ದಿಢೀರ್ ದಾಳಿ: 36 ವಾಹನ ಜಪ್ತಿ

ಬುಧವಾರ, ಜೂಲೈ 17, 2019
24 °C

ದಿಢೀರ್ ದಾಳಿ: 36 ವಾಹನ ಜಪ್ತಿ

Published:
Updated:

ಚಿತ್ತಾಪುರ:  ತಾಲ್ಲೂಕಿನ ಭಾಗೋಡಿ ಗ್ರಾಮದ ಹತ್ತಿರ ಕಾಗಿಣಾ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಸಾಗಾಟ ಸ್ಥಳಕ್ಕೆ ತಹಸೀಲ್ದಾರ್ ಡಾ.ಎಸ್.ಎಲ್. ವಣಿಕ್ಯಾಳ್ ಬುಧವಾರ ದಿಢೀರ್ ದಾಳಿ ಮಾಡಿದರು. ಈ ಸಂದರ್ಭದಲ್ಲಿ ಹಿಟಾಚಿ, ಲಾರಿ, ಟ್ರ್ಯಾಕ್ಟರ್ ಸೇರಿದಂತೆ ಒಟ್ಟು 36 ವಾಹನಗಳನ್ನು ಜಪ್ತಿ ಮಾಡಿಕೊಂಡರು.ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪರವಾನಿಗೆ ಪಡೆಯದೆ, ಜೆ.ಸಿ.ಪಿ ಹಾಗೂ ಹಿಟಾಚಿ ಬಳಸಿಕೊಂಡು ನದಿಯಲ್ಲಿ ಭಾರಿ ಪ್ರಮಾಣದಲ್ಲಿ ಅಕ್ರಮ ಮರಳು ಸಾಗಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಈ ದಾಳಿ ನಡೆಸಿದರು.ಮರಳು ಸಾಗಾಟ ಮಾಡುತ್ತಿದ್ದ 28 ಲಾರಿ, 6 ಟ್ರ್ಯಾಕ್ಟರ್, ಮರಳು ತುಂಬುತ್ತಿದ್ದ 2 ಹಿಟಾಚಿ ಜಪ್ತಿ ಮಾಡಿಕೊಂಡು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ವಶಕ್ಕೆ ಒಪ್ಪಿಸಿದರು.ನದಿ ಪಾತ್ರದಲ್ಲಿ ಬೆಳೆಯುವ ಜೇಕಿ ಹುಲ್ಲಿನ  ಕೆಳಗೆ ಅವುಚಿಕೊಂಡಿದ್ದ ಮರಳನ್ನು ಹಿಟಾಚಿಯಿಂದ ಅಗೆದು ತೆಗೆಯಲಾಗುತ್ತಿದೆ. ನಂತರ ಅದನ್ನು ಅಕ್ರಮವಾಗಿ ಮಾರಾಟ ಮಾಡುವ ಸ್ಥಳವಾದ ಗುಂಡಗುರ್ತಿ ಕ್ರಾಸ್ ಮಾರ್ಗವಾಗಿ ತೆರಳಲು ನದಿಯಿಂದ ಮರಳು ತುಂಬಿಕೊಂಡು ಬರುತ್ತಿದ್ದ ಅನೇಕ ಲಾರಿ, ಟ್ರ್ಯಾಕ್ಟರ್‌ಗಳನ್ನು ಜಪ್ತಿ ಮಾಡಿಕೊಂಡು ಚಕ್ರದ ಗಾಳಿ ಬಿಟ್ಟು ತಹಸೀಲ್ದಾರ್ ಅಕ್ರಮ ಮರಳು ಸಾಗಾಟದಾರರಿಗೆ ಸರಿಯಾದ ಪಾಠ ಕಲಿಸಿದರು.ಮರಳು ಸಾಗಾಟಕ್ಕೆ ನದಿಯಲ್ಲಿ ಭಾರಿ ಪ್ರಮಾಣದಲ್ಲಿ ತಗ್ಗು ಉಂಟಾಗಿರುವುದನ್ನು ನೋಡಿದ ಅಧಿಕಾರಿಗಳು ಅಚ್ಚರಿ ವ್ಯಕ್ತಪಡಿಸಿದರು.`ಇಷ್ಟೊಂದು ಪ್ರಮಾಣದಲ್ಲಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿದ್ದರೂ ಸಂಬಂಧಿಸಿದ ಇಲಾಖೆಯ ಅಧಿಕಾರಿ ಹೇಗೆ ನೋಡಿಲ್ಲ~ ಎಂದು ಆಶ್ಚರ್ಯ ವ್ಯಕ್ತ ಮಾಡಿದರು.ಘಟನಾ ಸ್ಥಳಕ್ಕೆ ಕಾಳಗಿ ಸರ್ಕಲ್ ಇನ್ಸ್‌ಪೆಕ್ಟರ್ ಪಿ.ಕೆ. ಚೌಧರಿ, ಮಾಡಬೂಳ ಪೊಲೀಸ್ ಠಾಣೆಯ ಎಎಸ್‌ಐ ಸಿದ್ರಾಮಪ್ಪ ಎ. ಸಿಂಗೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಆಸೀಫುಲ್ಲಾ, ಸಹಾಯಕ ಅಭಿಯಂತರ ಮೋಹನ ಬಾರಿಗಿಡದ್ ಆಗಮಿಸಿ ತಹಸೀಲ್ದಾರ್ ನಡೆಸಿದ ದಾಳಿಯಲ್ಲಿ ಪಾಲ್ಗೊಂಡು ಸಾಥ್ ನೀಡಿದರು. ದಾರಿಯಲ್ಲಿ ಗಾಳಿ ಬಿಟ್ಟು ನಿಲ್ಲಿಸಿದ್ದ ಏಳೆಂಟು ಲಾರಿ, ಟ್ರ್ಯಾಕ್ಟರ್ ಮರಳನ್ನು ದಾರಿಯಲ್ಲಿಯೇ ಖಾಲಿ ಮಾಡಿ ವಾಹನ ತೆಗೆದುಕೊಂಡು ಚಾಲಕರು ಪರಾರಿಯಾದ ಘಟನೆಯೂ ನಡೆಯಿತು.ಜಪ್ತಿ ಮಾಡಿಕೊಂಡ ವಾಹನಗಳನ್ನು ಸಂಖ್ಯೆ ಸಮೇತವಾಗಿ ತಹಸೀಲ್ದಾರ್ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ವರದಿ ನೀಡಿದರು.ಕಂದಾಯ ನಿರೀಕ್ಷಕರಾದ ಮಲ್ಲಿಕಾರ್ಜುನರೆಡ್ಡಿ, ಸೂರ್ಯನಾರಾಯಣ, ಗ್ರಾಮ ಲೇಖಪಾಲಕರಾದ ಪ್ರಕಾಶ ದಂಡೋತಿ, ಜೆಟ್ಟೆಪ್ಪ, ಕೊಟ್ರೇಶ್, ವಸಂತಮೂರ್ತಿ, ಸರ್ವರಮಿಯ್ಯಾ ದಾಳಿಯಲ್ಲಿ ಪಾಲ್ಗೊಂಡಿದ್ದರು.ದಾಳಿ ನಂತರ `ಪ್ರಜಾವಾಣಿ~ಗೆ ಮಾತನಾಡಿದ ತಹಸೀಲ್ದಾರ್ ಡಾ.ಎಸ್.ಎಲ್. ವಣಿಕ್ಯಾಳ್, ಕಾಗಿಣಾ ನದಿ ಪಾತ್ರದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುವುದನ್ನು ಗಂಭೀರವಾಗಿ ಪರಿಗಣಿಸಿದ್ದು ದಾಳಿ   ನಡೆಸುವ ಕಾರ್ಯ ನಿರಂತರ ಮುಂದುವರಿಯುತ್ತದೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry