ದಿವಾಳಿ ಅಂಚಿಗೆ ಬಂದಿರುವ ಹುಡಾ

7

ದಿವಾಳಿ ಅಂಚಿಗೆ ಬಂದಿರುವ ಹುಡಾ

Published:
Updated:

ಹಾಸನ: ಜಿಲ್ಲೆಯ ಒಳ ರಾಜಕಾರಣದಿಂದ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಮಹತ್ವಾಕಾಂಕ್ಷೆಯ ಎಸ್.ಎಂ. ಕೃಷ್ಣ ಬಡಾವಣೆ ನಿರ್ಮಾಣ ಯೋಜನೆ ಪೂರ್ತಿಯಾಗಿ ದಿಕ್ಕು ತಪ್ಪಿದ್ದಲ್ಲದೆ, ಹುಡಾವನ್ನೂ ಮುಳುಗಡೆಯ ಅಂಚಿಗೆ ತಂದು ನಿಲ್ಲಿಸಿದೆ.ಈ ಯೋಜನೆಯನ್ನು ಕೈಗೆತ್ತಿಕೊಂಡ ಬಳಿಕ ಮೂರು ಸರ್ಕಾರಗಳು ಬದಲಾಗಿದ್ದರೂ, ಯೋಜನೆ ಮಾತ್ರ ಒಂದು ಹೆಜ್ಜೆಯೂ ಮುಂದೆ ಹೋಗಲಿಲ್ಲ. ಬದಲಿಗೆ ಹೊಸ ಹೊಸ ಸಮಸ್ಯೆಗಳು ಉದ್ಭವಿಸಿ, ಹುಡಾ ತನ್ನ ಸಿಬ್ಬಂದಿಗೆ ವೇತನ ನೀಡಲೂ ಸಾಧ್ಯವಾಗದ ಸ್ಥಿತಿಗೆ ಬಂದು ನಿಂತಿದೆ.ಯೋಜನೆ ಆರಂಭವಾಗಿದ್ದು 2002ರಲ್ಲಿ. ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಹುಡಾ ಕಸಬಾ ಹೋಬಳಿಯ ಸಂಕೇನಹಳ್ಳಿ, ದೊಡ್ಡಪುರ ಹಾಗೂ ಬೂವನಹಳ್ಳಿಗಳ ಒಟ್ಟು 453 ಎಕರೆ ಭೂಮಿಯನ್ನು ವಶಪಡಿಸಿಕೊಂಡು ನಿವೇಶನಗಳನ್ನು ನಿರ್ಮಿಸಲು ಮುಂದಾಯಿತು. 15 ಕೋಟಿ ರೂಪಾಯಿ ನೀಡಿ ಭೂಸ್ವಾಧೀನ ಮಾಡಿಕೊಂಡು ಅಭಿವೃದ್ಧಿ ಜವಾಬ್ದಾರಿ ಯನ್ನು ಭೂಸೇನಾ ನಿಗಮಕ್ಕೆ ಕೊಡಬೇಕೆನ್ನುವ ಹಂತದಲ್ಲಿ ಚುನಾವಣೆ ಘೋಷಣೆಯಾಯಿತು. ಯೋಜನೆಯನ್ನು ಮುಂದುವರಿಸಲು ವಿಶೇಷ ಅನುಮತಿ ಕೋರಲಾಯಿತು. ಅನುಮತಿ ಸಿಕ್ಕರೂ ಹಸ್ತಾಂತರ ವಿಳಂಬವಾಯಿತು. ಅಷ್ಟರಲ್ಲಿ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂತು. ಇಡೀ ಯೋಜನೆ ದಿಕ್ಕುತಪ್ಪಲು ಇದೇ ಕಾರಣ ಎಂದು ಸ್ಥಳೀಯ ಮುಖಂಡರು ಆರೋಪಿಸುತ್ತಾರೆ.ಇಂಥ ಯೋಜನೆಯ ಶ್ರೇಯಸ್ಸು ಬೇರೆ ವ್ಯಕ್ತಿ ಅಥವಾ ಸರ್ಕಾರದ ಪಾಲಾಗುವುದನ್ನು ಸಹಿಸದ ಸ್ಥಳೀಯ ನಾಯಕರು ಯೋಜನೆಯನ್ನು ವಿರೋಧಿಸಿದರು. ಅವರ ಆಣತಿಯಂತೆ ಎಲ್ಲವೂ ನಡೆಯಲು ಆರಂಭವಾಯಿತು. ದಾಖಲೆಗಳೂ ಬೇಕಾದಂತೆ ಬದಲಾದವು. ಎಸ್.ಎಂ. ಕೃಷ್ಣ ನಗರದ ನಕ್ಷೆ ತಯಾರಿಸಿ, ಮಂಜೂರು ಮಾಡಿಸಿ ಕೊಂಡಿದ್ದ ಹುಡಾದ ಅಧಿಕಾರಿಗಳೇ ಸರ್ಕಾರ ಬದಲಾದ ಕೂಡಲೇ ‘ಈ ಯೋಜನೆ ಕಾರ್ಯ ಸಾಧುವಲ್ಲ, ಇದನ್ನು ಕೈಬಿಡಬಹುದು’ ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರು. 15 ಕೋಟಿ ರೂಪಾಯಿ ನೀಡಿ ಸ್ವಾಧೀನಪಡಿಸಿಕೊಂಡಿದ್ದ ಜಮೀನನ್ನು ಬೇರೆಬೇರೆ ಸಂಸ್ಥೆಗಳಿಗೆ ನೀಡಲು ನರ್ಧರಿಸಿತು. ಅದರಂತೆ ಸರ್ಕಾರಿ ಸಂಸ್ಥೆಗಳಾದ ಕೆಎಸ್‌ಆರ್‌ಪಿಗೆ 200 ಎಕರೆ, ರಾಜೀವಗಾಂಧಿ ಗೃಹ ನಿರ್ಮಾಣ ಯೋಜನೆಗೆ 150 ಎಕರೆ, ರಸ್ತೆ ಸಾರಿಗೆ ಸಂಸ್ಥೆಗೆ 15 ಎಕರೆ ಮಾರಾಟ ಮಾಡಲಾಯಿತು. ಆದರೆ ಈ ಮಾರಾಟ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ.ಇದಲ್ಲದೆ ಲೋಕೋಪಯೋಗಿ ಇಲಾಖೆಗೆ 20 ಎಕರೆ, ಖಾಸಗಿ ಸಂಸ್ಥೆ ‘ನಿಸರ್ಗ’ಕ್ಕೆ 10 ಹಾಗೂ ಚೇತನ ನರರೋಗಗಳ ಕೇಂದ್ರಕ್ಕೆ ಒಂದು ಎಕರೆ ಜಮೀನು ನೀಡಲಾಯಿತು. ಖಾಸಗಿ ಸಂಸ್ಥೆಗಳಿಗೆ ಎಕರೆಗೆ ಐದು ಲಕ್ಷ ರೂಪಾಯಿ ಬೆಲೆಗೆ ಜಮೀನು ಮಾರಾಟ ಮಾಡಲಾಗಿದೆ. ಮೂಲ ನಕಾಶೆಯಲ್ಲಿ ಪಾರ್ಕ್ ಹಾಗೂ ರಸ್ತೆಗೆ ಮೀಸಲಿಟ್ಟ ಜಾಗವನ್ನೇ ಈ ಖಾಸಗಿ ಸಂಸ್ಥೆಗಳಿಗೆ ನೀಡಲಾಗಿದೆ.ಭೂಮಿಯನ್ನು ಸಗಟಾಗಿ ಮಾರಾಟ ಮಾಡಿರುವ ಬಗ್ಗೆ ಕೋರ್ಟ್ ಮೆಟ್ಟಿಲು ಹತ್ತಲಾಯಿತು. ಇಷ್ಟೆಲ್ಲ ಆಗುವುದರೊಳಗೆ, ಭೂಮಿಯನ್ನು ಬೇರೆ ಉದ್ದೇಶಕ್ಕೆ ಬಳಸಿದ್ದು ಮತ್ತು ಸಗಟು ಮಾರಾಟ ಮಾಡಿದ್ದಕ್ಕಾಗಿ ಭೂ ಮಾಲೀಕರು ಕೋರ್ಟ್ ಮೆಟ್ಟಿಲೇರಿದರು. ಹೀಗೆ ವಾದ ವಿವಾದಗಳು, ಹಲವು ಮಧ್ಯಂತರ ಆದೇಶಗಳು, ಮರು ಅರ್ಜಿಗಳು, ನ್ಯಾಯಾಲಯದಲ್ಲಿ ನಡೆದವು. ಈಗಲೂ ನಡೆಯುತ್ತಿವೆ. ಈವರೆಗೆ ಉಚ್ಚ ನ್ಯಾಯಾಲಯದ ಒಟ್ಟಾರೆ ಏಳು ಪೀಠಗಳು ಈ ವಿಚಾರದ ಬಗ್ಗೆ ವಿಚಾರಣೆ ನಡೆಸಿವೆ. ಯಾವ ಪೀಠವೂ ಅಂತಿಮ ತೀರ್ಪು ನೀಡಿಲ್ಲ.ಭೂ ಸ್ವಾಧೀನಕ್ಕಾಗಿ ವಿಜಯಾ ಬ್ಯಾಂಕ್‌ನಿಂದ 9.5ರ ಬಡ್ಡಿ ದರದಲ್ಲಿ 15 ಕೋಟಿ ರೂಪಾಯಿ ಸಾಲ ಪಡೆದಿದ್ದ ಹುಡಾ, ಸಾಲ ಮರುಪಾವತಿಯನ್ನೇ ಮಾಡಲಿಲ್ಲ. ಅದೀಗ ವೃದ್ಧಿಯಾಗಿ 24 ಕೋಟಿ ರೂಪಾಯಿಯಾಗಿದೆ. ಪ್ರತಿ ದಿನ 28ಸಾವಿರ ರೂಪಾಯಿ ಬಡ್ಡಿ ಕಟ್ಟಬೇಕಾಗಿದೆ. ಹುಡಾದ ಈ ಸ್ಥಿತಿಯನ್ನು ನೋಡಿದ ಉಚ್ಚ ನ್ಯಾಯಾಲಯ  2010ರ ಅಕ್ಟೋಬರ್ 5ರಂದು ಆದೇಶ ನೀಡಿ, ವ್ಯಾಜ್ಯ ಇರುವ ಜಮೀನನ್ನು ಬಿಟ್ಟು ಉಳಿದ ಜಮೀನಿನಲ್ಲಿ ನಿವೇಶನ ಅಭಿವೃದ್ಧಿಪಡಿಸಬಹುದು ಎಂದು ಸೂಚಿಸಿತು. ಇದರಿಂದ 70 ಎಕರೆ ಜಮೀನಿನಲ್ಲಿ ಸುಮಾರು 650 ನಿವೇಶನಗಳನ್ನು ಅಭಿವೃದ್ಧಿಪಡಿಸಬಹುದು. ಇದರಿಂದ ತನ್ನ ಸಾಲ ತೀರಿಸಿ ಉಸಿರಾಡಬಹುದು ಎಂದು ಹುಡಾ ಲೆಕ್ಕಾಚಾರ ಹಾಕಿತು. ಆದರೆ ಮತ್ತೆ ರಾಜಕೀಯ ಅಡ್ಡಿಯಾಗಿದೆ.ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ 70 ಎಕರೆ ಅಭಿವೃದ್ಧಿಪಡಿಸಲು ಮುಂದಾದ ಹುಡಾ ಕಳೆದ ಶನಿವಾರ (ಫೆ.5) ಸರ್ವೆ ನಡೆಸಲು ಸ್ಥಳಕ್ಕೆ ಹೋದರು. ಆದರೆ ಸ್ಥಳೀಯರು ಅಷ್ಟರಲ್ಲೇ ಇನ್ನೊಂದು ತಡೆಯಾಜ್ಞೆ ತಂದಿದ್ದರು. ಹುಡಾದವರು ಬರುತ್ತಿದ್ದಂತೆ ಸ್ಥಳೀಯರು ಪ್ರತಿಭಟನೆ ನಡೆಸಿ ಅಧಿಕಾರಿಗಳನ್ನು ಮರಳಿ ಕಳುಹಿಸಿದರು. ರೈತರ ಪರ ವಾದಿಸಿದ್ದ ವಕೀಲರು ಹಿಂದಿನ ಆದೇಶವನ್ನು ಮುಚ್ಚಿಟ್ಟು ತಡೆಯಾಜ್ಞೆ ಪಡೆದಿದ್ದಾರೆ ಎಂದು ಹುಡಾ ಹೇಳಿದೆ. ಅದು ಇನ್ನೊಂದು ಕಾನೂನು ಸಮರಕ್ಕೆ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ.ಮತ್ತೆ ಅಡ್ಡಿಯಾದ ರಾಜಕಾರಣ

ಎಸ್‌ಎಂಕೆ ನಗರ ಅಭಿವೃದ್ಧಿಗೆ ಈಗ ತೊಂದರೆಗಳಿಲ್ಲದಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಆಸಕ್ತಿ ತೋರುತ್ತಿಲ್ಲ ಎಂಬ ಆರೋಪವೂ ಇದೆ. ಹೇಗಾದರೂ ಸಾಲದಿಂದ ಮುಕ್ತಿ ಪಡೆದು ಆರ್ಥಿಕವಾಗಿ ಸಬಲವಾಗಬೇಕೆಂಬ ಹಂಬಲದಲ್ಲಿರುವ ಹುಡಾದ ಅಧಿಕಾರಿಗಳು ಈಚೆಗೆ ಉಸ್ತುವಾರಿ ಸಚಿವ ಸೋಮಣ್ಣ ಅವರನ್ನು ಭೇಟಿಮಾಡಿ ‘ಕಾನೂನು ಪ್ರಕಾರ ಎಲ್ಲವೂ ಸರಿಯಾಗಿದೆ. ಸ್ಥಳಿಯರ ಮನವೊಲಿಸಿದರೆ ಯೋಜನೆ ಆರಂಭಿಸಬಹುದು’ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ. ಆದರೆ ಸಚಿವರು ‘ಜನರನ್ನು ಎದುರು ಹಾಕಿಕೊಳ್ಳುವುದು ಬೇಡ, ಸದ್ಯಕ್ಕೆ ಸುಮ್ಮನಿರಿ’ ಎಂಬ ಸಂಕೇತ ನೀಡಿದ್ದಾರೆ.ಇದಾದ ಬಳಿಕ ಅಧಿಕಾರಿಗಳು ಈಚೆಗೆ ನಗರಕ್ಕೆ ಬಂದಿದ್ದ ನಗರಾಭಿವೃದ್ಧಿ ಹಾಗೂ ಕಾನೂನು ಸಚಿವ ಸುರೇಶ್ ಕುಮಾರ್ ಅವರನ್ನು ಭೇಟಿಮಾಡಿ ವಸ್ತು ಸ್ಥಿತಿಯನ್ನು ತಿಳಿಸಿದ್ದಾರೆ. ಎಲ್ಲವನ್ನೂ ಗಮನಿಸಿದ ಸುರೇಶ್ ‘ಏನೂ ತೊಂದರೆ ಇಲ್ಲ, ಗೋ ಅಹೆಡ್ ಎಂದಿದ್ದಾರೆ’ ಈಗ ಅಧಿಕಾರಿಗಳು ಯಾರ ಮಾತು ಕೇಳಬೇಕು ಎಂಬ ಗೊಂದಲದಲ್ಲಿದ್ದಾರೆ.ಜಿಲ್ಲೆಯಲ್ಲಿ ನಡೆಯುತ್ತಿರುವ ಆನೆ ದಾಳಿ ವಿಚಾರದ ಬಗೆಗೂ ಈಚೆಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅರಣ್ಯ ಸಚಿವರು ಬೇರೆಬೇರೆ ಹೇಳಿಕೆ ನೀಡಿದ್ದರು.ಹುಡಾದ ಸಮಸ್ಯೆಗೆ ರಾಜಕೀಯ ಪರಿಹಾರ ಹುಡುಕುವುದು ಬಿಟ್ಟು ಬೇರೆ ದಾರಿ ಇಲ್ಲ. ಇದಕ್ಕೆ ಹುಡಾದಲ್ಲಿ ಜನಪ್ರತಿನಿಧಿಯೊಬ್ಬರು ಬೇಕೇಬೇಕು. ಆದರೆ ಹುಡಾಗೆ ಹಲವು ವರ್ಷಗಳಿಂದ ಅಧ್ಯಕ್ಷರೇ ಇಲ್ಲ. ಇದರಿಂದ ಅಧಿಕಾರಿಗಳ ಕೈ ಕಟ್ಟಿದಂತಾಗಿದೆ.ಚಂಡೀಗಡ ಮಾದರಿ ಯೋಜನೆ

2002ರಲ್ಲಿ ಹುಡಾ ರೂಪಿಸಿದ್ದ 300 ಕೋಟಿ ರೂಪಾಯಿಯ ಈ ಯೋಜನೆ ರಾಜ್ಯಕ್ಕೆ ಮಾದರಿಯಾಗುವಂತಿತ್ತು. ಎಸ್‌ಎಂಕೆ ನಗರದ ಮೂಲ ನಕ್ಷೆ ಪ್ರಕಾರ ಇಲ್ಲಿಯ ಪ್ರತಿ ರಸ್ತೆ ಕನಿಷ್ಟ 40 ಅಡಿ ಅಗಲವಿರುತ್ತದೆ. ಭೂಗತ ಕೇಬಲ್‌ಗಳ ಮೂಲಕವೇ ವಿದ್ಯುತ್ ಹಾಗೂ ಟಿಲಿಫೋನ್ ಸಂಪರ್ಕ.ಅಂದರೆ ಇಡೀ ನಗರದಲ್ಲಿ ಕಂಬಗಳಾಗಲಿ, ತೆರೆದ ತಂತಿಗಳಾಗಲಿ ಇರುವುದಿಲ್ಲ. ಅತ್ಯಾಧುನಿಕ ರೀತಿಯಲ್ಲಿ ಕುಡಿಯುವ ನೀರು, ಒಳಚರಂಡಿ ಯೋಜನೆಗಳು. ಅಷ್ಟೇ ಅಲ್ಲ 24 ಗಂಟೆಯೂ ವಿದ್ಯುತ್ ಸರಬರಾಜು ಮಾಡಲು ಸೋಲಾರ್ ಪವರ್ ಬ್ಯಾಕಪ್ ವ್ಯವಸ್ಥೆಯೂ ಇತ್ತು. ಒಂದರ್ಥದಲ್ಲಿ ಚಂಡೀಗಡದ ಮಾದರಿಯಲ್ಲೇ ಇದನ್ನು ರೂಪಿಸುವ ಉದ್ದೇಶವಿತ್ತು. ದ್ವೇಶ ರಾಜಕಾರಣದಿಂದ ಇಡೀ ಯೋಜನೆ ವಿಳಂಬವಾಗುತ್ತಿದೆ. ಒಂದುವೇಳೆ ಭವಿಷ್ಯದಲ್ಲಿ ಇದು ಜಾರಿಯಾದರೂ ಮೂಲ ಸ್ವರೂಪದಲ್ಲಿರುತ್ತದೆ ಎಂಬ ಭರವಸೆ ಅಧಿಕಾರಿಗಳಲ್ಲಿ ಇಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry