ದಿನಕ್ಕೆ 15 ಗಂಟೆ ಕೆಲಸ, ತಿಂಗಳಿಗೆ ಸಾವಿರ ರೂ. ಸಂಬಳ!

7

ದಿನಕ್ಕೆ 15 ಗಂಟೆ ಕೆಲಸ, ತಿಂಗಳಿಗೆ ಸಾವಿರ ರೂ. ಸಂಬಳ!

Published:
Updated:

ಪಡುಬಿದ್ರಿ: ಪ್ರತಿನಿತ್ಯ ಪಡುಬಿದ್ರಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಿನಗೂಲಿ ನೌಕರರಾಗಿ ದುಡಿಯುವ ಕೊರಗ ಮಹಿಳೆ ಪ್ರತಿದಿನ ದುಡಿಯುವ ಸಮಯ 15ಗಂಟೆ. ಆದರೆ ಆಕೆ ಇದಕ್ಕೆ ಪಡೆಯುವ ವೇತನ ತಿಂಗಳಿಗೆ 1000 ರೂ. ಮಾತ್ರ.ಬೇಬಿ (48) ಎಂಬ ಪರಿಶಿಷ್ಟ ಪಂಗಡಕ್ಕೆ ಸೇರಿದ ಈ ಮಹಿಳೆ ಕಳೆದ 22 ವರ್ಷಗಳಿಂದ ಪಡುಬಿದ್ರಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜೀವನಾಧಾರಕ್ಕೆ ಬಟ್ಟೆ ಒಗೆಯುವ ಮತ್ತಿತರ ಕೆಲಸವನ್ನು ನಿರ್ವಹಿಸುತ್ತ್ತಿದ್ದರು. ಆ ಬಳಿಕ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಕೇಂದ್ರದಡಿಯಲ್ಲಿ ರಾತ್ರಿ ಕೆಲಸಕ್ಕೆ ನೇಮಕಗೊಂಡರು. ದಿನಗೂಲಿ ನೌಕರಾಗಿರುವ ಇವರು ಪ್ರತಿ ದಿನ ಸಂಜೆ 6ರಿಂದ ಬೆಳಿಗ್ಗೆ 9ಗಂಟೆಯ ವರೆಗೆ ಇಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.ಆದರೆ 21 ವರ್ಷಗಳ ಕಾಲ ಸೇವೆ ಸಲ್ಲಿಸಿದ ಇವರಿಗೆ ಕೊಡುವ ವೇತನ ಮಾತ್ರ ಕೇವಲ 1000 ರೂ. (ಪ್ರತಿದಿನಕ್ಕೆ ರೂ. 33.33). ಆದರೆ ಅಪರೂಪಕ್ಕೊಮ್ಮೆ ಮಾತ್ರ ರಜೆ ಪಡೆದುಕೊಳ್ಳುತ್ತಾರೆ. ಇವರಿಗೆ ಕನಿಷ್ಠ ಕೂಲಿಯೂ ಸಿಗುತ್ತಿಲ್ಲ. ಎಷ್ಟೋ ಕಷ್ಟಪಟ್ಟಿದ್ದೆ: `22 ವರ್ಷಗಳಿಂದ ನಾನು ನನ್ನ ಒಂದು ವರ್ಷದ ಮಗುವನ್ನು ಹಿಡಿದುಕೊಂಡು ರಾತ್ರಿಯಿಡೀ ಕೆಲಸ ಮಾಡುತ್ತಿದ್ದೆ. ಈ ವೇಳೆ ನಾನು ಎಲ್ಲವನ್ನೂ ಮರೆತು ಇಲ್ಲಿಗೆ ಬರುವ ರೋಗಿಗಳ ಬಟ್ಟೆಗಳನ್ನು ಒಗೆದು ಸ್ವಚ್ಛ ಮಾಡುತ್ತಿದ್ದೆ. ಈಗಲೂ ರಾತ್ರಿಯ ವೇಳೆ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ಪ್ರತಿನಿತ್ಯ 15ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೇನೆ. ಆದರೆ ನನಗೆ ತಿಂಗಳಿಗೆ ಕೇವಲ 1000 ರೂ. ಮಾತ್ರ ನೀಡುತ್ತಾರೆ. ನನ್ನ ಹಾಜರಾತಿಯೂ ಇದೆ~ ಎಂದು ಬೇಬಿ `ಪ್ರಜಾವಾಣಿ~ಗೆ ವಿವರಿಸಿದರು.ಕಿರುಕುಳ:
`ಕಳೆದ 22ವರ್ಷಗಳಿಂದ ದುಡಿಯುವ ನನಗೆ ಇತ್ತೀಚೆಗೆ ಸಿಬ್ಬಂದಿಯೊಬ್ಬರು ಕಿರುಕುಳ ನೀಡುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಸಿಬ್ಬಂದಿಯೊಬ್ಬರು ಪತ್ರವೊಂದರಲ್ಲಿ ನಾನು ಕೆಲಸ ಬಿಡುತ್ತೇನೆ ಬರೆದು ಸಹಿ ಹಾಕಲು ಹೇಳಿದರು. ಓದಲು ಬಾರದ ನಾನು ಅದನ್ನು ಮನೆಗೆ ತಂದು ತೋರಿಸಿದಾಗ ಕೆಲಸ ಬಿಡುವ ಬಗ್ಗೆ ಸೂಚಿಸಲಾಗಿತ್ತು. ಆ ಬಳಿಕ ನಾನು ಅದನ್ನು ಮನೆಯಲ್ಲಿಯೇ ಇಟ್ಟಿದ್ದೇನೆ. ಸಹಿ ಹಾಕಲಿಲ್ಲ. ನಾನು ಇಲ್ಲಿ ಕೆಲಸ ಮಾಡುವ ಬಗ್ಗೆ ಸಿಬ್ಬಂದಿಯೊಬ್ಬರಿಗೆ ಇಷ್ಟವಿಲ್ಲ. ಅದಕ್ಕಾಗಿ ಏನೇನೋ ಹೇಳಿ ಕೆಲಸ ಬಿಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಆಸ್ಪತ್ರೆಯ ವೈದ್ಯರು ಮಾತ್ರ ಒಳ್ಳೆಯವರು. ಅವರು ನನಗೆ ಧೈರ್ಯ ತುಂಬುತ್ತಾರೆ. ಅವರಿಂದಲೇ ನಾನು ಈಗಲೂ ಇಲ್ಲೆ ಕೆಲಸ ಮಾಡುತ್ತಿದ್ದೇನೆ~ ಎನ್ನುತ್ತಾರೆ ಬೇಬಿ.ನ್ಯಾಯ ಸಿಗಲಿ: 22ವರ್ಷಗಳಿಂದ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ಇವರಿಗೆ ಕನಿಷ್ಠ ಕೂಲಿ ಸಿಗುವ ಬದಲು ಅತ್ಯಲ್ಪ ಹಣ ನೀಡಿ ಅವರನ್ನು ದುಡಿಸುತ್ತಿರುವುದು ಸರಿಯಲ್ಲ. ಈ ಬಗ್ಗೆಇಲಾಖೆ ಸೂಕ್ತ ಕ್ರಮಕೈಗೊಂಡು ಬೇಬಿಯವರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಪಡುಬಿದ್ರಿಯ ಶ್ರೀನಾರಾಯಣ ಗುರು ಸ್ವಉದ್ಯೋಗ ಮಾಹಿತಿ ಕೇಂದ್ರದ ಮಧ್ವರಾಜ್ ಸುವರ್ಣ ಆಗ್ರಹಿಸಿದ್ದಾರೆ.ಚಿರಪರಿಚಿತರು: ಬೇಬಿಯವರು ಪಡುಬಿದ್ರಿಯ ಹಲವರಿಗೆ ಪರಿಚಿತರು. ಇವರ ಪರಿಚಯ ಇಲ್ಲದವರು ಕಡಿಮೆ. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದವರು ಇವರ ಸೇವೆಯನ್ನು ಗಮನಿಸಿ ಅವರೊಂದಿಗೆ  ಸೌಜನ್ಯದ ಮಾತುಕತೆ ನಡೆಸುತ್ತಾರೆ. `ಇವರನ್ನು ನಾನು ಬಲ್ಲೆ. ಹಲವು ವರ್ಷದಿಂದ ಇಲ್ಲಿ ಉತ್ತಮ ರೀತಿಯಲ್ಲಿ ಸೇವೆ ಮಾಡುತ್ತಿದ್ದಾರೆ~ ಎಂದು ನಿವಾಸಿ ವಸಂತ್ ಹೇಳುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry