ದಿಢೀರ್ ರಸ್ತೆ ತಡೆ, ಜನರ ಪರದಾಟ

7

ದಿಢೀರ್ ರಸ್ತೆ ತಡೆ, ಜನರ ಪರದಾಟ

Published:
Updated:

ಹುಬ್ಬಳ್ಳಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲು ಧಾರವಾಡ ಜಿಲ್ಲಾ ಪೌರ ಕಾರ್ಮಿಕರು ನಗರದ ಹೃದಯ ಭಾಗವಾದ ಚನ್ನಮ್ಮ ವೃತ್ತದಲ್ಲಿ ಬುಧವಾರ ಸಂಜೆ ದಿಢೀರ್ ರಸ್ತೆ ತಡೆ ನಡೆಸಿದ ಪರಿಣಾಮ ಆ ಪ್ರದೇಶದಲ್ಲಿ ಅಕ್ಷರಶಃ ವಾಹನ ಸಂಚಾರ ಎರಡು ತಾಸು ಸಂಪೂರ್ಣ ಸ್ಥಗಿತವಾಗಿ ಸಾರ್ವಜನಿಕರು ತೀವ್ರ ತೊಂದರೆಗೆ ಒಳಗಾದರು.



ಸಂಜೆ 5.45ಕ್ಕೆ ಪ್ರತಿಭಟನೆ ಆರಂಭವಾಗಿದ್ದರಿಂದ ಕಚೇರಿಯಿಂದ ಮನೆಗೆ ತೆರಳಬೇಕಾದ ನೌಕರರು, ಬಸ್ ಪ್ರಯಾಣಿಕರು, ದ್ವಿಚಕ್ರ ವಾಹನ ಸವಾರರು, ಆಸ್ಪತ್ರೆಗೆ ಹೊರಟವರು,  ಹೀಗೆ ಸಾವಿರಾರು ಜನರು ಎರಡು ಗಂಟೆ ರಸ್ತೆಯಲ್ಲಿ ಕಳೆದು ಪ್ರತಿಭಟನಾಕಾರರು ಹಾಗೂ ಪೊಲೀಸರನ್ನು ಶಪಿಸಿದರು.



ಪ್ರತಿಭಟನೆಯ ಮಾಹಿತಿ ಗೊತ್ತಾಗಿ ಸ್ಥಳಕ್ಕೆ ಬಂದ ಉಪನಗರ ಠಾಣೆ ಇನ್‌ಸ್ಪೆಕ್ಟರ್ ಶ್ರೀನಿವಾಸ್, ಪ್ರತಿಭಟನಾಕಾರರ ಮನವೊಲಿಸಲು ಒಂದು ಗಂಟೆ ಕಾಲ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ.



ಕೊನೆಗೆ ಸ್ಥಳಕ್ಕೆ ಆಗಮಿಸಿದ ಡಿಸಿಪಿ ಎಂ.ಎಸ್.ಪ್ರತಾಪನ್ ಹಾಗೂ ಎಸಿಪಿ ಎ.ಆರ್.ಬಡಿಗೇರ ಒಂದು ಗಂಟೆ ಕಾಲ ಸಂಧಾನ ನಡೆಸಿ ಪ್ರತಿಭಟನಾಕಾರರನ್ನು ರಾತ್ರಿ 7.45ರ ವೇಳೆಗೆ ಚೆನ್ನಮ್ಮ ವೃತ್ತದಿಂದ ಮಾತುಕತೆಗಾಗಿ ಮಹಾನಗರ ಪಾಲಿಕೆ ಆವರಣಕ್ಕೆ ಕರೆದೊಯ್ದ ನಂತರವಷ್ಟೇ ವಾಹನ ಸಂಚಾರ ಆರಂಭವಾಯಿತು.



ಪ್ರತಿಭಟನೆಯ ವೇಳೆ ಕಿಡಿಗೇಡಿಯೊಬ್ಬ ಎಸೆದ ಇಟ್ಟಿಗೆ ತುಂಡು ನ್ಯಾನೊ ಕಾರೊಂದಕ್ಕೆ ತಗುಲಿತು. ಹುಬ್ಬಳ್ಳಿಯ ಆಸ್ಪತ್ರೆಯೊಂದರಿಂದ ದಾವಣಗೆರೆಗೆ ಸ್ಕ್ಯಾನಿಂಗ್ ವರದಿಯೊಂದನ್ನು ತುರ್ತಾಗಿ ಒಯ್ಯಬೇಕಿದ್ದ ಬಳ್ಳಾರಿಯ ರವಿ ಹಂಪಸಾಗರ ಎಂಬುವವರು ತಾವು ಪ್ರಯಾಣಿಸುತ್ತಿದ್ದ ಬಸ್‌ಗೆ ಜಾಗ ಬಿಡುವಂತೆ ಸ್ಕ್ಯಾನಿಂಗ್ ವರದಿ ತೋರಿಸಿ ಅಂಗಲಾಚಿದರೂ ಅವರಿಗೆ ದಾರಿ ಬಿಡದೆ ಕಲ್ಲು ಹೃದಯಿಗಳಂತೆ ವರ್ತಿಸಿದರು.



ತನಿಖೆಗೆ ಆದೇಶ

ಹಾವೇರಿ:
ರಾಜ್ಯ ಅನುಸೂಚಿತ ಪಂಗಡ ಹಾಗೂ ಬುಡಕಟ್ಟು ಆಯೋಗದ ಅಧ್ಯಕ್ಷ ಹಾಗೂ ಹಾವೇರಿ ಶಾಸಕ ನೆಹರೂ ಓಲೇಕಾರ ಅವರ ವಿರುದ್ಧ ನ್ಯಾಯಾಲಯದಲ್ಲಿ ದಾಖಲಾದ ದೂರಿನ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಲು ಜಿಲ್ಲಾ ವಿಶೇಷ ಲೋಕಾಯುಕ್ತ ನ್ಯಾಯಾಲಯ ಆದೇಶ ನೀಡಿದೆ.



ನಗರದ ಗುತ್ತಿಗೆದಾರರಾದ ಶಶಿಧರ ಹಳ್ಳಿಕೇರಿ ಅವರು ಶಾಸಕ ನೆಹರೂ ಓಲೇಕಾರ ಸೇರಿದಂತೆ ಏಳು ಜನರ ವಿರುದ್ಧ ಜಿಲ್ಲಾ ನ್ಯಾಯಾಲಯದಲ್ಲಿ ಅ.9 ರಂದು ಅಧಿಕಾರ ದುರುಪಯೋಗ, ನಕಲಿ ಪ್ರಮಾಣಪತ್ರ ಪಡೆದಿರುವ ಹಾಗೂ ಸುಳ್ಳು ಆದಾಯ ತೋರಿಸಿರುವ ಕುರಿತು ದೂರು ಸಲ್ಲಿಸಿದ್ದರು. ಲೋಕಾಯುಕ್ತ ಜಿಲ್ಲಾ ವಿಶೇಷ ನ್ಯಾಯಾಲಯವು ದೂರು ಸ್ವೀಕರಿಸಿ ಅ.17ಕ್ಕೆ ತೀರ್ಪನ್ನು ಕಾಯ್ದಿರಿಸಿತ್ತು.



ಬುಧವಾರ ಲೋಕಾಯುಕ್ತ ಜಿಲ್ಲಾ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎಚ್.ಪಿ. ಸಂದೇಶ  ಪ್ರಕರಣದ ಕುರಿತು ಲೋಕಾಯುಕ್ತ ತನಿಖೆ ನಡೆಸಿ ಮೂರು ತಿಂಗಳೊಳಗಾಗಿ ಅಂದರೆ, ಮುಂದಿನ ಜನವರಿ 17ರ ಒಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಲೋಕಾಯುಕ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದಾರೆ.



ಆರ್‌ಟಿಪಿಎಸ್ ದಿನಗೂಲಿ ನೌಕರರ ಮುಷ್ಕರ

ರಾಯಚೂರು: 
ಸಮೀಪದ ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ 60 ಜನ ದಿನಗೂಲಿ ನೌಕರರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬುಧವಾರ ಮುಂಜಾನೆ ಕೆಲಸದಿಂದ ದೂರ ಉಳಿದು ಹಠಾತ್ ಪ್ರತಿಭಟನೆ ನಡೆಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry