ಭಾನುವಾರ, ಜನವರಿ 19, 2020
28 °C

ದಿಲ್ಲಿಯಲ್ಲಿ ಪ್ರತಿಭೆ ಮೆರೆದ ಹಳ್ಳಿ ಹುಡುಗಿ!

ಪ್ರಜಾವಾಣಿ ವಾರ್ತೆ/–ಶಶಿಕಾಂತ ಭಗೋಜಿ Updated:

ಅಕ್ಷರ ಗಾತ್ರ : | |

ಹುಮನಾಬಾದ್‌: ಕುಗ್ರಾಮ­ದಲ್ಲಿ­ದ್ದುಕೊಂಡು ಸಾಧನೆ ಮಾಡಬಹುದು ಎನ್ನುವುದಕ್ಕೆ ಬೀದರ್‌ ಜಿಲ್ಲೆಯ ಹುಮನಾಬಾದ್‌ ತಾಲ್ಲೂಕಿನ ಸಿಂಧನ­ಕೇರಾ ಗ್ರಾಮದ ಭವಾನಿ ಹೇಮಂತ­ರೆಡ್ಡಿ ಅತ್ಯುತ್ತಮ ನಿದರ್ಶನ.ಕೃಷಿ ಪರಿಸರದಲ್ಲಿ ಬೆಳೆದ ಈಕೆ ‘ಮಿನಿವಿಂಡ್‌ ಟರ್ಬೈನ್‌’ ವಿಜ್ಞಾನ ಮಾದರಿ ತಯಾರಿಸಿ  ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾಳೆ.

ತಾಲ್ಲೂಕು, ಜಿಲ್ಲಾ, ವಿಭಾಗ, ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರದರ್ಶನ ನೀಡಿ, ಭಾರತ ಸರ್ಕಾರದ ವಿಜ್ಞಾನ ಮತ್ತು  ತಂತ್ರಜ್ಞಾನ ಇಲಾಖೆಯ ಯೋಜನೆ ಇನ್‌ಸ್ಪೈರ್‌ ಅವಾರ್ಡ್‌ ಅಂಗವಾಗಿ ಅಕ್ಟೋಬರ್‌ 8,9 ಮತ್ತು 10ರಂದು  ನವದೆಹಲಿಯಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ವಿಜ್ಞಾನ ವಸ್ತು­ಪ್ರದರ್ಶನ ಸ್ಪರ್ಧೆಯಲ್ಲಿ ಈ ಮಾದರಿ ಪ್ರದರ್ಶಿಸಿದ ಭವಾನಿ, ಕೇಂದ್ರ ಸಚಿವ ಜೈಪಾಲರೆಡ್ಡಿ ಮೊದಲಾದವರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾಳೆ. ಏನಿದು ಮಿನಿವಿಂಡ್‌ ಟರ್ಬೈನ್‌ ? : ಪ್ರತಿಯೊಬ್ಬರ ದೈನಂದಿನ ಚಟುವಟಿ­ಕೆಗಳು ವಿದ್ಯುತ್ತನ್ನು ಅವಲಂಬಿಸಿವೆ. ಅದಿಲ್ಲದೇ ದಿನಗಳೆಯುವುದು ಕಷ್ಟ­ಸಾಧ್ಯ.  ಈ ಬಾಲಕಿ ಸಣ್ಣ ಪ್ರಮಾಣ­ದಲ್ಲಿ ಗಾಳಿಯಿಂದ ವಿದ್ಯುತ್‌ ಉತ್ಪಾದಿಸಲು ಸಾಧ್ಯ ಎಂದು ಮನ­ಗಂಡು ಆ ವಿಚಾರವನ್ನು ತಮ್ಮ ಸಂಸ್ಥೆಯ ಆಡಳಿತ ಮಂಡಳಿ ಗಮನಕ್ಕೆ ತಂದಾಗ ಶಿಕ್ಷಕ ರಾಜಶೇಖರ ಹಾರ­ಕೂಡೆ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಲಾದ ಮಾದರಿಯೇ ‘ಮಿನಿವಿಂಡ್‌ ಟರ್ಬೈನ್‌’ (ಸಣ್ಣ ಪ್ರಮಾಣಲ್ಲಿ ಗಾಳಿಯಿಂದ ವಿದ್ಯುತ್‌ ಉತ್ಪಾದಿಸುವ ಯಂತ್ರ) .‘₨25ರಿಂದ 30ಸಾವಿರ ವೆಚ್ಚದಲ್ಲಿ ನಿರ್ಮಿಸಿರುವ ಇದಕ್ಕೆ ಪ್ಲಾಸ್ಟಿಕ್‌ ಕೊಳವೆಯಿಂದ ಸಿದ್ಧಪಡಿಸಲಾದ ಸ್ಟ್ಯಾಂಡ್‌, ಎರಡು ಡೈನಮೋ, ಎರಡು ಎಲ್‌.ಇ.ಡಿ ಬಲ್ಬ್. ಒಂದು ಫ್ಯಾನ್‌ ಬೇಕು. ಈ ಯಂತ್ರವನ್ನು ಮನೆಯ ಛಾವಣಿಯ ಮೇಲೆ ಇರಿಸಬೇಕು. ಬೀಸುವ ಗಾಳಿ ಆಧರಿಸಿ, ಕನಿಷ್ಠ 1ಕಿ. ವ್ಯಾಟ್‌ ವಿದ್ಯುತ್‌ ಉತ್ಪಾದಿಸಬಹುದು. ಮಧ್ಯಮ ವರ್ಗದ ಕುಟುಂಬಗಳಿಗೆ ಇಷ್ಟೊಂದು ವಿದ್ಯುತ್‌ ಅಗತ್ಯ ಬೀಳುವುದಿಲ್ಲ. ಆದ್ದರಿಂದ ಉತ್ಪಾದನೆ­ಗೊಳ್ಳುವ ಹೆಚ್ಚಿನ ವಿದ್ಯುತ್‌ನ್ನು ಬ್ಯಾಟರಿ­ಯಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಬಹದು’ ಎಂದು ಭವಾನಿ ತಮ್ಮ ವಿಜ್ಞಾನ ಮಾದರಿಯ ಬಗ್ಗೆ ತಿಳಿಸುತ್ತಾರೆ.

 

‘ನನ್ನ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ರಾಜಣ್ಣ ಹುಡಗಿ, ಕಾರ್ಯದರ್ಶಿ ಸುರೇಂದ್ರನಾಥ ಹುಡಗಿ, ವಿಜ್ಞಾನ ಶಿಕ್ಷಕ ರಾಜಶೇಖರ ಹಾರಕೂಡೆ ನೀಡಿದ ಪ್ರೊತ್ಸಾಹವೇ ಪ್ರಮುಖ ಕಾರಣ’ ಎಂದು ಅವರು ಅಭಿಮಾನದಿಂದ ಹೇಳುತ್ತಾರೆ.ಬೀದರ್‌ ತಾಲ್ಲೂಕಿನ ಸಿಕೇಂದ್ರಾಪುರ ಗ್ರಾಮದ ಹೇಮಂತರೆಡ್ಡಿ ಅವರ ಪುತ್ರಿಯಾದ ಈಕೆಯ ತಂದೆಗೆ  ಹೈದರಾಬಾದ್‌ನಲ್ಲಿ ಉದ್ಯೋಗವಿದ್ದ ಕಾರಣ ಈಕೆ ಪೂರ್ವ ಪ್ರಾಥಾಮಿಕ ಶಿಕ್ಷಣವನ್ನು  ಅಲ್ಲಿಯೇ ಪೂರೈಸಿದ್ದಳು.ಕಾರ್ಖಾನೆಯಲ್ಲಿ ಉದ್ಯೋಗಿ­ಯಾ­ಗಿದ್ದ ಈಕೆಯ ತಂದೆ ಆಕಸ್ಮಿಕ­ಘಟನೆ­ಯೊಂದರಲ್ಲಿ ಅಂಗವಿಕಲ­ರಾದರು. ಅನಂತರ  ಸ್ವಗ್ರಾಮ ಸಿಕೇಂದ್ರಾಪುರ ಮರಳಿ­ದರು.  ಬಳಿಕ ಈಕೆ  ಸಿಂಧನ­ಕೇರಾ ಗ್ರಾಮದಲ್ಲಿರುವ ಅಜ್ಜನ ಮನೆ­ಯಲ್ಲಿದ್ದುಕೊಂಡು ಈಕೆ ಹುಮನಾ­ಬಾದ್‌ನ ರವೀಂದ್ರನಾಥ ಟ್ಯಾಗೋರ್‌ ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದಾಳೆ. ‘ಕುಗ್ರಾಮದಲ್ಲಿದ್ದರೂ ಮೊಮ್ಮ­ಗಳಿಗೆ ಓದಿ  ಏನನ್ನಾದರೂ ಸಾಧಿಸುವ ಹಂಬಲವಿದೆ. ಅವಳ ಭವಿಷ್ಯ ಉಜ್ವಲಗೊಳ್ಳಲಿ ಎಂಬ ಕಾರಣಕ್ಕೆ ಯಾವುದೇ ಕೆಲಸ ಹಚ್ಚದೇ ಶಕ್ತಿಮೀರಿ ಸಹಕಾರ ನೀಡುತ್ತಿದ್ದೇವೆ’ ಎನ್ನುತ್ತಾರೆ ಈಕೆಯ ಅಜ್ಜ ಮಾಣಿಕರೆಡ್ಡಿ ಮತ್ತು ಅಜ್ಜಿ ನರಸಮ್ಮ.

    

ಹಳ್ಳಿ ಹುಡುಗಿ ಸಾಧನೆ ಶ್ಲಾಘನೀಯ

‘ಗ್ರಾಮೀಣ ಪ್ರದೇಶದಲ್ಲಿ ಅದೂ ಒಕ್ಕಲುತನ ಪರಿಸರದಲ್ಲಿ ಇಂಥ ಪ್ರತಿಭೆ ಅರಳುವುದೇ ಕಷ್ಟ. ದೇಶಕ್ಕೆ ಅತ್ಯವಶ್ಯಕವಾದ ವಿದ್ಯುತ್‌ ಶಕ್ತಿಯನ್ನು ಸರಳವಾಗಿ ಉತ್ಪಾದಿಸುವ ಉಪಕರಣವನ್ನು ಈಕೆ ಸಿದ್ಧಪಡಿಸಿದ್ದಾಳೆ. ಹಳ್ಳಿ ಹುಡಗಿ ಒಬ್ಬಳು ರಾಷ್ಟ್ರ ರಾಜಧಾನಿಯಲ್ಲಿ ನಡೆಯುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದೇ ಮಹಾ­ಸಾಧನೆ. ಅಂಥದ್ದರಲ್ಲಿ ಕೇಂದ್ರ ಸಚಿವರ ಮೆಚ್ಚುಗೆಗೆ ಪಾತ್ರವಾಗಿರುವುದು ಅಸಾಮಾನ್ಯ ಸಾಧನೆ’.

–ಮಹಾರುದ್ರಪ್ಪ ಆಣದೂರ

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಜ್ಞಾನ ಶಿಕ್ಷಕ ಚಿಟಗುಪ್ಪ‘ಉತ್ತಮ ಸಾಧನೆ’


‘ರವೀಂದ್ರನಾಥ ಟ್ಯಾಗೋರ್‌ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿನಿಯ ಸಾಧನೆ ಗಮನಿಸಿದ್ದೆ. ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಮಕ್ಕಳ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಸಾಮಾನ್ಯ ವಿಷಯವೇನಲ್ಲ. ಈಕೆಯ ಸಾಧನೆ ನಿಜಕ್ಕೂ ಶ್ಲಾಘನೀಯ’

–ಪಂಡಿತ್‌ ಕೆ.ಬಾಳೂರೆ

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಕಾರ್ಯಕಾರಿಣಿ ಸದಸ್ಯ

ಪ್ರತಿಕ್ರಿಯಿಸಿ (+)