ಶನಿವಾರ, ಮೇ 8, 2021
26 °C

ದಿಟ್ಟತನ ಪ್ರದರ್ಶಿಸಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯ ಸರ್ಕಾರವನ್ನು ನಿಯಂತ್ರಿಸುವ ಶಕ್ತಿ ಕೇಂದ್ರಗಳಲ್ಲಿ ಖಾಸಗಿ ವೃತ್ತಿ ಶಿಕ್ಷಣ ಕ್ಷೇತ್ರವೂ ಒಂದು ಎಂಬ ಪ್ರತೀತಿ ಇನ್ನೂ ಪ್ರಸ್ತುತ ಎನ್ನುವಂತೆ ವಿದ್ಯಮಾನಗಳಿವೆ. ರಾಜ್ಯದಲ್ಲಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಪ್ರಬಲ ಶಕ್ತಿ ಕೇಂದ್ರಗಳಾಗಿದ್ದು ಅವುಗಳ ಹಿತಾಸಕ್ತಿಗೆ ಪೂರಕವಾಗಿಯೇ ರಾಜ್ಯ ಸರ್ಕಾರ ತನ್ನ ನೀತಿಗಳನ್ನು ಬದಲಿಸಿಕೊಳ್ಳಬೇಕಿದೆ.

 

ಆದ್ದರಿಂದಲೇ ಹಿಂದೊಮ್ಮೆ ದೇಶದಲ್ಲಿಯೇ ಮಾದರಿಯದಾಗಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ ಮೂಲಕ ವೃತ್ತಿ ಶಿಕ್ಷಣಕ್ಕೆ ಪ್ರವೇಶ ಅವಕಾಶ ವ್ಯವಸ್ಥೆ ಈಗ ದುರ್ಬಲವಾಗಿದೆ. ರಾಜ್ಯದ ಖಾಸಗಿ ವೃತ್ತಿ ಶಿಕ್ಷಣ ಕಾಲೇಜುಗಳು ಆರಂಭಿಸಿದ ಕಾಮೆಡ್-ಕೆ ಪ್ರವೇಶ ಪರೀಕ್ಷೆಯ ಎದುರು ಸರ್ಕಾರದ ಸಿಇಟಿಯ ಮೂಲಕವೂ ಉತ್ತಮ ಕಾಲೇಜುಗಳ ಆಯ್ಕೆಗೆ ವಿದ್ಯಾರ್ಥಿಗಳು ಶ್ರಮಪಡುವಂಥ ಸ್ಥಿತಿ ನಿರ್ಮಾಣವಾಗಿದೆ.

 

ವೈದ್ಯಕೀಯ ಸೀಟು ಮತ್ತು ಎಂಜಿನಿಯರಿಂಗ್ ಸೀಟುಗಳಲ್ಲಿ ಸಿಂಹಪಾಲನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಬಿಟ್ಟು ಕೊಟ್ಟಿದ್ದರೂ ಸರ್ಕಾರಿ ಸೀಟುಗಳನ್ನೂ ವಾಮಮಾರ್ಗದಿಂದ ಲಪಟಾಯಿಸುವ ಖಾಸಗಿ ಶಿಕ್ಷಣ ಸಂಸ್ಥೆಗಳ ಅಕ್ರಮ ನಡವಳಿಕೆಗಳನ್ನು ನಿಯಂತ್ರಿಸಲಾಗದ ಅಸಹಾಯಕತೆ ಸರ್ಕಾರದ್ದಾಗಿದೆ.ಪ್ರತಿವರ್ಷ ಖಾಸಗಿ ಸಂಸ್ಥೆಗಳ ಜೊತೆ ಸೀಟು ಹಂಚಿಕೆ ಅನುಪಾತ ಮತ್ತು ಶುಲ್ಕ ನಿಗದಿ ಕುರಿತ ಒಪ್ಪಂದ ಮಾಡಿಕೊಂಡು ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಬೇಕಾದ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ತಂದುಕೊಂಡಿದೆ. ಈ ಒಪ್ಪಂದದಲ್ಲಿ ಒಮ್ಮೆ ಸರ್ಕಾರಿ ಕೋಟದಲ್ಲಿ ಖಾಸಗಿ ಕಾಲೇಜಿಗೆ ಹಂಚಿಕೆಯಾದ ಸೀಟು ನಂತರ ಕಾರಣಾಂತರದಿಂದ ತೆರವಾದರೂ ಅದನ್ನು ಸರ್ಕಾರವೇ ಮರುಹಂಚಿಕೆ ಮಾಡುವ ಅಧಿಕಾರ ಹೊಂದಿರುವುದನ್ನು ಒಪ್ಪಂದದಲ್ಲಿ ಸೇರಿಸಲು ಇದೀಗ ಸರ್ಕಾರ ಚಿಂತನೆ ನಡೆಸಿದೆ.

 

ಇದು ಸರ್ಕಾರಿ ಕೋಟಾವನ್ನು ಆಡಳಿತ ಮಂಡಲಿಯ ಕೋಟಾದಂತೆ ಪರಿವರ್ತಿಸಿ ಮಾರಿಕೊಳ್ಳುವದನ್ನು ತಡೆಯುವ ಪ್ರಯತ್ನ.ಪ್ರತಿಭಾವಂತ ವಿದ್ಯಾರ್ಥಿಗಳ ಹೆಸರಿನಲ್ಲಿ ಸರ್ಕಾರಿ ಕೋಟಾದಲ್ಲಿ ಸೀಟು ಪಡೆದು, ಅದನ್ನು ಕೊನೆಯ ಗಳಿಗೆಯಲ್ಲಿ ತೆರವು ಮಾಡಿ ಆಡಳಿತ ಮಂಡಲಿಯ ಕೋಟಾದಂತೆ ಪರಿವರ್ತಿಸಿಕೊಳ್ಳುವ ಈ ಅಕ್ರಮ ವ್ಯವಹಾರದಲ್ಲಿ ಆಸಕ್ತ ವಿದ್ಯಾರ್ಥಿಗಳು, ಮಧ್ಯವರ್ತಿಗಳು ಮತ್ತು ಆಡಳಿತ ಮಂಡಲಿಗಳು ಶಾಮೀಲಾಗಿರುವುದರಿಂದ ಸರ್ಕಾರದ ಪ್ರಸ್ತಾಪಕ್ಕೆ ವಿರೋಧ ವ್ಯಕ್ತವಾಗುವ ನಿರೀಕ್ಷೆ ಇದೆ.ಆದರೆ, ಸರ್ಕಾರ ಈ ವಿರೋಧವನ್ನು ದೃಢ ನಿರ್ಧಾರದಿಂದ ಎದುರಿಸಬೇಕಿದೆ. ಒಮ್ಮೆ ಹಂಚಿಕೆಯಾಗಿ ನಂತರ ತೆರವಾಗುವ ಸರ್ಕಾರಿ ಕೋಟಾದ ಎಂಜಿನಿಯರಿಂಗ್ ಸೀಟುಗಳನ್ನು ಡಿಪ್ಲೊಮಾ ಪದವೀಧರರಿಗೆ ಹಂಚಿಕೆ ಮಾಡುವ ಮತ್ತು ವೈದ್ಯಕೀಯ ಸೀಟುಗಳನ್ನು ಸಿಇಟಿ ಕೌನ್ಸೆಲಿಂಗ್‌ನ ಕೊನೆಯ ಹಂತದ ಅಖಿಲ ಭಾರತ ಸುತ್ತಿನಲ್ಲಿ ಹಂಚಿಕೆ ಮಾಡುವ ಪ್ರಸ್ತಾಪಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಒಪ್ಪಿಸಿದರೆ ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಅಕ್ರಮ ದಂಧೆಯನ್ನು ನಿಯಂತ್ರಿಸುವುದು ಸಾಧ್ಯ.

 

ಈ ಅಂಶವನ್ನು ಒಪ್ಪಂದದಲ್ಲಿ ಸೇರಿಸಲು ಖಾಸಗಿ ಶಿಕ್ಷಣ ಸಂಸ್ಥೆಗಳು ನಿರಾಕರಿಸಿದರೂ ಹಾಗೆ ತೆರವಾದ ಸರ್ಕಾರಿ ಕೋಟಾದ ಸೀಟುಗಳನ್ನು ಆಡಳಿತ ಮಂಡಲಿ ಮಾರಿಕೊಂಡರೆ ಅವುಗಳಿಗೆ ಮಾನ್ಯತೆ ನಿರಾಕರಿಸುವ ಧೈರ್ಯವನ್ನಾದರೂ ಸರ್ಕಾರ ಪ್ರದರ್ಶಿಸಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.