ದಿಗ್ಬಂಧನ ತೆರವಿಗೆ ಮನವಿ

7

ದಿಗ್ಬಂಧನ ತೆರವಿಗೆ ಮನವಿ

Published:
Updated:

ಯಾಂಗೂನ್ (ಐಎಎನ್‌ಎಸ್/ಎಪಿ): ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ವ್ಯವಸ್ಥೆಯನ್ನು ಮರು ಸ್ಥಾಪಿಸುವ ನಿಟ್ಟಿನಲ್ಲಿ ಆ ದೇಶದ ಮೇಲೆ ಹೇರಲಾಗಿರುವ ದಿಗ್ಬಂಧನವನ್ನು ತೆರವುಗೊಳಿಸುವಂತೆ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಬಾನ್ ಕಿ-ಮೂನ್ ಮಂಗಳವಾರ ಅಂತರ ರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿಕೊಂಡಿದ್ದಾರೆ.ಮ್ಯಾನ್ಮಾರ್ ಸಂಸತ್ ಸದಸ್ಯರನ್ನು ಉದ್ದೇಶಿಸಿ ಮಾತನಾ ಡಿದ ಅವರು, ದೇಶದ ಸ್ಥಿರತೆ ಮತ್ತು ಪ್ರಜಾಸತ್ತಾತ್ಮಕ ಬದಲಾವಣೆಗೆ ಹಾತೊರೆಯುತ್ತಿರುವ ಈ ದೇಶದ ಜನರ ಭಾವನೆಗಳಿಗೆ ಎಲ್ಲರೂ ಸ್ಪಂದಿಸುವಂತೆ ಕೋರಿದರು.ದೇಶ ಈ ಸಂಕಷ್ಟದ ಸ್ಥಿತಿಯನ್ನು ಧೈರ್ಯದಿಂದ ಎದುರಿಸು ವಂತೆ ಸಲಹೆ ಮಾಡಿದ ಅವರು, ಜೈಲಿನಲ್ಲಿರುವ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಬುಡಕಟ್ಟು ಜನಾಂಗ ಮತ್ತು ರಾಜಕೀಯ ನಾಯಕರಿಗೆ ಸೂಕ್ತ ಭದ್ರತೆ ಒದಗಿಸಬೇಕು ಮತ್ತು ಕಚಿನ್  ಬುಡಕಟ್ಟು ಜನರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಕೂಡಲೇ ತಡೆಯಬೇಕು ಎಂದು ಬಾನ್ ಕೋರಿದರು.ಮ್ಯಾನ್ಮಾರ್‌ನಲ್ಲಿ ಆಗುವ ಪ್ರಜಾಸತ್ತಾತ್ಮಕ ಬದಲಾವಣೆ ಗಳನ್ನು ಇಡೀ ವಿಶ್ವವೇ ಕುತೂಹಲದಿಂದ ಎದುರು ನೋಡುತ್ತಿದೆ. ಅದು ವಿಶ್ವದ ಇತರ ದೇಶಗಳಿಗೂ ಮಾದರಿಯಾಗಲಿದೆ ಎಂದು ಅಭಿಪ್ರಾಯಪಟ್ಟ ಅವರು,  ವಿಶ್ವದ ಇತರ ರಾಷ್ಟ್ರಗಳು ಇಲ್ಲಿ ಬಂಡವಾಳ ತೊಡಗಿಸಲು ಮುಂದೆ ಬರಬೇಕು. ಆ ಮೂಲಕ ಹೊಸ ಬದಲಾವಣೆಗೆ ನೆರವಾಗಬೇಕು ಎಂದರು.ತಾಂತ್ರಿಕ ಮತ್ತು ಆರ್ಥಿಕ ನೆರವು ಒದಗಿಸುವ ಎರಡು ಒಪ್ಪಂದಗಳಿಗೆ ಇದೇ ಸಂದರ್ಭದಲ್ಲಿ ಸಹಿ ಹಾಕಲಾಯಿತು. ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿಯಾದ ನಂತರ ಬಾನ್ ಮೂರನೇ ಬಾರಿ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.ಜರ್ಮನಿಯ ವಿದೇಶಾಂಗ ಸಚಿವ ಗಿಡೊ ವೆಸ್ಟರ್‌ವೆಲ್, ಐರೋಪ್ಯ ಒಕ್ಕೂಟದ ವಿದೇಶಾಂಗ ನೀತಿ ಮುಖ್ಯಸ್ಥೆ ಕ್ಯಾಥರಿನ್ ಆಸ್ಟನ್ ಇದೇ ವಾರ ಇಲ್ಲಿಗೆ ಭೇಟಿ ನೀಡುವ ಕಾರ್ಯಕ್ರಮವಿದೆ.ಸೂಕಿ ಭೇಟಿ
ಮೂರು ದಿನಗಳ ಮ್ಯಾನ್ಮಾರ್ ಪ್ರವಾಸದಲ್ಲಿರುವ ಬಾನ್-ಕಿ ಮೂನ್ ಅವರು ಎಂಎನ್‌ಎಲ್‌ಡಿ ಪಕ್ಷದ ನಾಯಕಿ  ಹಾಗೂ ಪ್ರಜಾಪ್ರಭುತ್ತ ಮರು ಸ್ಥಾಪನೆ ಹೋರಾಟಗಾರ್ತಿ ಆಂಗ್ ಸಾನ್ ಸೂಕಿ ಅವರನ್ನು ಭೇಟಿ ಮಾಡಿದರು.

 ದೇಶದಲ್ಲಿ ಪ್ರಜಾಸತ್ತೆಯ ಮರು ಸ್ಥಾಪನೆಗೆ ಹೋರಾಡುತ್ತಿರುವ ಸೂಕಿ ಅವರ ಪ್ರಯತ್ನ ಮತ್ತು ನಿರಂತರ ಹೋರಾಟಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಗೆ ಭೇಟಿ ನೀಡುವಂತೆ ಸೂಕಿ ಅವರಿಗೆ ಇದೇ ವೇಳೆ ಆಹ್ವಾನ ನೀಡಿದ ಮೂನ್, ಪ್ರಜಾಪ್ರಭುತ್ವದ ಮರು ಸ್ಥಾಪನೆಗಾಗಿ ನಡೆಯುತ್ತಿರುವ ಹೋರಾಟವನ್ನು ವಿಶ್ವಸಂಸ್ಥೆ ಬೆಂಬಲಿಸಲಿದೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry