ಶನಿವಾರ, ಏಪ್ರಿಲ್ 10, 2021
32 °C

ದಿವ್ಯಾತ್ಮರ ಮೇಲೇ ಭಗವಂತನ ಕಣ್ಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: `ಬಟ್ಟೆ ಮಾಸಿದ ಮೇಲೆ ಅದನ್ನು ಕಳಚುವುದು ಲೋಕಾರೂಢಿ. ಹಾಗೆಯೇ ಆತ್ಮವೂ ದೇಹವನ್ನು ಬದಲಾಯಿ ಸುತ್ತದೆ. ಆದರೆ, ಬಟ್ಟೆ ಮಾಸುವ ಮುನ್ನವೇ ಅದನ್ನು ಬದಲಾಯಿಸುವುದೆಂದರೆ ಅದು ಬೇಸರದ ಕೆಲಸ. ಸ್ವಾಮಿ ನಚಿಕೇತಾನಂದಜಿ ಅವರ ವಿಷಯದಲ್ಲೂ ಅದೇ ಆಗಿದೆ~ಹೀಗೇಂದು ನೋವು ವ್ಯಕ್ತಪಡಿಸಿದವರು ವಿಜಾಪುರ ಹಾಗೂ ಗದಗ ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸ್ವಾಮೀಜಿ. `ಗೀತಾ ಜ್ಞಾನಯಜ್ಞ~ ಸ್ವಾಮೀಜಿ ಅವರ ಅಗಲಿಕೆ ನೋವು ಅವರಲ್ಲಿ ಮಡವುಗಟ್ಟಿತ್ತು. `44 ವರ್ಷ ದೇಹತ್ಯಾಗ ಮಾಡುವಂತಹ ವಯಸ್ಸೇನೂ ಅಲ್ಲ. ಚಿಕ್ಕಂದಿನಿಂದಲೂ ಆಶ್ರಮಕ್ಕಾಗಿ ಜೀವ ತೇಯ್ದ ಸ್ವಾಮೀಜಿ ಎಲ್ಲವನ್ನೂ ಬಿಟ್ಟು ಹೋಗಿದ್ದಾರೆ. ಇದೊಂದು ಅತ್ಯಂತ ತಾಪದಾಯಕ ಕ್ಷಣವಾಗಿದೆ~ ಎಂದು ಅವರು ಮರುಗಿದರು.`ಸಂಗೀತದಲ್ಲಿ ಅವರಿಗೆ ಅಪರಿಮಿತ ಆಸಕ್ತಿ ಇತ್ತು. ತಬಲಾ ಮತ್ತು ಹಾರ‌್ಮೋನಿಯಂ ನುಡಿಸಲು ಕಲಿತಿದ್ದ ಅವರು, ಚೆನ್ನಾಗಿ ಹಾಡುತ್ತಿದ್ದರು. ಬರವಣಿಗೆಯನ್ನೂ ಮೈಗೂಡಿಸಿಕೊಂಡಿದ್ದರು. ನಚಿಕೇತಾನಂದರು ಸಿಟ್ಟಾಗಿದ್ದನ್ನು ನಾನು ಎಂದಿಗೂ ನೋಡಲಿಲ್ಲ. ಯಾವಾಗಲೂ ಮಂದಹಾಸದಿಂದ ಓಡಾಡುತ್ತಿದ್ದರು~ ಎಂದು ಅವರು ನೆನೆದರು.`ಬೆಂಗಳೂರು ಹಾಗೂ ಬೆಳಗಾವಿ ಮಠದಲ್ಲಿ ಬಹುದೊಡ್ಡ ಜವಾಬ್ದಾರಿಯನ್ನು ಅವರು ನಿಭಾಯಿಸಿದ್ದರು. ಹುಬ್ಬಳ್ಳಿ ಆಶ್ರಮಕ್ಕೆ ರಘುವೀರಾನಂದಜಿ ಮತ್ತು ನಚಿಕೇತಾನಂದಜಿ ದಿವ್ಯದ್ವಯರಾಗಿ ದೊಡ್ಡ ಕೆಲಸ ಮಾಡಿ, ಘನತೆ ತಂದಿದ್ದರು. ಸಂಗೀತ, ಸತ್ಸಂಗ, ಯುವಕರ ಮನಃ ಪರಿವರ್ತನೆಯಂತಹ ವಿಧಾಯಕ ಕಾರ್ಯದಲ್ಲಿ ತೊಡಗಿದ್ದರು~ ಎಂದು ಅವರು ಕೊಂಡಾಡಿದರು.`ದೇವರಿಗೆ ದಿವ್ಯಾತ್ಮರ ಮೇಲೆ ಯಾವಾಗಲೂ ಕಣ್ಣಿರುತ್ತದೆ ಯೇನೋ. ಶಂಕರರು, ವಿವೇಕಾನಂದರೆಲ್ಲ ಪ್ರಾಯದಲ್ಲೇ ದೇಹ ತೊರೆಯಬೇಕಾಯಿತು. ಈಗ ನಚಿಕೇತಾನಂದರ ಸರದಿ. ಭಗವಂತನ ಅಪೇಕ್ಷೆಯನ್ನು ಪ್ರಶ್ನೆ ಮಾಡುವಂತಿಲ್ಲ~ ಎಂದು ಸ್ವಾಮೀಜಿ ಹೇಳುವಾಗ ಕಣ್ಣುಗಳು ಹನಿಗೂಡಿದ್ದವು.ಅಗಲಿದ ಸ್ವಾಮೀಜಿಯ ಪೂರ್ವಾಶ್ರಮದ ತಂದೆಯವರಾದ ನಾಗಭೂಷಣರಾವ್ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡರು. `ನಚಿಕೇತಾನಂದರು ವಿದ್ಯಾರ್ಥಿಯಾಗಿದ್ದಾಗ ಅತ್ಯಂತ ಪ್ರತಿಭಾನ್ವಿತರಾಗಿದ್ದರು. ಚಿಕ್ಕಂದಿನಿಂದಲೇ ಅವರಿಗೆ ಆಧ್ಯಾತ್ಮದ ಒಲವಿತ್ತು. ರಾತ್ರಿ ಹೊತ್ತು ಮಾತ್ರ ಒಟ್ಟಿಗೆ ಕುಳಿತು ಊಟ ಮಾಡುವ ಅವಕಾಶ ಸಿಗುತ್ತಿತ್ತು.

 

ಮುಂದೆ ಪಶ್ಚಾತ್ತಾಪ ಪಡಬೇಕಾದಂತಹ ಯಾವ ಕೆಲಸವನ್ನೂ ಮಾಡಬಾರದು ಎನ್ನುವುದು ಅವರಿಂದ ಪದೇ ಪದೇ ಬರುತ್ತಿದ್ದ ಸಲಹೆಯಾಗಿತ್ತು~ ಎಂದು ಅಂದಿನ ದಿನಗಳನ್ನು ಮೆಲುಕು ಹಾಕಿದರು.ನ್ಯಾಶನಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಅವರು, ಸಂಶೋಧನೆಯಲ್ಲಿ ತಮ್ಮ ಹೆಚ್ಚಿನ ಸಮಯ ವಿನಿಯೋಗ ಮಾಡುತ್ತಿದ್ದರು. ತಮ್ಮ ಬಳಿಗೆ ಬಂದವರಿಗೆ ಆಧ್ಯಾತ್ಮ ದೀಕ್ಷೆ ಜೊತೆಗೆ ಶೈಕ್ಷಣಿಕ ಪಾಠಗಳನ್ನೂ ಹೇಳುತ್ತಿದ್ದರು.ಆಶ್ರಮದ ಅನುಯಾಯಿಗಳು ಹಾಗೂ ಬ್ರಹ್ಮಚಾರಿಗಳಿಗೆಲ್ಲ ಮಠದ ಪದ್ಧತಿಯಂತೆ ವಿಧಿವತ್ತಾಗಿ ಭಜನೆಯನ್ನು ಹೇಳಿಕೊಟ್ಟಿದ್ದರು ನಚಿಕೇತಾನಂದರು. ಅವರಿಂದ ಭಜನೆ ಕಲಿತವರೆಲ್ಲ ಕಣ್ಣೀರು ಸುರಿಸುತ್ತಿದ್ದರು. ಸ್ವಾಮಿ ರಘುವೀರಾನಂದಜಿ ಅವರಂತೂ ಮಾತೇ ಹೊರಡದಂತೆ ಮೌನವಾಗಿ ರೋದಿಸುತ್ತಿದ್ದರು.ಎಲ್ಲ ಭಾಗಗಳಿಂದ 35ಕ್ಕೂ ಅಧಿಕ ರಾಮಕೃಷ್ಣ ಆಶ್ರಮದ ಸ್ವಾಮೀಜಿಗಳು, ನೂರಾರು ಬ್ರಹ್ಮಚಾರಿಗಳು, ಸಾವಿರಾರು ಭಕ್ತರು ಅಂತಿಮ ದರ್ಶನ ಪಡೆದರು. ಶಾರದಾ ಶಕ್ತಿ ಕೇಂದ್ರದ ಸದಸ್ಯೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.