ದಿಗಿಲು ಹುಟ್ಟಿಸುವ ಮಾವಳ್ಳಿಪುರದ ತರಕಾರಿ!

ಬುಧವಾರ, ಜೂಲೈ 17, 2019
26 °C

ದಿಗಿಲು ಹುಟ್ಟಿಸುವ ಮಾವಳ್ಳಿಪುರದ ತರಕಾರಿ!

Published:
Updated:

ಬೆಂಗಳೂರು: ನಗರದ ಜನತೆ ಸಾವಯವ ಕೃಷಿಯ ಉತ್ಪನ್ನಗಳ ಬಗ್ಗೆ ಒಲವು ತೋರುತ್ತಿರುವ ಸಂದರ್ಭದಲ್ಲೇ, ಮಾವಳ್ಳಿಪುರದಿಂದ ನಗರಕ್ಕೆ ದಿನ ನಿತ್ಯ ಪೂರೈಕೆಯಾಗುವ ತರಕಾರಿ ಮತ್ತು ಹಾಲು ಮಲಿನಗೊಳ್ಳುತ್ತಿರುವ ಬಗ್ಗೆ ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಮಾವಳ್ಳಿಪುರದ ಬಳಿ `ರಾಮ್ಕಿ~ ಕಂಪೆನಿಯ ಅವೈಜ್ಞಾನಿಕ ತ್ಯಾಜ್ಯ ನಿರ್ವಹಣೆಯಿಂದ ಇಲ್ಲಿನ ವಾತಾವರಣವೇ ಕಲುಷಿತಗೊಂಡಿದ್ದು, ಗ್ರಾಮ ಮತ್ತು ಅಕ್ಕಪಕ್ಕದ ಗ್ರಾಮಗಳಿಂದ ಪೂರೈಕೆಯಾಗುವ ತರಕಾರಿ ಮತ್ತು ಹಾಲಿನ ಮೂಲಕ ನಗರಕ್ಕೆ ವಿಷಕಾರಿ ಅಂಶಗಳು ಹರಿದು ಬರುತ್ತಿವೆ ಎಂಬ ಆತಂಕ ನಗರದ ಜನರಲ್ಲಿ ಮನೆ ಮಾಡಿದೆ.ನಗರದಿಂದ ಬಂದು ಬೀಳುವ ಸಾವಿರಾರು ಟನ್ ತ್ಯಾಜ್ಯದ ಸಮರ್ಪಕ ನಿರ್ವಹಣೆಯಾಗದೇ ಗ್ರಾಮ ಹಾಗೂ ಅಕ್ಕಪಕ್ಕದ ಜನರು ತೀವ್ರವಾಗಿ ತೊಂದರೆ ಅನುಭವಿಸುವಂತಾಗಿದೆ ಎಂದು ಇಲ್ಲಿನ ಗ್ರಾಮಸ್ಥರು ದೂರಿದ್ದಾರೆ.`ತ್ಯಾಜ್ಯವನ್ನು ಬಳಸಿಕೊಂಡು ವಿದ್ಯುತ್ ತಯಾರಿಸುವ `ರಾಮ್ಕಿ~ ಕಂಪೆನಿಯ ಘಟಕ ಇಲ್ಲಿಗೆ ಬರುವ ಮುಂಚೆ ಗ್ರಾಮದಲ್ಲಿ ಉತ್ತಮ ವಾತಾವರಣವಿತ್ತು. 2002ರ ನಂತರ ಕಸದ ಗುಡ್ಡವೇ ಇಲ್ಲಿ ನಿರ್ಮಾಣವಾಗುತ್ತಿದೆ. ಈ ಮೊದಲು ಸುತ್ತಮುತ್ತಲಿನ 12 ಗ್ರಾಮಗಳಿಂದ ಪ್ರತಿದಿನ 25 ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು. ಆದರೆ ಈಗ ಹಾಲಿನ ಉತ್ಪಾದನೆ 10 ಸಾವಿರ ಲೀಟರ್‌ಗೆ ಇಳಿಕೆಯಾಗಿದೆ.ಜಾನುವಾರುಗಳು ಕುಡಿಯುವ ನೀರು ಮಲಿನವಾಗಿದೆ. ಮಲಿನಗೊಂಡ ನೀರಿನಿಂದ ಬೆಳೆಯುವ ಹುಲ್ಲನ್ನೇ ಅವು ಮೇಯುವುದರಿಂದ ಜಾನುವಾರುಗಳ ಮೇಲೂ ಕೆಟ್ಟ ಪರಿಣಾಮ ಉಂಟಾಗುತ್ತಿದೆ~ ಎಂದು ಮಾವಳ್ಳಿಪುರ ಗ್ರಾಮ ಪಂಚಾಯತಿ ಸದಸ್ಯ ಶ್ರೀನಿವಾಸ್ `ಪ್ರಜಾವಾಣಿ~ಗೆ ತಿಳಿಸಿದರು.`ಜಲಮಂಡಳಿ ಟ್ಯಾಂಕರ್‌ಗಳಲ್ಲಿ ಸರಬರಾಜು ಮಾಡುತ್ತಿರುವ ಕಾವೇರಿ ನೀರಿನಿಂದ ಮತ್ತು ನೀರನ್ನು ಬಿಸಿ ಮಾಡಿ ಕುಡಿಯುವ ಮೂಲಕ ನಾವಿನ್ನೂ ಆರೋಗ್ಯವಾಗಿದ್ದೇವೆ. ಆದರೆ ಜಾನುವಾರುಗಳಿಗೆ ಪರ್ಯಾಯ ವ್ಯವಸ್ಥೆ ಏನು?~ ಎಂದರು.`ತ್ಯಾಜ್ಯದ ಕಾರಣದಿಂದ ಇಲ್ಲಿ ಬದುಕುವುದೇ ಕಷ್ಟವಾಗಿದೆ. ಕಲುಷಿತ ನೀರಿನ ಕಾರಣದಿಂದ ಜಾನುವಾರುಗಳು ವಿವಿಧ ರೋಗಗಳಿಂದ ಸಾಯುತ್ತಿವೆ. ಜಾನುವಾರುಗಳನ್ನು ಉಳಿಸಿಕೊಳ್ಳಲಾಗದ ಅಸಹಾಯಕ ಸ್ಥಿತಿಯಲ್ಲಿ ನಾವಿದ್ದೇವೆ. ತ್ಯಾಜ್ಯದಿಂದ ನಮ್ಮ ಜಮೀನಿನ ಮಣ್ಣು ಕೂಡಾ ಮಲಿನಗೊಂಡಿದೆ~ ಎಂದು ಮತ್ತೊಬ್ಬ ಸ್ಥಳೀಯ ನಾಗರಾಜು ತಮ್ಮ ಅಳಲು ತೋಡಿಕೊಂಡರು.`ಬೆಂಗಳೂರು ಉತ್ತರ ವಿಭಾಗದಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆಯಾಗುತ್ತಿದ್ದ ರಾಮಮೋಹನಹಳ್ಳಿಯಲ್ಲಿ ಈಗ ಮೊದಲಿಗಿಂತ ಹಾಲಿನ ಉತ್ಪಾದನೆ ಶೇ 25ರಷ್ಟು ಇಳಿಕೆಯಾಗಿದೆ. ಇದರಿಂದ ಜಾನುವಾರು ಸಾಕಣೆ ಕಷ್ಟವಾಗುತ್ತಿದೆ~ ಎಂದು ನಾಗರಾಜು ತಿಳಿಸಿದರು.ರೋಗಗ್ರಸ್ಥ ಜಾನುವಾರು: ನಗರದಿಂದ ಬರುವ ತ್ಯಾಜ್ಯ ಸರಿಯಾಗಿ ನಿರ್ವಹಣೆಯಾಗದೇ ಜನ ಹಾಗೂ ಜಾನುವಾರುಗಳು ರೋಗದಿಂದ ಬಳಲುವಂತಾಗಿದೆ. ಇಲ್ಲಿನ ಜಮೀನು ಬಂಜರಾಗಿದೆ. ಇದರ ಪರಿಣಾಮ ಇಲ್ಲಿನ ರೈತರ ಮೇಲಾಗುತ್ತಿದೆ. ತ್ಯಾಜ್ಯದ ಕಾರಣದಿಂದ ಕೃಷಿ ಉತ್ಪಾದನೆ ಅರ್ಧದಷ್ಟು ಕಡಿಮೆಯಾಗಿದೆ. ರಾಸಾಯನಿಕ ವಸ್ತುಗಳು ಜಮೀನಿನ ಮಣ್ಣಲ್ಲಿ ಸೇರುತ್ತಿರುವುದರಿಂದ ವಿಷಕಾರಿ ಅಂಶ ತರಕಾರಿಗಳನ್ನು ಸೇರುತ್ತಿದೆ.`ಮಣ್ಣು ಮಲಿನವಾಗುತ್ತಿರುವ ಕಾರಣ ಫಸಲು ಕಡಿಮೆಯಾಗುತ್ತಿದೆ. ಇನ್ನು ಕೆಲವು ಜಮೀನುಗಳಲ್ಲಿ ಫಸಲೇ ಇಲ್ಲ~ ಎಂದು ಶ್ರೀನಿವಾಸ್‌ಶ್ರೀನಿವಾಸ್ ತಮ್ಮ ಪರಿಸ್ಥಿತಿ ಬಗ್ಗೆ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry