ದಿನಗೂಲಿ ನೌಕರರ ಪ್ರತಿಭಟನೆ

7

ದಿನಗೂಲಿ ನೌಕರರ ಪ್ರತಿಭಟನೆ

Published:
Updated:

ಚಿಕ್ಕಬಳ್ಳಾಪುರ: ಸರ್ಕಾರಿ ದಿನಗೂಲಿ ನೌಕರರನ್ನು ಹೊರಗುತ್ತಿಗೆ ನೌಕರರನ್ನಾಗಿ ಪರಿವರ್ತಿಸಬಾರದು, ಹೈಕೋರ್ಟ್ ನಿರ್ದೇಶನವನ್ನು ಜಾರಿಗೆ ತರಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ಮತ್ತು ಗೌರವಧನ ನೌಕರರ ಮಹಾಮಂಡಲ ನೌಕರರು ಕೈಗೊಂಡಿರುವ ಪ್ರತಿಭಟನೆ ಗುರುವಾರ ಎರಡನೇ ದಿನಕ್ಕೆ ಕಾಲಿರಿಸಿತು.ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, `ನಮ್ಮ ಬೇಡಿಕೆಗಳು ಈಡೇರುವವರೆಗೆ ಹೋರಾಟ ಕೈಬಿಡುವುದಿಲ್ಲ. ಅನಿರ್ದಿಷ್ಟಾವಧಿ ಹೋರಾಟ ಮುಂದುವರಿಸುತ್ತೇವೆ' ಎಂದು ಎಚ್ಚರಿಕೆ ನೀಡಿದರು.ಮಹಾಮಂಡಲದ ರಾಜ್ಯ ಘಟಕದ ಅಧ್ಯಕ್ಷ ಪ್ರಮೋದ ಚಿಕ್ಕಮಣ್ಣೂರು ಮಾತನಾಡಿ, `ದಿನಗೂಲಿ ನೌಕರರನ್ನು ಹೊರಗುತ್ತಿಗೆ ನೌಕರರನ್ನಾಗಿ ಪರಿವರ್ತಿಸಬಾರದು ಎಂದು ಒತ್ತಾಯಿಸಿ ಕಳೆದ ಬಾರಿ ಪ್ರತಿಭಟನೆ ನಡೆಸಿದಾಗ, ಜಿಲ್ಲಾಡಳಿತ ಒಪ್ಪಿಗೆ ನೀಡಿತ್ತು. ಹೊರಗುತ್ತಿಗೆ ನೌಕರರನ್ನಾಗಿಸಲು ಅವಕಾಶ ನೀಡುವುದಿಲ್ಲವೆಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಮಾತನ್ನು ಉಳಿಸಿಕೊಳ್ಳದೇ ದಿನಗೂಲಿ ನೌಕರರನ್ನು ವಂಚಿಸಲಾಗಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.`ದಿನಗೂಲಿ ನೌಕರರು ಸುಮಾರು 15 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. 300 ರೂಪಾಯಿ ಗೌರವಧನ ಪಡೆಯುತ್ತಿದ್ದವರು ಈಗ 4000 ರೂಪಾಯಿ ವೇತನ ಪಡೆಯುತ್ತಿದ್ದಾರೆ. ಕಾನೂನಿನ ಪ್ರಕಾರ, ದಿನಗೂಲಿ ನೌಕರರನ್ನು ಕಾಯಂಗೊಳಿಸುವ ಬದಲು ಸರ್ಕಾರ ಮತ್ತು ಜಿಲ್ಲಾಡಳಿತ ಇನ್ನಷ್ಟು ಸಂಕಷ್ಟಕ್ಕೆ ನೂಕಿದೆ' ಎಂದು ಅವರು ಟೀಕಿಸಿದರು.`ದಿನಗೂಲಿ ಕಾರ್ಮಿಕರನ್ನು ಹೊರಗುತ್ತಿಗೆ ನೌಕರರನ್ನಾಗಿ ಪರಿವರ್ತಿಸುವ ಕ್ರಮವನ್ನು ಜಿಲ್ಲಾಡಳಿತ ಕೂಡಲೇ ಹಿಂಪಡೆಯಬೇಕು. ವಿವಿಧ ತಾಲ್ಲೂಕುಗಳಲ್ಲಿ ಕೆಲಸ ಮಾಡುತ್ತಿರುವ ದಿನಗೂಲಿ ನೌಕರರ ಸೇವಾ ವಿವರಗಳನ್ನು ಜಿಲ್ಲಾಡಳಿತವು ಸರ್ಕಾರಕ್ಕೆ ಸಲ್ಲಿಸಬೇಕು. ಹತ್ತು ವರ್ಷಗಳ ಸೇವೆ ಪೂರ್ಣಗೊಳಿಸಿದ ದಿನಗೂಲಿ ನೌಕರರ ಸೇವೆಯನ್ನು ಕಾಯಂಗೊಳಿಸಬೇಕು. ದಿನಗೂಲಿ ನೌಕರರಿಗೆ ಅಗತ್ಯ ಸೌಲಭ್ಯ ಮತ್ತು ವೇತನ ನೀಡಬೇಕು. ಬಾಕಿಯಿರುವ ತಕ್ಷಣ ವೇತನ ತಕ್ಷಣ ಬಿಡುಗಡೆಗೊಳಿಸಬೇಕು. ಪ್ರತಿ ತಿಂಗಳು 5ನೇ ತಾರೀಖಿನೊಳಗೆ ವೇತನ ನೀಡಬೇಕು' ಎಂದು ಆಗ್ರಹಿಸಿದರು.ದಲಿತ ಸಂಘರ್ಷ ಸಮಿತಿಯ ಮುಖಂಡರಾದ ರವಿತೇಜ ಮತ್ತು ಎಂ.ಆನಂದ್ ಧರಣಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ಮತ್ತು ಗೌರವಧನ ನೌಕರರ ಮಹಾಮಂಡಲದ ಮುಖಂಡರಾದ ಬಿ.ಎಂ.ವೆಂಕಟೇಶ್, ಪಿ.ವಿ.ಮುನಿಯಪ್ಪ, ಕೆ.ಎನ್.ಪ್ರದೀಪ್, ಕೆ.ಸಿ.ಲಕ್ಷ್ಮಿನಾರಾಯಣಮ್ಮ, ನಾಸ್ತಿಮನಹಳ್ಳಿ ಗಂಗಾಧರಪ್ಪ, ಎಂ.ಶ್ರೀರಾಮಯ್ಯ, ನಾರಾಯಣಪ್ಪ, ಸಿ.ಕೆ.ಮೂರ್ತಿ, ಕೆ.ಎನ್.ನರಸಿಂಹಮೂರ್ತಿ, ಡಿ.ಎನ್.ನರಸಿಂಹಪ್ಪ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry