ದೀಪದ ಮಲ್ಲಿ

ಗುರುವಾರ , ಜೂಲೈ 18, 2019
28 °C

ದೀಪದ ಮಲ್ಲಿ

Published:
Updated:

ಚಿತ್ರರಂಗ ಪ್ರವೇಶಿಸಿ ವರ್ಷ ಕಳೆದಿಲ್ಲ. ಅಭಿನಯಿಸಿದ ಚಿತ್ರಗಳಿನ್ನೂ ಬಿಡುಗಡೆಯಾಗಿಲ್ಲ. ಆಗಲೇ ಹಲವಾರು ಚಿತ್ರಗಳಲ್ಲಿ ಅವಕಾಶ. ಜೊತೆಗೆ ತೆಲುಗು ಚಿತ್ರರಂಗಕ್ಕೂ ಪ್ರವೇಶ. ಹಾಗೆಂದು ನಟನೆಯೇನೂ ಹೊಸದಲ್ಲ. ಇದಕ್ಕೂ ಮೊದಲು ಕಿರುತೆರೆ ಕೈ ಹಿಡಿದಿತ್ತು... ಹೀಗೆ ತೆರೆದುಕೊಳ್ಳುತ್ತದೆ ನಟಿ ದೀಪಿಕಾ ದಾಸ್‌ರ ಬಣ್ಣದ ಕತೆ.ಇಷ್ಟಾದರೂ ನಟನೆಯ ಲೋಕ ಪ್ರವೇಶಿಸಿದ್ದು ಆಕಸ್ಮಿಕ. ಹಾಸನ ಮೂಲದ ದೀಪಿಕಾ ಬೆಂಗಳೂರಿನ ಮಹಾರಾಣಿ ಅಮ್ಮಣ್ಣಿ ಕಾಲೇಜಿನಲ್ಲಿ ಓದುತ್ತಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಸರಾಗಿದ್ದ ಕಾಲೇಜಿನಲ್ಲಿ ಫ್ಯಾಷನ್ ಶೋ ನಡೆಯುತ್ತಿತ್ತು. ಇಷ್ಟವಿರದಿದ್ದರೂ ರ‌್ಯಾಂಪ್ ಮೇಲೆ ಹೆಜ್ಜೆ ಹಾಕಿದರು. ಸ್ಪರ್ಧೆಯಲ್ಲಿ ವಿಜಯದ ಕಿರೀಟ ಕೂಡ ತೊಟ್ಟರು. ಅಲ್ಲಿಂದ ವಾಲಿದ್ದು ಧಾರಾವಾಹಿಯತ್ತ.ಸುವರ್ಣ ವಾಹಿನಿಯಲ್ಲಿ ರವಿ ಗರಣಿ ಅವರ `ಕೃಷ್ಣ ರುಕ್ಮಿಣಿ' ಗಿರಣಿ ತಿರುಗುತ್ತಿತ್ತು. ಕೃಷ್ಣನ ತಂಗಿಯಾದರು ದೀಪಿಕಾ. ಗರಣಿ ಮಾತ್ರವಲ್ಲ, ಸಂಚಿಕೆ ನಿರ್ದೇಶಕ ಶಶಿ ಕೂಡ ಇವರ ಪ್ರತಿಭೆಯನ್ನು ಪೋಷಿಸಿದರು. ಧಾರಾವಾಹಿಯಲ್ಲಿ ಮುಂದುವರಿಯಬಹುದಾಗಿದ್ದರೂ ಹಿರಿತೆರೆಯ ಬೆಳಕಿನ ಸೆಳೆತ. ನಟಿಯರಿಗೆ ಸಿನಿಮಾ ಅಲ್ಪಾವಧಿಯದು ಎಂಬ ನಂಬಿಕೆ ಕೂಡ ಚಿತ್ರರಂಗಕ್ಕೆ ಧುಮುಕಲು ಪ್ರೇರಣೆಯಾಯಿತು.`ಬೆಂಗಳೂರು ಮೆಟ್ರೊ', `ರಂಗನ್ ಸ್ಟೈಲ್', `ಸುಕ್ಕ', `ದೂಧ್ ಸಾಗರ್' ಹಾಗೂ `ಕಾಂಜಿ ಪೀಂಜಿ ಲವ್' ಹೀಗೆ ಸಾಲು ಸಾಲು ಚಿತ್ರಗಳು ಅರಸಿ ಬಂದವು. ಆಯ್ಕೆಯಲ್ಲಿ ತೀಕ್ಷ್ಣಮತಿಯಾಗಿರುವ ಕಾರಣಕ್ಕೆ ಕೆಲವು ಅವಕಾಶಗಳನ್ನು ಕೈ ಬಿಟ್ಟರು. ಇಷ್ಟರ ಮಧ್ಯೆ ತೆಲುಗು ಸಿನಿಮಾ `ಮಿಸ್ಟರ್ ಮನ್ಮಥ' ಕೈ ಬೀಸಿ ಕರೆದಿತ್ತು. ಅದೊಂದು ಹಾಸ್ಯ ಚಿತ್ರ. `ವಿನಾಯಕುಡು' ಖ್ಯಾತಿಯ ಕೃಷ್ಣುಡು ಎದುರು ಬಣ್ಣಹಚ್ಚಿದರು.ನಂತರ ತೆಲುಗಿನ ಮನೆಯಲ್ಲೇ ಸಿದ್ಧವಾಗುತ್ತಿರುವ `ಈ ಮನಸೇ'ಯಲ್ಲಿ ಕೃಷ್ಣನ್‌ಗೆ ಜೋಡಿಯಾಗಿದ್ದಾರೆ. `ರಂಗನ್ ಸ್ಟೈಲ್' ಚಿತ್ರದಲ್ಲಿ ದೀಪಿಕಾರಿಗೆ ಖಳನಟಿಯ ಪೋಷಾಕು. ಕತೆಗೆ ತಿರುವು ನೀಡಬಲ್ಲ ಆ ಪಾತ್ರದ ಬಗ್ಗೆ ಬಹಳ ನಿರೀಕ್ಷೆಗಳಿವೆಯಂತೆ. `ನಟಿಗೆ ಗ್ಲಾಮರ್ ಮುಖ್ಯ. ಆದರೆ ಅತಿಮುಖ್ಯವಲ್ಲ' ಎನ್ನುವ ಅವರು ಅಭಿನಯಕ್ಕೆ ಹೆಚ್ಚು ಒತ್ತು ನೀಡಿದವರು.

ಅದಕ್ಕೊಂದು ನಿದರ್ಶನ ಇಲ್ಲಿದೆ: ನಟರೊಬ್ಬರು ಫೋನ್ ಮಾಡಿ `ನನ್ನ ಜೊತೆ ನಟಿಸುತ್ತೀರಾ?' ಎಂದರು. ಇವರು ಇಲ್ಲ ಎನ್ನಲಿಲ್ಲ. `ನನ್ನನ್ನು ನೋಡಿಯೇ ಇಲ್ಲ. ಹೇಗೆ ಅಭಿನಯಕ್ಕೆ ಒಪ್ಪಿದಿರಿ?' ಅತ್ತಲಿಂದ ಪ್ರಶ್ನೆ. `ಚಿತ್ರ ಗೆಲ್ಲುವುದು ಕೇವಲ ಮುಖಚರ್ಯೆಯಿಂದಲ್ಲ. ಅಭಿನಯ ಮುಖ್ಯ' ಎಂದು ವಿನಯದಿಂದಲೇ ಆ ಹೊಸ ನಟನಿಗೆ ಹುರುಪು ತುಂಬಿದರು. ಇದು ದೀಪಿಕಾ ಶೈಲಿ.ಸಿನಿಮಾ ಮತ್ತುಧಾರಾವಾಹಿ ಎರಡರ ಬಗ್ಗೆಯೂ ಇವರಿಗೆ ತಮ್ಮದೇ ಆದ ಒಳನೋಟಗಳಿವೆ: ಧಾರಾವಾಹಿ ಶಾಲಾ ಶಿಕ್ಷಣವಿದ್ದಂತೆ. ಎಲ್ಲವೂ ಶಿಸ್ತುಬದ್ಧ. ಮೇಷ್ಟ್ರ ಅಂಕೆಯಲ್ಲೇ ಮಕ್ಕಳು ಕಲಿಯುತ್ತಾರೆ. ಸಿನಿಮಾ ಎಂಬುದು ಕಾಲೇಜು ರಂಗ. ಅಲ್ಲಿ ಕಲಿತರೆ ಕಲಿಯಬಹುದು ಇಲ್ಲದಿದ್ದರೆ ಇಲ್ಲ...ಬಣ್ಣದ ದಿಗಂತದಲ್ಲಿ ಹಾರುವಾಗಲೇ ಏರೋನಾಟಿಕಲ್ ಎಂಜಿನಿಯರಿಂಗ್ ಓದುವ ಕನಸಿನಿಂದ ದೂರವಾದರು ದೀಪಿಕಾ. ಬಿಸಿಎ ಪದವಿಯ ಅಧ್ಯಯನದೊಂದಿಗೆ ಸದ್ಯ ವಿದ್ಯಾಭ್ಯಾಸದ ಹಾದಿ ಮುಂದುವರಿದಿದೆ. ಚಿತ್ರರಂಗಕ್ಕಾಗಿ ಅಲ್ಲ; ಸುಮ್ಮನೆ ಎಂಬಂತೆ ಅವರೊಂದಿಗೆ ಒಂದಷ್ಟು ಹವ್ಯಾಸಗಳು ಇವೆ. ಮುಖ್ಯವಾಗಿ ನೃತ್ಯ. ಶಾಲಾ ದಿನಗಳಿಂದಲೇ ಅವರಿಗೆ ನೃತ್ಯದ ಬಗ್ಗೆ ಆಸಕ್ತಿ. ಅದರೊಂದಿಗೆ ಸಾಹಸ ಕಲೆಗಳನ್ನೂ ಕಲಿತಿದ್ದಾರೆ.ಚಿತ್ರರಂಗದಲ್ಲಿದ್ದರೂ ಧಾರಾವಾಹಿಯ ಧ್ಯಾನವನ್ನು ಮರೆತಿಲ್ಲ. `ಧಾರಾವಾಹಿ ಮನೆಯಿದ್ದಂತೆ. ಸಿನಿಮಾದಲ್ಲಿ ಅಭಿನಯಿಸಿದ ನಂತರ ಮನೆಗೆ ಬರಲೇ ಬೇಕಲ್ಲವೇ?' ಎಂಬುದು ಕೃಷ್ಣಸುಂದರಿಯ ಮಾರ್ಮಿಕ ಮಾತು. ಕಿರುತೆರೆ-ಹಿರಿತೆರೆ ಎರಡನ್ನೂ ಸಮಾನವಾಗಿ ನೋಡುವ ಭಾವ ಆ ಮಾತಿನಲ್ಲಿ.

-ಡಿ.ಕೆ. ರಮೇಶ್ .

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry