂಬಾ ಕೆಲಸವಿತ್ತು. ಹಾಗಾಗಿ ಕೈಗೆ ಸಿಗುತ್ತಿರಲಿಲ್ಲ, ಹೊರತು ಬೇರೆ ಕಾರಣಗಳಿಲ್ಲ. ಇನ್ನು ಖಂಡಿತಾ ಸಿಗುತ್ತೇನೆ. ನಾನು ಸಿನಿಮಾ ಮತ್ತು ನಿರ್ಮಾಪಕರಿಗೆ ಯಾವ ಕಾರಣಕ್ಕೂ ಮೋಸ ಮಾಡುವುದಿಲ್ಲ. ಪ್ರಚಾರಕ್ಕೆ ಏನೇನು ಬೇಕೋ ಎಲ್ಲವನ್ನೂ ಮಾಡುತ್ತೇನೆ. ಹಾಗೆ ನೋಡಿದರೆ ನಾಯಕ ನಟರಲ್ಲಿ ನಾನೇ ಹೆಚ್ಚು ಪ್ರಮೋಷನ್‌ನಲ್ಲಿ ಭಾಗವಹಿಸುವವನು. `ಲೈಫು ಇಷ್ಟೇನೆ' ಚಿತ್ರಕ್ಕೆ ಒಂದೇ ದಿನದಲ್ಲಿ 17 ಕಾರ್ಯಕ್ರಮಗಳನ್ನು ನೀಡಿದ್ದೆ. ನನ್ನ ಯಾವ ನಿರ್ಮಾಪಕರಿಗೂ ಮೋಸ ಮಾಡುವುದಿಲ್ಲ.ಸ್ಟಾರ್‌ಗಿರಿ ಸಿಕ್ಕಿಲ್ಲ, ಆರಕ್ಕೇರೊಲ್ಲ, ಮೂರಕ್ಕಿಳಿಯೊಲ್ಲ ಸ್ಥಿತಿಯೇ ಸಾಕೆ?

ಖಂಡಿತಾ. ನನ್ನ ಸಿನಿಮಾ ನೋಡುವವರು ಕೌಟುಂಬಿಕ ಪ್ರೇಕ್ಷಕರು. ಅವರಿಗೆ ಒಳ್ಳೆಯ ಸಿನಿಮಾ ನೀಡಬೇಕು. ಇಷ್ಟು ವರ್ಷದ ಸಿನಿಮಾರಂಗದ ನಂಟಿನಲ್ಲಿ ನನ್ನಲ್ಲಿ ತುಂಬಾ ಬದಲಾವಣೆಗಳಾಗಿವೆ. ಒಂದೇ ಸಲ ತುಂಬಾ ಮೇಲೆ ಹೋಗಿಲ್ಲ ಅಥವಾ ಒಂದೇ ಸಲ ಕೆಳಗೆ ಬಂದಿಲ್ಲ. ಹಂತಹಂತವಾಗಿ ಮೆಟ್ಟಿಲೇರುತ್ತಿದ್ದೇನೆ. ಬೇರೆ ನಟರಂತೆ ಏಕಾಏಕಿ ಜನಪ್ರಿಯತೆ ಸಿಕ್ಕಿಲ್ಲ. ಹಾಗೆಯೇ ಏಕಾಏಕಿ ನೆಲಕಚ್ಚಿಲ್ಲ. ಅದು ತುಂಬಾ ಸಂತೋಷ ನೀಡಿದೆ. ಜನ ನನ್ನ ಚಿತ್ರಗಳನ್ನು ನಿರೀಕ್ಷಿಸುತ್ತಲೂ ಇದ್ದಾರೆ. ನನಗೆ ಇದೇ ಸಾಕು. ಇದೇ ಥರ ನಡೆಯಲಿ.

Post Comments (+)