ಮಂಗಳವಾರ, ಜನವರಿ 21, 2020
28 °C

ದಿನಗೂಲಿ ನೌಕರರಿಗೆ ನಿಯಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವೇತನ, ರಜೆ, ಪಿಂಚಣಿ ಸೇರಿದಂತೆ ಇತರ ಸೌಲಭ್ಯಗಳನ್ನು ದಿನಗೂಲಿ ನೌಕರರಿಗೆ ಕಲ್ಪಿಸುವ ನಿಯಮಾವಳಿ ಕರಡನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಸರ್ಕಾರಿ ಮತ್ತು ಅರೆಸರ್ಕಾರಿ ಸಂಸ್ಥೆಗಳಲ್ಲಿ 24 ಸಾವಿರಕ್ಕೂ ಹೆಚ್ಚು ದಿನಗೂಲಿ ನೌಕರರ ಸೇವೆ ಕಾಯಂ­ಗೊಳಿಸುವುದಕ್ಕೆ ಸುಪ್ರೀಂಕೋರ್ಟ್‌ ಆಕ್ಷೇಪ ವ್ಯಕ್ತಪಡಿಸಿದೆ.

ಈ ಹಿನ್ನೆಲೆ­ಯಲ್ಲಿ ದಿನಗೂಲಿ ನೌಕರರಿಗೆ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸುವ ಕುರಿತು ಸಚಿವ ಸಂಪುಟ ಸಭೆ ಇತ್ತೀಚೆಗೆ ತೀರ್ಮಾನ ಕೈಗೊಂಡಿತ್ತು. ಅದರಂತೆ  ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ನಿಯ­ಮಾ­ವಳಿಯ ಕರಡು ಸಿದ್ಧಪಡಿಸಿದ್ದು, ‘ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿ­ನಿಯಮ’ ಎಂದು ಹೆಸರಿಡಲಾಗಿದೆ.ಕರ್ನಾಟಕ ನಾಗರಿಕ ಸೇವಾ ನಿಯಮಗಳ ಅಡಿಯಲ್ಲೇ ದಿನಗೂಲಿ ನೌಕರರಿಗೆ ಸೌಲಭ್ಯ ಒದಗಿಸಲು ನಿಯಮ­ಗಳನ್ನು ರೂಪಿಸಲಾಗಿದೆ.  ಕರಡನ್ನು ರಾಜ್ಯಪತ್ರದಲ್ಲಿ ನ.30­ರಂದು ಪ್ರಕಟಿಸಲಾಗಿದೆ. ಈ ನಿಯಮ­ಗಳಿಗೆ 15 ದಿನಗಳ ಒಳಗೆ ಆಕ್ಷೇಪಣೆ, ಸಲಹೆ ಸೂಚನೆ ಸಲ್ಲಿಸಲು ಕೋರಲಾಗಿದೆ.ಬಡ್ತಿ ಇಲ್ಲ: ಎಲ್ಲ ಇಲಾಖೆ ಹಾಗೂ ಸರ್ಕಾರಿ ಸಂಸ್ಥೆಗಳು ನಿಯಮಗಳು ಪ್ರಕಟ­ಗೊಂಡ 1 ವರ್ಷದ ಒಳಗೆ ಅರ್ಹ ದಿನಗೂಲಿ ನೌಕರರ ಹೆಸರನ್ನು ಪ್ರಕಟಿಸಬೇಕು. ದಿನಗೂಲಿ ನೌಕರರು ಸೇವೆಯಲ್ಲಿ ಮುಂದುವರಿದ ವೃಂದ­ದಲ್ಲಿ ಹಿರಿತನಕ್ಕೆ ಅರ್ಹರಾಗುವುದಿಲ್ಲ. ಉಳಿದ ಸೇವಾ ಅವಧಿಯಲ್ಲಿ ಯಾವುದೇ ಮುಂಬಡ್ತಿಗೆ ಅರ್ಹರಾಗುವುದಿಲ್ಲ ಎಂದು ಕರಡಿನಲ್ಲಿ ತಿಳಿಸಲಾಗಿದೆ.ದಿನಗೂಲಿ ಮಹಿಳಾ ನೌಕರರು 180 ದಿನ ಹೆರಿಗೆ ರಜೆ ಪಡೆಯಬಹುದು. ದಿನಗೂಲಿ ನೌಕರ 60 ವರ್ಷದ ಬಳಿಕ ಪೂರ್ಣಗೊಳಿಸಿದ ಸೇವೆಯ ಪ್ರತಿ ವರ್ಷಕ್ಕೆ 15 ದಿನಗಳ ವೇತನದಂತೆ ಗರಿಷ್ಠ 12 ತಿಂಗಳ ವೇತನಕ್ಕೆ ಮಿತಿ­ಗೊಳಿಸಿದ ಎಕ್ಸ್‌ಗ್ರೇಷಿಯಾ ಪಡೆಯ­ಬಹುದು ಎಂದು ತಿಳಿಸಲಾಗಿದೆ.ಪಿಂಚಣಿ ನಿಧಿ ನಿರ್ವಹಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ನಿರ್ವಹಿಸುವ ಹೊಸ ಪಿಂಚಣಿ ಯೋಜನೆ (ಎನ್‌ಪಿ­ಎಸ್‌), ಸ್ವಾವಲಂಬನೆ ಯೋಜನೆ ದಿನ­ಗೂಲಿ ನೌಕರರಿಗೆ ಅನ್ವಯವಾಗಲಿದೆ ಎಂದು ಉಲ್ಲೇಖಿಸಲಾಗಿದೆ. ದಿನಗೂಲಿ ನೌಕರರಿಗೂ ಕರ್ನಾಟಕ ನಾಗರಿಕ ಸೇವೆಗಳ ನಿಯಮ­ಗಳು ಅನ್ವಯ­ವಾಗಲಿವೆ. ಲಿಖಿತ ಮೂಲಕ ಅಹವಾಲು ಹೇಳಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ದುರ್ನಡತೆ ಸಾಬೀತಾ­ದರೆ ಕೆಲಸದಿಂದ ವಜಾಗೊಳಿಸಬಹುದು ಎನ್ನಲಾಗಿದೆ.

ಪ್ರತಿಕ್ರಿಯಿಸಿ (+)