ದಿಟ್ಟತನದ ಸಂಕೇತ

ಬುಧವಾರ, ಮೇ 22, 2019
29 °C

ದಿಟ್ಟತನದ ಸಂಕೇತ

Published:
Updated:

ದೇಶದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಎಂಬ ಹೆಗ್ಗಳಿಕೆ ಹೊತ್ತಿರುವ ಕಿರಣ್ ಬೇಡಿ ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಜನ ಲೋಕಪಾಲ ಮಸೂದೆ ಮಂಡಿಸುವಂತೆ ಅಣ್ಣಾ ಹಜಾರೆ ನಿರಶನ ನಡೆಸುತ್ತಿದ್ದ ಸಂದರ್ಭದಲ್ಲಿ ಸಂಸತ್ ಸದಸ್ಯರೆಲ್ಲ ಭ್ರಷ್ಟರು, ಮುಖವಾಡ ತೊಟ್ಟವರು ಎಂದು ವ್ಯಂಗ್ಯವಾಗಿ ಹೇಳಿದ್ದು ಈ ಹೊಸ ವಿವಾದದ ಮೂಲ. ಕಿರಣ್ ವಿರುದ್ಧ ಸಂಸತ್ತಿನಲ್ಲಿ ಹಕ್ಕುಚ್ಯುತಿ ನಿರ್ಣಯ ಮಂಡನೆಗೆ ರಾಜಕೀಯ ಪಕ್ಷಗಳು ಮುಂದಾಗಿವೆ.ರಾಮಲೀಲಾ ಮೈದಾನದ ವೇದಿಕೆಯಲ್ಲಿ ಇದೇ ರೀತಿ ಹೇಳಿಕೆ ನೀಡಿ ತೊಂದರೆಗೆ ಸಿಕ್ಕಿ ಹಾಕಿಕೊಂಡಿರುವ ನಟ ಓಂಪುರಿ ಕ್ಷಮೆ ಯಾಚಿಸಿದ್ದಾರೆ. ಆವೇಶದಿಂದ ದುಡುಕು ಮಾತನಾಡಿದ್ದಾಗಿ ಹೇಳಿದ್ದಾರೆ. ಆದರೆ, ಸಿಂಹಿಣಿಯಂತಿರುವ ಕಿರಣ್ ಬೇಡಿ ಇದಕ್ಕೆಲ್ಲ ಸೊಪ್ಪು ಹಾಕಿಲ್ಲ. `ಸಂಸತ್ತು ಹಕ್ಕುಚ್ಯುತಿ ಮಂಡಿಸಿದರೆ ಮಂಡಿಸಲಿ. ನಾನು ಮಾತನಾಡಿದ್ದು ಭ್ರಷ್ಟ ಸಂಸದರ ವಿರುದ್ಧ. ಅದೂ ಜನರ ಭಾವನೆಗಳನ್ನು ಹಂಚಿಕೊಂಡಿದ್ದೇನೆ. ಹಾಗಾಗಿ ಕ್ಷಮೆ ಯಾಚಿಸುವುದಿಲ್ಲ. ಪರಿಣಾಮ ಎದುರಿಸುತ್ತೇನೆ~ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.ಕಿರಣ್ ಬೇಡಿಯವರ ಇದೇ ದಿಟ್ಟತನ, ಜನಪರ ಕಾಳಜಿ ಭಾರತದ ಅತಿ ಜನಪ್ರಿಯ ನಾಯಕ/ನಾಯಕಿಯರ ಸಾಲಿನಲ್ಲಿ ಅವರನ್ನು ನಿಲ್ಲಿಸಿದೆ. ಮ್ಯಾಗ್ಸೆಸೆ ಪ್ರಶಸ್ತಿ ತಂದುಕೊಟ್ಟಿದೆ. ಸೇವೆಯಲ್ಲಿದ್ದಾಗ ಅತ್ಯಂತ ದಕ್ಷ ಅಧಿಕಾರಿ ಎಂಬ ಹಿರಿಮೆಯ ಗರಿಯೂ ಅವರಿಗಿತ್ತು. ಈಗ ದೇಶದ ಮುಂಚೂಣಿ ಸಾಮಾಜಿಕ ಕಾರ್ಯಕರ್ತರ ಸಾಲಿನಲ್ಲಿ ಅವರು ನಿಂತಿದ್ದಾರೆ. ಅಣ್ಣಾ ಹಜಾರೆ ಅವರ ಕಠಿಣ ನಿರಶನಕ್ಕೆ ಸರ್ಕಾರ ತಲೆಬಾಗಿರುವುದರ ಹಿಂದೆ ಅಣ್ಣಾ ತಂಡದ ಸದಸ್ಯರಾದ ಕಿರಣ್ ಬೇಡಿ, ಅರವಿಂದ್ ಕೇಜ್ರಿವಾಲ್ ಅವರ ಪಾತ್ರ ಸಾಕಷ್ಟಿದೆ.ಅಣ್ಣಾ ಅವರನ್ನು ಸರ್ಕಾರ ಬಂಧಿಸಿ ತಿಹಾರ್ ಜೈಲಿಗೆ ಅಟ್ಟಿದ ಕೂಡಲೇ ಅವರ ಜೊತೆ ಕಿರಣ್ ಬೇಡಿ ಸಹ ಬಂಧನಕ್ಕೆ ಒಳಗಾದರು. ಹಿಂದೊಮ್ಮೆ ತಾವೇ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಜೈಲಿನಲ್ಲಿ ಕೈದಿಯಾಗಿ ಕುಳಿತರು. ಜೈಲಿನಲ್ಲಿ ಅಣ್ಣಾ ಅವರ ಸಂದರ್ಶನ ಮಾಡಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು. ರಾಮಲೀಲಾ ಮೈದಾನದ ವೇದಿಕೆಯಲ್ಲಿ ಹನ್ನೊಂದು ದಿನಗಳ ಕಾಲ ಸತತ ಭಾಷಣ ಮಾಡುತ್ತ, ಅಣ್ಣಾ ಜತೆ ಆಗಾಗ್ಗ ಚರ್ಚಿಸುತ್ತ, ಅವರಿಗೆ ಸರ್ಕಾರದ ಅಭಿಪ್ರಾಯಗಳನ್ನು ತಿಳಿಸುತ್ತ ಇದ್ದರು. 62 ವರ್ಷಗಳ ಕಿರಣ್ ಪಾದರಸದಂತೆ ಓಡಾಡುತ್ತ ಜನರ ಉತ್ಸಾಹ ಕುಗ್ಗದಂತೆ ತ್ರಿವರ್ಣ ಧ್ವಜ ಬೀಸುತ್ತಲೇ ಇದ್ದರು.

 
ಕಿರಣ್ ಬೇಡಿ ಹುಟ್ಟೂರು ಅಮೃತಸರ (ಜನನ: ಜೂನ್ 9, 1949). ಪ್ರಕಾಶ್ ಮತ್ತು ಪ್ರೇಮ್ ಪೇಶಾವರಿಯಾ ಅವರ ನಾಲ್ಕು ಹೆಣ್ಣು ಮಕ್ಕಳಲ್ಲಿ ಎರಡನೆಯವರು. ಕಲಾವಿದೆಯಾಗಿರುವ ಅಕ್ಕ ಶಶಿ ಕೆನಡಾದಲ್ಲಿ ನೆಲೆಸಿದ್ದಾರೆ. ಒಬ್ಬ ತಂಗಿ ರೀಟಾ ಮನಃಶಾಸ್ತ್ರಜ್ಞೆ. ಮತ್ತೊಬ್ಬ ತಂಗಿ ಅನು ವಕೀಲರು.ಅಮೃತಸರದ ಸೆಕ್ರೆಡ್ ಹಾರ್ಟ್ ಕಾನ್ವೆಂಟ್‌ನಲ್ಲಿ ಕಲಿತ ಕಿರಣ್ ಅಲ್ಲಿನ ಮಹಿಳಾ ಕಾಲೇಜಿನಿಂದ ಇಂಗ್ಲಿಷ್ ಆನರ್ಸ್‌ ಪದವಿ ಪಡೆದಿದ್ದಾರೆ. ಪಂಜಾಬ್ ವಿವಿಯಲ್ಲಿ ರಾಜ್ಯಶಾಸ್ತ್ರದಲ್ಲಿ ಮೊದಲಿಗಳಾಗಿ ಸ್ನಾತಕೋತ್ತರ ಪದವಿ (1970) ಪಡೆದಿದ್ದಾರೆ. ದೆಹಲಿ ವಿವಿಯ ಕಾನೂನು ಪದವಿ, ಐಐಟಿ ದೆಹಲಿಯಿಂದ ಸಮಾಜ ಶಾಸ್ತ್ರದಲ್ಲಿ ಪಡೆದ ಪಿಎಚ್.ಡಿ. ಇವೆಲ್ಲ ಅವರ ಹೆಸರಿನ ಮುಂದಿರುವ ಪದವಿಗಳು.ಶಾಲಾ ದಿನಗಳಲ್ಲಿ ಶಿಸ್ತಿನ ಎನ್‌ಸಿಸಿ ಸಿಪಾಯಿಯಾಗಿದ್ದ ಕಿರಣ್ ಅತ್ಯುತ್ತಮ ಟೆನಿಸ್ ಪಟು. ಜ್ಯೂನಿಯರ್ ನ್ಯಾಷನಲ್ ಟೆನಿಸ್ ಛಾಂಪಿಯನ್‌ಶಿಪ್ (1966), ಏಷ್ಯನ್ ಲಾನ್ ಟೆನಿಸ್ ಛಾಂಪಿಯನ್‌ಶಿಪ್ (1972), ಆಲ್ ಏಷ್ಯನ್ ಟೆನಿಸ್ ಛಾಂಪಿಯನ್‌ಶಿಪ್ ಇವೆಲ್ಲ ಅವರ ಕೀರ್ತಿಯ ಗರಿಗಳು. ಅಮೃತಸರ ಟೆನಿಸ್ ಕೋರ್ಟ್‌ನಲ್ಲಿ ಪರಿಚಯವಾದ ಉದ್ಯಮಿ ಬ್ರಿಜ್ ಬೇಡಿ ಅವರನ್ನು 1972ರಲ್ಲಿ ಕಿರಣ್ ವರಿಸಿದರು. 1975ರಲ್ಲಿ ಮಗಳು ಸೈನಾ ಜನನ. ಸೈನಾ ತಾಯಿಯಂತೆ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.ಈಗ ಕಿರಣ್ ಕುರಿತು ದ್ವಂದ್ವ ಅಭಿಪ್ರಾಯ, ವಿರೋಧಾಭಾಸದ ಧ್ವನಿಗಳು ಕೇಳಿಬರುತ್ತಿವೆ. ಕೆಲ ಮಾಧ್ಯಮಗಳು ಅವರನ್ನು ಯುವ ಜನತೆಗೆ ದಾರಿದೀಪ ಈ `ಕಿರಣ್~ ಎಂಬಂತೆ ಬಿಂಬಿಸುತ್ತಿದ್ದರೆ, ರಾಜಕಾರಣಿಗಳು ಕಟುವಾಗಿ ಟೀಕಿಸುತ್ತಿದ್ದಾರೆ. ರಾಜ್ಯದ ಬುದ್ಧಿಜೀವಿ ರಾಜಕಾರಣಿಯೊಬ್ಬರು `ಇವರು ಯುವಜನತೆಗೆ ಭಯಾನಕ ಆದರ್ಶ~ ಎಂದು ಕುಟುಕಿದ್ದಾರೆ.`ಮಾಧ್ಯಮದ ಡಾರ‌್ಲಿಂಗ್ ಆಗಿರುವ ಕಿರಣ್ ಬೇಡಿ ಕುರಿತು ಪತ್ರಿಕೆಗಳು, ಟಿವಿಗಳು ಚಕಾರ ಎತ್ತುತ್ತಿಲ್ಲ. ಅವರೇ ತಪ್ಪಾಗಿ ನಡೆದುಕೊಂಡ ಘಟನೆಗಳಿಗೆ ಹೆಚ್ಚು ಪ್ರಚಾರ ನೀಡದೇ ಮರೆಮಾಚಲಾಗಿದೆ. ಮಾಧ್ಯಮಗಳು ಜಾಣ ಮರೆವು ಪ್ರದರ್ಶಿಸುತ್ತಿವೆ~ ಎಂಬುದು ಕಿರಣ್ ವಿರೋಧಿಗಳ ವಾದ. ಈ ವಾದವನ್ನು ಸಂಪೂರ್ಣ ತಳ್ಳಿಹಾಕುವಂತಿಲ್ಲ. ಕಿರಣ್ ವೃತ್ತಿ ಜೀವನದಲ್ಲಿ ಅಲ್ಲಲ್ಲಿ ಕಪ್ಪು ಕಲೆಗಳೂ ಇವೆ.1972ರಲ್ಲಿ ದೇಶದ ಮೊದಲ ಮಹಿಳಾ ಐಪಿಎಸ್ ಅಧಿಕಾರಿಯಾಗಿ ದೆಹಲಿಯಲ್ಲಿ ಪೊಲೀಸ್ ಇಲಾಖೆ ಸೇರಿದ ಕಿರಣ್ ಬೇಡಿ ರಾತ್ರಿ ಬೆಳಗಾಗುವುದರಲ್ಲಿ ಖ್ಯಾತಿ ಗಳಿಸಿದ್ದು 1982ರಲ್ಲಿ. ಆಗ ಪ್ರಧಾನಿಯಾಗಿದ್ದ ಇಂದಿರಾ ಅವರ ಕಾರನ್ನು ಪಾರ್ಕಿಂಗ್ ನಿಷೇಧಿತ ಸ್ಥಳದಲ್ಲಿ ನಿಲ್ಲಿಸಿದ್ದ ಕಾರಣ ಕ್ರೇನ್ ಮೂಲಕ ಎತ್ತಿಸಿದರು (ಆಗ ಇಂದಿರಾ ಅಮೆರಿಕ ಪ್ರವಾಸದಲ್ಲಿದ್ದರು). ಅಲ್ಲಿಂದ ಕಿರಣ್ ಬೇಡಿಯವರನ್ನು ದೆಹಲಿ ಮಾಧ್ಯಮಗಳು `ಕ್ರೇನ್ ಬೇಡಿ~ ಎಂದೇ ಬಣ್ಣಿಸತೊಡಗಿದವು.1988ರಲ್ಲಿ ಕಿರಣ್ ಮತ್ತೊಮ್ಮೆ  ವಿವಾದದಲ್ಲಿ ಸಿಲುಕಿದ್ದರು. ಕಳ್ಳತನದ ಆರೋಪದ ಮೇಲೆ ಬಂಧಿಸಿದ್ದ ವಕೀಲರೊಬ್ಬರನ್ನು ಕೈಕೋಳ ತೊಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಈ ಪ್ರಕರಣದಲ್ಲಿ ದೆಹಲಿ ನಾರ್ತ್ ವಿಭಾಗದ ಡಿಸಿಪಿಯಾಗಿದ್ದ ಕಿರಣ್ ವಿರುದ್ಧ ಇಡೀ ದೆಹಲಿ ವಕೀಲ ಸಮುದಾಯ ಒಂದಾಯಿತು. ತಿಸ್ ಹಜಾರಿ ಕೋರ್ಟ್ ಆವರಣದಲ್ಲಿ ವಕೀಲರು ಬೇಡಿ ವಿರುದ್ಧ ಪ್ರತಿಭಟನೆ ನಡೆಸಿದಾಗ ಅದನ್ನು ಹತ್ತಿಕ್ಕಲು ಲಾಠಿ ಪ್ರಹಾರ ನಡೆಸಿದರು. ಅವರನ್ನು ಅಮಾನತು ಮಾಡಿ ಎಂದು 99 ದಿನಗಳ ಕಾಲ ವಕೀಲರು ಪ್ರತಿಭಟನೆ ನಡೆಸಿದರು. ಆಗ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದ ಜಸ್ಟೀಸ್ ವಾಧ್ವಾ ನೇತೃತ್ವದಲ್ಲಿ ತನಿಖಾ ಸಮಿತಿ ನೇಮಿಸಲಾಯಿತು. ಆದರೆ, ದೆಹಲಿ ವಕೀಲರಿಗೆ ಬೆಂಬಲ ವ್ಯಕ್ತಪಡಿಸಿ ದೇಶಾದ್ಯಂತ ವಕೀಲರು ಪ್ರತಿಭಟನೆ ನಡೆಸಿದಾಗ ರಾಜೀವ್ ಸರ್ಕಾರ ಮಣಿಯಿತು. ಕಿರಣ್ ಅವರನ್ನು ದೆಹಲಿಯ ಯಾವುದೇ ಮಹತ್ವದ ಹುದ್ದೆಗೆ ನೇಮಕ ಮಾಡುವುದಿಲ್ಲ ಎಂದು ಸರ್ಕಾರ ಭರವಸೆ ನೀಡಿದ ನಂತರವೇ ವಕೀಲ ಸಮುದಾಯ ತಣ್ಣಗಾಯಿತು.ಇದಾದ ನಂತರ ಅವರನ್ನು ಮಿಜೊರಾಂಗೆ ವರ್ಗಾಯಿಸಲಾಯಿತು. 1992ರಲ್ಲಿ ದೆಹಲಿಯ ಲೇಡಿ ಹಾರ್ಡಿಂಗ್ ಕಾಲೇಜಿನಲ್ಲಿ ಮಿಜೊರಾಂ ಕೋಟಾದಲ್ಲಿ ತಮ್ಮ ಮಗಳಿಗೆ ವೈದ್ಯಕೀಯ ಸೀಟು ಪಡೆದುಕೊಳ್ಳಲು ಅವರು ಯತ್ನಿಸಿದ್ದು ದೊಡ್ಡ ಗದ್ದಲಕ್ಕೆ ಕಾರಣವಾಯಿತು. ಮಿಜೊ ಜನ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಕಿರಣ್ ಬೇಡಿ ಅದಕ್ಕಾಗಿ ಅಲ್ಲಿನ ಜನರ ಕ್ಷಮೆ ಯಾಚಿಸಲೇ ಇಲ್ಲ. ಆ ರಾಜ್ಯದ ಪೊಲೀಸ್ ಅಧಿಕಾರಿಯಾಗಿದ್ದರಿಂದ ಅವರ ಮಗಳು ಈ ಕೋಟಾದಲ್ಲಿ ಸೀಟು ಪಡೆಯುವುದರಲ್ಲಿ ತಪ್ಪಿಲ್ಲ ಎಂದು ಬೇಡಿ ಬೆಂಬಲಿಗರು ಸಮರ್ಥಿಸಿಕೊಂಡರು. ಈಶಾನ್ಯದ ರಾಜ್ಯಗಳಲ್ಲಿ ಕೆಲಸ ನಿರ್ವಹಿಸುವ ಬಹುತೇಕ ಪರ ರಾಜ್ಯದ ಅಧಿಕಾರಿಗಳಂತೆ ಬೇಡಿ ಇಲ್ಲಿ ಮಗಳಿಗಾಗಿ ನಿಯಾವಳಿ ದುರಪಯೋಗಪಡಿಸಿಕೊಂಡಿದ್ದರು. (ಅವರ ಮಗಳು ಮಾತ್ರ ಎಂಬಿಬಿಎಸ್ ಪೂರ್ಣಗೊಳಿಸದೇ ಅಮೆರಿಕದಲ್ಲಿ ಪತ್ರಿಕೋದ್ಯಮ ಓದಲು ತೆರಳಿದರು.)

ಆನಂತರ ಯಾರಿಗೂ ಬೇಡವಾಗಿದ್ದ ದೆಹಲಿ ಕಾರಾಗೃಹಗಳ ಐಜಿಪಿ ಹುದ್ದೆ ಅವರಿಗೆ ಒಲಿದು ಬಂತು. ಏಷ್ಯಾದ ಅತಿದೊಡ್ಡ ಜೈಲು ಎಂದೇ ಹೆಸರಾದ ದೆಹಲಿಯ ತಿಹಾರ್ ಜೈಲು ಅವರ ಸುಪರ್ದಿಗೆ ಬಂತು. ವಿಚಾರಣಾಧೀನ ಕೈದಿಗಳು, ಭಯಾನಕ ಪಾತಕಿಗಳು, ಮಾದಕ ದ್ರವ್ಯ ವ್ಯಸನಿಗಳು ಸೇರಿದಂತೆ 11,000 ಕೈದಿಗಳು ಇರುವ ಬೃಹತ್ ಜೈಲು ಇದು. ಕಿರಣ್ ಸುಮ್ಮನೇ ಕೂಡುವ ಜಾಯಮಾನದವರಲ್ಲ. ತಿಹಾರ್ ಜೈಲಿನಲ್ಲಿ ಸುಧಾರಣೆ ಮಂತ್ರ ಜಪಿಸಿದರು. ಯೋಗ ಶಿಬಿರ, ಧ್ಯಾನ ಶಿಬಿರ ನಡೆಸಿದರು. ಕೈದಿಗಳ ಮನ ಪರಿವರ್ತನೆಗೆ ಹತ್ತಾರು ಕಾರ್ಯಕ್ರಮ ಹಮ್ಮಿಕೊಂಡರು. ಜೈಲಿನಲ್ಲಿ ಸಾಕ್ಷರತಾ ಅಭಿಯಾನ ನಡೆಸಿದರು. 1994ರ ಮ್ಯಾಗ್ಸೆಸೆ ಪ್ರಶಸ್ತಿ ಈ ಕೆಲಸಕ್ಕೆ ಸಂದ ಗೌರವ.ತಿಹಾರ್ ಜೈಲಿನಲ್ಲಿಯೂ ಅವರು ವಿವಾದಕ್ಕೆ ಸಿಲುಕಿದ್ದರು. ವಿಚಾರಣಾಧೀನ ವಿದೇಶಿ ಪ್ರಜೆಯೊಬ್ಬರಿಗೆ ಸುಪ್ರೀಂಕೋರ್ಟ್ ನಿರ್ದೇಶನದ ಹೊರತಾಗಿಯೂ ಚಿಕಿತ್ಸೆ ಕೊಡಿಸಲು ನಿರಾಕರಿಸಿದ್ದರು. ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ಕಿರಣ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಹೊರಟಿತ್ತು. ಮ್ಯಾಗ್ಸೆಸೆ ಬಂದ ಕಾರಣ ಈ ಕಾನೂನು ಪ್ರಕ್ರಿಯೆಗೆ ತೆರೆ ಎಳೆಯಲಾಯಿತು.ಆನಂತರ ಮಹತ್ವದ್ದಲ್ಲದ ಹುದ್ದೆಗಳಲ್ಲೇ ಅವರು ಕೆಲಸ ನಿರ್ವಹಿಸಿದರು. ಸಾರ್ವಜನಿಕ ಜೀವನಕ್ಕೆ ಹೆಚ್ಚಾಗಿ ತೆರೆದುಕೊಂಡರು. 2007ರಲ್ಲಿ ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದಲ್ಲಿ ಮಹಾ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾಗ ಸಮಾಜ ಸೇವೆಯ ಉದ್ದೇಶದಿಂದ ಸ್ವಯಂ ನಿವೃತ್ತಿ ಪಡೆದರು.ಅಪರಾಧ ಮಾಡಿದ ಮೇಲೆ ಶಿಕ್ಷಿಸುವುದಕ್ಕಿಂತ, ಅಪರಾಧ ನಡೆಯದಂತೆ ತಡೆಯುವುದು ಮುಖ್ಯ. ಅದು ಪೊಲೀಸ್ ಕಾರ್ಯವೈಖರಿಯ ಭಾಗವಾಗಬೇಕು ಎಂಬುದು ಕಿರಣ್ ಬೇಡಿ ಪ್ರತಿಪಾದನೆ. ಅದೇ ಉದ್ದೇಶದಿಂದ ದೆಹಲಿಯಲ್ಲಿ 1987ರಲ್ಲಿ ನವಜ್ಯೋತಿ ಎಂಬ ಸರ್ಕಾರೇತರ ಸಂಸ್ಥೆ ಸ್ಥಾಪಿಸಿದ್ದರು. ಈ ಸಂಸ್ಥೆ ದೆಹಲಿಯ ಕೊಳೇಗೇರಿಗಳಲ್ಲಿ ಸಾಕ್ಷರತಾ ಆಂದೋಲನ ನಡೆಸುತ್ತಿದೆ. ಮಾದಕ ದ್ರವ್ಯ, ಮದ್ಯ ಸೇವನೆಯಂತಹ ಪಿಡುಗಿನ ವಿರುದ್ಧ ಜಾಗೃತಿ ಮೂಡಿಸುತ್ತಿದೆ. ಇಂತಹದ್ದೇ ಉದ್ದೇಶದಿಂದ 1994ರಲ್ಲಿ ಇಂಡಿಯಾ ವಿಷನ್ ಫೌಂಡೇಷನ್ ಆರಂಭಿಸಿದರು. ನಿವೃತ್ತಿ ನಂತರ `ಸೇಫರ್‌ಇಂಡಿಯಾ ಡಾಟ್‌ಕಾಮ್~ ಆರಂಭಿಸಿದ್ದು, ದೇಶದ ಎಲ್ಲೇ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದಲ್ಲಿ ಈ ಸಂಸ್ಥೆ ಮೂಲಕ ನೆರವು ನೀಡುತ್ತಾರೆ.ಕಿರಣ್ ಬೇಡಿ ನಡೆದು ಬಂದ ಹಾದಿ, ಪೊಲೀಸ್ ಅಧಿಕಾರಿಯಾಗಿ ಅವರು ಗಳಿಸಿದ ಜನಪ್ರಿಯತೆ, ಸಿಲುಕಿಕೊಂಡ ವಿವಾದಗಳನ್ನು ಗಮನಿಸಿದಾಗ ಅವರ ನಡೆ, ನುಡಿ, ವ್ಯಕ್ತಿತ್ವದಲ್ಲಿ ಆವೇಶ, ದುಡುಕು ಮೇಲ್ನೋಟಕ್ಕೆ ಕಾಣಿಸುತ್ತದೆ. ಒಮ್ಮಮ್ಮೆ ಜನಪ್ರಿಯತೆಯ ಗುಂಗು ಹತ್ತಿದವರಂತೆ ಕಾಣುತ್ತಾರೆ. ಅದರ ಜತೆಗೇ ದಿಟ್ಟತನ, ಪ್ರಾಮಾಣಿಕತೆಯ ಸಂಕೇತವಾಗಿ, ವೃತ್ತಿಜೀವನದಲ್ಲಿ ಅಡೆತಡೆ ಎದುರಿಸಿ ಮೇಲೆ ಬರುವ ಅಸಂಖ್ಯಾತ ಮಧ್ಯಮ ವರ್ಗದ ಹೆಣ್ಣು ಮಕ್ಕಳಿಗೆ ಆದರ್ಶವಾಗಿ ಅವರು ನಿಲ್ಲುತ್ತಾರೆ.  

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry