ದಿ ಪ್ಯಾಕ್ ಸಾಕ್ಷ್ಯಚಿತ್ರ ಪ್ರದರ್ಶನ, ವನ್ಯಜೀವಿ ಅಧ್ಯಯನ ಅನನ್ಯ

7

ದಿ ಪ್ಯಾಕ್ ಸಾಕ್ಷ್ಯಚಿತ್ರ ಪ್ರದರ್ಶನ, ವನ್ಯಜೀವಿ ಅಧ್ಯಯನ ಅನನ್ಯ

Published:
Updated:
ದಿ ಪ್ಯಾಕ್ ಸಾಕ್ಷ್ಯಚಿತ್ರ ಪ್ರದರ್ಶನ, ವನ್ಯಜೀವಿ ಅಧ್ಯಯನ ಅನನ್ಯ

ಬೆಂಗಳೂರು: `ವನ್ಯಜೀವಿಗಳ ಜೀವನವನ್ನು ಅಧ್ಯಯನ ನಡೆಸಲು ಇಚ್ಛಿಸುವ ಅದಮ್ಯ ಕುತೂಹಲಿಗಳು ಕಾಡಿನೊಳಗೆ ಒಮ್ಮೆ ಹೊಕ್ಕರೆ ಮತ್ತೆ ನಾಡಿನ ಜೀವನಕ್ಕೆ ಮರಳುವುದು ವಿರಳ~ ಎಂದು ವನ್ಯಜೀವಿ ಛಾಯಾಗ್ರಾಹಕ ಸೇನಾನಿ ಹೇಳಿದರು.ಸಂವಾದ ಡಾಟ್ ಕಾಂ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗ್ರೀನ್ ಆಸ್ಕರ್ ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕತ `ದಿ ಪ್ಯಾಕ್~ ವನ್ಯಜೀವಿ ಸಾಕ್ಷ್ಯಚಿತ್ರ ಪ್ರದರ್ಶನದ ನಂತರದ ಸಂವಾದದಲ್ಲಿ ವನ್ಯಜೀವಿಗಳೊಂದಿಗಿನ ತಮ್ಮ ಒಡನಾಟದ ಅನುಭವಗಳನ್ನು ತೆರೆದಿಟ್ಟಿದ್ದು ಹೀಗೆ...`ನಮಗೆ 23 ವರ್ಷವಿದ್ದಾಗ ಒಮ್ಮೆ ಬಂಡೀಪುರಕ್ಕೆ ಭೇಟಿ ನೀಡಿದ್ದೆವು. ಮುಂಜಾನೆಯ ನಸುಕಿನಲ್ಲಿ ಕೆರೆಯ ಸಮೀಪವಿದ್ದ ಸೀಳುನಾಯಿಗಳು ಹುಲ್ಲಿನ ಮೇಲೆ ಸಪ್ಪಳ ಮಾಡಿಕೊಂಡು ನಡೆಯತ್ತಿದ್ದ ದೃಶ್ಯವು ಸೀಳುನಾಯಿಗಳ ಕುರಿತು ದೀರ್ಘ ಅಧ್ಯಯನಕ್ಕೆ ಪ್ರೇರೇಪಿಸಿತು. ಅಲ್ಲದೇ ಸಾಕ್ಷ್ಯಚಿತ್ರ ನಿರ್ಮಾಣದ ಕನಸಿಗೆ ನಾಂದಿಯಾಯಿತು~ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.`ವನ್ಯಜೀವಿಗಳ ಅಧ್ಯಯನ ಎಂಬುದು ಕೇವಲ ಸೀಳುನಾಯಿಗಳ ಕುರಿತು ಮಾತ್ರ ಆಗಿರಲಿಲ್ಲ. ಕಾಡಿನ ಪ್ರತಿಯೊಂದು ಜೀವಚರಗಳನ್ನು ಅದು ಒಳಗೊಂಡಿತ್ತು. ಸತತ 16 ವರ್ಷಗಳ ಅಧ್ಯಯನಾವಧಿಯಲ್ಲಿ ಕಂಡುಕೊಂಡಿರುವ ಅನುಭವಗಳನ್ನು ಪೂರ್ಣ ಪ್ರಮಾಣದಲ್ಲಿ ದೃಶ್ಯ ರೂಪದಲ್ಲಿ ಕಟ್ಟಿಕೊಡಲು ಸಾಧ್ಯವಾಗಿಲ್ಲ~ ಎಂದು ಹೇಳಿದರು.`ಸೀಳುನಾಯಿಗಳ ಕುರಿತ ಸಾಕ್ಷ್ಯಚಿತ್ರಕ್ಕೆ ದೊರೆತ ಅಂತರರಾಷ್ಟ್ರೀಯ ಮನ್ನಣೆಗಳು ನಮಗೆ ಎಂದೂ ರೋಮಾಂಚನ ಉಂಟುಮಾಡಿಲ್ಲ. ಅಧ್ಯಯನದಿಂದ ಕಾಡು ಜೀವನದ ಹಲವು ಮಜಲುಗಳನ್ನು ಆಳವಾಗಿ ಅರಿಯಲು ಸಾಧ್ಯವಾಗಿದೆ. ತಮ್ಮ ಆಹಾರವನ್ನು ಕಿತ್ತುಕೊಳ್ಳುತ್ತಾರೆ ಎಂಬ ಅಂಜಿಕೆಯಿಂದಲೇ ಸೀಳು ನಾಯಿಗಳು ಮನುಷ್ಯರ ಮುಂದೆ ಇತರೆ ಪ್ರಾಣಿಗಳನ್ನು ಕೊಲ್ಲುವುದಿಲ್ಲ~ ಎಂದು ಹೇಳಿದರು.`ಸಾಕ್ಷ್ಯಚಿತ್ರಕ್ಕಾಗಿ ತೆರೆ ಮೇಲೆ ಬಂದಿರುವ ಸೀಳುನಾಯಿಗಳ ಮೊದಲ ಎರಡು ತಲೆಮಾರಿನ ನಾಯಿಗಳ ಚಲನವಲನಗಳನ್ನು ಅಧ್ಯಯನ ಮಾಡಿದ್ದೇವೆ. ಈ ಸಂದರ್ಭದಲ್ಲಿ 11ವರ್ಷಗಳ ಕಾಲ ದೀರ್ಘವಾಗಿ ಬದುಕುಳಿದಿದ್ದ `ಮೊಂಡಬಾಲ~ ಸೀಳುನಾಯಿಯು ಮನುಷ್ಯರನ್ನು ನಂಬುತ್ತಿರಲಿಲ್ಲ ಮತ್ತು ಅದು ಅತಿ ಕುತಂತ್ರ ಬುದ್ದಿಯುಳ್ಳದಾಗಿತ್ತು. ಚಿತ್ರದಲ್ಲಿರುವ ಅದರ ಮೊಮ್ಮಗ `ಮಚ್ಚಾ~ ಸಹ ನಮ್ಮನ್ನು ನಂಬುತ್ತಿರಲಿಲ್ಲ~ ಎಂದು ನೆನಪಿಸಿಕೊಂಡರು.ವನ್ಯಜೀವಿ ಛಾಯಾಗ್ರಾಹಕ ಕೃಪಾಕರ  `ಇನ್ನೂ ಸಾಕ್ಷ್ಯಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಸೀಳುನಾಯಿಗಳ ಜಾಡನ್ನು ಹಿಡಿದು ಅವುಗಳ ಚಲನವಲನವನ್ನು ಗಮನಿಸಿ ತಿಳಿಸುವಂತೆ ಸ್ಥಳೀಯ ಕಾಡು ಕುರುಬರನ್ನು ನೇಮಿಸಲಾಗಿತ್ತು. ಮನುಷ್ಯರನ್ನು ಕಂಡರೆ ಮಾಯವಾಗುತ್ತಿದ್ದ ಇವುಗಳ ಜೀವನ ಶೈಲಿಯನ್ನು ಸೆರೆ ಹಿಡಿಯುವುದೇ ಒಂದು ದೊಡ್ಡ ಸವಾಲಾಗಿತ್ತು~ ಎಂದು ವಿವರಿಸಿದರು.`ವನ್ಯಜೀವಿಗಳ ದೇಹದಿಂದ ಹೊರಸೂಸುವ ವಾಸನೆಯೇ ನಾಡಿನ ಜೀವಿಗಳನ್ನು ಕಾಡಿನಿಂದ ಓಡಿಹೋಗುವಂತೆ ಮಾಡುತ್ತದೆ. ಮುಂದಿನ ದಿನಗಳಲ್ಲಿ ನಾಯಿಯನ್ನು ಬಿಟ್ಟು ಇತರೆ ಪ್ರಾಣಿಗಳ ಕುರಿತು ಸಾಕ್ಷ್ಯಚಿತ್ರ ತಯಾರಿಸುವ ಯೋಜನೆಯಿದೆ~ ಎಂದು ಹೇಳಿದರು.ಶಾಸಕ ಕೃಷ್ಣ ಬೈರೇಗೌಡ, `ಅಭಿವೃದ್ಧಿ ಮತ್ತು ವನ್ಯಜೀವಿಗಳನ್ನು ಉಳಿಸುವ ವಿಚಾರಗಳು ಸದಾ ಸವಾಲಿನದ್ದಾಗಿರುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಬಹು ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು~ ಎಂದು ಹೇಳಿದರು.ಪರಿಸರವಾದಿ ಅ.ನ.ಯಲ್ಲಪ್ಪ ರೆಡ್ಡಿ, ಲೇಖಕ ಕೆ.ಪುಟ್ಟಸ್ವಾಮಿ, ಕಂಠೀರವ ಸ್ಟುಡಿಯೋದ ವ್ಯವಸ್ಥಾಪಕ ನಿರ್ದೇಶಕ ವಿಶುಕುಮಾರ್, ಯೂತ್ ಪೋಟೋಗ್ರಫಿ  ಸಂಘದ ಅಧ್ಯಕ್ಷ ಎಚ್.ವಿ.ಪ್ರವೀಣ್‌ಕುಮಾರ್, ನಿರ್ದೇಶಕ ಕೇಸರಿ ಹರವೂ ಸೇರಿದಂತೆ ಇತರರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry