ದಿಢೀರ್ ರಸ್ತೆ ತಡೆ, ಸಾರ್ವಜನಿಕರ ಪರದಾಟ

7

ದಿಢೀರ್ ರಸ್ತೆ ತಡೆ, ಸಾರ್ವಜನಿಕರ ಪರದಾಟ

Published:
Updated:
ದಿಢೀರ್ ರಸ್ತೆ ತಡೆ, ಸಾರ್ವಜನಿಕರ ಪರದಾಟ

ಹುಬ್ಬಳ್ಳಿ: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲು ಧಾರವಾಡ ಜಿಲ್ಲಾ ಪೌರ ಕಾರ್ಮಿಕರು ನಗರದ ಹೃದಯ ಭಾಗವಾದ ಚನ್ನಮ್ಮ ವೃತ್ತದಲ್ಲಿ ಬುಧವಾರ ಸಂಜೆ ದಿಢೀರ್ ರಸ್ತೆ ತಡೆ ನಡೆಸಿದ ಪರಿಣಾಮ ಆ ಪ್ರದೇಶದಲ್ಲಿ ಅಕ್ಷರಶಃ ವಾಹನ ಸಂಚಾರ ಎರಡು ತಾಸು ಸಂಪೂರ್ಣ ಸ್ಥಗಿತವಾಗಿ ಸಾರ್ವಜನಿಕರು ತೀವ್ರ ತೊಂದರೆಗೆ ಒಳಗಾದರು.



ಸಂಜೆ 5.45ಕ್ಕೆ ಪ್ರತಿಭಟನೆ ಆರಂಭವಾಗಿದ್ದರಿಂದ ಕಚೇರಿಯಿಂದ ಮನೆಗೆ ತೆರಳಬೇಕಾದ ನೌಕರರು, ಬಸ್ ಪ್ರಯಾಣಿಕರು, ದ್ವಿಚಕ್ರ ವಾಹನ ಸವಾರರು, ಆಸ್ಪತ್ರೆಗೆ ಹೊರಟವರು, ಮಾರುಕಟ್ಟೆಯಿಂದ ಹಿಂತಿರುಗುತ್ತಿದ್ದವರು, ಪರಸ್ಥಳದವರು ಹೀಗೆ ಸಾವಿರಾರು ಸಂಖ್ಯೆಯ ಜನರು ಎರಡು ಗಂಟೆಯ ಅವಧಿಯನ್ನು ರಸ್ತೆಯಲ್ಲಿ ಕಳೆದು ಪ್ರತಿಭಟನಾಕಾರರು ಹಾಗೂ ಪೊಲೀಸರನ್ನು ಶಪಿಸಿದರು.



ಪ್ರತಿಭಟನಾಕಾರರು ಮಾನವ ಸರಪಳಿ ರಚಿಸಿ ಕುಳಿತ ಕಾರಣ ಗದಗ, ವಿಜಾಪುರ, ಕಾರವಾರ, ಪಿ.ಬಿ.ರಸ್ತೆಗಳ ಮೂಲಕ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಯಿತು. ಆಸ್ಪತ್ರೆಗಳತ್ತ ಸಾಗಲೂ ಸಾಧ್ಯವಾಗದೆ ಆ್ಯಂಬುಲೆನ್ಸ್ ಕೂಡ ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಕೊಂಡಿತ್ತು.



ವಾಹನ ಸಂಚಾರ ಸ್ಥಗಿತವಾಗಿ ಸಾರ್ವಜನಿಕರು ಪರದಾಡುತ್ತಿದ್ದರೂ ಪ್ರತಿಭಟನಾಕಾರರನ್ನು ತೆರವುಗೊಳಿಸಲು ಪೊಲೀಸರು ತಕ್ಷಣ ಕ್ರಮ ಕೈಗೊಳ್ಳದಿದ್ದುದು ಸಾರ್ವಜನಿಕರನ್ನು ಕೆರಳಿಸಿತು. ಬಹಳ ಹೊತ್ತಿನವರೆಗೆ ಪೊಲೀಸರು ಪ್ರತಿಭಟನಾಕಾರರ ಮನವೊಲಿಸುವುದಕ್ಕೇ ವ್ಯಯಿಸಿದರೇ ವಿನಃ ಮಾನವ ಸರಪಳಿ ನಿರ್ಮಿಸಿ ಕುಳಿತವರನ್ನು ತೆರವುಗೊಳಿಸಲಿಲ್ಲ. ಚನ್ನಮ್ಮ ವೃತ್ತದಲ್ಲಿ ಸುಮಾರು ಎರಡು ಗಂಟೆ ಕಾಲ ಇದೇ ದೃಶ್ಯವಿತ್ತು.



ದಿಢೀರ್ ಪ್ರತಿಭಟನೆಯಿಂದ ತಬ್ಬಿಬ್ಬಾದ ಪೊಲೀಸರು, ಚನ್ನಮ್ಮ ವೃತ್ತದಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದರೂ ವಾಹನಗಳನ್ನು ಬೇರೆ ಮಾರ್ಗಗಳತ್ತ ಸಾಗಲು ಸೂಚನೆ ನೀಡದಿದ್ದ ಕಾರಣ ತೊಂದರೆ ಮತ್ತಷ್ಟು ಹೆಚ್ಚಾಯಿತು.



ಪ್ರತಿಭಟನೆಯ ಮಾಹಿತಿ ಗೊತ್ತಾಗಿ ಸ್ಥಳಕ್ಕೆ ಬಂದ ಉಪನಗರ ಠಾಣೆ ಇನ್‌ಸ್ಪೆಕ್ಟರ್ ಶ್ರೀನಿವಾಸ್, ಪ್ರತಿಭಟನಾಕಾರರ ಮನವೊಲಿ ಸಲು ಒಂದು ಗಂಟೆ ಕಾಲ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಸ್ಥಳಕ್ಕೆ ಆಗಮಿಸಿದ ಡಿಸಿಪಿ ಎಂ.ಎಸ್.ಪ್ರತಾಪನ್ ಹಾಗೂ ಎಸಿಪಿ ಎ.ಆರ್.ಬಡಿಗೇರ ಒಂದು ಗಂಟೆ ಕಾಲ ಸಂಧಾನ ನಡೆಸಿ ಪ್ರತಿಭಟನಾಕಾರರನ್ನು ರಾತ್ರಿ 7.45ರ ವೇಳೆಗೆ ಚೆನ್ನಮ್ಮ ವೃತ್ತದಿಂದ ಮಾತುಕತೆಗಾಗಿ ಮಹಾನಗರ ಪಾಲಿಕೆ ಆವರಣಕ್ಕೆ ಕರೆದೊಯ್ದ ನಂತರವಷ್ಟೇ ವಾಹನ ಸಂಚಾರ ಆರಂಭವಾಯಿತು.



ದಿಕ್ಕು ತಪ್ಪಿದ ಪ್ರತಿಭಟನಾಕಾರರು: ಸಂಜೆ 7 ಗಂಟೆಯವರೆಗೂ ಪ್ರತಿಭಟನಾಕಾರರನ್ನು ಚದುರಿಸಲಾಗದೆ ಅಸಹಾಯಕರಾಗಿ ನಿಂತಿದ್ದ ಪೊಲೀಸರು ನಂತರ ಪ್ರತಿಭಟನೆ ನೇತೃತ್ವ ವಹಿಸಿದ್ದ ಮುಖಂಡರನ್ನು ಪಾಲಿಕೆ ಅಧಿಕಾರಿಗಳೊಂದಿಗೆ ಮಾತುಕತೆಯ ನೆಪದಲ್ಲಿ ಪಾಲಿಕೆ ಕಚೇರಿಗೆ  ಕರೆದೊಯ್ದರು. ಇತ್ತ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆ ಹಾಗೂ ಪೊಲೀಸ್ ವಾಹನಗಳನ್ನು ಚೆನ್ನಮ್ಮ ವೃತ್ತದ ಸುತ್ತಲೂ ನಿಲ್ಲಿಸಿ, ಮಹಿಳಾ ಪೊಲೀಸರನ್ನು ಬಳಸಿ, ಪ್ರತಿಭಟನೆಗೆ ಕುಳಿತಿದ್ದ ಮಹಿಳೆಯರನ್ನು ಎಬ್ಬಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.



ವೇತನ ಹಾಗೂ ಬಾಕಿ ಹಣ ಕೊಡಿಸುವಂತೆ ಒತ್ತಾಯಿಸಿ ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ/ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ಆಶ್ರಯದಲ್ಲಿ ಪೌರಕಾರ್ಮಿಕರು ಮಧ್ಯಾಹ್ನದಿಂದಲೇ ಕಾಟನ್ ಮಾರುಕಟ್ಟೆಯಲ್ಲಿರುವ ಕಾರ್ಮಿಕ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದರು. ಸಂಜೆ ಚೆನ್ನಮ್ಮ ವೃತ್ತಕ್ಕೆ ಪ್ರತಿಭಟನೆಯನ್ನು ಸ್ಥಳಾಂತರಿಸಿದ್ದರಿಂದ ಸಾರ್ವಜನಿಕರು ನರಕಯಾತನೆ ಅನುಭವಿಸಬೇಕಾಯಿತು.



ಪ್ರತಿಭಟನೆಯ ವೇಳೆ ಕಿಡಿಗೇಡಿಯೊಬ್ಬ ಎಸೆದ ಇಟ್ಟಿಗೆ ತುಂಡು ನ್ಯಾನೊ ಕಾರೊಂದಕ್ಕೆ ತಗುಲಿತು. ಹುಬ್ಬಳ್ಳಿಯ ಆಸ್ಪತ್ರೆ ಯೊಂದರಿಂದ ದಾವಣಗೆರೆಗೆ ಸ್ಕ್ಯಾನಿಂಗ್ ವರದಿಯೊಂದನ್ನು ತುರ್ತಾಗಿ ಒಯ್ಯಬೇಕಿದ್ದ ಬಳ್ಳಾರಿಯ ರವಿ ಹಂಪಸಾಗರ ಎಂಬು ವವರು ತಾವು ಪ್ರಯಾಣಿಸುತ್ತಿದ್ದ ಬಸ್‌ಗೆ ಜಾಗ ಬಿಡುವಂತೆ ಸ್ಕ್ಯಾನಿಂಗ್ ವರದಿ ತೋರಿಸಿ ಅಂಗಲಾಚಿದರೂ ಅವರಿಗೆ ದಾರಿ ಬಿಡದೆ ಕಲ್ಲು ಹೃದಯಿಗಳಂತೆ ವರ್ತಿಸಿದರು.

ರಸ್ತೆ ತಡೆ ನಡೆಸಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ ಪ್ರತಿಭಟನಾಕಾರರ ಮೇಲೆ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಆ್ಯಂಬುಲೆನ್ಸ್ ಸಂಚಾರಕ್ಕೂ ಸಂಚಕಾರ

ಟ್ರಾಫಿಕ್‌ನಿಂದಾಗಿ ಆ್ಯಂಬುಲೆನ್ಸ್‌ಗಳೂ ನಿಂತಲ್ಲೇ ನಿಂತು ರೋಗಿಗಳು ಪರದಾಡು ವಂತಾಯಿತು. ಚನ್ನಮ್ಮ ವೃತ್ತ ವೊಂದರಲ್ಲೇ ಎರಡು 108 ವಾಹನಗಳು ಹತ್ತಾರು ನಿಮಿಷ ಹಾಗೆಯೇ ನಿಂತಿದ್ದವು. ಬಳಿಕ ಗದುಗಿನ ಮೆಡಿಕಲ್ ಕಾಲೇಜಿನ ಡಿಜಿಎಂ ಮೆಡಿಕಲ್ ಕಾಲೇಜಿನ ಆ್ಯಂಬುಲೆನ್ಸ್ ಸಹ ಹೀಗೆಯೇ ಸಿಕ್ಕಿಹಾಕಿ ಕೊಂಡಿತು. ಸಂಚಾರ ಪೊಲೀಸರು ಈ ವಾಹನಗಳಿಗೆ ದಾರಿ ಮಾಡಿಕೊಡಲು ಪರದಾಡಿದರು.



ಬೆದರಿ ಓಡಿದ ದನಗಳು

ರಾಣಿ ಚನ್ನಮ್ಮ ವೃತ್ತದಲ್ಲಿ ಟ್ರಾಫಿಕ್ ಜಾಮ್‌ನಿಂದ ಉಂಟಾದ ಶಬ್ದಕ್ಕೆ ಅಲ್ಲಿದ್ದ ದನಗಳು ಬೆದರಿ ದಿಕ್ಕಾಪಾಲಾಗಿ ಓಡಿದ ಘಟನೆ ನಡೆಯಿತು. ಪ್ರತಿಭಟನೆ ಮುಗಿದ ನಂತರ ಚನ್ನಮ್ಮ ವೃತ್ತದಲ್ಲಿ ನಾಲ್ಕಾರು ದನ ಕಾಣಿಸಿಕೊಂಡವು. ಆಗ  ರಸ್ತೆ ದಾಟಲು ಈ ಜಾನುವಾರುಗಳು ಪರದಾಡತೊಡಗಿದವು.  ವಾಹನಗಳ ಹಾರ್ನ್‌ಗೆ ಬೆದರಿ ಏಕಾಏಕಿ ಜನರತ್ತ ನುಗ್ಗಿದವು. ಇದರಿಂದ ಗಾಬರಿಗೀಡಾದ ಮಹಿಳೆಯರು ಚೆಲ್ಲಾಪಿಲ್ಲಿಯಾದರು. ಕೆಲವರು ಕೆಳಗೆ ಬಿದ್ದರು. ಒಂದಿಬ್ಬರಿಗೆ ಸಣ್ಣಪುಟ್ಟ ಗಾಯಗಳಾದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry