ಶುಕ್ರವಾರ, ನವೆಂಬರ್ 22, 2019
26 °C

`ದಿನಸಿ ಅಂಗಡಿಯಲ್ಲಿ ಮದ್ಯ ಮಾರಾಟ'

Published:
Updated:

ಶಿಡ್ಲಘಟ್ಟ: ದಲಿತ ಕಾಲೊನಿಗಳಲ್ಲಿರುವ ದಿನಸಿ ಅಂಗಡಿಗಳಲ್ಲಿ ಮತ್ತು ಕೆಲ ಮನೆಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವುದನ್ನು ತಡೆದು, ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡ ಮುನಿನರಸಿಂಹ ಒತ್ತಾಯಿಸಿದರು.ಪಟ್ಟಣದ ಪೊಲೀಸ್ ಠಾಣೆಯಲ್ಲಿ ಈಚೆಗೆ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಿತರಕ್ಷಣಾ ಸಭೆಯಲ್ಲಿ ಅವರು ಮಾತನಾಡಿದರು. ನೆಪ ಮಾತ್ರಕ್ಕೆ ದೌರ್ಜನ್ಯ ವಿಚಾರಣೆ ಸಭೆ ಕರೆದರೆ ಪ್ರಯೋಜನವಿಲ್ಲ. ಸಂಬಂಧಪಟ್ಟ ಅಧಿಕಾರಿಗಳನ್ನೂ ಸಭೆಗೆ ಕರೆಸಿ ಜನರ ಸಮಸ್ಯೆಗಳನ್ನು ಬಗೆಹರಿಸಬೇಕು.ಗೂಡು ಮಾರುಕಟ್ಟೆಯಲ್ಲಿ ಮಧ್ಯರಾತ್ರಿಯಲ್ಲಿ ಜಿಲ್ಲಿ ಕಳ್ಳತನ ಮಾಡುವ ಜಾಲವೇ ಇದೆ. ಪೊಲೀಸ್ ಬಂದೋಬಸ್ತ್ ಏರ್ಪಡಿಸಿ ಅದನ್ನು ತಡೆಯಬೇಕು. ಕೆಇಬಿ ಕಚೇರಿ ಬಳಿಯ ಮೂರು ರಸ್ತೆಯಲ್ಲಿ ರೇಷ್ಮೆ ವ್ಯಾಪಾರ ನಡೆಯುವುದರಿಂದ ವಿದ್ಯಾರ್ಥಿಗಳು ಮತ್ತು ಹತ್ತಿರದ ಮನೆಯವರು ತೊಂದರೆ ಅನುಭವಿಸುವಂತಾಗಿದೆ. ಅಲ್ಲಿ ಪೊಲೀಸ್ ಕಾವಲನ್ನು ಹಾಕಿ ಅಂಗಡಿಗಳೊಳಗೆ ವ್ಯಾಪಾರ ನಡೆಸುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.ದಲಿತ ಮುಖಂಡ ನಾಗನರಸಿಂಹ ಮಾತನಾಡಿ, ಚಿತ್ರಮಂದಿರಗಳಲ್ಲಿ ಟಿಕೆಟ್‌ನ ಮುಖಬೆಲೆಗಿಂತ ಹೆಚ್ಚು ಹಣ ಪಡೆಯುವುದನ್ನು ತಡೆಯಬೇಕು. ಬಂಗಾರದ ಅಂಗಡಿಗಳಲ್ಲಿ ಟಿನ್ ಸಂಖ್ಯೆಯಿರುವ ಬಿಲ್ ನೀಡುತ್ತಿಲ್ಲ. ಹೋಟೆಲ್‌ಗಳಲ್ಲಿ ಶುಚಿತ್ವ ಇಲದಂತಾಗಿದೆ. ಕೆಲ ಮಿಲ್ಟ್ರಿ ಹೋಟೆಲ್‌ಗಳಲ್ಲಿ ಮದ್ಯವನ್ನೂ ಸರಬರಾಜು ಮಾಡಲಾಗುತ್ತಿದೆ. ಪ್ಲಾಸ್ಟಿಕ್ ನಿಷೇಧವಿದ್ದರೂ ಹೋಟೆಲ್‌ಗಳು ಸೇರಿದಂತೆ ಎಲ್ಲೆಡೆ ಪ್ಲಾಸ್ಟಿಕ್ ಬಳಕೆ ಮುಂದುವರಿದಿದೆ. ಇವುಗಳನ್ನು ತಡೆಯಬೇಕು ಎಂದು ಹೇಳಿದರು.ಸಭೆಯನ್ನು ಆಯೋಜಿಸಿದ್ದ ಸಬ್‌ಇನ್ಸ್‌ಪೆಕ್ಟರ್ ಪುರುಷೋತ್ತಮ್ ಮಾತನಾಡಿ, ಎಲ್ಲರ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಮಂಜುನಾಥ್, ಗಂಗಾಧರ್, ರವಿಶಂಕರ್, ನಾಮನಾರಾಯಣಸ್ವಾಮಿ, ಮುನಿಪೂಜಪ್ಪ, ದಾಮೋದರ್, ಪ್ರಕಾಶ್, ಕೆ.ನಾರಾಯಣಸ್ವಾಮಿ, ಗಂಗಪ್ಪ, ಆಟೊ ಚಾಲಕರ ಸಂಘದ ಅಧ್ಯಕ್ಷ ತಿಮ್ಮಪ್ಪ ಮತ್ತಿತರರಿದ್ದರು.

ಪ್ರತಿಕ್ರಿಯಿಸಿ (+)