ದಿವಾಕರನ ರೇಸಿಂಗ್ ಪ್ರೀತಿ

7

ದಿವಾಕರನ ರೇಸಿಂಗ್ ಪ್ರೀತಿ

Published:
Updated:
ದಿವಾಕರನ ರೇಸಿಂಗ್ ಪ್ರೀತಿ

ಕಾರ್ ಮತ್ತು ಬೈಕ್ ರೇಸ್ ಎಂದರೆ ರೇಸಿಂಗ್ ಪ್ರಿಯರ ಮೈನವಿರೇಳುತ್ತದೆ. ಗೆಲುವಿನ ಗುರಿಮುಟ್ಟಲು ತೀವ್ರ ಪೈಪೋಟಿಯ ನಡುವೆ ಶರವೇಗದಲ್ಲಿ ವಾಹನ ಚಾಲನೆ ಮಾಡಬೇಕಾದ ಸಾಹಸದ ಕ್ರೀಡೆ ಇದಾಗಿರುವುದರಿಂದ ಇಲ್ಲಿ ಜೀವವನ್ನೂ ಪಣಕ್ಕಿಟ್ಟು ಚಲಾಯಿಸಬೇಕು.

 

ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳು ವಾಹನ ಚಾಲನೆಯಲ್ಲಿ ನೈಪುಣ್ಯತೆ ಸಾಧಿಸಿರುವುದರ ಜತೆಗೆ  ದೈಹಿಕ-ಮಾನಸಿಕವಾಗಿ  ಸದೃಢನಾಗಿ ಎಂಟೆದೆಯ ಬಂಟನಾಗಿರಬೇಕಾದುದು ಅಷ್ಟೇ ಅವಶ್ಯಕ.ಕಳೆದ ಮೂರು ವರ್ಷಗಳಿಂದ ಮೂಡಿಗೆರೆ ಹೆಸಗಲ್ ಗ್ರಾಮದ ದಿವಾಕರ್ ರಾಜ್ಯ ಮಟ್ಟದ ಹತ್ತು ಹಲವು ಡರ್ಟ್ ಟ್ರ್ಯಾಕ್ ರ‌್ಯಾಲಿಗಳಲ್ಲಿ ಸ್ಪರ್ಧಿಸಿ ಭರವಸೆ ಮೂಡಿಸುತ್ತಿದ್ದಾರೆ.ದಿವಾಕರ್ ಮಾಮೂಲಿ ರ‌್ಯಾಲಿ ಪಟುಗಳಂತಲ್ಲ!  ಇವರಿಗೆ ಬಲಗೈ ಇಲ್ಲ. ಆದರೂ ರೇಸಿಂಗ್ ಎಂದರೆ ಎಲ್ಲಿಲ್ಲದ ಪ್ರೀತಿ.  ದೃಢ ಮನಸ್ಸೊಂದಿದ್ದರೆ ಸಾಧನೆಗೆ ಅಂಗವೈಕಲ್ಯತೆಯೂ ಅಡ್ಡಿಯಾಗಲಾರದೂ ಎಂಬುದಕ್ಕೆ ಇವರು ಸಾಕ್ಷಿ.`ದಿವಾ~ ಎಂದೇ ಚಿರಪರಿಚತರಾಗಿರುವ ಇವರು ಹುಟ್ಟು ಅಂಗವಿಕಲರೇನಲ್ಲ. ತಮ್ಮ 12ನೇ ವಯಸ್ಸಿನಲ್ಲಿಯೇ ಡ್ರೈವಿಂಗ್‌ನಲ್ಲಿ ಅಪಾರ ಆಸಕ್ತಿ ಹೊಂದಿದ್ದ ಅವರು 14 ನೇ ವಯಸ್ಸಿನಲ್ಲಿದ್ದಾಗ ಕಾಫಿ ಪಲ್ಪರ್ ಯಂತ್ರಕ್ಕೆ ಆಕಸ್ಮಿಕವಾಗಿ ಬಿದ್ದ ಪರಿಣಾಮ ಬಲಗೈ ಕಳೆದುಕೊಂಡಿದ್ದರು.

 

ಕೈ ಕಳೆದುಕೊಂಡು  ತಂದೆಯ ಅಂಬಾಸಿಡರ್ ಕಾರು ಡ್ರೈವ್ ಮಾಡಲಾಗದೇ ಸ್ಟೇರಿಂಗ್ ಮುಂದೆ ಅಳುತ್ತ ಕೂರುತ್ತಿದ್ದ ದಿವಾಗೆ ತನ್ನ ನೆಚ್ಚಿನ ಹವ್ಯಾಸವಾದ ಡ್ರೈವಿಂಗ್ ಅನ್ನು ಮರೆಯಲಾಗಲಿಲ್ಲ.ಒಂದೇ ಕೈಯಲ್ಲಿ ಕಾರು ಓಡಿಸಿಯೇ ತೀರುವ ಹಠಕ್ಕೆ ಬಿದ್ದು ಸತತ ಅಭ್ಯಾಸದ ತರುವಾಯ ಯಾರ ನೆರವಿಲ್ಲದೇ 15ನೇ ವಯಸ್ಸಿನಲ್ಲೇ ಕಾರು, ಬೈಕ್ ಓಡಿಸುವ ಕಲೆಯನ್ನು ಕರಗತ ಮಾಡಿಕೊಂಡರು.ಅಲ್ಲಿಂದ  ಕಾರು, ಬೈಕ್‌ನಿಂದ ಇಳಿದದ್ದೇ ಕಡಿಮೆ. ಕಾರಿನ ವೇಗದ ಜೊತೆಗೆ ಪ್ರಶಸ್ತಿಯ ಗಳಿಸುವ ವೇಗವನ್ನು ಹೆಚ್ಚಿಸಿಕೊಂಡ.ರ‌್ಯಾಲಿಗಳಲ್ಲಿ ಭಾಗವಹಿಸುವ ಅವಕಾಶಕ್ಕೆ ಕಾಯುತ್ತಿದ್ದ ದಿವಾ ಆಕಾಂಕ್ಷೆಗೆ ಮೂಡಿಗೆರೆಯಲ್ಲಿ 2008 ವೀಲ್ಸ್ ಸಂಸ್ಥೆ ಆಯೋಜಿಸಿದ ಡರ್ಟ್ ಟ್ರ್ಯಾಕ್ ರ‌್ಯಾಲಿ ಪ್ರಥಮ ವೇದಿಕೆಯಾಯಿತು.ರಾಜ್ಯದ ಹೆಸರಾಂತ ರ‌್ಯಾಲಿ ಪಟುಗಳಾದ ಡೆನ್ ತಿಮ್ಮಯ್ಯ, ಹೊರನಾಡಿನ ಗಿರಿಜಾಶಂಕರ್ ಅವರಂತಹ ಘಟಾನುಘಟಿಗಳು ಭಾಗವಹಿಸಿದ್ದ ಅಂದಿನ ರ‌್ಯಾಲಿಯ ಆಯೋಜಕರಾದಿಯಾಗಿ, ಸ್ಪರ್ಧಿಗಳಿಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದ ದಿವಾಕರ್ ಪ್ರತಿಭೆಯ ಅನಾವರಣಕ್ಕೆ ಹೆಚ್ಚು ಸಮಯವೇ ಹಿಡಿಯಲಿಲ್ಲ.

 

ತವರು ಅಭಿಮಾನಗಳ ಹರ್ಷೋದ್ಗಾರದ ನಡುವೆ ಡೆನ್ ತಿಮ್ಮಯ್ಯ, ಗಿರಿಜಾಶಂಕರ್ ಅವರಿಗೆ ತೀವ್ರ ಪೈಪೋಟಿ ನೀಡಿದ್ದ ದಿವಾಕರ್ ಕೂದಲೆಳೆಯ ಅಂತರದಿಂದ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟರೂ ನೈತಿಕವಾಗಿ ವಿಜಯಿಯಾಗಿದ್ದರು.ಕೇವಲ ಒಂದೇ ಕೈಯಲ್ಲಿ ತಮ್ಮ ಅಪೂರ್ವ ಚಾಲನಾ ಕೌಶಲ್ಯದಿಂದಾಗಿ ಘಟಾನುಘಟಿಗಳನ್ನು ತಬ್ಬಿಬ್ಬು ಮಾಡಿ ರ‌್ಯಾಲಿ ಪ್ರಿಯರ ಮೆಚ್ಚುಗೆ ಗಳಿಸಿದ್ದ ದಿವಾಕರ್ ಅವರ ಅದಮ್ಯ ಉತ್ಸಾಹ, ಸಾಹಸ ಮನೋಭಾವನೆ ಕಂಡು ಗಿರಿಜಾ ಶಂಕರ್, ಡೆನ್‌ತಿಮ್ಮಯ್ಯ ತಾವು ಗೆದ್ದ ಪ್ರಶಸ್ತಿಯನ್ನು ದಿವಾಕರ್‌ಗೆ ಹಸ್ತಾಂತರಿಸುವ ಮೂಲಕ  ಕ್ರೀಡಾಸ್ಫೂರ್ತಿ ಮೆರೆದಿದ್ದರು. ಅಲ್ಲಿಯವರೆಗೆ ಎಲೆಮರೆಯ ಕಾಯಿಯಂತಿದ್ದ ದಿವಾಕರ್ ಪ್ರತಿಭೆ ಇದೀಗ ನಾಡಿನಾದ್ಯಂತ ಪಸರಿಸಿದೆ.

 

ರಾಜ್ಯದಾದ್ಯಂತ ನಡೆಯುವ ಡರ್ಟ್‌ಟ್ರ್ಯಾಕ್ ರ‌್ಯಾಲಿಗಳಲ್ಲಿ ದಿವಾ ಹವಾ ಶುರುವಾಗಿದ್ದು ಭಾಗವಹಿಸಿದ ರ‌್ಯಾಲಿಗಳಲ್ಲಿ ಪ್ರಶಸ್ತಿ ಇಲ್ಲದೇ ಬರಿಗೈಯಲ್ಲಿ ಹಿಂದಿರುಗಿದ ಉದಾಹರಣೆ ಇಲ್ಲ.`ಒಂದು ಕೈಇಲ್ಲ ಎಂಬ ಕೊರಗು, ಕೀಳರಿಮೆ ಯಾವತ್ತೂ ಕಾಡಿಲ್ಲ. ಸಾಧನೆ ಮಾಡಬೇಕೆಂಬ ಛಲ ಇತ್ತು. ಮನೆಯವರ, ಸ್ನೇಹಿತರ ಸಹಕಾರದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ~ ಎನ್ನುತ್ತಾರೆ ದಿವಾಕರ್.ಹೆಸಗಲ್ ಗ್ರಾಮ ಪಂಚಾಯಿತಿಯಲ್ಲಿ ಎರಡನೇ ಬಾರಿಗೆ ಸದಸ್ಯರಾಗಿರುವ ಇವರಿಗೆ ಗ್ರಾಮದ ಅಭಿವೃದ್ಧಿ ಕನಸೂ ಇದೆ. ಪ್ರಮುಖ ರ‌್ಯಾಲಿಗಳಲ್ಲಿ ಭಾಗವಹಿಸಲು ದಿವಾಕರ್‌ರಿಗೆ ಪ್ರಯೋಜಕರ ಕೊರತೆ ಇದೆ. ದಿವಾಕರ್ ಮೊಬೈಲ್ 9448004804 ಭಾಗವಹಿಸಿದ ಪ್ರಮುಖ ರ‌್ಯಾಲಿಗಳು

* 2008ರಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ ಡ್ರ್ಯಾಗ್ ಮೀಟ್ ರೇಸ್‌ನ 800 ಸಿ.ಸಿ. ವಿಭಾಗದಲ್ಲಿ ಪ್ರಥಮ ಸ್ಥಾನ.* 2010ರಲ್ಲಿ ಶಿವಮೊಗ್ಗದಲ್ಲಿ ನಡೆದ ಆಟೋ ಟ್ರ್ಯಾಕ್‌ನಲ್ಲಿ ನೋವಿಸ್ ಕ್ಲಾಸ್‌ನ 800 ಸಿ.ಸಿ.ಯಲ್ಲಿ ಪ್ರಥಮ,1400 ಸಿ.ಸಿ.ಯಲ್ಲಿ ದ್ವಿತೀಯ* 2010ರಲ್ಲಿ ತುಮಕೂರಿನಲ್ಲಿ ನಡೆದ ಡರ್ಟ್‌ಟ್ರ್ಯಾಕ್‌ನಲ್ಲಿ 800 ಸಿ.ಸಿ.ಯಲ್ಲಿ ಪ್ರಥಮ, 1400 ಸಿ.ಸಿ.ಯಲ್ಲಿ ದ್ವಿತೀಯ ಸ್ಥಾನ ಮತ್ತು ಇಂಡಿಯನ್ ಓಪನ್ ಕ್ಲಾಸ್‌ನ 800 ಸಿ.ಸಿ.ಯಲ್ಲಿ ಪ್ರಥಮ ಸ್ಥಾನ* 2010ರಲ್ಲಿ ಮಂಗಳೂರಿನ ದಕ್ಷಿಣ ಕನ್ನಡ ಗ್ಯಾರೇಜ್ ಆಟೊ ಅಸೋಸಿಯೇಷನ್ ವತಿಯಿಂದ ನಡೆದ ಟ್ರ್ಯಾಕ್‌ನಲ್ಲಿ 800 ಸಿ.ಸಿ.ಯಲ್ಲಿ ಪ್ರಥಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry