ದಿಢೀರ್ ಮಳೆ ಜಿಲ್ಲೆಯ ಹಲವೆಡೆ ಹಾನಿ

7

ದಿಢೀರ್ ಮಳೆ ಜಿಲ್ಲೆಯ ಹಲವೆಡೆ ಹಾನಿ

Published:
Updated:
ದಿಢೀರ್ ಮಳೆ ಜಿಲ್ಲೆಯ ಹಲವೆಡೆ ಹಾನಿ

ದಾವಣಗೆರೆ: ಜಿಲ್ಲೆಯಲ್ಲಿ ಗುರುವಾರ ಸಂಜೆ ಸುರಿದ ಮಳೆ, ಹಲವೆಡೆ ಹಾನಿ ಸೃಷ್ಟಿಸಿದೆ. ನಗರದ ಯುಬಿಡಿಟಿ ಕಾಲೇಜು ಮುಂಭಾಗ ಮರದ ದೊಡ್ಡ ಕೊಂಬೆಯೊಂದು ಬಿದ್ದು ಸಂಚಾರಕ್ಕೆ ಅಡ್ಡಿ ಉಂಟು ಮಾಡಿತು. ಎಸ್.ಎಂ. ಕೃಷ್ಣ ನಗರದ ಮನೆಯೊಂದರ ಛಾವಣಿ ಗಾಳಿಗೆ ಹಾರಿಹೋಗಿ ಮರಿಯಮ್ಮ ಎಂಬುವರಿಗೆ ಗಾಯಗಳಾಗಿವೆ. ಐಟಿಐ ಕಾಲೇಜು ಮುಂಭಾಗ ವಿದ್ಯುತ್ ಕಂಬಗಳು ಬಿದ್ದು, ವಿದ್ಯುತ್ ಪೂರೈಕೆಯಲ್ಲಿ ಕೆಲವೆಡೆ ವ್ಯತ್ಯಯ ಉಂಟಾಗಿದೆ. ಕೊಡಗನೂರು ಭಾಗದಲ್ಲಿ ವಿದ್ಯುತ್ ಕೈಕೊಟ್ಟಿದ್ದು ಕತ್ತಲು ಆವರಿಸಿದೆ.ಸಂಜೆ ವೇಳೆಗೆ ಬಿರುಗಾಳಿಸಹಿತ ಸುರಿದ ಮಳೆಗೆ ದಾವಣಗೆರೆ ತಾಲ್ಲೂಕಿನ ರಾಂಪುರದಲ್ಲಿ ಈಶ್ವರಪ್ಪ ಎಂಬುವರ ಮನೆ ಮೇಲೆ ಬೇವಿನ ಮರ ಬಿದ್ದು ಹಾನಿ ಸಂಭವಿಸಿದೆ. ಹೆದ್ನೆಯಲ್ಲಿ ದಿವಾಕರ್ ಎಂಬುವರಿಗೆ ಸೇರಿದ ಗೋಡೌನ್‌ನ ಛಾವಣಿಗೆ ಹಾನಿಯಾಗಿದೆ.ಇದು ನಿರೀಕ್ಷಿತ ಮುಂಗಾರುಪೂರ್ವ ಮಳೆ ಆಗಿದ್ದು, ಇದರಿಂದ ಭತ್ತದ ಬೆಳೆಗೆ ಒಳ್ಳೆಯದು, ಕಂದುಜಿಗಿ ಹುಳು ಬಾಧೆ ನಿಯಂತ್ರಣಕ್ಕೆ ಬರುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕ ಆರ್.ಜಿ. ಗೊಲ್ಲರ್ ತಿಳಿಸಿದರು.ಕಬಡ್ಡಿ ಪಂದ್ಯಾಟ ರದ್ದು: ಶಾಮನೂರಿನಲ್ಲಿ ಹಮ್ಮಿಕೊಳ್ಳಲಾದ ‘ಅಸೋಸಿಯೇಷನ್ ಕಪ್ ಸ್ಫೂರ್ತಿ-2011’ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟವನ್ನು ಮಳೆಯ ಕಾರಣದಿಂದ ರದ್ದು ಮಾಡಲಾಗಿದೆ. ಈ ಪಂದ್ಯಗಳು ಶುಕ್ರವಾರ ಬೆಳಿಗ್ಗೆ 8ಕ್ಕೆ ನಡೆಯಲಿವೆ ಎಂದು ಸಂಘಟಕರು ತಿಳಿಸಿದ್ದಾರೆ.ಮಳೆಯಿಂದ ಪುಳಕ

ಹರಿಹರ: ಬಿರು-ಬಿಸಿಲಿನಿಂದ ಬಳಲಿ ಬೆಂಡಾದ ನಗರಕ್ಕೆ ಗುರುವಾರ ಸಂಜೆ 5.30ಕ್ಕೆ ಇದ್ದಕ್ಕಿಂದಂತೆ ಗಾಳಿ, ಧೂಳು ಎದ್ದು ಮೋಡ ಕವಿದು ಕತ್ತಲು ಕವಿಯಿತು. ಇದರ ಹಿಂದೆಯೇ ವರ್ಷದ ಮೊದಲ ಮುಸಲಧಾರೆ ಖಡ್-ಖಡ್.. ಖಡಲ್... ಎಂಬ ಕಿವಿಗಡಚಿಕ್ಕುವ ಶಬ್ಧ ಹಾಗೂ ಕಣ್ಣ್ ಕೊರೈಸುವ ಮಿಂಚಿನ ಬೆಳಕಿನಲ್ಲಿ ಧರೆಗಿಳಿಯಿತು.ಮಳೆಯಿಂದ ಪುಳಕಗೊಂಡ ವ್ಯಾಪಾರಸ್ತರು ಅಂಗಡಿಯ ಹೊರಗಿಟ್ಟ ಮಾರಾಟದ ಸಾಮಗ್ರಿಗಳು ಮಳೆಯಲ್ಲಿ ನೆನೆಯುತ್ತಿದ್ದರೂ ಲೆಕ್ಕಿಸದೇ ಮೊದಲ ಮಳೆಯಿಂದ ಎದ್ದ ಮಣ್ಣಿನ ಕಂಪು ಹಾಗೂ ತಂಗಾಳಿಯನ್ನು ಆಸ್ವಾದಿಸುತ್ತಿದ್ದರು. ಮಳೆಯಿಂದ ವ್ಯಾಪಾರ ಸ್ಥಗಿತಗೊಂಡಿತು ಎಂದು ಗೊಣಗಾಡಿದರೂ, ಮಳೆಯಿಂದಾಗಿ ಉತ್ತಮ ಬೆಳೆ ಬಂದು ವರ್ಷಪೂರ್ತಿ ಒಳ್ಳೆಯ ವ್ಯಾಪಾರವಾಗಬಹುದು ಎಂದು ಸಮಾಧಾನಪಟ್ಟಕೊಂಡರು. ಬೇಸಿಗೆ ರಜವೆಂದು ಮನೆಯಿಂದ ಹೊರಗೆ ಆಟವಾಡುತ್ತಿದ್ದ ಮಕ್ಕಳು ಮಳೆಯನ್ನು ಸವಿದರು.ಮಳೆಯ ಆರ್ಭಟಕ್ಕೆ ಬೆದರಿದ ಬೆಸ್ಕಾಂ ಇದೇ ನೆವ ಮಾಡಿಕೊಂಡು ವಿದ್ಯುತ್ ಕಡಿತಗೊಳಿಸಿದರು. ವಿದ್ಯುತ್ ಕಡಿತಗೊಂಡರೂ, ಮಳೆಯಿಂದಾಗಿ ತಂಪಾಗಿ ಬೀಸುತ್ತಿದ್ದ ಗಾಳಿಯಿಂದ ಮೈಮರೆತ ಬೆಸ್ಕಾಂ ಗ್ರಾಹಕರು ಬೆಸ್ಕಾಂನ ಕಾರ್ಯವನ್ನು ಶಪಿಸುವುದನ್ನು ಮರೆತರು. ಎಲ್ಲರೂ ದಿಢೀರ್ ಸುರಿದ ಮಳೆಯಿಂದ ಸಂತಸಗೊಂಡರು.ಸಂಜೆ ಮಳೆ: ಸಂತೆ ಹಾಳು

ಮಲೇಬೆನ್ನೂರು: ಹೋಬಳಿ ವ್ಯಾಪ್ತಿಯಲ್ಲಿ ಗುರುವಾರ ಸಂಜೆ ಬಿರುಗಾಳಿ ಧೂಳು, ಸಿಡಿಲು ಗುಡುಗು, ಮಿಂಚು ಆಲಿಕಲ್ಲು ಸಹಿತ ಒಂದು ಗಂಟೆಗೂ ಹೆಚ್ಚು ಬಿರುಮಳೆ ಸುರಿಯಿತು.

ಪರಿಣಾಮ ಮೋರಿಗಳು ಉಕ್ಕಿಹರಿದು ಸ್ವಚ್ಛವಾದವು. ಖರ ಸಂವತ್ಸರದ ಮೊದಲ ಅಶ್ವಿನಿ ಮಳೆ ರೈತರಲ್ಲಿ ಹರ್ಷ ಮೂಡಿಸಿದೆ.  ಬೇಸಿಗೆ ಬಿಸಿಲಿನಿಂದ ತತ್ತರಿಸಿದ್ದ ಜನತೆಗೆ ವಾತಾವರಣ ತಂಪೆರೆಯಿತು. ಹಾನಿಯ ವಿವರ ತಿಳಿದುಬಂದಿಲ್ಲ. ಎರಡು ಬಲವಾದ ಸಿಡಿಲು ಹೊಡೆದಾಗ ಜನತೆ ಹೆದರಿದರು.

ಹಾಳಾದ ಸಂತೆ: ವಾರದ ಸಂತೆಗೆ ಆಗಮಿಸಿದ್ದ ಜನತೆ ತರಾತುರಿಯಲ್ಲಿ ವ್ಯಾಪಾರ ಮುಗಿಸಿ ಮಳೆಯಲ್ಲಿ ತೆರಳಿದರು. ಮಳೆ ಗಾಳಿ ಹೆಚ್ಚಾದ ಪರಿಣಾಮ ಟೆಂಟ್ ಹಾರಿಹೋದವು, ಕಿರಾಣಿ ಸಾಮಾನುಗಳು, ಬಯಲಿನಲ್ಲಿಟ್ಟ ತರಕಾರಿ ತೇಲಿ ಹೋದವು.ಸಂಜೆ ಸಂತೆಗೆ ಬಂದ ಕೂಲಿ ಕಾರ್ಮಿಕರು ಸಂತೆಯಲ್ಲಿ ಕೊಳ್ಳಲು ಪರದಾಡುತ್ತಿದ್ದರು. ಅಳಿದುಳಿದ ವಸ್ತು ಗಳನ್ನು ಕಡಿಮೆ ಬೆಲೆಗೆ ಮಾರಿಕೊಂಡು ಮಳೆಗೆ ಶಪಿಸುತ್ತಾ ಹೋದರು.

ವಿದ್ಯುತ್ ಪೂರೈಕೆ ಸ್ಥಗಿತವಾಗಿತ್ತು. ಸಿಡಿಲು ಕೋಲ್ಮಿಂಚಿನ ಹೊಡೆತಕ್ಕೆ 10ಕ್ಕೂ ಹೆಚ್ಚು ಟಿವಿ, ಡಿಟಿಎಚ್ ಸೆಟ್ ಹಾಗೂ ವಿದ್ಯುತ್ ದೀಪ ಹಾನಿಗೊಂಡಿವೆ ಎಂದು ತಿಳಿದುಬಂದಿದೆ.

ಸಂಜೆ ಮಳೆ ಬಂದ ವೇಳೆ ರಸ್ತೆ ಸರಿಯಾಗಿ ಕಾಣದೆ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ವಿಭಜಕದ ಮಧ್ಯೆ ಸಿಕ್ಕಿಹಾಕಿಕೊಂಡಿತ್ತು. ಸುತ್ತಮುತ್ತಲ ಜನತೆ ಸಹಾಯದಿಂದ ತೆರವು ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry