ದಿಢೀರ್ ನಾಯಕರಿಂದ ಸಮಾಜಕ್ಕೆ ಉಪಯೋಗವಿಲ್ಲ

7

ದಿಢೀರ್ ನಾಯಕರಿಂದ ಸಮಾಜಕ್ಕೆ ಉಪಯೋಗವಿಲ್ಲ

Published:
Updated:
ದಿಢೀರ್ ನಾಯಕರಿಂದ ಸಮಾಜಕ್ಕೆ ಉಪಯೋಗವಿಲ್ಲ

ಶಿವಮೊಗ್ಗ: ಪ್ರಚಾರದ ಮೂಲಕ ದಿಢೀರ್ ಉದ್ಭವವಾಗುವ ನಾಯಕರಿಂದ ನಡೆಯುವ ಯಾವುದೇ ಹೋರಾಟದಿಂದ ಸಮಾಜಕ್ಕೆ ಉಪಯೋಗವಿಲ್ಲ. ನಿರಂತರ ಹೋರಾಟದ ಮೂಲಕ ಹೊರಹೊಮ್ಮುವ ನಾಯಕನಿಂದ ಮಾತ್ರ ಸಾಮಾಜಿಕ ಚಳವಳಿ ಯಶಸ್ವಿಯಾಗಲು ಸಾಧ್ಯ ಎಂದು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಅಭಿಪ್ರಾಯಪಟ್ಟರು.ನಗರದ ಸಹ್ಯಾದ್ರಿ ಕಲಾ ಕಾಲೇಜಿನ ಸಿಎನ್‌ಆರ್ ರಾವ್ ಸಭಾಂಗಣದಲ್ಲಿ ಶುಕ್ರವಾರ ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ವಿಭಾಗ ಹಮ್ಮಿಕೊಂಡಿದ್ದ ಮೂರು ದಿನಗಳ ಸಾಮಾಜಿಕ ಚಳವಳಿಗಳು ಕುರಿತ ಅಲ್ಪಾವಧಿ ಅಧ್ಯಯನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ಇಂದಿನ ದಿನಗಳಲ್ಲಿ ಪ್ರಚಾರದಿಂದಾಗಿ ರಾತ್ರೋರಾತ್ರಿ ನಾಯಕರಾಗುತ್ತಿದ್ದು, ಅಂತಹವರಿಂದ ಯಾವುದೇ ನ್ಯಾಯಯುತ ಹೋರಾಟ ಅಸಾಧ್ಯ ಎಂದ ಅವರು, ಇಂದಿನ ಯುವಶಕ್ತಿ ಚೈತನ್ಯಶೀಲತೆ ಕಳೆದುಕೊಂಡು ಜಡತ್ವದತ್ತ ಸಾಗುತ್ತಿದೆ. ಇದಕ್ಕೆ ವಿದ್ಯಾರ್ಥಿಗಳ ಅಧ್ಯಯನಶೀಲತೆಯ ಕೊರತೆ ಹಾಗೂ ನಿರ್ದಿಷ್ಟವಾದ ಸಾಮಾಜಿಕ ಗುರಿ ಹೊಂದದೇ, ವೈಯಕ್ತಿಕ ಸಾಧನೆಯೇ ಪ್ರಮುಖವಾಗುತ್ತಿರುವುದು ಕಾರಣ ಎಂದು ವಿಶ್ಲೇಷಿಸಿದರು.ಸಮಾಜದಲ್ಲಿ ಇಂದು ಅಗಾಧವಾದ ಸಮಸ್ಯೆಗಳಿದ್ದು, ಅವುಗಳ ಪರಿಹಾರದ ಕುರಿತ ಚಡಪಡಿಕೆ ಯುವ ಸಮೂಹದಲ್ಲಿ ಕಡಿಮೆಯಾಗುತ್ತಿದೆ. ಹೋರಾಟ ನಮ್ಮ ಪರಿಸರದ ಪ್ರಭಾವದಿಂದ ರೂಪಗೊಳ್ಳಬೇಕು. ಅನ್ಯಾಯವನ್ನು ಖಂಡಿಸುವ ಮನೋಭಾವ ಇದ್ದಾಗ ಮಾತ್ರ ಹೋರಾಟ ಸಾಧ್ಯ. ಆದರೆ, 80ರ ದಶಕದಲ್ಲಿ ವಿದ್ಯಾರ್ಥಿಗಳಲ್ಲಿ ಕಂಡುಬರುತ್ತಿದ್ದ ಹೋರಾಟದ ಕಿಚ್ಚು ಇಂದಿನ ಸಮೂಹದಲ್ಲಿ ಎಳ್ಳಷ್ಟೂ ಇಲ್ಲ ಎಂಬುದು ವಿಷಾದನೀಯ ಎಂದರು.ಇಂದು ಶಿಕ್ಷಣ ಕೂಡಾ ಕೇವಲ `ಮಾರ್ಕ್ಸ್ ಓರಿಯೆಂಟೆಡ್~ ಆಗುತ್ತಿದ್ದು, ಅದು ಕಾರ್ಲ್‌ಮಾರ್ಕ್ಸ್ ಓರಿಯೆಂಟೆಡ್ ಆದಾಗ ಮಾತ್ರ ಸಾಮಾಜಿಕ ಚಳವಳಿ ಉಂಟಾಗಬಹುದು ಎಂದರು.ತಾತ್ವಿಕ ನೆಲೆಗಟ್ಟಿನಲ್ಲಿ ಹಾಗೂ ನಿರ್ದಿಷ್ಟವಾದ ಆದರ್ಶಗಳನ್ನು ಹೊಂದದೇ ಇರುವ ಯುವ ಸಮೂಹ ಹೆಚ್ಚು ಸ್ವಾರ್ಥಪರವಾಗುತ್ತಿದ್ದು, ಹಣ ಸಂಪಾದನೆಯೇ ಗುರಿಯಾಗಿ ವಿದ್ಯಾರ್ಥಿಗಳು ಹಣದ ಮೂಲಕ ಅಳೆದುಕೊಳ್ಳುವಂತಹ ವಸ್ತುಗಳಾಗುತ್ತಿದ್ದಾರೆ ಎಂದ ಅವರು, ಶಿಕ್ಷಣ ಸೇರಿದಂತೆ ಎಲ್ಲಾ ರೀತಿಯ ಋಣಗಳು ತಮ್ಮ ಮೇಲಿವೆ ಎಂಬುದನ್ನು ಯುವಜನತೆ ಅರಿತುಕೊಳ್ಳಬೇಕಿದೆ ಎಂದರು.ಶಿವಮೊಗ್ಗ ಹೋರಾಟದ ನೆಲೆ. ಅಂದು ಅಕ್ಕಮಹಾದೇವಿಯಂತಹ ದಾರ್ಶನಿಕರಿಂದ ಆರಂಭಿಸಿ ಇಂದಿನವರೆಗೂ ನೂರಾರು ಸೆಲೆಗಳಲ್ಲಿ ಹೋರಾಟ ಅನಾವರಣಗೊಂಡಿದೆ. ಎಡಪಂಥೀಯ, ಬಲಪಂಥೀಯ ಹೋರಾಟಗಳು ಸಹ ನಡೆದಿವೆ ಎಂದ ಅವರು, ತಾತ್ವಿಕ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಪ್ರಶ್ನಿಸುವ ಮನೋಭಾವ ಬಿಟ್ಟುಕೊಡಬಾರದು ಎಂದರು.ಕಾಲೇಜು ಪ್ರಾಂಶುಪಾಲ ಡಾ.ಬಿ.ಎಸ್. ಮಹಾದೇವಯ್ಯ, ಮಾಜಿ ಶಾಸಕ ಬಿ. ಸ್ವಾಮಿರಾವ್, ರೈತ ಮುಖಂಡ ಕೆ.ಟಿ. ಗಂಗಾಧರ್, ಉಪನ್ಯಾಸಕರಾದ ಪ್ರೊ.ಕೆ. ಚಂದ್ರಶೇಖರ್, ಜಿ.ಎಸ್. ಸದಾನಂದ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಪವಿತ್ರಾ ಪ್ರಾರ್ಥಿಸಿದರು. ಡಾ.ಎಂ.ಎಚ್. ಪ್ರಹ್ಲಾದಪ್ಪ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry