`ದಿಲ್‌ವಾಲಾ' ಅದೃಷ್ಟ ಪರೀಕ್ಷೆ

7

`ದಿಲ್‌ವಾಲಾ' ಅದೃಷ್ಟ ಪರೀಕ್ಷೆ

Published:
Updated:

ನಿರ್ಮಾಪಕ ಶೈಲೇಂದ್ರ ಬಾಬು ಎರಡನೇ `ಆಟ'ಕ್ಕೆ ಇಳಿದಿದ್ದಾರೆ. ಮಗನನ್ನು ನಾಯಕನನ್ನಾಗಿ ಪರಿಚಯಿಸಿದ ಮೊದಲ ಚಿತ್ರ `ಆಟ' ಯಶಸ್ಸು ಕಾಣಲಿಲ್ಲ. ಸೋಲಿನ ಪಾಠ ಅವರನ್ನು ಎಚ್ಚರಿಕೆಯ ಹೆಜ್ಜೆ ಇಡುವಂತೆ ಮಾಡಿದೆ. ಹಳೆಯ ತಪ್ಪುಗಳು ಮರುಕಳಿಸದಂತೆ ಸಕಲ ಸಿದ್ಧತೆ ನಡೆಸಿ ಹೊಸ ಚಿತ್ರಕ್ಕೆ ಮುಂದಾಗಿದ್ದಾರೆ. `ದಿಲ್‌ವಾಲಾ' ಅವರ ನಿರ್ಮಾಣದಲ್ಲಿ ಪುತ್ರ ಸುಮಂತ್ ನಾಯಕರಾಗಿ ನಟಿಸುತ್ತಿರುವ ಎರಡನೇ ಚಿತ್ರ.ಚಿತ್ರದ ಚಿತ್ರೀಕರಣಕ್ಕೆ ಕ್ಯಾಮೆರಾ ಚಾಲನೆ ನೀಡಿದ್ದು ನಟ ವಿ.ರವಿಚಂದ್ರನ್. ಕೆಲವು ದಿನಗಳ ಚಿತ್ರೀಕರಣ ನಡೆಸಿದ ಬಳಿಕ ಅದರ ಬಗ್ಗೆ ನಿರ್ಮಾಪಕರು ಮತ್ತು ನಿರ್ದೇಶಕರು ಒಟ್ಟಿಗೆ ಕುಳಿತು ವಿಶ್ಲೇಷಿಸುವ ಕೆಲಸ ಮಾಡಬೇಕೆಂಬ ಸಲಹೆಯನ್ನು ಚಿತ್ರತಂಡಕ್ಕೆ ರವಿಚಂದ್ರನ್ ನೀಡಿದರು.ನಿರ್ದೇಶಕ ಅನಿಲ್ ಕುಮಾರ್ ಕಥೆ ವಿವರಿಸಿದ ಪರಿ ಶೈಲೇಂದ್ರ ಬಾಬು ಅವರಿಗೆ ಇಷ್ಟವಾಗಿದೆ. ಅನಿಲ್ ಈ ಹಿಂದೆ ನಿರ್ದೇಶಿಸಿದ್ದ `ಶಕ್ತಿ' ಚಿತ್ರ ಅವರಿಗೆ ಮೆಚ್ಚುಗೆಯಾಗಿತ್ತು. ಈ ಕಾರಣಕ್ಕಾಗಿಯೇ ಹೊಸ ನಿರ್ದೇಶಕರಾದರೂ ಅನಿಲ್‌ಗೆ ಈ ಜವಾಬ್ದಾರಿ ವಹಿಸಲು ಅವರು ಮುಂದೆಬಂದಿದ್ದಾರೆ.ಚಿತ್ರಕಥೆ ಹಾಗೂ ಸಂಭಾಷಣೆಯಲ್ಲಿ ಅನಿಲ್ ಪರಿಪೂರ್ಣ ಸಿದ್ಧತೆ ನಡೆಸಿದ್ದಾರಂತೆ. ನಟನೆಯ ಸೂಕ್ಷ್ಮತೆಗಳು ತಿಳಿಯುವುದು ರಂಗಭೂಮಿಯಲ್ಲಿ ಎಂಬ ನಂಬಿಕೆ ಅವರದು. ಹೀಗಾಗಿ ನಟ ಸುಮಂತ್‌ರಿಗೆ ಅನೇಕ ನಾಟಕಗಳನ್ನು ಅವರು ತೋರಿಸಿದ್ದಾರಂತೆ. ವಿಷಯಗಳನ್ನು ಅರಿತುಕೊಳ್ಳುವಲ್ಲಿ ಸುಮಂತ್ ಪಳಗಿದ್ದಾರೆ. ಅವರಲ್ಲಿ ತುಸು ಧೈರ್ಯ ತುಂಬು ಕೆಲಸವನ್ನು ನಾನು ಮಾಡಿದ್ದೇನೆ ಎಂದ ಅವರು, ಈ ಚಿತ್ರ ತಮ್ಮ ಪಾಲಿಗೆ ಬಯಸದೆ ಬಂದ ಭಾಗ್ಯ ಎಂದು ಬಣ್ಣಿಸಿದರು. ರವಿಚಂದ್ರನ್ ಕಟ್ಟಾ ಅಭಿಮಾನಿಯಾದ ಅನಿಲ್, ಅವರಂತೆ ಸಿನಿಮಾಗಳನ್ನು ಮಾಡಬೇಕೆಂಬ ಕನಸನ್ನು ಬಿಚ್ಚಿಟ್ಟರು.ಸುಮಂತ್ ಶೈಲೇಂದ್ರರಿಗೆ ಜೋಡಿಯಾಗಿರುವುದು ನಟಿ ರಾಧಿಕಾ ಪಂಡಿತ್. ಅನುಭವಿ ನಟಿ, ಅನನುಭವಿ ನಟನೊಂದಿಗೆ ನಟಿಸುವ ವಿಶೇಷ ಸಿನಿಮಾ ಇದು. ಇದೊಂದು ಪ್ರೇಮ ಕಥೆ. ಆದರೆ ಅದನ್ನು ತೆರೆದಿಡುವ ಬಗೆ ಹೊಸತಾಗಿದೆ. ಹೊಸಬರಲ್ಲಿ ಚಿತ್ರಮಾಡುವಾಗ ಉತ್ಸಾಹ ಹೆಚ್ಚಿರುತ್ತದೆ.ಈ ಕಾರಣಗಳಿಂದಾಗಿಯೇ ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದು ಎಂದರು.ಒಂದು ವರ್ಷದಲ್ಲಿ ನೂರಾರು ಕಥೆಗಳು ಬಂದವು. ಆದರೆ ಸೆಳೆದದ್ದು `ದಿಲ್‌ವಾಲಾ' ಕಥೆ. ರಾಧಿಕಾ ಪಂಡಿತ್‌ರಂಥ ನಟಿಯೊಂದಿಗೆ ಅಭಿನಯಿಸುವುದು ಉತ್ಸಾಹ ಮೂಡಿಸಿದೆ ಎಂದರು ಸುಮಂತ್.ಅಂಬರೀಷ್, ಸುಮಲತಾ ಅಂಬರೀಷ್, ಜೈಜಗದೀಶ್, ಶಿವಮಣಿ, ರವಿಶಂಕರ್ ಮುಂತಾದವರು ಚಿತ್ರದ ಮುಹೂರ್ತಕ್ಕೆ ಆಗಮಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry