ದಿಢೀರ್ ನಾಯಕತ್ವ ಬದಲಾವಣೆ

7

ದಿಢೀರ್ ನಾಯಕತ್ವ ಬದಲಾವಣೆ

Published:
Updated:

ಬೆಂಗಳೂರು: ವೇಗಿ ಜೂಲನ್ ಗೋಸ್ವಾಮಿ ಅವರನ್ನು ಭಾರತ ಮಹಿಳಾ ತಂಡದ ನಾಯಕತ್ವದಿಂದ ಕೆಳಗಿಳಿಸಿ ಎರಡು ವರ್ಷಗಳಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಆಡದ ಅಂಜುಮ್ ಚೋಪ್ರಾ ಅವರಿಗೆ ದಿಢೀರ್‌ನೇ ಸಾರಥ್ಯ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.ಈ ತಿಂಗಳ ಅಂತ್ಯದಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಆರಂಭವಾಗಲಿರುವ ಟ್ವೆಂಟಿ-20 ಹಾಗೂ ಏಕದಿನ ಸರಣಿಗೆ ತಂಡ ಪ್ರಕಟಿಸಿರುವ ಬಿಸಿಸಿಐ ರಾಷ್ಟ್ರೀಯ ಮಹಿಳಾ ಆಯ್ಕೆ ಸಮಿತಿಯು ಈ ತುರ್ತು ನಿರ್ಧಾರ ತೆಗೆದುಕೊಂಡಿದೆ.ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡಲಾರೆ. ಬೇರೆ ಪ್ರಶ್ನೆಗಳಿದ್ದರೆ ಕೇಳಿ ಮಾತನಾಡುತ್ತೇನೆ~ ಎಂದು ನಾಯಕತ್ವ ಕಳೆದುಕೊಂಡ ಜೂಲನ್ `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದ್ದಾರೆ.ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿ ಕಳೆದ 10 ದಿನಗಳಿಂದ ನಡೆದ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದ ಆಟಗಾರ್ತಿಯರು ಜೂಲನ್ ಅವರ ಮಾರ್ಗದರ್ಶನದಲ್ಲೇ ಅಭ್ಯಾಸ ನಡೆಸಿದ್ದರು. ಆದರೆ ತಂಡ ಪ್ರಕಟಿಸುವ ವೇಳೆ ನಾಯಕತ್ವವನ್ನು ಬದಲಿಸಲಾಗಿದೆ.ಈ ಸಂಬಂಧ ಪತ್ರಿಕೆಗೆ ಪ್ರತಿಕ್ರಿಯಿಸಿದ ಕೋಚ್ ಅಂಜು ಜೈನ್, `ಈ ನಿರ್ಧಾರದ ಬಗ್ಗೆ ನಮಗೂ ಗೊತ್ತಾಗಿದ್ದು ತಂಡ ಆಯ್ಕೆ ಮಾಡಿದ ಮೇಲೆ. ಆಯ್ಕೆ ಸಮಿತಿ ಸಭೆಯಲ್ಲಿ ನಾನು ಪಾಲ್ಗೊಂಡಿರಲಿಲ್ಲ. ಆಹ್ವಾನ ಕೂಡ ಇರಲಿಲ್ಲ. ಆದರೆ ತಂಡದಲ್ಲಿ ಯಾವುದೇ ವಿವಾದ ಇಲ್ಲ~ ಎಂದರು.114 ಏಕದಿನ ಪಂದ್ಯ ಹಾಗೂ 18 ಟ್ವೆಂಟಿ-20 ಪಂದ್ಯಗಳಲ್ಲಿ ಆಡಿರುವ 28 ವರ್ಷ ವಯಸ್ಸಿನ ಜೂಲನ್ ಮೂರು ವರ್ಷಗಳಿಂದ ತಂಡ ಮುನ್ನಡೆಸುತ್ತ್ದ್ದಿದರು. ಇತ್ತೀಚೆಗಷ್ಟೇ ಪದ್ಮಶ್ರೀ ಪ್ರಶಸ್ತಿಗೆ ಅವರು ಭಾಜನರಾಗ್ದ್ದಿದಾರೆ.

ಮತ್ತೆ ತಂಡ ಮುನ್ನಡೆಸುವ ಅವಕಾಶ ಲಭಿಸಿದ್ದಕ್ಕೆ ಅಂಜುಮ್ ಖುಷಿ ವ್ಯಕ್ತಪಡಿಸಿದ್ದಾರೆ. `ತಂಡ ಪ್ರಕಟಿಸಿದ ದಿನವಷ್ಟೇ ನನಗೆ ನಾಯಕತ್ವ ಜವಾಬ್ದಾರಿ ನೀಡಿದ್ದಾರೆ ಎಂಬುದು ಗೊತ್ತಾಯಿತು. ಆಯ್ಕೆದಾರರು ನನ್ನ ಮೇಲೆ ಮತ್ತೊಮ್ಮೆ ಭರವಸೆ ಇಟ್ಟು ಈ ನಿರ್ಧಾರ ಕೈಗೊಂಡಿದ್ದಾರೆ. ಅವರಿಟ್ಟ ಭರವಸೆ ಉಳಿಸಿಕೊಳ್ಳುತ್ತೇನೆ~ ಎಂದು ಅವರು ನುಡಿದರು.35 ವರ್ಷ ವಯಸ್ಸಿನ ಅಂಜುಮ್ 121 ಏಕದಿನ ಪಂದ್ಯ ಹಾಗೂ 8 ಟ್ವೆಂಟಿ-20 ಆಡಿದ್ದಾರೆ. ಆದರೆ ಅವರು ಕೊನೆಯ ಏಕದಿನ ಪಂದ್ಯ ಆಡಿದ್ದು 2010ರ ಮಾರ್ಚ್‌ನಲ್ಲಿ. ಈಗ ತಂಡಕ್ಕೆ ವಾಪಸಾಗಿರುವ ಅವರು ಇನ್ನು ಒಂದೂ ಪಂದ್ಯ ಆಡಿಲ್ಲ. ಅವರು ಮೂರು ವರ್ಷಗಳ ಹಿಂದೆ ಕೂಡ ತಂಡವನ್ನು ಮುನ್ನಡೆಸಿದ್ದರು.ಈ ಬದಲಾವಣೆಗೆ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ. `ಈಗ ಉಪನಾಯಕಿ ಆಗಿರುವ ಮಿಥಾಲಿ ರಾಜ್ ಅವರನ್ನೇ ನಾಯಕಿಯನ್ನಾಗಿ ನೇಮಿಸಬಹುದಿತ್ತು. ಆದರೆ ತಂಡದ ಆಡಳಿತ ಏಕೆ ಈ ಬದಲಾವಣೆ ಮಾಡಿದೆ ನನಗೆ ಗೊತ್ತಿಲ್ಲ~ ಎಂದಿದ್ದಾರೆ.`ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಅಂಜುಮ್ ಸಾಧನೆ ಅಷ್ಟಕಷ್ಟೇ. ಒಮ್ಮೆ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಆದರೆ ಜೂಲನ್ ಕೂಡ ತಂಡದ ಸಾರಥ್ಯ ವಹಿಸಲು ಸೂಕ್ತ ವ್ಯಕ್ತಿ ಅಲ್ಲ. ಅದೇನೇ ಇರಲಿ. ಭಾರತ ತಂಡ ಉತ್ತಮ ಪ್ರದರ್ಶನ ತೋರಬೇಕು~ ಎಂದು ಶಾಂತಾ ಹೇಳಿದರು.  `ಈ ದಿಢೀರ್ ಬದಲಾವಣೆ ಏಕೆ ಎಂಬುದು ನನಗೆ ಗೊತ್ತಿಲ್ಲ. ಬೇರೆ ಕಾರಣಗಳು ಇದ್ದರೂ ಇರಬಹುದು. ಆದರೆ ಅಂಜುಮ್ ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಜೊತೆಗೆ ಹಿರಿಯ ಹಾಗೂ ಅನುಭವಿ ಆಟಗಾರ್ತಿ. ಈ ಕಾರಣ ಅವರಿಗೆ ಸಾರಥ್ಯ ನೀಡಿರಬಹುದು~ ಎಂದು ಮಾಜಿ ನಾಯಕಿ ಮಮತಾ ಮಾಬೆನ್ ನುಡಿದಿದ್ದಾರೆ.`ಎರಡು ವರ್ಷಗಳಿಂದ ಜೂಲನ್ ನಾಯಕತ್ವದಲ್ಲಿ ಭಾರತ ಹೇಳಿಕೊಳ್ಳುವಂತಹ ಪ್ರದರ್ಶನ ತೋರಿಲ್ಲ. ಹಾಗೇ, ಅವರ ವೈಯಕ್ತಿಕ ಪ್ರದರ್ಶನದಲ್ಲಿ ಕೂಡ ಕುಸಿತ ಕಂಡಿದೆ. ಈ ಕಾರಣ ಆಯ್ಕೆದಾರರು ಬದಲಾವಣೆಗೆ ಮುಂದಾಗಿರಬಹುದು~ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ಕೆರಿಬಿಯನ್ ನಾಡಿನ ಒಂದು ತಿಂಗಳ ಪ್ರವಾಸದ ಅವಧಿಯಲ್ಲಿ  ಭಾರತ ಮೂರು ಏಕದಿನ ಹಾಗೂ ಐದು ಟ್ವೆಂಟಿ-20 ಪಂದ್ಯಗಳ ಸರಣಿ ಆಡಲಿದೆ. ಭಾರತ ತಂಡದವರು ಫೆಬ್ರುವರಿ 15ರಂದು ಕೆರಿಬಿಯನ್ ನಾಡಿಗೆ ತೆರಳಲಿದ್ದಾರೆ. ಏಕದಿನ ಸರಣಿ ಫೆ.29ರಂದು ಆರಂಭವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry