ಶುಕ್ರವಾರ, ನವೆಂಬರ್ 15, 2019
21 °C

ದಿಲ್‌ಪಸಂದ್

Published:
Updated:

ಮಂಗಳೂರು ಬಾಲೆ. ಕರಾವಳಿ ಕಿನ್ನರಿ. ಕೊಡಗಿನ ಚೆಲುವೆ- ಕ್ಲೀಷೆ ಎನ್ನುವಷ್ಟರ ಮಟ್ಟಿಗೆ ಇಂಥ ವಿಶೇಷಣಗಳು ಸಿನಿಮಾ ನಾಯಕಿಯರ ಬಗ್ಗೆ ಬಳಕೆಯಾಗುತ್ತವೆ. ಆದರೆ, ಈ ವಿಶೇಷಣಗಳಲ್ಲೊಂದು ಸೂಕ್ಷ್ಮವಿದೆ. ಕನ್ನಡ ಸಿನಿಮಾಕ್ಕೆ ಪರಿಚಯಗೊಳ್ಳುವ ಬಹುತೇಕ ಕನ್ನಡತಿಯರು ಕರಾವಳಿ ಅಥವಾ ಕೊಡಗು ಪರಿಸರಕ್ಕೆ ಸೇರಿದವರು ಎನ್ನುವ ಸಂಗತಿಯದು. ಈ ಮಾತಿಗೆ ಅಪವಾದ ದಿಲ್‌ಶಾದ್!`ಈ ಹೃದಯ' ಚಿತ್ರದ ಮೂಲಕ ಬೆಳ್ಳಿತೆರೆಗೆ ಪ್ರವೇಶ ಪಡೆಯುತ್ತಿರುವ ದಿಲ್‌ಶಾದ್ ಗದಗ ಜಿಲ್ಲೆಯ ಬೆಟಗೇರಿಯ ಹುಡುಗಿ. ಹೈಸ್ಕೂಲಿನವರೆಗೆ ಕಲಿತದ್ದು ಗದಗದಲ್ಲಿ, ಪಿಯುಸಿ ಓದಿದ್ದು ತುಮಕೂರಿನಲ್ಲಿ. ಕಳೆದ ವರ್ಷವಷ್ಟೇ ಎಂಜಿನಿಯರಿಂಗ್ ಮುಗಿಸಿ ಕಾರ್ಪೊರೇಟ್ ಜಗತ್ತಿನ ಕನಸು ಕಾಣುತ್ತಿದ್ದ ದಿಲ್‌ಶಾದ್ ಈಗ ಬಣ್ಣದ ಲೋಕದ ವಿಹಾರಿ.ನಟನೆಯ ಅನುಭವ ಕೊಂಚವೂ ಇಲ್ಲ. `ಪರವಾಗಿಲ್ಲ. ನಿರ್ದೇಶಕರ ಸೂಚನೆಯ ಮೇರೆಗೆ ನಟಿಸಬಲ್ಲೆ' ಎನ್ನುವ ಆತ್ಮವಿಶ್ವಾಸ ಅವರದು. ಮುಸ್ಲಿಂ ಸಮುದಾಯದ ದಿಲ್‌ಶಾದ್, ತನ್ನ ಪರಿಸರದ ಸಾಂಪ್ರದಾಯಿಕ ಕಟ್ಟುಪಾಡುಗಳ ಅರಿವಿರುವ ಹಾಗೂ ಅವುಗಳನ್ನು ಮೀರುವ ಹಂಬಲದ ತರುಣಿ. `ಮುಸ್ಲಿಂ ಹುಡುಗಿಯರಿಗೆ ಬಣ್ಣದ ಲೋಕದ ಪ್ರವೇಶ ಅಷ್ಟು ಸುಲಭವಲ್ಲ' ಎನ್ನುವ ಅವರು, ಪ್ರಸ್ತುತ ದೊರೆತ ಅವಕಾಶವನ್ನು ಸೂಕ್ತವಾಗಿ ಬಳಸಿಕೊಂಡು ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುವ ಕನಸು ಹೊಂದಿದ್ದಾರೆ.ಎಂಜಿಯರಿಂಗ್ ಅಂತಿಮ ವರ್ಷದಲ್ಲಿ ಇದ್ದಾಗಲೇ `ಈ ಹೃದಯ' ಚಿತ್ರತಂಡದಿಂದ ಕರೆ ಬಂದಿತ್ತಂತೆ. ಆದರೆ ಪದವಿ ಪೂರ್ಣವಾದ ನಂತರವೇ ಬಣ್ಣ ಹಚ್ಚಲು ಆಕೆ ಪಟ್ಟು ಹಿಡಿದರಂತೆ.`ಈ ಹೃದಯ' ಚಿತ್ರದ ನಿರ್ಮಾಪಕರು ದಿಲ್‌ಶಾದ್ ಅವರ ಕುಟುಂಬದ ಸ್ನೇಹಿತರು. `ಚಿತ್ರದಲ್ಲಿ ಮುಸ್ಲಿಂ ಹೆಣ್ಣು ಮಗಳದ್ದು ಪ್ರಧಾನ ಪಾತ್ರ. ಕಥೆ ಇಷ್ಟವಾಯಿತು, ಒಪ್ಪಿಕೊಂಡೆ' ಎನ್ನುವ ಅವರು, ಪ್ರೇಕ್ಷಕರು ಒಪ್ಪುವ ಮತ್ತು ತಮಗೆ ತೃಪ್ತಿ ನೀಡುವ ಪಾತ್ರಗಳನ್ನು ಮಾತ್ರ ನಿರ್ವಹಿಸುವ ಸಿನಿರೇಖೆಯನ್ನು ತಮ್ಮ ಸುತ್ತ ಎಳೆದುಕೊಂಡಿದ್ದಾರೆ. `ಗ್ಲಾಮರಸ್ ಪಾತ್ರಗಳಲ್ಲಿ ನಟಿಸಲು ಬಿಗುಮಾನವೇನೂ ಇಲ್ಲ. ಆದರೆ, ಸುಖಾಸುಮ್ಮನೆ ದೇಹಪ್ರದರ್ಶನ ಒಲ್ಲೆ' ಎನ್ನುವುದು ದಿಲ್‌ಶಾದ್ ಸ್ಪಷ್ಟ ಮಾತು.ಅಂದಹಾಗೆ, ದಿಲ್‌ಶಾದ್‌ಗೆ ತನ್ನ ತಾಯಿಯ ಬಗ್ಗೆ ಅಪಾರ ಅಭಿಮಾನ. `ಉದಾರ ಮನೋಭಾವದ ಅಮ್ಮ ನನ್ನ ಮೇಲೆ ನಂಬಿಕೆಯಿಟ್ಟು ಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ' ಎನ್ನುತ್ತಾರೆ.ತುಸು ಬಿಡುವು ಸಿಕ್ಕರೂ ಕುಂಚ ಹಿಡಿದು ಕ್ಯಾನ್‌ವಾಸ್ ಮೇಲೆ ಪ್ರಕೃತಿಯನ್ನು ಚಿತ್ರಿಸುವುದು ಇವರಿಗೆ ಇಷ್ಟ. ಚಿತ್ರಕಲೆ ಬಾಲ್ಯದಲ್ಲೇ ಜೊತೆಯಾದ ಸಂಗಾತಿ. ಮಾಧುರ್ಯ ಪ್ರಧಾನ ಹಾಡುಗಳೂ ಅವರಿಗಿಷ್ಟ.ಅಡುಗೆ ಮನೆಯಲ್ಲಿ ಸಾಕಷ್ಟು ಕಾಲ ಕಳೆಯುವುದು ಹಾಗೂ ಬಗೆ ಬಗೆಯ ಅಡುಗೆ ಸಿದ್ಧಪಡಿಸುವುದರಲ್ಲಿ ದಿಲ್‌ಶಾದ್ ಖುಷಿ ಕಾಣುತ್ತಾರಂತೆ.ಬಿಡುವು ದೊರೆತಾಗಲೆಲ್ಲ ರೊಟ್ಟಿ ತಟ್ಟುವ ಅವರು, ಮತ್ತೂ ಬಿಡುವು ದೊರೆತರೆ ಎಂ.ಟೆಕ್ ಓದುವ ಆಸೆ ಹೊಂದಿದ್ದಾರೆ. `ಸಿನಿಮಾದಲ್ಲಿ ಅವಕಾಶಗಳು ದೊರೆತರೆ ಸರಿ, ಇಲ್ಲದೆ ಹೋದರೆ ಕಾಲೇಜು ಇದ್ದೇ ಇದೆ' ಎನ್ನುವ ನಿಲುವು ಅವರದು.                                                          

ಪ್ರತಿಕ್ರಿಯಿಸಿ (+)