ದೀಪಾವಳಿ ಸನ್ನಿಧಿಯಲ್ಲಿ ನೆನಪುಗಳ ರಂಗವಲ್ಲಿ...
![]() |
ದೀಪಾ ಸನ್ನಿಧಿ |
![]() |
ರಾಧಿಕಾ ಪಂಡಿತ್ |
ಬೆಳಕೆಂದರೆ ಪ್ರೀತಿ ಕತ್ತಲೆಯು ಭೀತಿ
ದೀಪಾವಳಿ ಎಂದರೆ ನನಗೆ ಸಿಕ್ಕಾಪಟ್ಟೆ ಇಷ್ಟ. ಚಿಕ್ಕಂದಿನಲ್ಲಿ ನನಗೆ ದೀಪಾವಳಿಯ ಖುಷಿಗೆ ಮೊದಲ ಕಾರಣ ರಜೆ. ಅಪ್ಪ ತಂದಿಟ್ಟ ಪಟಾಕಿ ಮೇಲೆ ಕಣ್ಣುಹಾಕಿ ಗಂಟೆಗಟ್ಟಲೆ ಕಳೆದರೂ ಅವಕ್ಕೆ ಕಿಡಿ ಕೊಡುವ ಭಾಗ್ಯ ಸಿಗುತ್ತಿದ್ದುದು ಸಾಕಷ್ಟು ತಡವಾಗಿ.
ಅಮ್ಮ ಅಭ್ಯಂಜನ ಮಾಡಿಸಿದ ಮೇಲೆ ಹೊಸಬಟ್ಟೆ ಹಾಕಿಕೊಳ್ಳುವ ಉತ್ಸಾಹ. ಆದರೆ, ಹೊಸಬಟ್ಟೆ ಹಾಕಿಕೊಂಡು ಪಟಾಕಿ ಹೊಡೆಯಬೇಡಿ ಎಂಬ ತಾಕೀತು ಬಂದಾಗ ಬೇಸರವಾಗುತ್ತಿತ್ತು.
ನನ್ನ ಪಟಾಕಿ ಉತ್ಸಾಹಕ್ಕೆ ತಮ್ಮನ ಬಲವೂ ಇತ್ತು. ಇಬ್ಬರೂ ಸೇರಿದೆವೆಂದರೆ ಆನೆಪಟಾಕಿ - ಲಕ್ಷ್ಮೀ ಪಟಾಕಿ ಜೊತೆಯಾಗಿ ಸದ್ದು ಮಾಡಿದಂತೆ.
ನನಗೆ ಬೆಳಕೆಂದರೆ ಆಕಾಶದಷ್ಟು ಪ್ರೀತಿ. ಕತ್ತಲನ್ನು ಕಂಡರೆ ದಿಗಿಲು. ಕತ್ತಲಲ್ಲಿ ಎಂದಿಗೂ ಒಂಟಿ ಇರಲು ಸಾಧ್ಯವೇ ಇಲ್ಲ. ಬೆಳಕಿನ ಹಲವು ಮಾದರಿಗಳು ನನಗಿಷ್ಟ. ಕಾಲೇಜಿನಲ್ಲಿ ಓದುವಾಗ ಮೇಣದಬತ್ತಿ ಮಾಡುವ ಕಲೆ ಕಲಿತಿದ್ದೆ. ಕಳೆದ ವರ್ಷ ದೀಪಾವಳಿಯಲ್ಲಿ ಕಲಿತ ಆ ಕಲೆಯನ್ನು ಇನ್ನೂ ಮರೆತಿಲ್ಲವಷ್ಟೆ ಎಂಬುದನ್ನು ಖಾತರಿಪಡಿಸಿಕೊಂಡೆ. ಬಿಡುವಿನಲ್ಲಿ ನಾನೇ ಮೇಣದಬತ್ತಿ ಮಾಡಿದೆ. ಅವುಗಳನ್ನೇ ದೀಪಾವಳಿ ಸಂದರ್ಭದಲ್ಲಿ ಹಚ್ಚಿ, ಬೆಳಕು ಕಂಡು ಸುಖಿಸಿದೆ.
ಮಧ್ಯಾಹ್ನ ಎಲ್ಲರೂ ಸೇರಿ ಹಬ್ಬದಡುಗೆಯ ಊಟ ಮಾಡಿ, ಮತ್ತೊಂದು ಸುತ್ತು ಪಟಾಕಿ ಹಚ್ಚಿ ರಾತ್ರಿ ಟೆರೇಸು ಸೇರಿದರೆ ಅಲ್ಲಿ ನಮ್ಮದೇ ಜಗತ್ತು ಸೃಷ್ಟಿಯಾಗುತ್ತಿತ್ತು. ರಾಕೆಟ್ ಹಚ್ಚಲೆಂದು ನನ್ನನ್ನು, ತಮ್ಮನನ್ನು ಮಹಡಿ ಹತ್ತಿಸುತ್ತಿದ್ದ ಅಪ್ಪನ ಕಣ್ಣಲ್ಲಿ ನನಗೆ ಕಾಣುತ್ತ್ದ್ದಿದುದು ಕೂಡ ಬೆಳಕಿನ ಪುಂಜವೇ. ಹಚ್ಚಿದ ರಾಕೆಟ್ ಎಷ್ಟು ದೂರ ಹೋಗುತ್ತದೆಂದು ನಾನು - ತಮ್ಮ ಇಬ್ಬರೂ ಅಂದಾಜು ಮಾಡುತ್ತ್ದ್ದಿದೆವು.
ಬಾಲ್ಯದ ಅವೆಲ್ಲ ಕ್ಷಣಗಳು ಈಗಲೂ ಚಿತ್ತಭಿತ್ತಿಯಲ್ಲಿ ಅಚ್ಚೊತ್ತಿದಂತಿವೆ. (ಅಂಥ ಕ್ಷಣಗಳೇ ಅಲ್ಲವೇ ನಮ್ಮ `ಇವತ್ತು~ಗಳನ್ನು ಖುಷಿಯಾಗಿ ಇರಿಸುವುದು). ಪಟಾಕಿಗಳಿಗೆ ಕಿಡಿ ಕೊಟ್ಟು ಖುಷಿಪಟ್ಟ ಮೇಲೆ ಟೆರೇಸಿನ ಮೇಲೆ ಅಪ್ಪನ ಜೊತೆ ಹಾಗೆಯೇ ಕೂರುತ್ತ್ದ್ದಿದೆವು. ಮನೆಮನೆಗಳ ಮೇಲಿಂದ ತೂರಿಬರುತ್ತಿದ್ದ ಬಾಣ ಬಿರುಸುಗಳು ಆಕಾಶದಲ್ಲಿ ಬಣ್ಣಗಳ ರಂಗೋಲಿ ಮೂಡಿಸಿದರೆ, ನಮ್ಮ ಮನದಲ್ಲಿ ಕಾಮನಬಿಲ್ಲು. ಬೆಳಕನ್ನೇ ಹಾರಿಸುವ ಪರಿ ಆಗ ನನಗೆ ದೊಡ್ಡ ಬೆರಗು.
ಈಗ ಪಟಾಕಿಯ ಸಹವಾಸವನ್ನು ನಾನು, ನನ್ನ ತಮ್ಮ ಇಬ್ಬರೂ ಬಿಟ್ಟಿದ್ದೇವೆ. ಈಗೇನಿದ್ದರೂ ಮೋಂಬತ್ತಿ ಪ್ರೀತಿ. ಪರಿಸರ ಸ್ನೇಹಿ ಪಟಾಕಿಗಳು ಮಾರುಕಟ್ಟೆಗೆ ಬಂದಿವೆ, ನಿಜ. ಆದರೆ ಅವುಗಳು ಹೊಗೆ ಸೂಸುವುದಿಲ್ಲ ಎನ್ನುವುದಕ್ಕೆ ಏನು ಖಾತರಿ? ಒಂದು ದೀಪಾವಳಿಯನ್ನು ಸಿನಿಮಾ ಶೂಟಿಂಗ್ ನುಂಗಿಹಾಕಿದ ಕಹಿ ಅನುಭವ ಕೂಡ ನನ್ನ ಜೊತೆಗಿದೆ. ಆಧುನಿಕ ಸಂದರ್ಭದಲ್ಲಿ ಇದೆಲ್ಲ ಅನಿವಾರ್ಯವಷ್ಟೇ.
ಇಡೀ ರಾಜ್ಯದಲ್ಲೆಗ ವಿದ್ಯುತ್ ಸಮಸ್ಯೆ ಇದೆ. ಇದೇ ನೆಪದಲ್ಲಿ ನಿತ್ಯ ದೀಪಾವಳಿಯಾದರೆ ಎಷ್ಟು ಚೆನ್ನ ಅಲ್ಲವೇ? ಆದರೆ, ಹೀಗೆಲ್ಲ ಹೇಳಿದರೆ ನನ್ನ ತಮ್ಮ ಬಯ್ಯುತ್ತಾನೆ. ಅವನ ಓದಿಗೆ ಬೆಳಕಾಗಲು ವಿದ್ಯುತ್ ಬೇಕು. ಪಾಪ!
ಬೆಳಕನ್ನು ಮಾತ್ರ ಮೂಡಿಸುತ್ತಾ ಪಟಾಕಿಯ ಕಮಟನ್ನು ಸಂಪೂರ್ಣವಾಗಿ ಇಲ್ಲವಾಗಿಸಬೇಕು. ನನ್ನ ಪ್ರಕಾರ ಅದುವೇ `ಆದರ್ಶ ದೀಪಾವಳಿ~.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.