ದಿನ ಬಿಟ್ಟು ದಿನ ಕುಡಿಯುವ ನೀರು ಪೂರೈಕೆ

7

ದಿನ ಬಿಟ್ಟು ದಿನ ಕುಡಿಯುವ ನೀರು ಪೂರೈಕೆ

Published:
Updated:

ಮಡಿಕೇರಿ: ನಗರಕ್ಕೆ ಕುಡಿಯುವ ನೀರು ಪೂರೈಸುವ ಪ್ರಮುಖ ಜಲ ಮೂಲವಾದ ಕೂಟುಹೊಳೆಯಲ್ಲಿ ನೀರಿನ ಸಂಗ್ರಹ ಸಾಕಷ್ಟು ಕಡಿಮೆಯಾಗಿದ್ದರೂ ನಗರದ ಜನತೆ ಸದ್ಯಕ್ಕೆ ಅಂತಹ ಆತಂಕಪಡುವ ಅಗತ್ಯವೇನೂ ಇಲ್ಲ. ಆದರೆ, ಅಲ್ಲಿಯವರೆಗೆ ಅಕಾಲಿಕ ಮಳೆ ಸುರಿಯದಿದ್ದಲ್ಲಿ ಮುಂಜಾಗ್ರತಾ ಕ್ರಮವಾಗಿ ಕಳೆದ ವರ್ಷದಂತೆ ಈ ವರ್ಷ ಕೂಡ ಮಾರ್ಚ್ 1ರಿಂದ ದಿನ ಬಿಟ್ಟು ದಿನ ಕುಡಿಯುವ ನೀರು ಪೂರೈಸಲು ನಗರಸಭೆ ಚಿಂತನೆ ನಡೆಸುತ್ತಿದೆ.ಕೂಟುಹೊಳೆಯಲ್ಲಿ ಈಗಿರುವ ನೀರಿನ ಲಭ್ಯತೆ ಪ್ರಮಾಣಕ್ಕೆ ಅನುಗುಣವಾಗಿ ಮಾರ್ಚ್ ಅಂತ್ಯದವರೆಗೆ ದಿನಾಲು ಕುಡಿಯುವ ನೀರು ಪೂರೈಸಲು ಅಡ್ಡಿ ಇಲ್ಲ. ಆದರೆ, ಅಲ್ಲಿಯವರೆಗೆ ಅಕಾಲಿಕ ಮಳೆ ಬೀಳದಿದ್ದಲ್ಲಿ ಬೇಸಿಗೆಯ ಕೊನೇ ಎರಡು ತಿಂಗಳಾದ ಏಪ್ರಿಲ್- ಮೇ ತಿಂಗಳಲ್ಲಿ ನಗರದಲ್ಲಿ ಕುಡಿಯುವ ನೀರಿಗೆ ತೀವ್ರ ತೊಂದರೆ ಎದುರಾಗುವ ಸಂಭವವಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್ 1ರಿಂದ ದಿನ ಬಿಟ್ಟು ದಿನ ಪೂರೈಸಿ ಕುಡಿಯುವ ನೀರಿನ ಸಮಸ್ಯೆಯನ್ನು ಸರಿದೂಗಿಸಲು ನಗರಸಭೆ ಚಿಂತಿಸುತ್ತಿದೆ.ಈ ನಡುವೆ, ಪಂಪಿನಕೆರೆಯಲ್ಲಿ ನೀರಿನ ಪ್ರಮಾಣ ಬಹಳಷ್ಟು ಕಡಿಮೆಯಾಗಿರುವುದರಿಂದ ಈ ಮೂಲದಿಂದ ನಗರಸಭೆ ದಿನ ಬಿಟ್ಟು ದಿನ ಪೂರೈಕೆ ಮಾಡುತ್ತಿದೆ. ಇನ್ನು, ಕನ್ನಂಡಬಾಣೆ ಹಾಗೂ ರೋಶನಾರ ಕೆರೆಗಳಲ್ಲಿಯೂ ಸಮಾಧಾನ ತರುವಷ್ಟು ನೀರಿಲ್ಲ. ಹೀಗಾಗಿ, ಪರಿಸ್ಥಿತಿ ನೋಡಿಕೊಂಡು ಎತ್ತರ ಪ್ರದೇಶದಲ್ಲಿರುವ ಬಡಾವಣೆಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲು ತೀರ್ಮಾನ ಕೈಗೊಳ್ಳಲಾಗುತ್ತದೆ ಎನ್ನುತ್ತಾರೆ ನಗರಸಭೆ ನೂತನ ಅಧ್ಯಕ್ಷ ಎಚ್.ಎಂ. ನಂದಕುಮಾರ್.ಈ ಮಧ್ಯೆ, ಕೂಟುಹೊಳೆಯಿಂದ ಸೋರಿಕೆಯಾಗುತ್ತಿರುವ ನೀರನ್ನು ತಡೆದು ಅದನ್ನು ಮರು ಬಳಕೆ ಮಾಡಿಕೊಳ್ಳಲು ಸಣ್ಣ ತಡೆಗೋಡೆ ನಿರ್ಮಿಸಲು ಒಂದೆರಡು ದಿನಗಳಲ್ಲಿಯೇ ಕ್ರಮ ಕೈಗೊಳ್ಳಲಾಗುತ್ತದೆ. ಫೆ. 17ರಂದು ನಡೆಯಲಿರುವ ಸಭೆಯಲ್ಲಿ ಇದಕ್ಕೆ ಅನುಮೋದನೆ ಪಡೆಯಲಾಗುತ್ತದೆ. ಸಣ್ಣ ತಡೆಗೋಡೆ ನಿರ್ಮಿಸಿ ಕೂಟುಹೊಳೆಯಿಂದ ಸೋರಿಕೆಯಾಗುತ್ತಿರುವ ನೀರನ್ನು ಸಂಗ್ರಹಿಸುವ ಮೂಲಕ ಸುಮಾರು 40 ಎಚ್.ಪಿ. ಮೋಟಾರ್‌ನಿಂದ ಮತ್ತೆ ಆ ನೀರನ್ನು ಕೂಟುಹೊಳೆಗೆ ಪೂರೈಸಿ, ನಷ್ಟವಾಗುವ ನೀರನ್ನು ಮರು ಬಳಕೆ ಮಾಡಿಕೊಳ್ಳಲಾಗುತ್ತದೆ. ಇದರಿಂದ ಇನ್ನೂ 15ರಿಂದ 20 ದಿನಗಳ ಕಾಲ ಕುಡಿಯುವ ನೀರಿನ ಸಮಸ್ಯೆಯಿಂದ ಪಾರಾಗಬಹುದು ಎಂದು ಅವರು ಹೇಳಿದರು.ಕುಂಡಾಮೇಸ್ತ್ರಿ ಯೋಜನೆಗೂ ಶೀಘ್ರ ಚಾಲನೆ: ಮಡಿಕೇರಿ ನಗರಕ್ಕೆ ಶಾಶ್ವತ ಕುಡಿಯುವ ನೀರು ಪೂರೈಸುವ ಮಹಾತ್ವಾಕಾಂಕ್ಷೆಯ ‘ಕುಂಡಾಮೇಸ್ತ್ರಿ’ ಯೋಜನೆಗೂ ಶೀಘ್ರ ಚಾಲನೆ ನೀಡಲಾಗುವುದು. ಈ ಉದ್ದೇಶಕ್ಕಾಗಿ ಮಂಗಳವಾರ ಕರ್ನಾಟಕ ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗುವುದು ಎಂದು ನಗರಸಭೆ ಅಧ್ಯಕ್ಷರು ತಿಳಿಸಿದರು.ಸುಮಾರು 30 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಿರುವ ಈ ಯೋಜನೆಗೆ ರಾಜ್ಯ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.ಹಣಕಾಸು ಸಂಸ್ಥೆಗಳಿಂದ ನೆರವು ಪಡೆದು ರಾಜ್ಯ ಸರ್ಕಾರ ಈ ಯೋಜನೆಯನ್ನು ಅನುಷ್ಠಾನಗೊಳಿಸಲಿದೆ. ಈ ಪೈಕಿ 15 ಕೋಟಿ ರೂಪಾಯಿ ಸಾಲವನ್ನು ನಗರಸಭೆ ಮರು ಪಾವತಿಸಬೇಕಾಗುತ್ತದೆ. ಶೀಘ್ರ ಈ ಯೋಜನೆಗೆ ಚಾಲನೆ ನೀಡಿದರೂ ಕಾಮಗಾರಿ ಮುಗಿಯಲು ಕನಿಷ್ಠ ಎರಡು ವರ್ಷ ಬೇಕು. ಅಲ್ಲಿಯವರೆಗೆ ನಗರಸಭೆ ಬೇಸಿಗೆಯಲ್ಲಿ ದಿನ ಬಿಟ್ಟು ದಿನ ಅಥವಾ ಟ್ಯಾಂಕರ್ ಮೂಲಕ ನೀರು ಪೂರೈಸುವ ಮೂಲಕ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಅನಿವಾರ್ಯವಾಗಬಹುದು.ಒಟ್ಟಿನಲ್ಲಿ ಎಂಟು ಕೋಟಿ ಜನರಿಗೆ ನೀರುಣಿಸುವ ಜೀವದಾಯಿನಿ ಕಾವೇರಿ ಕೊಡಗಿನಲ್ಲಿ ಹುಟ್ಟಿ ಹರಿದರೂ, ಜಿಲ್ಲಾ ಕೇಂದ್ರ ಸ್ಥಾನವಾದ ಮಡಿಕೇರಿಯ ಜನತೆ ಮಾತ್ರ ಪ್ರತಿ ವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಿರುವುದು ವಿಪರ್ಯಾಸದ ಸಂಗತಿಯೇ ಸರಿ. ಪ್ರಕೃತಿ ಸೌಂದರ್ಯದ ನೆಲೆವೀಡಿನಲ್ಲಿ ಜಲಮೂಲಕ್ಕೆ ಅಂತಹ ಕೊರತೆ ಇಲ್ಲದಿದ್ದರೂ ಇದುವರೆಗೆ ಆಡಳಿತ ನಡೆಸಿದ ನಮ್ಮ  ಜನಪ್ರತಿನಿಧಿಗಳು ನಗರಕ್ಕೆ ಒಂದು ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸಲು ಇಚ್ಛಾಶಕ್ತಿ ಪ್ರದರ್ಶಿಸದಿರುವುದು ಮಾತ್ರ ನಗರದ ಜನತೆಯ ದೌರ್ಭಾಗ್ಯವೇನೋ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry