ದಿಢೀರ್ ದಾಳಿ: ಯಂತ್ರ ವಶ, ದೂರು ದಾಖಲು

7

ದಿಢೀರ್ ದಾಳಿ: ಯಂತ್ರ ವಶ, ದೂರು ದಾಖಲು

Published:
Updated:

ಗೋಣಿಕೊಪ್ಪಲು: ದಕ್ಷಿಣ ಕೊಡಗಿನ ಲಕ್ಷ್ಮಣ ತೀರ್ಥ ನದಿ ವ್ಯಾಪ್ತಿಯಲ್ಲಿ ಹಲವು ತಿಂಗಳಿನಿಂದ ನಡೆಯುತ್ತಿದ್ದ ಹೈಟೆಕ್ ಮರಳು ದಂಧೆ ವಿರುದ್ಧ ಉಪವಿಭಾಗಾಧಿಕಾರಿ ನೇತೃತ್ವದ ತಂಡ ಗುರುವಾರ ದಾಳಿ ನಡೆಸಿ ಮರಳು ಸಂಗ್ರಹಣೆಗೆ ಬಳಸಿದ್ದ ಅತ್ಯಾಧುನಿಕ ಯಂತ್ರ ಹಾಗೂ ಇತರ ಸಾಮಗ್ರಿಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡರು.ಬಾಳೆಲೆ ಸಮೀಪದ ಮಲ್ಲೂರಿನ ಲಕ್ಷ್ಮಣತೀರ್ಥ ನದಿಯ ದೋಣಿಕಾಡುವಿನಲ್ಲಿ ಮೋಟಾರ್ ಯಂತ್ರ ಬಳಸಿ ಪಂಪ್‌ಸೆಟ್ ಮೂಲಕ ಮರಳು ತೆಗೆಯುತ್ತಿದ್ದರು. ಮರಳನ್ನು ಹೊಳೆಯಿಂದ ನೀರಿನ ಮೂಲಕ ದಡಕ್ಕೆ ಸಾಗಿಸುತ್ತಿದ್ದರು. ಬಳಿಕ ನೀರನ್ನು ಮರಳಿ ಹೊಳೆಗೆ ಕಳುಹಿಸುವ ಹೈಟೆಕ್ ಯಂತ್ರದ ಮೂಲಕ ಸುಮಾರು 300 ಲೋಡ್ ಮರಳು ಸಂಗ್ರಹಿಸಲಾಗಿತ್ತು.ಇದೇ ರೀತಿ ಕೊಟ್ಟಗೇರಿ, ಬೀಳೂರು ಮೊದಲಾದ ಭಾಗಗಳಲ್ಲಿಯೂ ನೂರಾರು ಲೋಡ್‌ಗಳಷ್ಟು ಮರಳು ಸಂಗ್ರಹಿಸಿ ಸಾಗಿಸುತ್ತಿದ್ದರು. ಒಂದು ಲೋಡ್ ಮರಳನ್ನು 2500 ರೂಪಾಯಿಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಇದರ ಸುಳಿವು ಅರಿತ ಉಪವಿಭಾಗಾಧಿಕಾರಿ ಡಾ.ರವಿ ಗುರುವಾರ ಪೊನ್ನಂಪೇಟೆಯಲ್ಲಿ ನಡೆದ ತಾ.ಪಂ.ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಚುನಾವಣೆ ಮುಗಿಸಿ ಅಕ್ರಮ ಮರಳು ದಂಧೆ ಸ್ಥಳಕ್ಕೆ ದಿಢೀರ್ ಭೇಟಿ  ನೀಡಿದರು.ಇವರ ಆಗಮನವನ್ನು ಅರಿತ ಮರಳು ದಂಧೆಕೋರರು ಯಂತ್ರ ಹಾಗೂ ಇತರ ಸಾಮಗ್ರಿಗಳನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದರು. ಎಲ್ಲವನ್ನು ಪರಿಶೀಲಿಸಿದ ಡಾ.ರವಿ ನೇತೃತ್ವದ ತಂಡ ಮರಳು ಸಂಗ್ರಹಕ್ಕೆ ಬಳಸಿದ್ದ ಅಂದಾಜು ರೂ. 4 ಲಕ್ಷ ಮೌಲ್ಯದ  ದೋಣಿ ಮತ್ತು ಪಂಪ್‌ಸೆಟ್‌ನ ಹೈಟೆಕ್ ಯಂತ್ರ, ಪೈಪ್, 2ಲೀಟರ್ ಇಂಧನ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡರು.ಇದೇ ಸಂದರ್ಭದಲ್ಲಿ ಮರಳು ತುಂಬಿಸಿಕೊಂಡು ಬರುತಿದ್ದ ಎರಡು ಲಾರಿಯನ್ನು ಡಾ.ರವಿ ಹಾಗೂ ತಹಶೀಲ್ದಾರ್ ಹನುಮಂತರಾಯಪ್ಪ ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡರು.ಬಳಿಕ ಬೀಳೂರಿನ ಕೊಟ್ಟಗೇರಿ ಲಕ್ಷ್ಮಣ ತೀರ್ಥ ನದಿ ದಡಕ್ಕೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ಅಲ್ಲಿಯೂ ನೂರಾರು ಲೋಡ್ ಮರಳು ಸಂಗ್ರಹಿಸಿದ್ದನ್ನು ವೀಕ್ಷಿಸಿದರು. ಈ ಪ್ರದೇಶದಲ್ಲಿ ಸ್ಥಳೀಯ  ವ್ಯಕ್ತಿಯೊಬ್ಬರು ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿಕೊಂಡು ಮರಳು ದಂಧೆ ನಡೆಸುತ್ತಿರುವ ವಿರುದ್ಧ ಸರ್ಕಾರಿ ಸ್ವತ್ತು ಅತಿಕ್ರಮ ನಿಯಮ 192/ಎ ಪ್ರಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಸೂಕ್ತ ಕ್ರಮಕೈಗೊಳ್ಳುವಂತೆ  ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಾದ ಧನಲಕ್ಷ್ಮಿ ಹಾಗೂ ಚೈತ್ರ ಅವರಿಗೆ ಸೂಚಿಸಿದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ರವಿ ದಕ್ಷಿಣ ಕೊಡಗಿನಲ್ಲಿ ಮರಳು ದಂಧೆ ವ್ಯಾಪಕವಾಗಿ ನಡೆಯುತ್ತಿರುವುದು ತಿಳಿದು ಬಂದಿದೆ. ಸರ್ಕಾರಿ ಸ್ವತ್ತನ್ನು ರಕ್ಷಿಸುವ ನಿಯಮದಡಿಯಲ್ಲಿ ಇಂತಹ ದಂಧೆ  ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುದು ಎಂದರು.ಕಾರ್ಯಾಚರಣೆಯಲ್ಲಿ ತಹಶೀಲ್ದಾರ್ ಹನುಮಂತರಾಯಪ್ಪ, ಡಿವೈಸ್‌ಪಿ ಅಣ್ಣಪ್ಪ ನಾಯಕ, ವೃತ್ತ ನಿರೀಕ್ಷಕ ಪಿ.ವಿ.ವೆಂಕಟೇಶ್, ಸಬ್‌ಇನ್ಸ್‌ಪೆಕ್ಟರ್ ರಾಮರೆಡ್ಡಿ, ಬಾಳೆಲೆ ಕಂದಾಯಾಧಿಕಾರಿ ಚಿಣ್ಣಪ್ಪ, ಗ್ರಾಮ ಲೆಕ್ಕಿಗ ತಮ್ಮಯ್ಯ, ಗ್ರಾಮ ಸಹಾಯಕ ಸುನಿಲ್ ಮತ್ತಿತರರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry