ಶನಿವಾರ, ಜನವರಿ 18, 2020
21 °C

ದೀಪಿಕಾ ಹ್ಯಾಟ್ರಿಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೀಪಿಕಾ ಹ್ಯಾಟ್ರಿಕ್‌

ದಕ್ಷಿಣದ ಸೂಪರ್‌ ಸ್ಟಾರ್‌ ರಜನಿಕಾಂತ್‌ ಜತೆಗೆ ಅಭಿನಯಿಸಿರುವ ‘ಕೊಚಾಡಿಯನ್‌’ ಸಿನಿಮಾ ಬಿಡುಗಡೆಯ ನಿರೀಕ್ಷೆಯಲ್ಲಿರುವ ನಟಿ ದೀಪಿಕಾ ಪಡುಕೋಣೆ ಈಗ ಖುಷಿಯ ಅಲೆಯಲ್ಲಿ ತೇಲುತ್ತಿದ್ದಾರೆ. ಬಾಲಿವುಡ್‌ ಪಿಚ್‌ನಲ್ಲಿ ಹ್ಯಾಟ್ರಿಕ್‌ ಬಾರಿಸಿರುವುದು ದೀಪಿಕಾ ಅವರ ಸಂತಸಕ್ಕೆ ಕಾರಣ. ವರ್ಷಾಂತ್ಯದಲ್ಲಿ ದೀಪಿಕಾ ನಟಿಸಿದ್ದ ಮೂರು ಚಿತ್ರಗಳು ಭರ್ಜರಿ ಹಣ ಬಾಚಿವೆ.ವಿಶೇಷವೆಂದರೆ, ಈ ಮೂರು ಚಿತ್ರಗಳಲ್ಲೂ ದೀಪಿಕಾ ಮೂರು ವಿಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚಿದ್ದರು. 2013ನೇ ವರ್ಷ ದೀಪಿಕಾಗೆ ಯಶಸ್ಸು, ಹಣ ಎರಡನ್ನೂ ತಂದುಕೊಟ್ಟಿದೆ. ಹಾಗಂತ, ಸಿಕ್ಕಿರುವ ಯಶಸ್ಸಿನ ಗುಂಗಿನಲ್ಲೇ ತೇಲುತ್ತಾ ರೆಸ್ಟ್‌ ಮೂಡ್‌ನಲ್ಲಿ ಇರುವುದು ದೀಪಿಕಾಗೆ ಇಷ್ಟವಿಲ್ಲವಂತೆ. ಬದಲಾಗಿ, ಮತ್ತಷ್ಟು ವಿಭಿನ್ನ ಪಾತ್ರಗಳಿಗೆ ಜೀವತುಂಬುತ್ತಾ ತಮ್ಮ ಗೆಲುವಿನ ಯಾನವನ್ನು ಮುಂದುವರಿಸಬೇಕು ಎಂಬ ಮಹತ್ವಾಕಾಂಕ್ಷೆಯನ್ನು ವ್ಯಕ್ತಪಡಿಸುತ್ತಾರೆ 27 ವರ್ಷದ ದೀಪಿಕಾ.ಈ ವರ್ಷದಲ್ಲಿ ದೀಪಿಕಾಗೆ ಮೊದಲ ಗೆಲುವಿನ ರುಚಿ ಉಣಬಡಿಸಿದ್ದು ‘ಯೇ ಜವಾನಿ ಹೈ ದಿವಾನಿ’ ಸಿನಿಮಾ. ಈ ಚಿತ್ರದಲ್ಲಿ ನೈನಾ ತಲ್ವಾರ್‌ ಆಗಿ ಕಾಣಿಸಿಕೊಂಡಿದ್ದ ದೀಪಿಕಾ ಆನಂತರ ತೆರೆಕಂಡ ‘ಚೆನ್ನೈ ಎಕ್ಸ್‌ಪ್ರೆಸ್‌’ ಸಿನಿಮಾದಲ್ಲಿ ಮೀನಮ್ಮಳಾಗಿ ಕಾಣಿಸಿಕೊಂಡು ತಮ್ಮ ಅಭಿಮಾನಿಗಳನ್ನು ಭರ್ಜರಿಯಾಗಿ ರಂಜಿಸಿದ್ದರು. ದೀಪಿಕಾ ಅಭಿನಯಿಸಿದ್ದ ಮೀನಮ್ಮ ಪಾತ್ರ ತುಂಬ ಜನಪ್ರಿಯವಾಗಿತ್ತು. ಅಲ್ಲದೇ ‘ಚೆನ್ನೈ ಎಕ್ಸ್‌ಪ್ರೆಸ್‌’ ಸಿನಿಮಾ ಬಾಕ್ಸ್‌ ಆಫೀಸ್‌ನ ಎಲ್ಲ ದಾಖಲೆಗಳನ್ನು ಮುರಿದು ಹಣ ಗಳಿಸಿಕೊಟ್ಟಿತ್ತು.ನಂತರದ ಸರದಿ ಇತ್ತೀಚೆಗೆ ತೆರೆಕಂಡ ‘ಗೋಲಿಯೋಂಕಿ ರಾಸ್‌ಲೀಲಾ ರಾಮ್‌–ಲೀಲಾ’ ಚಿತ್ರದ್ದು. ಇದರಲ್ಲಿ ದೀಪಿಕಾ ಗುಜರಾತಿ ಹುಡುಗಿಯಾಗಿ ಕಾಣಿಸಿಕೊಂಡಿದ್ದರು. ರಣ್‌ವೀರ್‌ ಸಿಂಗ್‌ ಮತ್ತು ದೀಪಿಕಾ ಕೆಮಿಸ್ಟ್ರಿ ವರ್ಕೌಟ್‌ ಆಗಿತ್ತು. ದೀಪಿಕಾ ಅವರ ಈ ಚಿತ್ರ ಸಹ ನೂರು ಕೋಟಿ ಸಂಗ್ರಹಿಸಿತ್ತು. ಹೀಗೆ ಒಂದರ ಹಿಂದೆ ಒಂದರಂತೆ ದೀಪಿಕಾ ನಟಿಸಿದ ಮೂರು ಚಿತ್ರಗಳು ಭರ್ಜರಿ ಯಶಸ್ಸು ಗಳಿಸಿದ್ದವು. ಇದು ಹೇಗೆ ಎಂದು ಕೇಳಿದರೆ, ‘ಇಟ್‌ ಈಸ್‌ ಮ್ಯಾಜಿಕಲ್‌’ ಅಂತಷ್ಟೇ ಉದ್ಗರಿಸುತ್ತಾರೆ ದೀಪಿಕಾ. 

 

ಇಷ್ಟಕ್ಕೂ ಕೆರಿಯರ್‌ ಗ್ರಾಫ್‌ ಈ ಪರಿ ಏರುತ್ತಿದೆಯಲ್ಲ? ಹೀಗೇ ಆಗಬೇಕು ಎಂದು ಪೂರ್ವಯೋಜನೆ ಮಾಡಿಕೊಂಡಿದ್ದಿರಾ ಎಂದು ಕೇಳಿದರೆ ಬಿಲ್‌ಕುಲ್ ಇಲ್ಲ ಎನ್ನುವ ದೀಪಿಕಾ, ಪ್ರತಿಯೊಬ್ಬ ನಟ/ನಟಿಯರಿಗೂ ಒಂದೊಂದು ಶೈಲಿ ಇರುತ್ತದೆ ಎಂಬುದನ್ನಷ್ಟೇ ನಂಬುವುದಾಗಿ ಹೇಳುತ್ತಾರೆ.‘ಯಾವುದೇ ಸಿನಿಮಾ ಒಪ್ಪಿಕೊಂಡರೂ ಅದರಲ್ಲಿ ನನ್ನನ್ನು ನಾನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇನೆ. ಶೇ 100 ಪರಿಶ್ರಮ ಹಾಕಿದರೆ ಶೇ 100 ಫಲಿತಾಂಶ ಸಿಕ್ಕೇ ಸಿಗುತ್ತದೆ’ ಎಂದು ಹೂ ನಗು ಬೀರುತ್ತಾರೆ ದೀಪಿಕಾ. 

 

ಪ್ರತಿಕ್ರಿಯಿಸಿ (+)