ದಿಗ್ವಿಜಯ್‌ಗೆ ಸಮನ್ಸ್: ಕಾದಿರಿಸಿದ ಆದೇಶ

7

ದಿಗ್ವಿಜಯ್‌ಗೆ ಸಮನ್ಸ್: ಕಾದಿರಿಸಿದ ಆದೇಶ

Published:
Updated:

ನವದೆಹಲಿ (ಪಿಟಿಐ): ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿರುವ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಅವರ ಅರ್ಜಿಯ ವಿಚಾರಣೆ ನಡೆಸಿದ ಇಲ್ಲಿಯ ಕೋರ್ಟ್, ಸಿಂಗ್ ಅವರ ವಿರುದ್ಧ ಸಮನ್ಸ್ ನೀಡುವ ಕುರಿತಾದ ಆದೇಶವನ್ನು ನವೆಂಬರ್ 2ಕ್ಕೆ ಮುಂದೂಡಿದೆ.ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸಂಸದ ಅಜಯ್ ಸಂಚೇತಿ ಅವರೊಂದಿಗೆ ಗಡ್ಕರಿ ವ್ಯವಹಾರ ನಡೆಸಿದ್ದು ಅವರಿಂದ ರೂ. 500 ಕೋಟಿ ಪಡೆದಿದ್ದಾರೆ ಎಂದು ಸಿಂಗ್ ಆರೋಪಿಸಿದ ಹಿನ್ನೆಲೆಯಲ್ಲಿ ಗಡ್ಕರಿ ಈ ಮೊಕದ್ದಮೆ ದಾಖಲಿಸಿದ್ದಾರೆ.ಎರಡೂ ಕಡೆಯವರ ಹೇಳಿಕೆಗಳನ್ನು ಧ್ವನಿಮುದ್ರಿಸಿಕೊಂಡ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಸುದೇಶ್ ಕುಮಾರ್, ಈ ಸಂಬಂಧ ದಿಗ್ವಿಜಯ್ ಸಿಂಗ್‌ಗೆ ಸಮನ್ಸ್ ಜಾರಿ ಮಾಡಬೇಕೊ ಇಲ್ಲವೊ ಎಂಬ ಆದೇಶವನ್ನು ನವೆಂಬರ್ 2ಕ್ಕೆ ನೀಡುವುದಾಗಿ ಪ್ರಕಟಿಸಿದರು.ಈ ಮೊದಲು ಗಡ್ಕರಿ ಅವರ ಹೇಳಿಕೆಯನ್ನು ಕೋರ್ಟ್ ಧ್ವನಿಮುದ್ರಿಸಿಕೊಂಡಿದ್ದರೆ, ಮಂಗಳವಾರ ರಾಜ್ಯಸಭಾ ಸದಸ್ಯರೂ ಆಗಿರುವ ಬಿಜೆಪಿ ರಾಷ್ಟ್ರೀಯ ಕಾರ‌್ಯದರ್ಶಿ ಭೂಪಿಂದರ್ ಯಾದವ್ ಅವರ ಹೇಳಿಕೆಯನ್ನು ಪಡೆಯಲಾಯಿತು. `ತಾವು ಕಳೆದ ಸೆಪ್ಟೆಂಬರ್ 3 ರಂದು ಪತ್ರಿಕೆಗಳಲ್ಲಿ ಪ್ರಕಟವಾದ ಗಡ್ಕರಿ ಹಾಗೂ ಸಂಚೇತಿ ಅವರ ನಡುವಿನ ವ್ಯಾಪಾರ ಸಂಬಂಧದ ಸುದ್ದಿ, ವರದಿಗಳನ್ನು ಓದಿದ್ದು ವಾಸ್ತವವಾಗಿ ಇದೆಲ್ಲ ಸತ್ಯಕ್ಕೆ ದೂರವಾದ ಸಂಗತಿ. ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆ ವ್ಯವಹಾರದಲ್ಲಿ ಗಡ್ಕರಿಗೆ ರೂ. 490 ಕೋಟಿ ಆದಾಯ ಬಂದಿದೆ ಎಂಬ ವರದಿಗಳಲ್ಲಿ ಯಾವ ಸತ್ಯಾಂಶವೂ ಇಲ್ಲ~ ಎಂದು ಯಾದವ್ ತಮ್ಮ ಹೇಳಿಕೆಯಲ್ಲಿ ತಿಳಿಸಿದರು.ಇದೇ ರೀತಿಯ ಆರೋಪಗಳ ಹೇಳಿಕೆಯನ್ನು ದಿಗ್ವಿಜಯ್ ಸಿಂಗ್ ವಿವಿಧ ಟಿವಿ ಚಾನೆಲ್‌ಗಳಿಗೆ ನೀಡಿದ್ದು, ಇದರಿಂದ ಗಡ್ಕರಿ ಸಾರ್ವಜನಿಕವಾಗಿ ಹೊಂದಿರುವ ಸ್ಥಾನಮಾನಕ್ಕೆ ಚ್ಯುತಿ ತಂದಿದೆ. ಹಾಗಾಗಿ ಇದು ಮಾನನಷ್ಟ ಮೊಕದ್ದಮೆ ಹೂಡಲು ಕಾರಣವಾಯಿತು ಎಂದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry